ಡಿಸೆಂಬರ್ ಮೊದಲ ವಾರ ಉಪೇಂದ್ರ 'ಸೂಪರ್' ತೆರೆಗೆ
ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಿಸಿ ನಟಿಸಿರುವ ಬಹುಭಾಷಾ ಚಿತ್ರ 'ಸೂಪರ್' ಡಿಸೆಂಬರ್ 3ರಂದು ತೆರೆಗೆ ಅಪ್ಪಳಿಸುವ ಸಾಧ್ಯತೆಯಿದೆ. ಮೊದಲು ಕನ್ನಡ ಅವತರಣಿಕೆ ಬಿಡುಗಡೆಯಾಗಲಿದೆ. ಎರಡು ವಾರಗಳ ಬಳಿಕ ತೆಲುಗು ಮತ್ತು ತಮಿಳು ಆವೃತ್ತಿಗಳು ತೆರೆಗೆ ಅಪ್ಪಳಿಸಲಿವೆ.
ಸದ್ಯಕ್ಕೆ 'ಸೂಪರ್' ಚಿತ್ರಕ್ಕೆ ಡಿಐ ತಂತ್ರಜ್ಞಾನ ಅಳವಡಿಸುವ ಕಾರ್ಯ ನಡೆಯುತ್ತಿದೆ. ಈ ವಾರಾಂತ್ಯಕ್ಕೆ ಸೆನ್ಸಾರ್ ಮಂಡಳಿ ಮುಂದೆ 'ಸೂಪರ್' ಬರಲಿದೆ ಎಂದು ಚಿತ್ರದ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ತಿಳಿಸಿದ್ದಾರೆ. ಚಿತ್ರಕ್ಕೆ ಸೆನ್ಸಾರ್ ಪೂರ್ಣವಾದ ಬಳಿಕ ಡಿಸೆಂಬರ್ ಮೊದಲವಾರದಲ್ಲಿ ಬಿಡುಗಡೆ ಮಾಡುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.
ಚಿತ್ರವನ್ನು ಭಿನ್ನವಾಗಿ ತರುವ ಎಲ್ಲಾ ಪ್ರಯತ್ನಗಳನ್ನು ಮಾಡಿದ್ದೇವೆ. ನಮ್ಮ ಕೆಲಸ ಮುಗಿದಿದೆ. ಇನ್ನೇನಿದ್ದರೂ ಪ್ರೇಕ್ಷಕರಿಗೆ ಬಿಟ್ಟದ್ದು. ಅವರೇ ತಾನೆ ಅಂತಿಮ ತೀರ್ಪುಗಾರರು ಎಂದಿದ್ದಾರೆ ರಾಕ್ ಲೈನ್. ಸುದೀರ್ಘ ಸಮಯದ ಬಳಿಕ ನಿರ್ದೇಶನಕ್ಕೆ ಮರಳಿದ್ದೇನೆ. ಮಾಧ್ಯಮಗಳು ತೋರಿಸಿದ ಬೆಂಬಲ ಮೆಚ್ಚುವಂತಹದ್ದು. ಚಿತ್ರವನ್ನು ವೀಕ್ಷಿಸಿದ ಬಳಿಕವಷ್ಟೇ 'ಸೂಪರ್' ಚಿಹ್ನೆಯ ನಿಗೂಢ ತೆ ಅರ್ಥವಾಗುತ್ತದೆ ಎಂದಿದ್ದಾರೆ ಉಪೇಂದ್ರ.
ಚಿತ್ರದಲ್ಲಿರುವ ಒಟ್ಟು ಐದು ಹಾಡುಗಳಲ್ಲಿ ಎರಡಕ್ಕೆ ಯೋಗರಾಜ್ ಭಟ್ ಮತ್ತು ವಿ ಮನೋಹರ್ ಅವರು ಸಾಹಿತ್ಯ ಒದಗಿಸಿದ್ದಾರೆ. ಉಳಿದ ಮೂರು ಹಾಡುಗಳನ್ನು ಸ್ವತಃ ಉಪೇಂದ್ರ ಅವರೇ ರಚಿಸಿರುವುದು ವಿಶೇಷ. ವಿ ಹರಿಕೃಷ್ಣ ಅವರ ಸಂಗೀತ ಸಂಯೋಜನೆ ಅಶೋಕ್ ಕಶ್ಯಪ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ನಯನತಾರಾ ಹಾಗೂ ಟುಲಿಪ್ ಜೋಶಿ ಚಿತ್ರದ ನಾಯಕಿಯರು.


Click it and Unblock the Notifications











