»   » ಇಳಯರಾಜ ಸಂದರ್ಶನ

ಇಳಯರಾಜ ಸಂದರ್ಶನ

Posted By:
Subscribe to Filmibeat Kannada

ಸಂಗೀತ ಎಂದರೆ ಅಬ್ಬರ ಎನ್ನುವ ಕಾಲದಲ್ಲಿ ‘ಸಂಗೀತ ಎಂದರೆ ಸರಸ್ವತಿ. ಸಂಗೀತ ಎಂದರೆ ಮಾಧುರ್ಯ’ ಎಂದು ನಂಬಿಕೊಂಡು ಬಂದವರು ಇಳಯರಾಜ. ‘ಗೀತಾ, ಪಲ್ಲವಿ ಅನು ಪಲ್ಲವಿ, ನಮ್ಮೂರ ಮಂದಾರ ಹೂವೆ’ ಚಿತ್ರಗಳನ್ನು ನೀವು ನೋಡಿದ್ದೀರಾದರೆ- ಇಳಯರಾಜಾ ಅವರ ಸಂಗೀತದ ಮಾಧುರ್ಯ ಗೊತ್ತಿರಲೇ ಬೇಕು.

ಅಬ್ಬರದ ಹುಡುಗರ ಆರ್ಭಟವೇ ಹೆಚ್ಚಿದ್ದರೂ ಇಳಯರಾಜಾ ಅವರಿಗೆ ಅವಕಾಶಗಳು ಹುಡುಕಿಕೊಂಡು ಬರುತ್ತಲೇ ಇವೆ. ಗುಣಮಟ್ಟ ಹಾಗೂ ಮಾಧುರ್ಯ ಒಟ್ಟಿಗೆ ಬೇಕು ಅಂದರೆ, ಇಳಯರಾಜಾ ಅವರೇ ಆಗಬೇಕು. ಇತ್ತೀಚೆಗೆ ಇಳಯರಾಜಾ ಹೈದರಾಬಾದ್‌ಗೆ ಬಂದಿದ್ದರು. ಇಳಯರಾಜಾ ಅವರನ್ನು ದಟ್ಸ್‌ಕನ್ನಡದ ಸೋದರ ಪೋರ್ಟಲ್‌ ದಟ್ಸ್‌ತೆಲುಗು ಮಾತನಾಡಿಸಿತು. ಸಂಗೀತದ್ದೇ ಮಾತು-ಕತೆ !

ಇತ್ತೀಚೆಗೆ ಸಿನಿಮಾಗಳಲ್ಲಿ ಅವಕಾಶ ಕಡಿಮೆಯಾಗಿರುವುದನ್ನು ಇಳಯರಾಜಾ ಒಪ್ಪಿಕೊಂಡರು. - ‘ ಸಿನಿಮಾಗೆ ಮಾತ್ರ ಸ್ವಲ್ಪ ದೂರವಾಗಿದ್ದೇನೆ ; ಸಂಗೀತಕ್ಕೆ ಸದಾ ಹತ್ತಿರವಾಗಿಯೇ ಇದ್ದೇನೆ. ಸಂಗೀತದೊಂದಿಗೇ ಬದುಕುತ್ತಿದ್ದೇನೆ. ತಬಲಾ ಕಲಿತ ಬಾಲ್ಯದ ದಿನಗಳಿಂದ ಈವರೆಗೂ ಸಂಗೀತ ನನ್ನ ಬದುಕಿನೊಂದಿಗೆ ಬೆರೆತುಹೋಗಿದೆ. ಸಂಗೀತದ ಸಾಂಗತ್ಯದಿಂದ ದೂರವಾದದ್ದೇ ಇಲ್ಲ’ ಎಂದು ಇಳಯರಾಜಾ ಭಾವುಕರಾದರು.

‘ಸಿನಿಮಾ ಕೆಲಸ ಇಲ್ಲದಿದ್ದಾಗ ದೇವಸ್ಥಾನಗಳಿಗೆ ಭೇಟಿ ಕೊಡುತ್ತೇನೆ’ ಎಂದರು ಇಳಯರಾಜ. ಇತ್ತೀಚೆಗೆ ಅವರು ಸಂಗೀತ ನೀಡಿರುವುದು ಹೊಸಬರ ಸಿನಿಮಾಗಳಿಗೇನೆ ಹೆಚ್ಚು . ಬಾಲ, ತಂಗರ್‌ ಬಚ್ಚನ್‌, ಸಚಿನ್‌ರಂಥ ಯುವ ನಿರ್ದೇಶಕರೊಂದಿಗೆ ಕೆಲಸ ಮಾಡುವುದಕ್ಕೆ ಏನನ್ನಿಸುತ್ತದೆ ಎನ್ನುವ ಪ್ರಶ್ನೆಗೆ ಅವರು ಉತ್ತರಿಸಿದ್ದು :

‘ಹೊಸಬ/ಹಳಬ ಅನ್ನುವ ವ್ಯತ್ಯಾಸವೇ ನನಗಿಲ್ಲ . ಇಷ್ಟಕ್ಕೂ ನಾನು ವ್ಯಕ್ತಿಗಳನ್ನು ನೋಡಿ ಸಂಗೀತ ನೀಡುವುದಿಲ್ಲ . ಪ್ರಾಮಾಣಿಕವಾಗಿ ಹೇಳುವುದೆಂದರೆ, ಹೊಸಬರೊಂದಿಗೆ ಕೆಲಸ ಮಾಡೋದು ಸುಲಭ. ಅವರಿಗೆ ಪೂರ್ವಾಗ್ರಹಗಳಿರೋದಿಲ್ಲ . ಅದೇನೆ ಇರಲಿ, ನಾನು ನನ್ನ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ’.

ಅದೆಲ್ಲಾ ಇರಲಿ. ಸಂಗೀತದ ಹೊಸ ಟ್ರೆಂಡ್‌ಗಳ ಬಗ್ಗೆ ಇಳಯರಾಜಾ ಏನಂತಾರೆ? ಈ ಟ್ರೆಂಡ್‌ಗಳಿಗೆ ಅವರ ಸ್ಪಂದನವಾದರೂ ಎಂಥಾದ್ದು ?- ಪ್ರಶ್ನೆಗಳ ಮುಂದಿಟ್ಟರೆ ಇಳಯರಾಜಾ ತಣ್ಣನೆ ದನಿಯಲ್ಲಿಯೇ ಟ್ರೆಂಡ್‌ ಪರಿಕಲ್ಪನೆಯನ್ನೇ ನಿರಾಕರಿಸುತ್ತಾರೆ.

‘ಸಂಗೀತದಲ್ಲಿ ಹೊಸತು ಅನ್ನುವುದು ಇಲ್ಲವೇ ಇಲ್ಲ . ಅದೇ ರೀತಿ ಗುಣಮಟ್ಟದ ಮಾಪಕಗಳೂ ಇಲ್ಲ . ನಮ್ಮ ಕೆಲಸದ ಹೆಚ್ಚುಗಾರಿಕೆಯೇನಿದ್ರೂ ಇರುವ ಸ್ವರಗಳನ್ನು ವಿಭಿನ್ನವಾಗಿ ಬಳಸುವಲ್ಲಿ ಮಾತ್ರ’ ಎಂದ ಇಳಯರಾಜಾ ಅವರು ಮಾತು ಮುಗಿಸಿದ್ದು:

‘ಸಂಗೀತವೇ ನನ್ನ ಜೀವ. ನಾನು ಸಂಗೀತಕ್ಕಾಗಿ ಕೆಲಸ ಮಾಡುತ್ತೇನೆ.’

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada