»   » ಸ್ಯಾಂಡಲ್‌ವುಡ್‌ನಲ್ಲಿ ರಾಜನೂ ಇಲ್ಲ, ಯುವರಾಜನೂ ಇಲ್ಲ!

ಸ್ಯಾಂಡಲ್‌ವುಡ್‌ನಲ್ಲಿ ರಾಜನೂ ಇಲ್ಲ, ಯುವರಾಜನೂ ಇಲ್ಲ!

Subscribe to Filmibeat Kannada


ರಾಜ್‌ಕುಮಾರ್‌ ಹೋದ ಮೇಲೆ ದೊಡ್ಡದೊಂದು ಶೂನ್ಯ ಸೃಷ್ಟಿಯಾಗಿದೆ. ಅದನ್ನು ತುಂಬುವಂಥವರು ಯಾರು? ನನಗಂತೂ ರಾಜ್‌ ಹೋದ ಮೇಲೆ ಹೀರೋಗಳೇ ಕಾಣಿಸುತ್ತಿಲ್ಲ... ನಿಮಗೆ?

ಸಿಂಗಪುರದಲ್ಲಿ ‘ತೆನಾಲಿರಾಮ’ ಚಿತ್ರ ಇನ್ನು ಕೆಲವೇ ದಿನಗಳಲ್ಲಿ ಪ್ರದರ್ಶಿತಗೊಳ್ಳಲಿದೆ, ಟಿಕೆಟಿಗಾಗಿ ಕಾದಿರಿಸಿ ಎಂದು ಮೆಸೇಜ್‌ಗಳು, ಮೇಲ್‌ಗಳು ಬಂದವು. ಅದ್ಯಾಕೋ ಇತ್ತೀಚಿಗೆ ಇಲ್ಲಿ ಬಂದಿದ್ದ ಕನ್ನಡ ಚಿತ್ರಗಳು ಸ್ವಲ್ಪ ಬೇಸರ ಮೂಡಿಸಿದ್ದೇನೋ ನಿಜ.

ಕನ್ನಡ ಚಿತ್ರ ಎಂದು ಹೋಗುತ್ತೇವೇ ಸ್ಕಿೃೕನಿನ ಮೇಲೆ ಇಂದಿನ ಕಾಲದ ಚಿತ್ರ ಓಡ್ತಾ ಇರುತ್ತೆ. ಕಥೆ ಇಲ್ಲ, ಕವನ ಇಲ್ಲ, ಆಕ್ಟಿಂಗ್‌ ಇಲ್ಲ ಇದು ಮೊದಲ ದೃಶ್ಯದಲ್ಲೇ ಗೊತ್ತಾಗುತ್ತೆ ಆದ್ರೂ ದುಡ್ದು ತೆತ್ತಿದ್ದೇವಲ್ಲಾ ಎಂಬ ಸಂಕಟದಿಂದ ಕುಳಿತಲ್ಲಿ ಯಾವಾಗ ಮುಗಿಯುತ್ತಪ್ಪಾ, ಅಯ್ಯೋ ಇನ್ನೂ ಎಷ್ಟು ಹೊತ್ತೋ ಎಂದು ಬೈದುಕೊಳ್ಳುತ್ತಾ, ಅಂದಿನ ಚಿತ್ರಗಳಲ್ಲಿ ಏಸೋಂದು ಮುದವಿತ್ತಾ, ಕಥೆಯಿತ್ತ, ಹಾಡಿತ್ತಾ, ನಟನೆಯಿತ್ತಾ, ಭಾವುಕತೆಯಿತ್ತಾ ಎಂದು ಯೋಚಿಸುತ್ತಿರುತ್ತೇವೆ. ಆದ್ರೂ ಇಲ್ಲಿಗೆ ಬರುವ ಕನ್ನಡ ಚಿತ್ರ ನೋಡ್ತೀವಿ ಹೀಗಾಗಿದೆ ನೋಡಿ ಇಂದಿನ ಸಿನಿಮಾ ಸ್ಥಿತಿ.

ಟಿಕೆಟಿಗೆ ಹೇಳೋಣ್ವಾ ಬೇಡ್ವಾ ಎಂದು ಯೋಚಿಸುತ್ತಿದ್ದಂತೆ ಮಗನ ಫೋನ್‌ ಬಂತು. ‘ಏನ್‌ ಮಾಡ್ತಾ ಇದೀಯ’ ಎಂಬ ಪ್ರಶ್ನೆ. ‘ಕನ್ನಡ ಪಿಕ್ಚರ್‌ ಬರ್ತಾ ಇದೆ, ಟಿಕೆಟಿಗೆ ಹೇಳೋಣ್ವಾ ಬೇಡ್ವಾ ಎಂದು ಯೋಚಿಸ್ತಾ ಇದ್ದೆ’ ಎಂದೆ.

‘ಕನ್ನಡ ಪಿಕ್ಚರ್‌ ಅಂತ ಆಸೆಯಿಂದ ಹೋಗ್ತೀಯಾ. ಆಮೇಲೆ ಅಯ್ಯೋ, ಸುಮಾರಾಗಿತ್ತು ಅಂತಾನೋ ಇಲ್ಲ , ಅಧ್ವಾನ ಯಾಕಾದ್ರೂ ಹೋದೆನೋ ಎಂದು ಮೂಗೆಳೀತೀಯಾ? ಇದ್ದೇ ಇದೆ ನಿಂದು. ಹೀರೋ ಸರಿ ಇಲ್ಲ, ಹೀರೋಯಿನ್‌ ಡುಮ್ಮಿ, ಆಕ್ಟಿಂಗ್‌ ಇಲ್ಲವೇ ಇಲ್ಲ ಇನ್ನು ಕಥೆಯೋ ಎಂದು ರಾಗ ಹಾಡ್ತೀಯಾ. ಸುಮ್ನೆ ಯಾವುದಾದ್ರೂ ಸಿ.ಡಿ. ಹಾಕ್ಕೊಂಡು ನಿನ್ನ ಹೀರೋ(ರಾಜ್‌ಕುಮಾರ್‌) ಪಿಕ್ಚರ್‌ ನೋಡು ಸಾಕು’ ಎಂದು ಬಾಯಿ-ಮು-ಚ್ಚಿ-ಸಿ-ದ.

ಮಿಕ್ಕ ಸಮಯದಲ್ಲಾದರೆ ವಾಗ್ವಾದಕ್ಕೆ ಇಳಿಯುತ್ತಿದೆ. ಆದರೆ ಇಂದು ನನ್ನ ಮಗನ ಈ ಮಾತಿನಲ್ಲಿ ಸತ್ಯಾಂಶವಿತ್ತು. ಫೋನ್‌ ಇಡುತ್ತಾ ಯಾರೀಗ ಕನ್ನಡದಲ್ಲಿ ನಿನ್ನ ಹೊಸ ಹೀರೋ ಎಂದು ಪ್ರಶ್ನೆ ಹಾಕಿದ.

ಹೀರೋಗಳ್ಯಾರಿದ್ದಾರೆ?

ನನ್ನ ಹೊಸ ಹೀರೋ ಯಾರು? -ಇದು ಉತ್ತರಿಸಲಾಗದ ದೊಡ್ಡ ಪ್ರಶ್ನೆ. ರಾಜ್‌ಕುಮಾರ್‌ ನನ್ನ ಎವರ್‌ಗ್ರೀನ್‌ ಹೀರೋ. ಆ ಜಾಗದಲ್ಲಿ ಇನ್ಯಾರಿಗೂ ಛಾನ್ಸೇ ಇಲ್ಲ. ಆದ್ರೂ... ಹೊಸ ಹೀರೋ? ಯಾರಾಗಬಹುದು ಎಂದು ಯೋಚಿಸಿದೆ. ನನ್ನ ಹೊಸ ಹೀರೋ ಫ್ರೇಮ್‌ನಲ್ಲಿ ವಿಷ್ಣು, ಅನಂತ್‌, ಶಂಕರ್‌ನಾಗ್‌, ಲೋಕೇಶ್‌, ಅಂಬರೀಶ್‌ ನಂತರ ರವಿಚಂದ್ರನ್‌, ಶಿವರಾಜ್‌ಕುಮಾರ್‌, ಇತ್ತೀಚಿನ ಸುದೀಪ್‌, ಪುನೀತ್‌, ರಮೇಶ್‌ ಇನ್ನೂ ಹೆಸರೇ ಅರಿಯದ ಹಲವು ಮುಖಗಳು ಒಂದಾದ ಮೇಲೆ ಒಂದಂತೆ ಸುಳಿದು ಹೋದರು. ಎಲ್ಲರೂ ಒಂಥರಾ ಪಾಸ್‌ ಆನ್‌ ಆದರು ಅಷ್ಟೇ. ಯಾರೂ ಆ ಫ್ರೇಮ್‌ನಲ್ಲಿ ಫಿಟ್‌ ಆಗಲೇ ಇಲ್ಲ.

ಇನ್ನೂ ಯಾರಾದ್ರೂ ಎಂದು ಯೋಚಿಸಿದಾಗ ಅಶ್ವಥ್‌ ಮತ್ತೆ ನಾಗೇಂದ್ರರಾವ್‌ ಬಂದರು. ಅವರಿಬ್ಬರಿಗೂ ಅಲ್ಲಿ ಜಾಗವಿತ್ತು. ಆದ್ರೆ ಛೆ, ಅವ್ರು ಹೀರೋ ಅಲ್ಲ ಹಿರಿಯರು, ಹೀರೋ ಫ್ರೇಮ್‌ ಅವರಿಗೆ ಹೊಂದೋ-ದಿ-ಲ್ಲ. ಹೊಸ ಹೀರೋ ಯಾರಾಗಬಹುದು ಎಂದು ಮನ ಕೂಗಿದಂತೆಲ್ಲಾ ‘ನಾನಿರುವೆ ನಿಮಗಾಗಿ’ ಎಂದು ಬಂದು ತಟಸ್ಥನಾಗಿ ನಗುತ್ತಾ ಹೀರೋ ಫ್ರೇಮ್‌ನಲ್ಲಿ ಮತ್ತೆ ನಿಂತರು ರಾಜ್‌ಕುಮಾರ್‌.

ಒಂದಲ್ಲ, ಎರಡಲ್ಲ ಎಷ್ಟೇ ಫ್ರೇಮ್‌ ಹಾಕಿದ್ರೂ ಅಲ್ಲಿ ರಾಜ್‌ ಬಿಟ್ಟರೆ ಇನ್ನು ಯಾರಿಗೂ ಜಾಗವಿಲ್ಲ ಎಂಬುದು ಮನದಟ್ಟಾಯಿತು. ಇದು ನನ್ನೊಬ್ಬಳ ಹೀರೋ ಫ್ರೇಮ್‌ ಆಫ್‌ ಮೈಂಡ್‌ ಅಲ್ಲಾರೀ, 50ರಿಂದ 70ರ ದಶಕದಲ್ಲಿ ಜನಿಸಿದ ಎಲ್ಲಾ ಕನ್ನಡಿಗರ ‘ಹೀರೋ ಫ್ರೇಮ್‌’ ನಲ್ಲಿ ಫಿಟ್‌ ಆಗೋದು ‘ರಾಜಕುಮಾರ್‌’ ಒಬ್ಬರು ಮಾತ್ರ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada