For Quick Alerts
  ALLOW NOTIFICATIONS  
  For Daily Alerts

  ಸ್ಯಾಂಡಲ್‌ವುಡ್‌ನಲ್ಲಿ ರಾಜನೂ ಇಲ್ಲ, ಯುವರಾಜನೂ ಇಲ್ಲ!

  By Staff
  |

  ಸೋಲದವರ್ಯಾರು?

  ಯಾಕೆ ಹೀಗೆ? ರಾಜ್‌ ಬರೀ ಚಿತ್ರಗಳ ಹೀರೋ ಒಂದೇ ಅಲ್ಲ. ಅದರಾಚೆಗೆ ಅವರು ಕರ್ನಾಟಕದ ಒಬ್ಬ ಸಾಂಸ್ಕೃತಿಕ ವ್ಯಕ್ತಿಯಾಗಿ ರೂಪುಗೊಂಡರು. ನಮ್ಮ ಕನ್ನಡ ಭಾಷೆ, ನೆಲ, ಜಲ, ಕಾರ್ಮಿಕರ ಸಮಸ್ಯೆ, ಚಿತ್ರರಂಗದಲ್ಲಿ ಬಿಕ್ಕಟ್ಟು, ಕಲಾವಿದರ ಸಮಸ್ಯೆ, ನಿರ್ಮಾಪಕರ ಸಮಸ್ಯೆ, ಥಿಯೇಟರ್‌ಗಳ ಸಮಸ್ಯೆ ಯಾವುದೇ ಇರಲಿ ಅಲ್ಲಿ ರಾಜ್‌ ನಮ್ಮೂರು, ನಮ್ಮ ಜನ ಎಂಬ ಅಭಿಮಾನ, ಅರ್ಪಣಾಭಾವದಿಂದ ಹೋರಾಡಿದ್ದಾರೆ. ಪರಿಹಾರ ಕಂಡು ಹಿಡಿದಿದ್ದಾರೆ. ರಾಜಕೀಯಕ್ಕೆ ಇಳಿಯದೆಯೇ ರಾಜಕೀಯ ಕ್ಷೇತ್ರದಲ್ಲಿ ಕೂಡ ಅವರ ಅರ್ಪಣಾ ಭಾವದ ಪ್ರವೇಶದಿಂದ ಇಂತಹ ಅನೇಕ ಸಮಸ್ಯೆಗಳು ಸುಲಭವಾಗಿ ಪರಿಹಾರವಾಗುತ್ತಿತ್ತು.

  ‘ರಾಜ’ನಿಲ್ಲದ ಊರಲ್ಲೀಗ ಏನಾಗಿದೆ?

  ಇದೀಗ ಅಂತಹ ಸಮಗ್ರ ನಾಯಕತ್ವ ಚಿತ್ರರಂಗದಲ್ಲೇ ಅಲ್ಲ ಚಿತ್ರರಂಗದ ಹೊರಗೂ ಜನತೆಗಾಗಿ ಹೋರಾಡುವ ನಾಯಕರು ಯಾರೂ ಇಲ್ಲ. ರಾಜ್‌ ಅವರ ಅಗಲಿಕೆ ತಂದಿದೆ ನಾಯಕತ್ವದ ಕೊರತೆ. ಮೊದಲೇ ಕೊಳೆ ಅದರ ಮೇಲೆ ಮಳೆ ಎನ್ನುವಂತೆ ನಗರಗಳಲ್ಲಿ ಥಿಯೇಟರ್‌ ಸಿಗೋಲ್ಲ, ಪಿಕ್ಚರ್‌ ಓಡೋಲ್ಲ ಎನ್ನುವ ಚಿತ್ರೋದ್ಯಮ ಮತ್ತೊಂದೆಡೆ ಗ್ರಾಮಗಳಲ್ಲಿ ಕೂಡ ಕನ್ನಡ ಚಿತ್ರಗಳ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ.

  ಗ್ರಾಮಗಳಲ್ಲಿ ಪರಿಸ್ಥಿತಿ ಬದಲಾಗಿದೆ ಪ್ರೇಕ್ಷಕರ ಆದ್ಯತೆ ಬದಲಾಗಿದೆ. ಟೆಂಟ್‌, ಥೇಟರ್‌ ಎಂದು ಸಿನಿಮಾ ನೋಡಲು ಹಾತೊರೆಯುತ್ತಿದ್ದ ಜನ ಇದೀಗ ಟಿ.ವಿ. ದಾಸರಾಗಿದ್ದಾರೆ. ಅಯ್ಯೋ ಅಲ್ಲಿಗೆ ಹೋಗಿ ಯಾಕೆ ದುಡ್ದು ಸುರೀಬೇಕು. ಹೇಗಿದ್ರೂ ಸ್ವಲ್ಪ ದಿನ ಆದಮೇಲೆ ಟಿ.ವಿ.ಯಲ್ಲಿ ಹಾಕೇ ಹಾಕ್ತಾರೆ ಎಂದು ಉದಾಸೀನ ತೋರುತ್ತಾರೆ.

  ಹಳ್ಳಿಗಳಲ್ಲಿ, ಮಲೆನಾಡು, ಬಯಲುಸೀಮೆಗಳಲ್ಲಿ ಟೆಂಟ್‌, ಥೇಟರಿಗೆ ಹೋಗೋದು ಮೊದಲಿನಷ್ಟು ಸುಭದ್ರ ತಾಣ ಅಲ್ಲ. ಪಡ್ಡೆ ಹುಡುಗರು, ನಿರುದ್ಯೋಗಿಗಳು ಅಡ್ಡಾಡುವ ತಾಣವದು ಎಂಬಂತಾಗಿದೆ. ಆ ಹುಡುಗರು ನೋಡುವ ಚಿತ್ರ ಮೂರನೆ ದರ್ಜೆಯ ಚಿತ್ರಗಳು, ಅಶ್ಲೀಲ ಚಿತ್ರಗಳು. ಒಟ್ಟಿನಲ್ಲಿ ಕನ್ನಡ ಭಾಷೆ ಸೊರಗುತ್ತಿರುವಂತೆ ಕನ್ನಡ ಸಿನಿಮಾ ಕೂಡ ಸೊರಗಿ ಹೋಗುತ್ತಿದೆ.

  ಅಂಕಿ ಅಂಶಗಳ ಪ್ರಕಾರ 2006ರಲ್ಲಿ ಸುಮಾರು 49 ಚಿತ್ರಗಳು ಬಂದು ಅದರಲ್ಲಿ 42 ಚಿತ್ರಗಳು ಸೋತು, ನಿರ್ಮಾಪಕರುಗಳಿಗೆ ಕೋಟಿ, ಕೋಟಿರೂಗಳ ನಷ್ಟವಾಗಿದೆ. ನಿರ್ದೇಶಕರೇನಕರು ಮನೆಯಲ್ಲಿ ಬಿಮ್ಮನೆ ಕುಳಿತಿದ್ದಾರೆ. ಯಾಕೆ. ಅನ್ಯ ಭಾಷೆಗಳಲ್ಲಿ ಹಿಟ್‌ ಸಿನಿಮಾ ಕೊಡಲು ಜನ ಹೆಣಗಾಡುತ್ತಿದ್ದರೆ ಕನ್ನಡದಲ್ಲಿ ಫ್ಲಾಪ್‌ ಚಿತ್ರಗಳ ಪಟ್ಟಿ ಬೆಳೆಯುತ್ತಾ ಹೋಗುತ್ತಿದೆ.

  ನನ್ನ ವಾದ ಅರ್ಥಮಾಡಿಕೊಳ್ಳಿ...

  ಹಾಗಾದ್ರೆ ರಾಜ್‌ಕುಮಾರ್‌ ಚಿತ್ರ ಬಿಟ್ಟು ಮಿಕ್ಕ ಕನ್ನಡ ಚಿತ್ರ ನೋಡೋದೇ ಇಲ್ಲ್ವಾ ಎಂದಲ್ಲ. ಖಂಡಿತವಾಗಿ ಇನ್ನಿತರ ಪ್ರತಿಭಾನ್ವಿತ ನಟರ ಉತ್ತಮ ಚಿತ್ರಗಳನ್ನು ನೋಡಿ ಆನಂದಿಸಿದ್ದೇನೆ. ರಾಜ್‌ ಅವರ ನಟನೆಯ ಕಾಲ ಮುಗಿದ ಮೇಲೂ ಕಾಸರವಳ್ಳಿ, ಕಾರ್ನಾಡ್‌, ನಾಗಾಭರಣ, ನಾಗತಿಹಳ್ಳಿ, ಕವಿತಾಲಂಕೇಶ್‌ ಉತ್ತಮ ನಿರ್ದೇಶಕರುಗಳಿಂದ ಒಳ್ಳೆಯ ಚಿತ್ರಗಳೂ ಮೂಡಿ ಬಂದವು. ಅವನ್ನು ಮೆಚ್ಚಿದ್ದೇನೆ ಕೂಡ. ಆದರೂ ಇವೆಲ್ಲವೂ ಬೆರಳೆಣಿಕೆಯಷ್ಟು ಮಾತ್ರ. ಕನ್ನಡದಲ್ಲಿ ಕಾದಂಬರಿ ಆಧಾರಿತ, ಸಾಮಾಜಿಕ, ಪೌರಾಣಿಕದ ಉತ್ತಮ ಚಿತ್ರಗಳನ್ನು ನೋಡಿ ಆನಂದಿಸಿದ ನಮಗೆ ಅದೇಕೋ ಇತ್ತೀಚಿನ ಚಿತ್ರಗಳು ಮನದಲ್ಲಿ ನಿಲ್ಲುವುದಿಲ್ಲ.

  ಇದೀಗ ಚಿತ್ರಗಳೆಂಬುದು ಒಂದು ರೈಲ್ವೇ ನಿಲ್ದಾಣದ ತರಹ. ಫ್ಲಾಟ್‌ ಫಾರ್ಮಿನಲ್ಲಿ ಹೀರೋ, ಹೀರೋಯಿನ್‌ ಬರ್ತಾರೆ, ಪರಿಚಯಸ್ಥರಂತೆ ನಗು ಬೀರುತ್ತಾರೆ ಮತ್ತೆ ರೈಲೇರೀ ಟಾಟಾ ಎನ್ನುತ್ತಾರೆ. ಅವ್ರು ಯಾರು ಎಂದು ನಾವು ಯೋಚಿಸುವಷ್ಟರಲ್ಲಿಯೇ ಹೊರಟು ಹೋಗಿರುತ್ತಾರೆ ಹಾಗಾಗಿದೆ ಕನ್ನಡ ಚಿತ್ರದ ಪರಿಸ್ಥಿತಿ. ಆಗ ಕಾಡುತ್ತೆ ರಾಜ್‌ ಇಲ್ಲದಾ ಕೊರತೆ.. ಕಾಡತಾವ ನೆನಪು.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X