»   » ಜೆಮಿನಿ ಗಣೇಶನ್‌ ಇನ್ನು ನೆನಪುಗಳಲ್ಲಿ ಮಾತ್ರ!

ಜೆಮಿನಿ ಗಣೇಶನ್‌ ಇನ್ನು ನೆನಪುಗಳಲ್ಲಿ ಮಾತ್ರ!

Subscribe to Filmibeat Kannada
  • ಸಿನಿಡೆಸ್ಕ್‌, ದಟ್ಸ್‌ಕನ್ನಡ
ದಕ್ಷಿಣ ಭಾರತದ ಸಿನಿ ದಿಗ್ಗಜ, ಪ್ರಣಯ ರಾಜ ಜೆಮಿನಿ ಗಣೇಶನ್‌ ಇನ್ನಿಲ್ಲ. ಚಿತ್ರಪ್ರೇಮಿಗಳಿಗೆ ನೆಚ್ಚಿನ ನಟನ ಸಾವಿನ ವಾರ್ತೆಯನ್ನು ಜೀರ್ಣಿಸಿಕೊಳ್ಳುವುದು ಸ್ವಲ್ಪ ಕಷ್ಟವೇ ಸರಿ.

ತಮಿಳು ಚಿತ್ರರಂಗದಲ್ಲಿ ತ್ರಿಮೂರ್ತಿಗಳೆಂದೇ ಖ್ಯಾತರಾಗಿದ್ದ ಶಿವಾಜಿ ಗಣೇಶನ್‌, ಎಂ.ಜಿ.ರಾಮಚಂದ್ರನ್‌, ಜೆಮಿನಿ ಗಣೇಶನ್‌ ಅವರುಗಳು ಮಾಡಿದ ಮೋಡಿ ಅಷ್ಟಿಷ್ಟಲ್ಲ. ಈಗ ಜೆಮಿನಿ ಗಣೇಶನ್‌ರ ನಿಧನದ ಮೂಲಕ ತ್ರಿಮೂರ್ತಿಗಳ ತಲೆಮಾರು ಕಣ್ಮರೆಯಾಗಿದೆ. ದೀರ್ಘಕಾಲದ ಅಸ್ವಸ್ಥತೆಯಿಂದಾಗಿ ಮಂಗಳವಾರ(ಮಾ.22) ಬೆಳಗಿನ ಜಾವ ತಮ್ಮ ನಿವಾಸದಲ್ಲಿಯೇ ಜೆಮಿನಿ ಕೊನೆಯುಸಿರೆಳೆದರು.

ಪತ್ನಿ ಟಿ.ಆರ್‌.ಅಲಮೇಲೂ, ಹಿಂದಿಯ ಖ್ಯಾತ ತಾರೆ ರೇಖಾ ಸೇರಿದಂತೆ ಏಳು ಪುತ್ರಿಯರು ಹಾಗೂ ಒಬ್ಬ ಪುತ್ರನನ್ನು ಬಿಟ್ಟು ಅಗಲಿರುವ 84ವರ್ಷದ ಗಣೇಶನ್‌ ಸಾವಿನಿಂದ ಅಭಿಮಾನಿಗಳಲ್ಲಿ ಹಾಗೂ ಚಿತ್ರಪ್ರೇಮಿಗಳಲ್ಲಿ ದುಃಖದ ವಾತಾವರಣ ಮಡುಗಟ್ಟಿದೆ. ತಮ್ಮ ಐದು ದಶಕಗಳ ಸಿನಿ ಬದುಕಿನಲ್ಲಿ ದಕ್ಷಿಣ ಭಾರತದ ತಮಿಳು,ತೆಲುಗು, ಮಳಯಾಳಂ, ಕನ್ನಡ ಭಾಷೆಗಳಲ್ಲಿ ನಟಿಸಿದ ಹೆಮ್ಮೆ ಅವರದು. ಹಿಂದಿಯಲ್ಲಿ ಸಹಾ ಜೆಮಿನಿ ತಮ್ಮ ನಟನಾಚಾತುರ್ಯವನ್ನು ಬಿಂಬಿಸಿದ್ದರು.

ಅಚ್ಚರಿಯ ನಂಟು : ತಂಜಾವೂರು ಜಿಲ್ಲೆಯ ಪುದುಕೋಟೈನ ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬದಲ್ಲಿ 1920ರಲ್ಲಿ ಜೆಮಿನಿ ಜನಿಸಿದರು. ಮದರಾಸಿನ ಕ್ರಿಶ್ಚಿಯನ್‌ ಕಾಲೇಜಿನ ಉಪನ್ಯಾಸಕರಾಗಿ ವೃತ್ತಿಜೀವನ ಆರಂಭಿಸಿದ ಅವರಿಗೆ, ಚಿತ್ರರಂಗದ ಬಾಗಿಲು ಆಶ್ಚರ್ಯಕರವಾಗಿ ತೆರೆದುಕೊಂಡಿತು. ಜೆಮಿನಿ ಸ್ಟುಡಿಯೋ ಛಾಯಾಗ್ರಾಹಕ ರಾಮನಾಥ್‌ ಅವರ ಪರಿಚಯ, ಚಿತ್ರರಂಗದಲ್ಲಿ ಮಿಂಚಿ ಮೆರೆಯಲು ಏಣಿಯಾಯಿತು.

1947ರಲ್ಲಿ ಜೆಮಿನಿ ಚಲನಚಿತ್ರ ನಿರ್ಮಾಣ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿದ ಗಣೇಶನ್‌, ಸಣ್ಣ-ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡರು. ಅವರಲ್ಲಿದ್ದ ಕಲಾವಿದನಿಗೆ ವೇದಿಕೆ ಸಿಕ್ಕಿದ್ದೇ ಅಲ್ಲಿ. ಗಣೇಶ್‌ ಹೆಸರಿನ ಮುಂದೆ ಜೆಮಿನಿ ಸೇರಿಕೊಳ್ಳಲು ಇದೇ ಕಾರಣವಾಯಿತು. ಮುಂದೆ ಎವಿಎಂ ಪ್ರೊಡಕ್ಷನ್ಸ್‌ ನಿರ್ಮಿಸಿದ ‘ಪೆಣ್‌’ ಚಿತ್ರದ ಮೂಲಕ ಜೆಮಿನಿ ನಾಯಕ ನಟರಾಗಿ ಪರಿಚಿತರಾದರು.

ಆನಂತರದ್ದು ಯಶಸ್ಸಿನ ಕಥೆ. ಸಾಹುಗಾರ ಜಾನಕಿ, ಸಾವಿತ್ರಿ, ವೈಜಯಂತಿ ಮಾಲಾ, ದೇವಿಕಾ, ಬಿ.ಸರೋಜ ದೇವಿ ಸೇರಿದಂತೆ ಆಗಿನ ಪ್ರಮುಖ ನಟಿಯರ ಜೊತೆ ಜೆಮಿನಿ ನಟಿಸಿದರು. 1950-1970 ಜೆಮಿನಿ ಪಾಲಿಗೆ ಪರ್ವಕಾಲ. ಅವರ ವಾಂಜಿಕೋಟೈ ವಲಿಬನ್‌, ಕಲ್ಯಾಣ ಪರಿಸು, ಮಿಸ್ಸಮ್ಮ, ಪಸಮಲರ್‌, ಪಣಮ್ಮ ಪಸಮ, ಕೊಂಜುಂ ಸಂಘೖ, ಕಲಾತ್ತೂರು ಕನ್ನಮ್ಮ, ಕರ್ಪಗಂ, ತೆನ್‌ ನಿಲವು, ಇರು ಕೊಡುಗಲ್‌, ಉನ್ನಗೈ, ನನ್‌ ಅವನಿಲೈ ಮತ್ತಿತರ ಚಿತ್ರಗಳು ಜನಮಾನಸದಲ್ಲಿ ಇಂದಿಗೂ ಹಸಿರಾಗಿವೆ.

ನಟಿಸುವ ಉತ್ಸಾಹ, ಬಣ್ಣದ ಮೇಲಿನ ಅಭಿಮಾನ ಅವರ ವೃದ್ದಾಪ್ಯಕ್ಕೆ ಅಡ್ಡಿಯಾಗಲಿಲ್ಲ. 90ರ ದಶಕದಲ್ಲಿ ಅಪ್ಪನ ಪಾತ್ರಗಳಲ್ಲಿ ಅವರು ಅಭಿನಯಿಸುತ್ತಿದ್ದರು. ಕಮಲ್‌ಹಾಸನ್‌ ಜೊತೆ ಅವೈ ಷಣ್ಣುಖಿಯಲ್ಲಿ ಜೆಮಿನಿ ನಟಿಸಿದ್ದಾರೆ. ಸುಮಾರು 200 ಚಿತ್ರಗಳಲ್ಲಿ ನಟಿಸಿ, ಅಭಿಮಾನಿಗಳ ಹೃದಯವನ್ನು ತಟ್ಟಿದ್ದಾರೆ.

ಕಳೆದ ಕೆಲವು ವರ್ಷಗಳಿಂದೆ ಜೆಮಿನಿ ದಿಢೀರ್‌ ಸುದ್ದಿಯಾಗಿದ್ದರು. ದೇವಸ್ಥಾನವೊಂದರ ಕಾರ್ಯದರ್ಶಿಯಾಬ್ಬಳನ್ನು ಮದುವೆಯಾಗಿ, ಅಲ್ಲಿಯೇ ಪ್ರತ್ಯೇಕ ಬದುಕನ್ನು ಅವರು ಆರಂಭಿಸಿದ್ದರು. ನಂತರ ಮೊದಲ ಹೆಂಡತಿಯತ್ತ ಮರಳಿದ್ದರು.

ಮನ್ನಣೆ : ಜೆಮಿನಿ ರಾಜಕೀಯ ಪ್ರವೇಶಿಸಿದ್ದರೆ, ಎಂಜಿಆರ್‌, ಶಿವಾಜಿ ಗಣೇಶನ್‌ರಂತೆ ಮಿಂಚುತ್ತಿದ್ದರೇನೋ, ಆದರೆ ಅವರು ನಟನೆಗಷ್ಟೇ ತಮ್ಮನ್ನು ಸೀಮಿತಗೊಳಿಸಿಕೊಂಡರು. ಅವರ ಸಾಧನೆಯನ್ನು ಗುರ್ತಿಸಿ ಬಂದು ಪ್ರಶಸ್ತಿಗಳು ಹತ್ತಾರು. 1971ರಲ್ಲಿ ಪದ್ಮಶ್ರೀ, ಕಲೈಮಣಿ ಪ್ರಶಸ್ತಿ, ಎಂಜಿಆರ್‌ ಚಿನ್ನದ ಪದಕದ ಗೌರವ, ಸ್ಕೀನ್‌ನ ಜೀವಿತಾವಧಿ ಪ್ರಶಸ್ತಿಯ ಮನ್ನಣೆಗೆ ಅವರು ಪಾತ್ರರಾಗಿದ್ದರು.

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada