twitter
    For Quick Alerts
    ALLOW NOTIFICATIONS  
    For Daily Alerts

    ವಿಷ್ಣು ಸಹಸ್ರನಾಮ ಕಾರ್ಯಕ್ರಮದಲ್ಲಿ ಕಾಣಿಸಿದ್ದು - ಕನ್ನಡ ಚಿತ್ರರಂಗ ಸಂಕಷ್ಟದಲ್ಲಿದೆ ಎನ್ನುವ ಆತಂಕ ಹಾಗೂ ಸಂಕಷ್ಟದಲ್ಲಿರುವ ಉದ್ಯಮದ ನಾಯಕತ್ವವನ್ನು ವಿಷ್ಣು ವಹಿಸಿಕೊಳ್ಳಬೇಕು ಎನ್ನುವ ನಿರ್ಣಯ!

    By Staff
    |

    ಕೋಟಿಗೊಬ್ಬನ ಸ್ಫೂರ್ತಿ ಕೀರ್ತಿ!

    ಈ ವಿಷಯವನ್ನು ಬಹಿರಂಗಪಡಿಸಿದ್ದು ಕೋಟಿಗೊಬ್ಬ ನಿರ್ಮಾಪಕ ಸೂರಪ್ಪಬಾಬು. ಅಲ್ಲಿಗೆ, ರೀಚಾರ್ಜಬಲ್‌ ಬ್ಯಾಟರಿ ಅನ್ನುವ ವಿಶೇಷಣದ ವಿನಯವಂತ ವಿಷ್ಣುವರ್ಧನ್‌ ಅವರ ಸ್ಫೂರ್ತಿಯ ಲಿಸ್ಟ್‌ನಲ್ಲಿ ಸ್ವಂತ ಮಗಳಿಗೂ ಜಾಗ ಇದೆಯೆಂದಾಯಿತು.

    ಅದು ಕೋಟಿಗೊಬ್ಬ ಚಿತ್ರದ ಶತ ದಿನೋತ್ಸವ ಸಂಭ್ರಮ. ಸಮಾರಂಭ ನಡೆದದ್ದು ಚೌಡಯ್ಯ ಮೆಮೋರಿಯಲ್‌ ಹಾಲ್‌ನಲ್ಲಿ . ಆಹ್ವಾನ ಪತ್ರಿಕೆ ಇದ್ದವರು ಒಳಗೆ, ಇಲ್ಲದವರು ಹೊರಗೆ- ಜನ ಮರುಳೋ ಜಾತ್ರೆ ಮರುಳೋ ಅನ್ನುವಂಥ ಸನ್ನಿವೇಶ!

    ರಜನಿಕಾಂತ್‌ ಅಭಿನಯದ ತಮಿಳು ಸಿನಿಮಾ ಬಾಷಾವನ್ನು ಕನ್ನಡಕ್ಕೆ ರಿಮೇಕ್‌ ಮಾಡಲಿಕ್ಕೆ ಹೊರಟಾಗ ಸೂರಪ್ಪಬಾಬು ಕಾಲೆಳೆದವರೇ ಹೆಚ್ಚು . ರಜನಿ ಪಾತ್ರವನ್ನು ಯಾರೂ ಮಾಡಲಾರರು, ವಿಷ್ಣುಗೂ ಕಷ್ಟ ಎಂದು ಗಾಂಧಿ ನಗರಿ ಟೈಲರ್‌ಗಳು ಸೂರಪ್ಪ ಬಾಬು ಧೈರ್ಯ ಕೆಡಿಸಿದ್ದರು. ಆಗ ಬಾಬು ನೆರವಿಗೆ ಬಂದದ್ದು ಕೀರ್ತಿ. ಆ ಕಾರಣಕ್ಕಾಗಿಯೇ ಕೋಟಿಗೊಬ್ಬನ ಯಶಸ್ಸಿನ ಕೀರ್ತಿ- ಕೀರ್ತಿಗೆ. ಶತದಿನೋತ್ಸವದ ಮೊದಲ ಸ್ಮರಣ ಫಲಕವೂ ಕೀರ್ತಿಗೆ! ನಿರ್ದೇಶಕ ನಾಗಣ್ಣ ಮಾತ್ರ ಸಿನಿಮಾದ ಎಲ್ಲ ಕೀರ್ತಿಯನ್ನು ಸಾರಾ ಸಗಟಾಗಿ ವಿಷ್ಣುಗೆ ಅರ್ಪಿಸಿದರು.

    ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ನಂತರ ಎಲ್ಲ ಪ್ರಮುಖ ಸಿನಿಮಾ ಸಮಾರಂಭಗಳಲ್ಲೂ ಕಾಣಿಸಿಕೊಳ್ಳುತ್ತಿರುವ ಕೆಸಿಎನ್‌ ಚಂದ್ರು ಕೋಟಿಗೊಬ್ಬ ನೂರರ ಸಮಾರಂಭದಲ್ಲೂ ಇದ್ದರು. ಅವರಿಗೆ ಸ್ಮರಣ ಫಲಕ ವಿತರಿಸುವ ಕಾಯಕ. ಕಲಾವಿದರು ಹಾಗೂ ತಂತ್ರಜ್ಞರಿಗೆ ಫಲಕ ವಿತರಿಸುವ ಕಾರ್ಯಕ್ರಮ ಹನುಮಂತನ ಬಾಲದಂತಿತ್ತು .

    ಉತ್ಸಾಹ- ತಾಜಾತನ ಎರಡೂ ಬತ್ತಿದಂತಿದ್ದ ಸಮಾರಂಭಕ್ಕೆ ಜೀವಕಳೆ ತುಂಬಿದ್ದು ಮಿಮಿಕ್ರಿ ದಯಾನಂದ್‌ರ ಮಿಮಿಕ್ರಿ ಹಾಗೂ ಗಾನ ವಿನೋದಿನಿ ತಂಡದವರ ಭಾಗ್ಯದಾ ಲಕ್ಷ್ಮಿ ಬಾರಮ್ಮಾ ಪ್ರಹಸನ. ಗಾನ ವಿನೋದಿನಿಯ ನಗೆ ಹೊನಲಲ್ಲಿ ವೇದಿಕೆ ಮೇಲಿದ್ದ ವಿಷ್ಣು ಸೇರಿದಂತೆ ಇಡೀ ಸಭಾಂಗಣವೇ ಒಂದಾಯಿತು. ಪ್ರೇಮ ಚಂದ್ರಮ... ಹಾಡನ್ನು ರಾಜ್‌, ವಿಷ್ಣು , ಅಂಬಿ, ಶಂಕರ್‌ನಾಗ್‌ ಮುಂತಾದವರು ಹಾಡಿದರೆ ಹೇಗಿರುತ್ತೆ ಎನ್ನುವುದನ್ನು ದಯಾನಂದ್‌ ಅನುಕರಿಸಿ ತೋರಿದರು.

    ಸಮಾರಂಭದಲ್ಲಿ ಮಾತನಾಡಿದವರ ಸಂಖ್ಯೆ ದೊಡ್ಡದಿತ್ತು . ಅವರಲ್ಲಿ ಗಮನ ಸೆಳೆದವರು ವಿಷ್ಣು ಅವರ ಫೇವರಿಟ್‌ ನಿರ್ದೇಶಕರಾಗಿ ರೂಪುಗೊಳ್ಳುತ್ತಿರುವ ಎಸ್‌.ನಾರಾಯಣ್‌. ವಿಷ್ಣು ಅವರ ಕತೆ ಮುಗಿದೇಹೋಯಿತು ಎಂದು ಇಂಡಸ್ಟ್ರಿಯಲ್ಲಿ ಮಾತಾಡಿಕೊಳ್ಳುತ್ತಿದ್ದುದನ್ನು ನಾನು ಕೇಳಿಸಿಕೊಂಡಿದ್ದೇನೆ. ಆದರೆ, ಎಲ್ಲರ ನಿರೀಕ್ಷೆಯನ್ನೂ ಸುಳ್ಳಾಗಿಸಿ ವಿಷ್ಣು ಫೀನಿಕ್ಸ್‌ನಂತೆ ಯಶಸ್ಸು ಕಂಡಿದ್ದಾರೆ. ನಮ್ಮಂಥ ತಂತ್ರಜ್ಞರಿಗೆ ಕೆಲಸ ಒದಗಿಸಿದ್ದಾರೆ ಎಂದು ನಾರಾಯಣ್‌ ವಿಷ್ಣುಜಪ ಮಾಡಿದರು.

    ವಿಧಾನ ಪರಿಷತ್‌ ಸಭಾಪತಿ ಬಿ.ಎಲ್‌.ಶಂಕರ್‌ ಅವರದ್ದು ತೂಕದ ಮಾತು. ನಾಡಿನ ಸಂಸ್ಕೃತಿ, ಪರಂಪರೆಯನ್ನು ಸಿನಿಮಾ ಉಳಿಸಬೇಕು ಹಾಗೂ ಬಿಂಬಿಸಬೇಕು ಎಂದ ಶಂಕರ್‌- ಸಿನಿಮಾದಲ್ಲಿ ಪೊಲೀಸರು ಹಾಗೂ ರಾಜಕಾರಣಿಗಳು ಹೆಚ್ಚು ಲೇವಡಿಗೊಳಗಾಗುತ್ತಾರೆ ಎಂದು ವಿಷಾದಿಸಿದರು.

    ನಾನೇ ಭಾಗ್ಯವಂತೆ ಎಂದು ವಿಷ್ಣು ಜೊತೆ ಅಭಿನಯಿಸಲು ಅವಕಾಶ ದೊರಕಿದ್ದಕ್ಕೆ ಸಂತೋಷಿಸಿದ್ದು - ನಾಯಕಿ ಪ್ರಿಯಾಂಕ. ನಟ ದೇವರಾಜ್‌, ಸಂಗೀತ ನಿರ್ದೇಶಕ ದೇವಾ, ನಿರ್ಮಾಪಕರ ಸಂಘದ ಅಧ್ಯಕ್ಷ ಬಸಂತಕುಮಾರ ಪಾಟೀಲ್‌ ವಿಷ್ಣು ಗುಣಗಾನ ಮಾಡಿದರು.

    ವಿಷ್ಣುವರ್ಧನ್‌ ಅವರಿಗೆ ಮಾತನಾಡುವವರ ಪಟ್ಟಿಯಲ್ಲಿ ಕೊನೆಯ ಛಾನ್ಸು . ಯಶಸ್ಸು ತಮಗೊಬ್ಬರಿಗೇ ಸೇರಿದ್ದಲ್ಲ ; ಸಾವಿರಾರು ಜನ ದುಡಿದಿದ್ದಾರೆ, ನಾನು ನೆಪಮಾತ್ರ ಎಂದು ವಿಷ್ಣು ವಿನಯವಂತಿಕೆ ಪ್ರದರ್ಶಿಸಿದರು. ನಾವು ಚಿತ್ರ ಮಾಡುತ್ತೇವೆ, ಮುಂದಿನದು ನಡೆಯೋದು... ಎಂದು ವೇದಾಂತಕ್ಕೂ ಜಾರಿದರು. ಭಾರತಿ ವಿಷ್ಣುವರ್ಧನ್‌ ನಸು ನಗೆಯಾಂದಿಗೇ ಎಲ್ಲವನ್ನೂ ಕೇಳಿಸಿಕೊಳ್ಳುತ್ತಿದ್ದರು.

    ಕೋಟಿಗೊಬ್ಬ ಇಪ್ಪತ್ತೆೈದು ವಾರ ಓಡಲಿ ಅನ್ನುವ ಆಶಯದೊಂದಿಗೆ ಮೂರು ತಾಸಿನ ಕಾರ್ಯಕ್ರಮಕ್ಕೆ ತೆರೆ.

    ಮುಖಪುಟ / ಸ್ಯಾಂಡಲ್‌ವುಡ್‌

    Thursday, March 28, 2024, 18:23
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X