»   » ಶಾರೂಖ್‌ ‘ಹುಳಿ ಮಾವಿನ ಮರ ’

ಶಾರೂಖ್‌ ‘ಹುಳಿ ಮಾವಿನ ಮರ ’

Posted By: Staff
Subscribe to Filmibeat Kannada

ಥಳಕ್ಕುಬಳುಕಿನ ಬಾಲಿವುಡ್ಡಲ್ಲಿ ಪ್ರತಿಭೆಯನ್ನೇ ನೆಚ್ಚಿಕೊಂಡ ನಟ ಶಾರುಖ್‌ ಖಾನ್‌ ಈಗ ಏನು ಮಾಡುತ್ತಿದ್ದಾರೆ ? ಅವರ ನಿಕಟವರ್ತಿಗಳನ್ನು ಕೇಳಿ- ಶಾರೂಖ್‌ 6 ತಿಂಗಳ ರಜೆಯಲ್ಲಿದ್ದಾರೆ, ಎನ್ನುವ ಉತ್ತರ ಬರುತ್ತದೆ.

ಇಲ್ಲ . ಶಾರೂಖ್‌ ರಜೆಯಲ್ಲಿಲ್ಲ . ಆತ ಶೂಟಿಂಗ್‌ನಲ್ಲಿ ಭಾಗವಹಿಸುತ್ತಿಲ್ಲ ಎನ್ನುವುದು ನಿಜವಾದರೂ, ರಜೆಯನ್ನಂತೂ ಅನುಭವಿಸುತ್ತಿಲ್ಲ . ಹೆಂಡತಿ ಮಕ್ಕಳ ಕೈಗೂ ಶಾರೂಖ್‌ ಬಿಡುವಾಗಿ ಸಿಗುತ್ತಿಲ್ಲ . ಶಾರೂಖ್‌ ಮನಸ್ಸೀಗ ಅಸ್ತವ್ಯಸ್ತ . ಅಲ್ಲಿ ನೆನಪುಗಳ ಶಿಕಾರಿ ನಡೆಯುತ್ತಿದೆ. ಆತ ಸತ್ಯಾನ್ವೇಷ್ವಣೆಯ ದಾರಿಯಲ್ಲಿದ್ದಾನೆ; ಅರ್ಥಾತ್‌ ಆತ್ಮ ಚರಿತ್ರೆ ಬರೆಯುತ್ತಿದ್ದಾನೆ.

ಆತ್ಮ ಚರಿತ್ರೆ ಎಂದರೆ ಅದು ಸತ್ಯದ ಅನ್ವೇಷಣೆ ಅನ್ನುವುದರಲ್ಲಿ ಎರಡು ಮಾತಿಲ್ಲ . ಆದರೆ ಸತ್ಯ ಹೇಳುವುದಕ್ಕೆ ಎಂಟೆದೆ ಬೇಕು. ಅಂಥ ದಿಟ್ಟೆದೆಯಿಲ್ಲದವರ ಚರಿತ್ರೆಗಳಲ್ಲಿ ಆತ್ಮವೇ ಇರುವುದಿಲ್ಲ . ಶಾರೂಖ್‌ ನಿಜವನ್ನೇ ಬರೆಯುತ್ತಾರಾ? ಗೊತ್ತಿಲ್ಲ . ಆದರೆ, ಬಣ್ಣದ ಲೋಕದ ಈ ನಟನ ಬದುಕು ಸಾಕಷ್ಟು ವರ್ಣರಂಜಿತವಾಗಿಯೇ ಇದೆ, ಅನುಮಾನ ಬೇಡ. ಹೀಗಿರುವಲ್ಲಿ ಶಾರೂಖ್‌ ಆತ್ಮ ಕಥನ ಮತ್ತೊಂದು ಹುಳಿ ಮಾವಿನ ಮರವಾದಲ್ಲಿ ಆಶ್ಚರ್ಯವೇನೂ ಇಲ್ಲ .

ಈಗಾಗಲೇ ಆತ್ಮ ಕಥನದ 25 ಅಧ್ಯಾಯಗಳನ್ನು ಶಾರೂಖ್‌ ಮುಗಿಸಿದ್ದಾರಂತೆ. ಶಾಲಾ ದಿನಗಳಿಂದ ಸಿನಿಮಾದ ಇವತ್ತಿನ ಮೆಟ್ಟಿಲವರೆಗಿನ ಚಿತ್ರಗಳನ್ನು ಶಾರೂಖ್‌ ನೆನಪಿನ ಗಣಿಯಿಂದ ಅಗೆಯುತ್ತಿದ್ದಾರೆ. ಅಂದಹಾಗೆ, ಇಂಥದೊಂದು ಅನ್ವೇಷಣೆಯ ಐಡಿಯಾ ಹೊಳೆದದ್ದಾರೂ ಹೇಗೆ ?

ಇತ್ತೀಚೆಗಷ್ಟೇ ಸಾವು-ಬದುಕಿನ ಉಯ್ಯಾಲೆಯಲ್ಲಿ ಜೀಕಿ ಉಳಿದ ಶಾರೂಖ್‌ಗೆ ಬದುಕಿನ ಅಸಂಗತತೆ ಅರ್ಥವಾಯಿತಾ? ಹಾಗಾಗಿ ಆತ ನೆನಪುಗಳ ದಾಖಲಾತಿಗೆ ಹೊರಟನಾ? ಉಹುಂ, ಆದದ್ದೇ ಬೇರೆ- 'ಜೋಶ್‌" ಚಿತ್ರದ ಸೆಟ್ಟಲ್ಲಿ ಈ ಐಡಿಯಾ ಹೊಳೆಯಿತು. ಆತ್ಮ ಚರಿತ್ರೆ ಬರೆಯಬಾರದೇಕೆ ಎಂದು ಮಹೇಶ್‌ ಭಟ್‌ ಕೆಣಕಿದರು. ನಾನು ಸವಾಲನ್ನು ಸ್ವೀಕರಿಸಿದೆ ಎನ್ನುತ್ತಾರೆ ಶಾರೂಖ್‌.

ಶಾರೂಖ್‌ ಆತ್ಮ ಕಥನದ ಬರವಣಿಗೆ ಬೇಗ ಮುಗಿಯಲಿ ; ಚಿತ್ರರಸಿಕರೊಂದಿಗೆ, ಅಕ್ಷರ ಪ್ರೇಮಿಗಳೂ ಕಾಯುತ್ತಿದ್ದಾರೆ.

English summary
Shah Rukh pens his autobiography

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada