»   » ಮರಳಿ ತೆಲುಗಿಗೆ ‘ಪಿವಿಸಿ’ ಪ್ರೇಮಾ

ಮರಳಿ ತೆಲುಗಿಗೆ ‘ಪಿವಿಸಿ’ ಪ್ರೇಮಾ

Subscribe to Filmibeat Kannada

*ಎಂ. ವಿನೋದಿನಿ

ಕನ್ನಡ ಚಿತ್ರರಂಗದಲ್ಲಿ ಹೊಸ ಛಾಪು ಮೂಡಿಸಬಹುದು ಎಂಬ ನಿರೀಕ್ಷೆ ಹೊತ್ತಿದ್ದ ‘ಸಿಂಗಾರೆವ್ವ..’ ಸಿನಿಮಾ ಫ್ಲಾಪ್‌ ಆದ ನಂತರ ಪ್ರೇಮಾ ಚಿತ್ರಗಳು ಸುದ್ದಿ ಮಾಡಲಿಲ್ಲ.

ವಿಷ್ಣುವರ್ಧನ್‌ ಹೊಸ ಚಿತ್ರ ‘ಹೃದಯವಂತ’ದಲ್ಲಿ ಪ್ರೇಮಾ ಇಲ್ಲ. ಮೊನ್ನೆ ಮೊನ್ನೆ ತಾನೇ ತೆಳ್ಳಗಾಗಿ ಸುದ್ದಿ ಮಾಡಿರುವ ನಗ್ಮಾ ಹೃದಯವಂತದಲ್ಲಿ ವಿಷ್ಣುಗೆ ನಾಯಕಿ. ರವಿಚಂದ್ರನ್‌ ಚಿತ್ರಗಳಲ್ಲಿ ಹೂವೇ ಹೂವೇ ಚೆಲುವೆ ಪ್ರಿಯಾಂಕಾ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹಿರಿಯ ನಟರೇ ಕೈ ಬಿಟ್ಟ ಮೇಲೆ ಪುನೀತ್‌-ವಿಜಯ ರಾಘವೇಂದ್ರನ ಜೊತೆ ಪ್ರೇಮಾ ನಟಿಸಲು ಸಾಧ್ಯವೆ ? ಅದೇನು ಮಕ್ಕಳಾಟವಾ ?

ಶಿವಧ್ವಜ್‌ರಂಥ ನಾಯಕರಾಗದ ನಟರ ಜೊತೆ ನಾಯಕಿಯಾದ ಪ್ರೇಮಾಗೆ ಬೇರೆ ಯಾವ ಕಡೆಯಿಂದ ಬಿಸಿ ಬಿಸಿ ಡಿಮ್ಯಾಂಡ್‌ ಬರಬೇಕು ? ಕನ್ನಡದಲ್ಲೇನಿದ್ದರೂ ಈಗ ರಾಧಿಕಾ- ರಕ್ಷಿತಾ- ರಮ್ಯಾ... ಹೀಗೆ ರಕಾರಗಳ ಕಾರುಬಾರು. ಅವರಿಗೇ ಹಾಟ್‌ ಮಾರ್ಕೆಟ್‌.ಇದನ್ನೆಲ್ಲಾ ಗಮನಿಸಿ ಪ್ರೇಮಾ ತಣ್ಣಗೆ ತೆಲುಗು ಸಿನೆಮಾದತ್ತ ಕಣ್ಣು ಹಾಯಿಸಿದ್ದಾರೆ. ದೇವಿ ಚಿತ್ರದ ಮೂಲಕ ತೆಲುಗು ಪ್ರೇಕ್ಷಕರ ಮನಗೆದ್ದಿರುವ ಪ್ರೇಮಾ ಎರಡು ವರ್ಷಗಳ ದೀರ್ಘ ರಜೆಯ ನಂತರ ಮತ್ತೆ ತೆಲುಗಿನಲ್ಲಿ ಅಭಿನಯಿಸಲಿದ್ದಾರೆ. ಈಗಾಗಲೇ ಎರಡು ಚಿತ್ರಗಳಿಗೆ ಸಹಿ ಹಾಕಿದ್ದಾಗಿದೆ. ದೇವಿ ಅಭಯಂ ಹಾಗೂ ಇನ್ನೊಂದು ಎಸ್‌ಆರ್‌ಬಿ ಪ್ರೊಡಕ್ಷನ್‌ನ ಚಿತ್ರ.

ತೆಲುಗಿನ ಮಾಧ್ಯಮಗೋಷ್ಠಿಯಾಂದರಲ್ಲಿ - ಗ್ಲಾಮರ್‌ ಏನಿದ್ದರೂ ಸೆಕೆಂಡರಿ, ಕಲೆಯೇ ಕಲಾವಿದರನ್ನು ಪೋಷಿಸುತ್ತದೆ. ಉತ್ತಮ ಅಭಿನಯದಿಂದ ಮಾತ್ರ ಪ್ರೇಕ್ಷಕರ ಮನದಲ್ಲಿ ನಿಲ್ಲುವುದು ಸಾಧ್ಯ ಎಂದು ಪ್ರೇಮಾ ಅಭಿಪ್ರಾಯ ಪಟ್ಟಿದ್ದಾರೆ. ಅದು ವಯಸ್ಸಾದ ಹತಾಶೆಯಾ ?

ಸದ್ಯಕ್ಕೆ ಪ್ರೇಮಾ ನಟಿಸುತ್ತಿರುವ, ಸ್ವಲ್ಪಮಟ್ಟಿಗೆ ನಿರೀಕ್ಷೆ ಹುಟ್ಟಿಸಿರುವ ಚಿತ್ರ- ಪಾಂಡುರಂಗ ವಿಠಲ. ರವಿಚಂದ್ರನ್‌ ಈ ಸಿನಿಮಾದ ನಾಯಕ ನಟ. ರವಿಚಂದ್ರನ್‌ ಅದೃಷ್ಟವೂ ಈಚೆಗೆ ಎಕ್ಕುಟ್ಟಿ ಹೋಗಿದೆ. ಪಾಂಡುರಂಗ ವಿಠಲ ಮೂಲಕ ಹಳೆಯ ಸ್ಟೈಲಿಗೆ ಮರಳಿರುವುದಾಗಿ ರವಿಚಂದ್ರನ್‌ ಹೇಳಿಕೊಂಡಿದ್ದಾರೆ. ಹಳೆಯ ಸ್ಟೈಲು ಎಂದರೆ, ಅದೇರಿ- ನಾಯಕಿ ಹೊಕ್ಕಳ ಮೇಲೆ ಸೇಬು, ಗಾಳಿಪಟವಾಗುವ ಸೆರಗು.... ಇತ್ಯಾದಿತ್ಯಾದಿ. ಪಾಂಡುರಂಗ ವಿಠಲ ಚಿತ್ರದ ಸ್ಟಿಲ್‌ಗಳಲ್ಲಂತೂ ಪ್ರೇಮಾ ಮಿಂಚಿಂಗೋ ಮಿಂಚಿಂಗು. ಮೈಮೇಲೆಲ್ಲಾ ಚಿತ್ತಾರಗಳು. ಆಹಾ ಪ್ರೇಮಾ !!

ಕೋತಿಗಳು ಸಾರ್‌ ಕೋತಿಗಳು ಚಿತ್ರದಲ್ಲಿ ಪಿವಿಸಿ ಪೈಪ್‌ ಎಂದು ಲೇವಡಿ ಮಾಡಿಸಿಕೊಂಡಿದ್ದ ಪ್ರೇಮಾ- ಮೊನ್ನೆ ವಿಷ್ಣು ಸನ್ಮಾನ ಸಮಾರಂಭದಲ್ಲಿ ಕತ್ತು ಬಾಗಿಸಿಕೊಂಡು ಓಡಾಡುತ್ತಿದ್ದರು. ತಾನು ವಿಷ್ಣು ಅಭಿಮಾನಿ ಎಂದರು. ನಾಯಕಿಯಾಗುವ ಮುನ್ನ ತಾನು ಹಾಗೂ ತನ್ನ ತಂಗಿ ವಿಷ್ಣುಗೆ ಮುತ್ತು ಕೊಟ್ಟಿದ್ದಾಗಿ ಹೇಳಿಕೊಂಡರು. ವಿಷ್ಣು ಮುಂದಿನ ಚಿತ್ರದಲ್ಲಾದರೂ ಪ್ರೇಮಾಗೆ ಬುಲಾವು ಬರುತ್ತಾ ?

ಅಂದಹಾಗೆ, ಎಸ್‌ಆರ್‌ಬಿ ಪ್ರೊಡಕ್ಷನ್‌ನ ಹೆಸರಿಡದ ಚಿತ್ರದಲ್ಲಿ ಟಿವಿ ಚಾನೆಲ್‌ ನಿರ್ವಾಹಕಿ ಪಾತ್ರದಲ್ಲಿ ಪ್ರೇಮಾ ನಿರ್ವಹಿಸಲಿದ್ದಾರೆ.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada