»   » ಡಾ. ರಾಜ್‌ ದರ್ಶನದಿಂದ ಬಿ.ವಿ.ಕಾರಂತರು ಅರಳಿದಾಗ...

ಡಾ. ರಾಜ್‌ ದರ್ಶನದಿಂದ ಬಿ.ವಿ.ಕಾರಂತರು ಅರಳಿದಾಗ...

Posted By: Super
Subscribe to Filmibeat Kannada

ಅದೊಂದು ಅಪೂರ್ವ ಸಮ್ಮಿಲನ. ರಂಗಭೂಮಿ ಮತ್ತು ಚಿತ್ರರಂಗದ ಮೂರು ಮಹಾನ್‌ ಚೇತನಗಳು ಭೇಟಿಯಾಗಿ ಪರಸ್ಪರ ಹಳೆಯ ನೆನಪುಗಳನ್ನು ಮೆಲುಕು ಹಾಕಿದ ಆತ್ಮೀಯ ಸಂಜೆ.

ಇದೀಗ ತೀವ್ರ ಅಸ್ವಸ್ಥರಾಗಿ ಬೆಂಗಳೂರಿನ ಹೊಸಕೆರೆ ಹಳ್ಳಿಯ ಮನೆಯಲ್ಲಿ ಹಾಸಿಗೆ ಹಿಡಿದಿರುವ ಬಿ. ವಿ. ಕಾರಂತರನ್ನು ಕನ್ನಡದ ವರನಟ ಡಾ. ರಾಜ್‌ಕುಮಾರ್‌ ಭೇಟಿಯಾದ ಘಳಿಗೆಯಲ್ಲೇ ಯೋಗಾಯೋಗವೆಂಬಂತೆ ಹಿರಿಯರಾದ ಜಿ. ವಿ. ಅಯ್ಯರ್‌ ಕೂಡ ಅವರನ್ನು ಸೇರಿಕೊಂಡಿದ್ದು ಕಾಕತಾಳೀಯ.

ಡಾ. ರಾಜ್‌ ಅವರು ಪತ್ನಿ ಪಾರ್ವತಮ್ಮ ಮತ್ತು ಸೋದರ ವರದರಾಜ್‌ ಜತೆ ಕಾರಂತರ ಮನೆಗೆ ಬಂದಾಗ ಸಂಜೆ 3 ಗಂಟೆ. ನಟ ಸಾರ್ವಭೌಮ ಕಾರಂತರ ಮನೆಯ ಒಳ ಪ್ರವೇಶಿಸುತ್ತಿರುವಂತೆ ಎದ್ದು ನಿಲ್ಲಲೂ ತ್ರಾಣವಿಲ್ಲದೆ ಹಾಸಿಗೆ ಹಿಡಿದಿದ್ದ ಕಾರಂತರ ಅಸ್ವಸ್ಥತೆ ಎಲ್ಲಿ ಮಾಯವಾಯಿತೋ ? ಕಾರಂತರು ಎದ್ದು ಕುಳಿತರು.

ಕೆಲಕ್ಷಣ ಪರಸ್ಪರ ಕೈ ಹಿಡಿದುಕೊಂಡು ಮೌನವಾಗಿ ಆತ್ಮೀಯತೆ ಹಂಚಿಕೊಂಡರು. ಗುಬ್ಬಿ ಕಂಪೆನಿಯ ಆ ದಿನಗಳನ್ನು ಸ್ಮರಿಸಿಕೊಂಡರು. ಅದೆಲ್ಲಿಂದ ಶಕ್ತಿ ಸಂಚಾರವಾಯಿತೋ ಹತ್ತಾರು ದಿನಗಳಿಂದ ಗುಬ್ಬಚ್ಚಿಯಂತೆ ಹಾಸಿಗೆ ಮೇಲೆ ಮುದುಡಿ ಮಲಗಿದ್ದ ಕಾರಂತರು ಶಾಲು ಹೊದ್ದು ಎದ್ದು ನಿಂತರು. ಮನೆಯ ಕೋಣೆಗಳನ್ನೆಲ್ಲಾ ಪರಿಚಯಿಸಿದರು. ನೆಲ ಮಹಡಿಯ ಲೈಬ್ರರಿಗೆ ಕರೆದೊಯ್ದು ತಮ್ಮ ಗ್ರಂಥ ಸಂಗ್ರಹ ತೋರಿಸಿದರು. ಅಷ್ಟರಲ್ಲಿ ಜಿ. ವಿ. ಅಯ್ಯರ್‌ ಬಂದರು. ಮತ್ತೊಮ್ಮೆ ಕೈ ಕೈ ಹಿಡಿದುಕೊಂಡು ಗುಬ್ಬಿ ಕಂಪೆನಿಯ ದಿನಗಳಿಗೆ ಜಾರಿದರು. ಆ ಕೋಣೆಯಲ್ಲಿ ನಾಟಕ ಪರಿಕರಗಳ ದೊಡ್ಡ ಸಂಗ್ರಹವೇ ಇತ್ತು. ಡಾ. ರಾಜ್‌ ಕೆಲವು ವಾದ್ಯಗಳನ್ನು ತಾವೇ ನುಡಿಸಿದರು. ಜಾಗಟೆ ಬಾರಿಸಿದರು. ತಬಲಾ ನುಡಿಸಿದರು. ಪೀಪೀ ಊದಿದರು. ಬೃಹತ್‌ ತಾಳವಾದ್ಯವೊಂದನ್ನು ಎತ್ತಿಕೊಳ್ಳುತ್ತಿರುವಂತೆಯೇ ಹೊರಟ ಭಯಂಕರ ಸದ್ದಿಗೆ ಬೆಚ್ಚಿಬಿದ್ದ ಪಾರ್ವತಮ್ಮನನ್ನು ನೋಡಿ ಕಾರಂತರು ಮಗುವಿನಂತೆ ನಕ್ಕರು. ರಾಜ್‌ ಮತ್ತು ಅಯ್ಯರ್‌ ಸಮ್ಮುಖದಲ್ಲಿ ಹುರುಪುಗೊಂಡ ಕಾರಂತರು ರಾಗವಾಗಿ ಹಾಡಲು ಹೊರಟರು. ಕಂಠ ಸಹಕರಿಸಲಿಲ್ಲ.

ಪ್ರಶಸ್ತಿಯಾಂದನ್ನು ಪಡೆಯುವುದಕ್ಕಾಗಿ ದೆಹಲಿಗೆ ಹೋದಾಗ ಕಾರಂತರ ಮನೆಗೆ ಹೋದದ್ದು, ಅಲ್ಲಿ ಊಟ ಮಾಡಿದ್ದು, 'ಗಂಗಾ ಜಮುನಾ" ಸಿನಿಮಾ ನೋಡಿದ್ದು, ಹಿಂದಿರುಗುವಾಗ ಪ್ರೇಮಾ ಕಾರಂತರು ಬಟಾಣಿ ಕಟ್ಟಿಕೊಟ್ಟದ್ದು.... ಒಂದೇ ಎರಡೇ ? ನೆನಪುಗಳ ಬುತ್ತಿಯನ್ನು ಬಿಚ್ಚಿಟ್ಟು ಕುಳಿತ ರಾಜ್‌ ಮತ್ತು ಅಯ್ಯರ್‌ ಅದೊಂದು ಅವರ್ಣನೀಯ ಲೋಕದತ್ತ ಕಾರಂತರನ್ನು ಕೊಂಡೊಯ್ದರು. ರಾಜ್‌ ಮತ್ತು ಅಯ್ಯರ್‌ ಹೊರಟು ನಿಂತಾಗ ಕಾರಂತರ ಕಣ್ಣಲ್ಲಿ ಹನಿ ನೀರು. ಮೂವರೂ ಮತ್ತೊಮ್ಮೆ ಬಾಚಿ ತಬ್ಬಿಕೊಂಡ ಗಳಿಗೆ ಮಾತ್ರ ಮತ್ತೊಮ್ಮೆ ಬಾರದೇನೋ.

ಕಾಲಿಗೆ ಚಕ್ರ ಕಟ್ಟಿದಂತೆ ದೇಶ ವಿದೇಶಗಳಲ್ಲಿ ತಿರುಗುತ್ತಿದ್ದ ಬಿ. ವಿ. ಕಾರಂತರು ಈಗ ತಮ್ಮ ಮನೆಯಲ್ಲಿ ಬಂಧಿ. ಪತ್ನಿ ಪ್ರೇಮಾ ಕಾರಂತರು ಈ ಜಗದ್ವಿಖ್ಯಾತ ಪತಿಯ ಸೇವೆಯಲ್ಲಿ ಮಗ್ನರಾಗಿದ್ದರು. ನೋಡಿಕೊಳ್ಳಲು ಮನೆಯಲ್ಲಿ ಆಳಿಲ್ಲದ ಪರಿಸ್ಥಿತಿಯಲ್ಲಿ ಕಂಗಾಲಾಗಿದ್ದಾರೆ. ಎಲ್ಲವೂ ಇದ್ದು, ಇಲ್ಲದಂತಾಗಿರುವ ಕಾರಂತರು ಎಲುಬಿನ ಹಂದರವಾಗಿದ್ದಾರೆ. ಮುಖ ಬಿಳಿಚಿಕೊಂಡಿದೆ. ಮಾತು ಹೊರಡುತ್ತಿಲ್ಲ. ಆರಾಮ ಕುರ್ಚಿಯಲ್ಲಿ ಗುಬ್ಬಚ್ಚಿಯಂತೆ ಕೂತು ದಿನ ತಳ್ಳುತ್ತಿರುವ ಕಾರಂತರು ನಿರ್ದೇಶಿಸಿದ 'ಸತ್ತವರ ನೆರಳು" ನಾಟಕ ಸೋಮವಾರ (ಜುಲೈ 22)ರವೀಂದ್ರ ಕಲಾಕ್ಷೇತ್ರದಲ್ಲಿ ಸಂಜೆ 7ಕ್ಕೆ ಪ್ರದರ್ಶಿತಗೊಳ್ಳಲಿದೆ. ಕಲಾಕ್ಷೇತ್ರದಲ್ಲಿ ನಾಟಕ ಪ್ರೇಮಿಗಳು ಕಿಕ್ಕಿರಿದು ಸೇರಿರುತ್ತಾರೆ. ಕಾರಂತರು ಮಾತ್ರ ಅದೇ ಆರಾಮ ಕುರ್ಚಿಯಲ್ಲಿ ಕುಳಿತು ನೆನಪುಗಳನ್ನು ಮೆಲುಕು ಹಾಕುವುದರಲ್ಲಿ ತಲ್ಲೀನರಾಗಿರುತ್ತಾರೆ.(ವಿಜಯ ಕರ್ನಾಟಕ)

English summary
Dr. Raj and Aiyar visits Kannada Theatre Director B.V. Karanth

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X