»   » ಊರ್ಮಿಳಾ ಸಖನ ಸಿನಿಮಾಗೆ ಮಾಧ್ಯಮ ಸಖ ಮುರ್ಡೋಕ್‌ ರೊಕ್ಕ!

ಊರ್ಮಿಳಾ ಸಖನ ಸಿನಿಮಾಗೆ ಮಾಧ್ಯಮ ಸಖ ಮುರ್ಡೋಕ್‌ ರೊಕ್ಕ!

Posted By: Super
Subscribe to Filmibeat Kannada

ಮುದ್ರಣ ಮಾಧ್ಯಮಕ್ಕೆ 26 ಪ್ರತಿಶತ ವಿದೇಶೀ ಬಂಡವಾಳಕ್ಕೆ ಸರ್ಕಾರ ಹಸಿರು ನಿಶಾನೆ ತೋರಿದಾಕ್ಷಣವೇ ಪೇಟೆಮಾತಲ್ಲಿ ತೇಲಿ ಬಂದದ್ದು ಮಾಧ್ಯಮ ಮ್ಯಾಗ್ನೆಟ್‌ ಪೀಟರ್‌ ಮುರ್ಡೋಕ್‌. ಆತನ ಬೊಕ್ಕಸದಿಂದ ಎಷ್ಟು ಯಾರಿಗೆ ಎಂಬ ಸಣ್ಣ ಸದ್ದು ಭಾರತದಲ್ಲಿ ಶುರುವಾದ ಬೆನ್ನಲ್ಲೇ ಮುರ್ಡೋಕ್‌ ಥೈಲಿ ಹಿಡಿದು ಬಂದು ಬಿಟ್ಟಿದ್ದಾರೆ. ಆದರೆ, ಅವರ ಅಡ್ಡಾಟ ಸಾಗಿರೋದು ಪೇಪರಾಫೀಸಿನ ಮೊಗಸಾಲೆಯಲ್ಲಲ್ಲ; ಬಾಲಿವುಡ್‌ನ ಓಣಿಗಳಲ್ಲಿ!

ಒಂದಲ್ಲ-ಎರಡಲ್ಲ, ಅನಾಮತ್ತು ಮೂರು ಹಿಂದಿ ಚಿತ್ರಗಳ ಮೇಲೆ ಹಣ ಸುರಿಯಲು ಮುರ್ಡೋಕ್‌ನ '20th ಸೆಂಚುರಿ ಫಾಕ್ಸ್‌" ಥೈಲಿ ಹಿಡಿದು ಬಂದಿದೆ. ಅಂದುಕೊಂಡಂತೆ ಎಲಾ ್ಲ ಸಾಗಿದರೆ ಈ ಮೂರೂ ಚಿತ್ರಗಳ ನಿರ್ದೇಶಕ ಊರ್ಮಿಳಾ ಸಖ ರಾಮ್‌ಗೋಪಾಲ್‌ ವರ್ಮಾ.

ಬಾಲಿವುಡ್‌ಗೆ ಹಾಲಿವುಡ್ಡಿಗಳ ಬಂಡವಾಳ ಹರಿದು ಬರುವ ಈ ತಾಜಾ ಸುದ್ದಿ ಕೊಟ್ಟಿದ್ದು ಫಾಕ್ಸ್‌ ಸಂಸ್ಧೆಯ ಭಾರತೀಯ ವ್ಯವಸ್ಥಾಪಕ ಆದಿತ್ಯ ಶಾಸ್ತ್ರಿ . ಮುರ್ಡೋಕ್‌ ಒಡೆತನದ ನ್ಯೂಸ್‌ ಕಾರ್ಪ್‌ ಲಿಮಿಟೆಡ್‌ ಹಾಗೂ ಫಾಕ್ಸ್‌ ಸಂಸ್ಥೆ ಭಾಯಿ ಭಾಯಿ. ಫಾಕ್ಸ್‌ ಸ್ಟುಡಿಯೋದ ಬಂಡವಾಳದ ಶೇಕಡಾ 85ರಷ್ಟು ಒಡೆತನ ಮುರ್ಡೋಕ್‌ ಅವರದ್ದು.

ಅಚ್ಚುಕಟ್ಟುತನ, ಬಿಗಿ ಎಡಿಟಿಂಗ್‌ಗೆ ಹೆಸರಾದ ಬಿಸಿ ರಕ್ತದ ಪ್ರತಿಭೆ ರಾಮ್‌ಗೋಪಾಲ್‌ ವರ್ಮಾ. ಆಗೀಗ ಕಿರಿಕ್ಕುಗಳ ಅಪಸ್ವರ ಹೊಮ್ಮಿಸಿದರೂ, ಒಬ್ಬ ನಾಯಕನಿಗಿರುವ ಖದರೇ ಈತನಿಗಿದೆ. 'ರಂಗೀಲಾ", 'ದೌಡ್‌", 'ಜಂಗಲ್‌", 'ಪ್ಯಾರ್‌ ತೂನೆ ಕ್ಯಾ ಕಿಯಾ" ಹಾಗೂ ಇತ್ತೀಚಿನ 'ಕಂಪನಿ"- ರಾಮ್‌ಗೋಪಾಲ್‌ ಯಶಸ್ವಿ ಕೂಸುಗಳು.

ಈವರೆಗೆ ಮುರ್ಡೋಕ್‌ ಮೆನ್‌ ಮತ್ತು ರಾಮು ನಡುವೆ ನಡೆದಿರುವ ಮಾತುಕತೆ ಪ್ರಕಾರ ಫಾಕ್ಸ್‌ ನಿರ್ಮಾಣದ ಮೊದಲ ಚಿತ್ರದ ಹೆಸರು 'ಏಕ್‌ ಹಸೀನಾ ಥೀ". ಅದರ ಮೇಲೆ ಹರಿಸಲಾಗುವ ಹಣ ಆರರಿಂದ ಎಂಟು ಕೋಟಿ ರುಪಾಯಿ.

ಈ ಚಿತ್ರದ ನಾಯಕ- ನಟನೆಗಿಂತ ಹೆಚ್ಚು ನುಲಿಯುವ ಓಲೆ ಓಲೆ... ಖ್ಯಾತಿಯ ಸೈಫ್‌ ಅಲಿಖಾನ್‌. ಆಗಸ್ಟ್‌ ತಿಂಗಳಲ್ಲಿ ಸೆಟ್ಟೇರಲಿರುವ ಸಿನಿಮಾ ಜನವರಿ ಹೊತ್ತಿಗೆ ತೆರೆಗೆ ಬರಲಿದೆ.

ವಿದೇಶಿ ಕಂಪನಿಗಳ ಹಣದಲ್ಲಿ ಚಿತ್ರ ಮಾಡೋದು ಅಂದರೆ ಹುಡುಗಾಟ ಅಲ್ಲ. ಶಿಸ್ತು ಭರಪೂರವಾಗಿರಬೇಕು, ಸ್ಕಿೃಪ್ಟು ಬಿಗಿಯಾಗಿರಬೇಕು. ಗುಣಮಟ್ಟದ ವಿಷಯದಲ್ಲಿ ವಿದೇಶೀ ಕಂಪನಿಗಳು ಸುತಾರಾಂ ರಾಜಿಗೆ ಸಿದ್ಧ ಇರೋದಿಲ್ಲ ಅನ್ನುತ್ತಾರೆ ಮೂವತ್ತೆಂಟರ ಹರೆಯದ ರಾಮ್‌ಗೋಪಾಲ್‌.

ಅದಿರಲಿ, ರಾಮು ಚಿತ್ರದ ಹಸೀನಾ ಯಾರು? ಗೆಸ್‌ ಮಾಡಿ.

English summary
ಊರ್ಮಿಳಾ ಸಖನ ಸಿನಿಮಾಗೆ ಮಾಧ್ಯಮ ಸಖ ಮುರ್ಡೋಕ್‌ ರೊಕ್ಕ!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada