»   » ಚಿದಾನಂದ ಈಗ ‘ಅಯ್ಯೋ ಪಾಂಡು’!

ಚಿದಾನಂದ ಈಗ ‘ಅಯ್ಯೋ ಪಾಂಡು’!

Posted By:
Subscribe to Filmibeat Kannada
  • ದಟ್ಸ್‌ಕನ್ನಡ ಬ್ಯೂರೋ
ಪಾಪ ಪಾಂಡು ಚಿದಾನಂದ ಹೀರೋ ಆಗುತ್ತಿದ್ದಾರೆ.
ಚಿದಾನಂದನ ನಟನೆಯ ಗೀಳು ಹತ್ತಿಸಿದ ‘ಅಭಿನಯ ತರಂಗ’ದ ಎ.ಎಸ್‌.ಮೂರ್ತಿ ಚಿತ್ರದ ಸ್ಟಿಲ್ಲೊಂದನ್ನು ಅನಾವರಣಗೊಳಿಸುವ ಮೂಲಕ ತಮ್ಮ ಶಿಷ್ಯನ ನಾಯಕನಾಗುವ ಕನಸು ಸಾಕಾರಗೊಂಡಿತು.

ಬೆಂಗಳೂರಿನ ಮಲ್ಲೇಶ್ವರಂ ಅಸೋಸಿಯೇಷನ್‌ನಲ್ಲಿ ಆ.21, ಗುರುವಾರ ‘ಸಂಜೆ ಅಯ್ಯೋ ಪಾಂಡು’ವಿನದ್ದೇ ಮಾತು. ಇದು ಚಿದಾನಂದನ ಸಿನಿಮಾ ಟೈಟಲ್ಲು . ಇದಕ್ಕೂ‘ಪಾಪ ಪಾಂಡು’ವಿಗೂ ಏನೇನೂ ಸಂಬಂಧವಿಲ್ಲ ಅಂತ ಪದೇಪದೇ ಚಿದಾನಂದ ಹೇಳುತ್ತಿದ್ದರು. ಅಲ್ಲಿ ಪಾಪ ಪಾಂಡು ತಂಡದ ಬೇರೆ ಯಾರೊಬ್ಬರೂ ಇರದಿದ್ದುದು ಈ ಮಾತಿಗೆ ಪುಷ್ಟಿಯಾಗಿತ್ತು.

ಚಿದಾನಂದನನ್ನು ಹೀರೋ ಮಾಡುವ ಸಾಹಸಕ್ಕೆ ಕೈಹಾಕಿರುವವರು ಝೇಂಕಾರ್‌ ಆಡಿಯೋದ ನರೇಶ್‌ ಜೈನ್‌, ಬಾ.ಮ.ಹರೀಶ್‌ ಮತ್ತು ಹೊಸದಾಗಿ ನಿರ್ಮಾಪಕನಾಗುತ್ತಿರುವ ಉಮೇಶ್‌ ಬಣಕಾರ್‌. ಎಂ.ಎಸ್‌.ಶಿವುಗೆ ಇದು ಚೊಚ್ಚಲ ನಿರ್ದೇಶನದ ಹೊಣೆ. ಕೆಮರಾಮನ್‌ ನಾಗೇಶ್‌ಗೂ ಪ್ರಥಮ ಸಿನಿಮಾ ಯತ್ನ.

ಮಿರಮಿರ ಮಿಂಚುವ ರೆಗ್ಸಿನ್‌ ಬಟ್ಟೆಯ ಜುಬ್ಬ ಧರಿಸಿ ವಿಚಿತ್ರ ಆಕರ್ಷಣೆಯಾಗಿದ್ದ ಚಿದಾನಂದ್‌ ನಗು ಯಥಾ ಪ್ರಕಾರ ಬಹಳ ಅಗಲವಾಗಿತ್ತು. ಎ.ಎಸ್‌.ಮೂರ್ತಿ ಈ ನಗೆಯನ್ನು ‘ಗಾಂಧಿನಗರದಿಂದ ಮಲ್ಲೇಶ್ವರದಷ್ಟು ಉದ್ದ’ ಅಂತ ಚಟಾಕಿ ಹೊಡೆದದ್ದು ಚಿದಾನಂದನ ನಗುಮುಖವನ್ನು ಇನ್ನಷ್ಟು ದುಂಡಾಗಿಸಿತು.

‘ನನ್ನೊಳಗೊಬ್ಬ ನಟ ಇದ್ದಾನೆ ಅಂತ ನನಗೇ ಗೊತ್ತಿರಲಿಲ್ಲ. ನೀನೂ ನಟಿಸಬಲ್ಲೆ ಅಂತ ಹೇಳಿದ್ದೇ ಎ.ಎಸ್‌.ಮೂರ್ತಿ. ಆಮೇಲೆ ನಾಟಕ, ಧಾರಾವಾಹಿಗಳಲ್ಲಿ ಛಾನ್ಸ್‌ ಸಿಕ್ಕಿತು. ಪಾಪ ಪಾಂಡು ಮೂಲಕ ಸಿಹಿಕಹಿ ಚಂದ್ರು ಬ್ರೇಕ್‌ ಕೊಟ್ಟರು. ಇವತ್ತು ನಾಯಕನಾಗುವ ಕನಸು ಸಾಕಾರವಾಗುತ್ತಿದೆ’ ಅಂತ ಚಿದಾನಂದ ಚುಟುಕಾಗಿ ಹೇಳಿದರು.

ಬರುವ ಅಕ್ಟೋಬರ್‌ನಲ್ಲಿ ‘ಅಯ್ಯೋ ಪಾಪ’ ಚಿತ್ರೀಕರಣ ಶುರುವಾಗುತ್ತೆ. ಓಂಪ್ರಕಾಶ್‌ ರಾವ್‌ ನಾಯಕನಾಗಿದ್ದ ‘ಸಚ್ಚಿ’ ಚಿತ್ರದ ನಾಯಕಿ ನವ್ಯ ಚಿದಾನಂದನ ಮೊದಲ ಜೋಡಿ. ಇನ್ನೂ ಇಬ್ಬರು ನಾಯಕಿಯರಿಗೆ ತಲಾಷ್‌ ನಡೆದಿದೆ. ಸದ್ಯಕ್ಕೆ ಹೆಚ್ಚಿಗೆ ಕೆಲಸ ಇಲ್ಲದೆ ಇರುವ ಎಲ್‌.ಎನ್‌.ಶಾಸ್ತ್ರಿ ಉರುಫ್‌ ಚೈತನ್ಯ ಚಿದಾನಂದನ ಮೊದಲ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಆಫ್‌ಕೋರ್ಸ್‌ ಕಥೆ ತಮಾಷೆಯದ್ದು. ಅದೇನು ಅನ್ನೋದು ಸಸ್ಪೆನ್ಸ್‌ ಅಂತಾರೆ ಚಿದಾನಂದ.

ಸಹಾಯ

ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ನಿಧನರಾದ ಪತ್ರಕರ್ತ ಮನೋಹರ ತೋಳಹುಣಸೆ ಕುಟುಂಬಕ್ಕೆ ಆರ್ಥಿಕ ನೆರವು ಒದಗಿಸಿಕೊಡುವ ಸಲುವಾಗಿ ಸಿನಿಮಾ ಪತ್ರಕರ್ತರ ಸಂಘ ‘ಬಳಗ’ ಸ್ಥಾಪಿಸಿರುವ ಪರಿಹಾರ ನಿಧಿಗೆ ‘ಅಯ್ಯೋ ಪಾಂಡು’ ತಂಡ 5 ಸಾವಿರ ರುಪಾಯಿ ಹಣ ಕೊಟ್ಟಿತು.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada