»   » ಬಂಗಾರಪಂಜರದಿಂದ ಹಾರಿತು ಪ್ರಾಣಪಕ್ಷಿ

ಬಂಗಾರಪಂಜರದಿಂದ ಹಾರಿತು ಪ್ರಾಣಪಕ್ಷಿ

Posted By:
Subscribe to Filmibeat Kannada

ಹಿರಿ ತಲೆಮಾರಿನ ಕನ್ನಡ ಚಿತ್ರ ನಿರ್ದೇಶಕ ವಿ.ಸೋಮಶೇಖರ್‌ ಶುಕ್ರವಾರ (ಆ.21) ಬೆಂಗಳೂರಿನ ಸೇಂಟ್‌ ಜಾನ್ಸ್‌ ಆಸ್ಪತ್ರೆಯಲ್ಲಿ ಕಿಡ್ನಿ ವೈಫಲ್ಯದಿಂದ ನಿಧನರಾದರು. ಅವರಿಗೆ 66 ವರ್ಷ ವಯಸ್ಸಾಗಿತ್ತು. ಹೆಂಡತಿ, ಇಬ್ಬರು ಪುತ್ರರು ಹಾಗೂ ಕೆಲವು ಒಳ್ಳೆಯ ಚಿತ್ರಗಳನ್ನು ಅವರು ಬಿಟ್ಟು ಹೋಗಿದ್ದಾರೆ.

ನಲವತ್ತು ವರ್ಷಗಳ ಸಿನಿಮಾ ಜೀವನದಲ್ಲಿ 49 ಚಿತ್ರಗಳನ್ನು ಸೋಮಶೇಖರ್‌ ನಿರ್ದೇಶಿಸಿದ್ದಾರೆ. ಬಂಗಾರದ ಪಂಜರ, ಪ್ರೇಮದ ಕಾಣಿಕೆ, ಶಂಕರ್‌ ಗುರು, ತಾಯಿಗೆ ತಕ್ಕ ಮಗ, ಪರಶುರಾಮ್‌, ಸೀತಾರಾಮು, ದೇವರ ಆಟ, ಕಾಳಿಂಗ, ಪಾಯಿಂಟ್‌ ಪರಿಮಳ, ಚಕ್ರವ್ಯೂಹ, ರಣರಂಗ ಹಾಗೂ ಎಸ್‌.ಪಿ.ಭಾರ್ಗವಿ ಸೋಮಶೇಖರ್‌ ನಿರ್ದೇಶನದ ಕೆಲವು ಸೂಪರ್‌ ಹಿಟ್‌ ಚಿತ್ರಗಳು.

ದೇವನಹಳ್ಳಿ ಬಳಿಯ ಚಿಕ್ಕನಹಳ್ಳಿಯಲ್ಲಿ ಹುಟ್ಟಿದ ಸೋಮಶೇಖರ್‌ 1955ರಲ್ಲಿ ನಟರಾಗಿ ಚಿತ್ರರಂಗಕ್ಕೆ ಕಾಲಿಟ್ಟರು. ಆಗ ಅವರ ವಯಸ್ಸು 18. ಮದ್ರಾಸಿನಲ್ಲಿ ಕ್ಲಾಪ್‌ ಬಾಯ್‌ ಕೆಲಸ ಮಾಡುತ್ತಲೇ ಸಣ್ಣ ಪುಟ್ಟ ಪಾತ್ರಗಳನ್ನು ಮಾಡುತ್ತಿದ್ದ ಸೋಮಶೇಖರ್‌, ಡಬ್ಬಿಂಗ್‌ ಕಲಾವಿದರಾಗಿಯೂ ಕೆಲಸ ಮಾಡಿದರು. ಆರ್‌.ನಾಗೇಂದ್ರ ರಾವ್‌, ಎನ್‌.ಜಿ.ರಾಜನ್‌, ರಾಮಮೂರ್ತಿ, ವೈ.ಆರ್‌.ಸ್ವಾಮಿ, ಬಾಬುರಾವ್‌ ಮೊದಲಾದವರ ಜೊತೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿ, ಅನುಭವ ಗಿಟ್ಟಿಸಿಕೊಂಡರು. 1974ರಲ್ಲಿ ಬಂಗಾರದ ಪಂಜರ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾದರು. ಅಂಬರೀಶ್‌ ಮತ್ತು ಶಂಕರ್‌ನಾಗ್‌ಗೆ ಆ್ಯಕ್ಷನ್‌ ನಾಯಕರೆಂಬ ಇಮೇಜು ಕೊಟ್ಟಿದ್ದೇ ಸೋಮಶೇಖರ್‌. ಒಂದು ಕಾಲದಲ್ಲಿ ಈತ ಗೆಲ್ಲುವ ಕುದುರೆ ಅಂತಲೇ ಹೆಸರು ಪಡೆದಿದ್ದರು.

1999- 2000ನೇ ಇಸವಿಯ ಪ್ರತಿಷ್ಠಿತ ಪುಟ್ಟಣ್ಣ ಕಣಗಾಲ್‌ ಪ್ರಶಸ್ತಿಗೆ ಭಾಜನರಾಗಿದ್ದ ಸೋಮಶೇಖರ್‌ ಈಚೀಚೆಗೆ ತಮ್ಮ 3 ಎಕರೆ ಭೂಮಿಯಲ್ಲಿ ವ್ಯವಸಾಯ ಮಾಡುವುದರಲ್ಲಿ ನಿರತರಾಗಿದ್ದರು. ಕನ್ನಡ ಸಿನಿಮಾ ನಿರ್ದೇಶಕರ ಸಂಘದ ಅಧ್ಯಕ್ಷ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಸಮಿತಿ ಸದಸ್ಯರಾಗಿಯೂ ಇವರು ಕೆಲಸ ಮಾಡಿದ್ದರು.

ಶುಕ್ರವಾರ 12 ಗಂಟೆಯವರೆಗೆ ಬೆಂಗಳೂರಿನ ಜಾಲಹಳ್ಳಿಯಲ್ಲಿರುವ ಮನೆಯಲ್ಲಿ ಸೋಮಶೇಖರ್‌ ಪಾರ್ಥಿವ ಶರೀರವನ್ನು ನೋಡಲು ಇಡಲಾಗಿದೆ. ನಂತರ ದೇವನಹಳ್ಳಿ ಬಳಿಯ ವಿಜಪುರದಲ್ಲಿ ಅಂತಿಮ ಸಂಸ್ಕಾರ ಮಾಡಲಾಗುತ್ತದೆ.

(ಇನ್ಫೋ ವಾರ್ತೆ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada