»   » ಶಿಲ್ಪ ಶೆಟ್ಟಿಗೆ ಫೋನಾಯಿಸಿದವರಿಗೆ ಆದದ್ದು ಮುಖಭಂಗ

ಶಿಲ್ಪ ಶೆಟ್ಟಿಗೆ ಫೋನಾಯಿಸಿದವರಿಗೆ ಆದದ್ದು ಮುಖಭಂಗ

Posted By: Super
Subscribe to Filmibeat Kannada

ನಮ್ಮೂರಿನ ತಾರೆಯರು ಬಾಲಿವುಡ್‌ ಕೈಬೀಸಿ ಕರೆದರೆ ಏನು ಮಾಡುತ್ತಾರೆ?
ಅಯ್ಯೋ ರಾಮ, ಬಾಲಿವುಡ್ಡಿರಲಿ ಸ್ವಾಮಿ, ತೆಲುಗು- ತಮಿಳು ಚಿತ್ರಗಳ ಆಫರ್ರನ್ನೇ ಬಲು ಶ್ರೇಷ್ಠ ಅಂತ ತಿಳಿದು ಓಡೋರೇ ಸಾಕಷ್ಟಿದ್ದಾರಲ್ಲ. ಲೇಟೆಸ್ಟ್‌ ಉದಾಹರಣೆ- ಅನು ಪ್ರಭಾಕರ್‌ ಮತ್ತು ರಕ್ಷಿತ. ಅದೇ ಬಾಲಿವುಡ್‌ನವರು ನೋಡಿ.. ಅನ್ನುತ್ತಾರೆ ಸ್ಯಾಂಡಲ್‌ವುಡ್ಡಿಗಳು. ಈ ಪ್ರಶ್ನೋತ್ತರ ಹುಟ್ಟಲು ಕಾರಣ- ಕನ್ನಡ ಚಿತ್ರದಲ್ಲಿ ನಟಿಸಲು ಬಾಲಿವುಡ್‌ ಬೆಡಗಿ ಶಿಲ್ಪ ಶೆಟ್ಟಿ ನಕಾರ.

ಬಾಣ ಬತ್ತಳಿಕೆ ಹಿಡಿದು, ಕೇಸರಿ ಪಂಚೆ ತೊಟ್ಟು ಸಾಕ್ಷಾತ್‌ ಶ್ರೀರಾಮನ ಅಪರಾವತಾರದ ಪೋಸಿನಲ್ಲಿ ಉಪೇಂದ್ರ ಹೊಸ ಚಿತ್ರ 'ಹಿಂದೂ" ಜಾಹೀರಾತುಗಳು ಪತ್ರಿಕೆಗಳಲ್ಲಿ ಕಾಣಿಸಿದವು. ಮುನಿರತ್ನಂ ನಿರ್ಮಾಣದ ಈ ಚಿತ್ರದ ಮುಹೂರ್ತದ ಮೊದಲ ಶಾಟ್‌ ಕ್ಲಾಪ್‌ ಮಾಡಲು ಶಿವಸೇನೆಯ ಬಾಳಾ ಠಾಕ್ರೆ ಬರುತ್ತಾರೆ ಅಂತಲೂ ಸುದ್ದಿಯಾಯಿತು. ನಿರ್ದೇಶಕರ ಸೀಟಿಗೆ ರಾಜೇಂದ್ರ ಸಿಂಗ್‌ ಬಾಬು ಅಂತ ಪ್ರಕಟವಾಯಿತು. ಬಾಳ ಠಾಕ್ರೆ ಬರಲೇ ಇಲ್ಲ. ಶುರುವಾದ ಶೂಟಿಂಗ್‌ ತಣ್ಣಗಾಯಿತು. ಈಗ ಮತ್ತೆ ಬದಲಾವಣೆಯಾಂದಿಗೆ 'ಹಿಂದೂ" ಸುದ್ದಿ ಮಾಡುತ್ತಿದೆ.

ಬದಲಾವಣೆಯ ಪ್ರಕಾರ- ನಿರ್ದೇಶಕನ ಸೀಟ್‌ಗೆ ಶಿವಮಣಿ ಬಂದಿದ್ದಾರೆ. ಇದು ಯಶಸ್ವಿಯಾಗಿರುವ ಉಪೇಂದ್ರ ಸಲಹೆ. ನಾಯಕಿ ಸ್ಥಾನ ಹಾಗೇ ಖಾಲಿ ಇದೆ. ಈ ಸ್ಥಾನಕ್ಕೆ ಉಪೇಂದ್ರ ಸೂಚಿಸಿದ್ದು ಬಾಲಿವುಡ್‌ ತಾರೆ ಶಿಲ್ಪಾಶೆಟ್ಟಿಯ ಹೆಸರನ್ನು. ಈ ಹಿಂದೆ 'ಪ್ರೀತ್ಸೋದ್‌ ತಪ್ಪಾ" ಚಿತ್ರದಲ್ಲಿ ಶಿಲ್ಪ ನಟಿಸಿದ್ದು, ಅದು ಯಶಸ್ವಿ ಕೂಡ ಆಗಿದೆ. ನಿರ್ಮಾಪಕರು ಆಕೆಗೆ ಫೋನಾಯಿಸಿದರೆ, 'ಕನ್ನಡ ಸಿನಿಮಾದಲ್ಲಿ ನಾನು ಸುತಾರಾಂ ನಟಿಸೋದಿಲ್ಲ. ಕನ್ನಡದ ಸಿನಿಮಾದವರು ಕಿರಿಕ್ಕೋ ಕಿರಿಕ್ಕು" ಎಂದು ಫೋನ್‌ ಕುಕ್ಕಿದಳಂತೆ ಶಿಲ್ಪ. ಉಪೇಂದ್ರ ಹೆಸರನ್ನು ಹೇಳಿದರೂ ವರ್ಕ್‌ಔಟ್‌ ಆಗಲಿಲ್ಲವಂತೆ !

ಬಾಲಿವುಡ್‌ ತಾರೆಯರಿಗೆ ಯಾಕೋ ಉಪೇಂದ್ರ ಅಂದರೆ ಅಷ್ಟಕ್ಕಷ್ಟೆ. ಈ ಹಿಂದೆ ಸೋನಾಲಿ ಬೇಂದ್ರೆ 'ನನ್ನ ಜೀವಮಾನದಲ್ಲಿ ಇನ್ನು ಕನ್ನಡ ಚಿತ್ರಗಳಲ್ಲಿ ನಟಿಸೋದಿಲ್ಲ" ಎಂದಿದ್ದನ್ನು ಇಲ್ಲಿ ಸ್ಮರಿಸಬಹುದು !

ಅಂದಹಾಗೆ, ಶಿಲ್ಪ ಶೆಟ್ಟಿ ಒಂದೇ ಒಂದು ಹಾಡಿಗೆ ನೃತ್ಯ ಮಾಡುವ ಆಫರ್‌ಗಳನ್ನೂ ಒಪ್ಪುವುದಿಲ್ಲವಂತೆ.

English summary
Kannada Cinema, No, Not again ! : Shilpa Shetty

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada