»   » ಬರಿಗಾಲ ಎಂ.ಎಫ್‌.ಹುಸೇನ್‌ ಸಾಹೇಬರ ಮೀನಾಕ್ಷಿ

ಬರಿಗಾಲ ಎಂ.ಎಫ್‌.ಹುಸೇನ್‌ ಸಾಹೇಬರ ಮೀನಾಕ್ಷಿ

Posted By: Staff
Subscribe to Filmibeat Kannada

ಬರಿಗಾಲ ಹುಸೇನ್‌ ಸಾಹೇಬರು ತಮ್ಮ ಕುಂಚ ಪರಪಂಚದ ಗೆರೆಗಳಿಗೆ ಇನ್ನೊಂದು ಸಿನಿಮಾ ರೂಪು ಕೊಡುತ್ತಿದ್ದಾರೆ. ಮೊದಲೇ ನಿರ್ಧಾರಿತವಾದಂತೆ ತಬು ಈ ಚಿತ್ರದ ನಾಯಕಿ. ಚಿತ್ರದ ಹೆಸರು- ಮೀನಾಕ್ಷಿ.

ಮಾಧುರಿ ದೀಕ್ಷಿತ್‌ ಸೌಂದರ್ಯ ಬಣ್ಣದ ಲೋಕದಿಂದ ಸಿನಿಮಾ ಜಗತ್ತಿಗೆ ಕಾಲಿಡುವಂತೆ ಹುಸೇನ್‌ ತಾತನನ್ನು ಪ್ರೇರೇಪಿಸಿದ್ದೇ ತಡ, ಗಜಗಾಮಿನಿ ತೆರೆಗೆ ಬಂತು. ಈ ಸಿನಿಮಾ ಗಲ್ಲಾ ಪೆಟ್ಟಿಗೆಯಲ್ಲಿ ಮಾಡಿದ ಸದ್ದಿಗಿಂತ ಮಾಧ್ಯಮ ಲೋಕದಲ್ಲಿ ಸುದ್ದಿಯಾದದ್ದೇ ಹೆಚ್ಚು. ಮುಂದೆ ಹುಸೇನರ ಕನಸಲ್ಲಿ ಮಾಧುರಿ ಜಾಗಕ್ಕೆ ತಬು ಬಂದಳು. ಮುಂದಿನ ತಮ್ಮ ಸಿನಿಮಾದ ನಾಯಕಿ ತಬು ಎಂದು ಹುಸೇನರು ಅವತ್ತೇ ಗೊತ್ತು ಮಾಡಿಬಿಟ್ಟರು. ತಬು ಕೂಡ ತಕರಾರಿಲ್ಲದೆ ಕಾಲ್‌ಶೀಟ್‌ ಕೊಟ್ಟಳು.

ಈ ಸಿನಿಮಾ ಕೂಡ ಗಜಗಾಮಿನಿಯಂತೆ ಸ್ತ್ರೀರೂಪಕಗಳ ಭಂಡಾರ. 'ಮೀನಾಕ್ಷಿ'ಯಲ್ಲಿ ತಬು ಮಾಡುತ್ತಿರುವುದು ದ್ವಿಪಾತ್ರ. ಹೈದರಾಬಾದ್‌, ಜೈಸಲ್ಮೆರ್‌ ಹಾಗೂ ಪ್ರಾಗ್‌- ಈ ಮೂರು ಊರುಗಳಲ್ಲಿ ಆಯಾ ಪರಿಸ್ಥಿತಿಗೆ ತಕ್ಕಂತೆ ಸ್ತ್ರೀ ಸ್ವಭಾವದ ಬದಲಾವಣೆಯ ಮುಖಗಳನ್ನು ಹುಸೇನ್‌ ಸಾಹೇಬರು ಬಿಚ್ಚಿಟ್ಟಿದ್ದಾರೆ. ತನ್ನ ಹೊಸ ಕಥೆಗೆ ಮೀನಾಕ್ಷಿ ತಕ್ಕ ಪಾತ್ರ ಎಂದು ಅವಳ ವ್ಯಕ್ತಿತ್ವವನ್ನು ಅಳೆಯಲು ಹೋಗುವ ನಾಯಕ ಒಂದೊಂದೂ ಊರಿನಲ್ಲಿ ಬದಲಾಗುವ ಆಕೆಯ ವರ್ತನೆಯನ್ನು ಕಂಡು ದಂಗಾಗುತ್ತಾನೆ. ತನ್ನ ಕಥೆಯ ವಸ್ತುವಿಗೆ ತಕ್ಕಂಥ ಹರಳುಗಟ್ಟಿದ ಆಕೆಯ ವ್ಯಕ್ತಿತ್ವ ಅವನ ಅಳತೆಗೋಲಿಗೆ ಎಟುಕುವುದೇ ಇಲ್ಲ. ಆಗ ಗೊಂದಲಕ್ಕೆ ಸಿಲುಕುತ್ತಾನೆ. ಇದು ಕಥೆಯ ಸಾರಾಂಶ.

ಈ ಸಿನಿಮಾದ ವಿಶೇಷವೆಂದರೆ ಖುದ್ದು ಹುಸೇನ್‌ ಸಾಹೇಬರು ಎರಡು ಹಾಡಲ್ಲಿ ಕಂಠ ಶಕ್ತಿ ತೋರಿರುವುದು ! ಎ.ಆರ್‌.ರೆಹಮಾನ್‌ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ನಾಯಕನ ಪಾತ್ರದಲ್ಲಿ ರಘುವೀರ್‌ ಯಾದವ್‌ ನಟಿಸಿದ್ದಾರೆ.

ತನಗೆ ನಾಯಕಿಯ ಬುಲಾವನ್ನು ಹುಸೇನ್‌ ಸಾಹೇಬರು ಕೊಟ್ಟಿದ್ದಾರೆ ಅಂತ ಬೆಂಗಳೂರಿನ ಇಂದಿರಾನಗರದಲ್ಲಿ ಹೇಳಿಕೊಂಡು ತಿರುಗುತ್ತಿದ್ದ ರುಚಿತಾ ಪ್ರಸಾದ್‌ ಮುಂದೆ ಈ ವಿಷಯ ಹೇಳಿದರೆ, ಕೆಂಪಾಗುತ್ತಾರೆ. ತಮ್ಮ ಸ್ಥಳೀಯ ಮಾರುಕಟ್ಟೆ ಹೆಚ್ಚಿಸಿಕೊಳ್ಳಲು ಅವರು ಹೇಳಿಕೊಂಡಿದ್ದ ಚಿಕ್ಕ ಸುಳ್ಳಿನ ಪಾತ್ರಧಾರಿ ಹುಸೇನ್‌ ಸಾಹೇಬರು ಅನ್ನುವುದು ಮಾತ್ರ ದುರಂತ !

ಬರಿಗಾಲಿ ಹುಸೇನ್‌ ಸಾಹೇಬರ ಸಿನಿಮಾ ಸಾಹಸವನ್ನು ನಿಮ್ಮ ಪದಗಳಲ್ಲಿ ಬಣ್ಣಿಸಿ.

English summary
Minaxi is noted Painter M F Hussains second film after Gajagamini and this one promises to be as opulent and artistic as his first production. The film stars Tabu in the lead role

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada