»   » ಸಾಕ್ಷಿ ಬೆಳಗೆರೆ ಕಣ್ಣಳತೆಯಲ್ಲಿ 'ಮುಖ್ಯಮಂತ್ರಿ ಐ ಲವ್ ಯೂ'

ಸಾಕ್ಷಿ ಬೆಳಗೆರೆ ಕಣ್ಣಳತೆಯಲ್ಲಿ 'ಮುಖ್ಯಮಂತ್ರಿ ಐ ಲವ್ ಯೂ'

Posted By:
Subscribe to Filmibeat Kannada

ಈ ಸಿನಿಮಾ ಆರಂಭಕ್ಕೆ ಮುನ್ನವೇ ಪ್ರೇಕ್ಷಕರ ಎದೆಯಲ್ಲಿ ಜಾಗ ಪಡೆದಿದೆ. ಸಿನಿಮಾ ಹೇಗಿರುತ್ತದೆಯೋ? ಬೆಳಗೆರೆ ಚಿತ್ರದಲ್ಲಿ ಏನೇನು ತೋರಿಸ್ತಾರೋ, ಯಾರ್ಯಾರ ಪಂಚೆ ಕೀಳ್ತಾರೋ ಅನ್ನೋ ಕೆಟ್ಟ ಅಥವಾ ಸಹಜ ಕುತೂಹಲ ಸ್ಯಾಂಡಲ್ ವುಡ್ ನಲ್ಲಿ ಹಬ್ಬಿದೆ. ಬೆಳಗೆರೆ ಹೊಸ ಚಿತ್ರದ ಅಡಿ ಬರಹ ; ರಾಧಿಕೆ ನಿನ್ನ ಸರಸವಿದೇನೇ..

  • ಶಾಮ್
'ನೀವು ತಿಳಿದಂತೆ ನಾನು ಚಿತ್ರ ಮಾಡೋದಿಲ್ಲ.. ನನ್ನ ಮುಖ್ಯಮಂತ್ರಿ ಐ ಲವ್ ಯೂ ಚಿತ್ರಕ್ಕೂ ಕುಮಾರಸ್ವಾಮಿಗೂ ಸಂಬಂಧವಿಲ್ಲ' ಎಂದು ಈಗಾಗಲೇ ಬೆಳಗೆರೆ ಹೇಳಿದ್ದಾರೆ. ಹೇಳಿದಂತೆಯೇ ಮಾಡುತ್ತಾರಾ? ಮಾಡಿದರೆ ಪ್ರೇಕ್ಷಕ ಪ್ರಭು ಒಪ್ಪುತ್ತಾನಾ? ಪ್ರೇಕ್ಷಕ ಬಯಸುವಂತೆ ಚಿತ್ರ ಮಾಡಿದರೆ, ಪ್ರದರ್ಶನಕ್ಕೆ ಅಡ್ಡಿಯಾಗುವುದಿಲ್ಲವಾ? ಈ ಪ್ರಶ್ನೆಗಳನ್ನು ಸದ್ಯಕ್ಕೆ ಪಕ್ಕಕ್ಕಿಡೋಣ. ಇವೆಲ್ಲವೂ ನಾಳೆಯ ಪ್ರಶ್ನೆಗಳು.

ಇಂದು(ನ.22) ಬೆಳಗ್ಗೆ 8ಗಂಟೆಯಿಂದಲೇ ಪ್ರೆಸ್ ಕ್ಲಬ್ ಆವರಣ ತುಂಬಿ ತುಳುಕುತ್ತಿತ್ತು. ಅಲ್ಲಿ ಹಾಕಲಾಗಿದ್ದ ದೊಡ್ಡ ಶಾಮಿಯಾನದಡಿ, ಬೆಳಗೆರೆ ಅಭಿಮಾನಿಗಳು ಮತ್ತು ಸಿನಿಮಾ ಮಂದಿ ನೆರೆದಿದ್ದರು. 'ಮುಖ್ಯಮಂತ್ರಿ ಐ ಲವ್ ಯೂ'ಚಿತ್ರದ ಮುಹೂರ್ತ ಸಮಾರಂಭ ಅಂದುಕೊಂಡಂತೆಯೇ ಲವಲವಿಕೆಯಿಂದ ಕೂಡಿತ್ತು. ಪತ್ರಕರ್ತ ವಿಶ್ವೇಶ್ವರ ಭಟ್ ಕ್ಯಾಮೆರಾ ಚಾಲನೆ ಮಾಡಿದರೆ, 'ಗಂಡ ಹೆಂಡತಿ'ಎಂಬ ಕುಖ್ಯಾತ ಚಿತ್ರದ ನಿರ್ದೇಶಕ ರವಿ ಶ್ರೀವತ್ಸ ಕ್ಲಾಪ್ ಮಾಡಿದರು. ಬೆಳಗೆರೆ ಕಾರ್ಯಕ್ರಮದಲ್ಲಿ ಟಿ.ಎನ್.ಸೀತಾರಾಂ ಇಲ್ಲದಿದ್ದರೇ ಹೇಗೆ? ಅವರೂ ಇದ್ದರು.. ದೀಪ ಬೆಳಗಿ ಶುಭ ಕೋರಿದರು.

ತಾನು ಜನರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸಿದ ಸಂತೋಷವನ್ನು ಸುದ್ದಿಗೋಷ್ಠಿಯಲ್ಲಿ ಮುಖ್ಯಮಂತ್ರಿ ಹಂಚಿಕೊಳ್ಳುವ ಮೊದಲ ದೃಶ್ಯವನ್ನು ಈ ಸಂದರ್ಭದಲ್ಲಿ ಚಿತ್ರೀಕರಿಸಲಾಯಿತು. ತಲೆಗೆ ರುಮಾಲು ಸುತ್ತಿಕೊಂಡಿದ್ದ ನಲವತ್ತೈವತ್ತು ಜನ ಅಲ್ಲಿ ಸುತ್ತಾಡುತ್ತಿದ್ದರು. ನಾಯಕ ವಿಜಯ್ ಕಚ್ಚೆ ಪಂಚೆ ಹಾಕಿ, ಜುಬ್ಬಾ ಧರಿಸಿದ್ದರು. ತಲೆಗೆ ರುಮಾಲು ಸುತ್ತಿಕೊಂಡಿದ್ದರು. ಉತ್ತರ ಕರ್ನಾಟಕದ ಪ್ರಭಾವ ಚಿತ್ರದ ಮೇಲೆ ಇದ್ದಂತಿದೆ. ವಿಜಯ್ ಅವರು ಸಿನಿಮಾದಲ್ಲಿ ಮುಖ್ಯಮಂತ್ರಿ . ಅಂದ ಹಾಗೇ ಅವರ ಪಾತ್ರದ ಹೆಸರು ಕುಮಾರ ಸ್ವಾಮಿ ಅಲ್ಲ, ಬರೀ ಕುಮಾರ.

ತಂತ್ರೇಗೌಡನ ಪಾತ್ರದಲ್ಲಿ ಆಂಕಲ್ ಲೋಕನಾಥ್, ರಾಧಾ ಪಾತ್ರದಲ್ಲಿ ಭಾವನಾ, ಮುಖ್ಯಮಂತ್ರಿ ಪತ್ನಿ ಸುನೀತಾ ಪಾತ್ರದಲ್ಲಿ ಹರಿಪ್ರಿಯ ಅಭಿನಯಿಸಲಿದ್ದಾರೆ. ಓದುಗರು ಕ್ರಮವಾಗಿ ದೇವೇಗೌಡ, ರಾಧಿಕಾ, ಅನಿತಾ ಎಂದು ಓದಿಕೊಂಡರೆ ನಾವೇನು ಮಾಡುವಂತಿಲ್ಲ. ರೇವಣ್ಣ ಕ್ಷಮಿಸಿ ದೇವಣ್ಣನ ಪಾತ್ರವನ್ನು ರಂಗಾಯಣ ರಘು, ಭವಾನಿ ಕ್ಷಮಿಸಿ ಶಿವಾನಿ ಪಾತ್ರವನ್ನು ನವನೀತಾ, ಚೆನ್ನಮ್ಮ ಕ್ಷಮಿಸಿ ಮಲ್ಲಮ್ಮನ ಪಾತ್ರವನ್ನು ಸುಂದರಶ್ರೀ(ಇವರು ಈಟೀವಿಯ ಸೂರಿ ಅವರ ಪತ್ನಿ) ನಿರ್ವಹಿಸುವರು.

ಕತೆ, ನಿರ್ದೇಶನದ ಜೊತೆಗೆ ನಿರ್ಮಾಪಕರಾಗಿ ದುಡ್ಡು ಸುರಿಯುತ್ತಿರುವ ರವಿ ಬೆಳಗೆರೆ, ತೆರೆ ಮೇಲೆ ಸಾಕ್ಷಿ ಬೆಳಗೆರೆಯಾಗಿ ಕಾಣಿಸಿಕೊಳ್ಳಲಿದ್ದಾರೆ. ಅವರ ಜೊತೆ ಮಾಸ್ಟರ್ ಕಿಷನ್ ಸದಾ ಇರಲಿದ್ದಾರೆ. ಇಬ್ಬರ ಕಾಂಬಿನೇಷನ್ ಹೇಳಿ ಮಾಡಿಸಿದಂತಿದೆ. ಇನ್ನು ಪಿಕೆಹೆಚ್ ದಾಸ್ (ಕ್ಯಾಮೆರಾ), ಇಸ್ಮಾಯಿಲ್ (ಕಲೆ), ಹರಿಕೃಷ್ಣ(ಸಂಗೀತ) ಚಿತ್ರವನ್ನು ಅಂದಗೊಳಿಸಲಿದ್ದಾರೆ. ಈ ಯೂನಿಟ್ ಸಂಘಟಿಸಿದ್ದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಮಿತ್ರಬಳಗದಲ್ಲಿ ಒಬ್ಬರಾದ ರಾಕ್ ಲೈನ್ ವೆಂಕಟೇಶ್ ಅವರ ಪುತ್ರ ಜಗದೀಶ್ ಎಂಬುದು ನಿಮ್ಮ ಗಮನಕ್ಕಿರಲಿ.

ಮುಹೂರ್ತದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರವಿ ಬೆಳಗೆರೆ, ಇವತ್ತಿನ ಸಾಮಾಜಿಕ ಪರಿಸ್ಥಿತಿ ಮತ್ತು ರಾಜಕೀಯ ಪರಿಸ್ಥಿತಿಯನ್ನು ಚಿತ್ರ ವ್ಯಾಖ್ಯಾನ ಮಾಡಲಿದೆ ಎಂದರು. ರಾಜರು, ಚಕ್ರವರ್ತಿಗಳು, ಸಾಮ್ರಾಟರು ಎಷ್ಟೋಮಂದಿ ಬಂದಿದ್ದಾರೆ. ಧನ ಕನಕ ಪಶುಸಂಪತ್ತಿನಷ್ಟೇ ಹೆಣ್ಣು ಎಲ್ಲಾ ಕಾಲದಲ್ಲೂ ಮಹತ್ವದ ಪಾತ್ರ ನಿರ್ವಹಿಸುತ್ತಾ ಬಂದಿದ್ದಾಳೆ. ಕೌಟುಂಬಿಕ ವ್ಯವಸ್ಥೆ, ಸಂದರ್ಭಗಳ ನಿರ್ವಹಣೆಯನ್ನು ಹೆಣ್ಣು ನಿಬಾಯಿಸಿದ ರೀತಿಯನ್ನುಚಿತ್ರದಲ್ಲಿ ಕಾಣಬಹುದು ಎಂದು ಚಿತ್ರದ ಎಳೆಯನ್ನು ಬಿಚ್ಚಿಡದೇ, ಅಂತೆಕಂತೆ ದೋಣಿ ತೇಲಿಸಲು ನೆರವಾದರು.

ಹದಿಮೂರು ವರ್ಷಗಳ ಹಿಂದೆ ಇದೇ ಪ್ರೆಸ್ ಕ್ಲಬ್ ನಲ್ಲಿ ನನ್ನ 'ಹಾಯ್ ಬೆಂಗಳೂರು' ಪತ್ರಿಕೆಯನ್ನು ಆರಂಭಿಸಿದ್ದೆ. ಈಗ ಸಿನಿಮಾ, ನಾಳೆ? ಗೊತ್ತಿಲ್ಲ. ನನ್ನ ಪಾಲಿಗೆ ಇದು ಶಕ್ತಿ ಸ್ಥಾವರ ಎಂದ ಬೆಳಗೆರೆ, ತಮ್ಮ ಪ್ರೆಸ್ ಕ್ಲಬ್ ನಂಟನ್ನು ವಿವರಿಸಿದರು.

ಚಿತ್ರದಲ್ಲಿ ಐದು ಹೊಡೆದಾಟದ ದೃಶ್ಯಗಳಿವೆ. ವಿಜಯ್ ಇದ್ದ ಮೇಲೆ ಅವೆಲ್ಲ ಇಲ್ಲದಿದ್ದರೆ ಹೇಗೆ ಅಲ್ವಾ? ಆಮೇಲೆ ಜಯಂತ್ ಕಾಯ್ಕಿಣಿ, ಯೋಗರಾಜ ಭಟ್, ವಿಶ್ವೇಶ್ವರ ಭಟ್ ಚಿತ್ರಕ್ಕಾಗಿ ಹಾಡು ಬರೆದಿದ್ದಾರೆ. ಚಿತ್ರದ ನಾಲ್ಕು ಹಾಡುಗಳನ್ನು ಹಾಡಲು ಯಾವ ಗಾಯಕರು ಸೂಕ್ತ ಎಂಬುದನ್ನು ಬೆಳಗೆರೆ ನಿರ್ಧರಿಸಿಲ್ಲ. ಆ ಸ್ವಾತಂತ್ರ್ಯವನ್ನು ಸಂಗೀತ ನಿರ್ದೇಶಕರಿಗೆ ನೀಡಿದ್ದಾರೆ. ಭಟ್ಟರು ಚಿತ್ರಕ್ಕಾಗಿ ಹಾಡು ಬರೆಯುವ ಜೊತೆಗೆ, ಡಾಕ್ಟರ್ ಪಾತ್ರದಲ್ಲೂ ಕಾಣಿಸಿಕೊಳ್ಳಲಿದ್ದಾರೆ.

ಪ್ರಶ್ನೆ ಉತ್ತರಗಳ ಮಧ್ಯೆ 'ಸಿನಿಮಾ ಸಂದೇಶ ಏನು?'ಎಂಬ ದಟ್ಸ್ ಕನ್ನಡ ಪ್ರಶ್ನೆಗೆ, ಬೆಳಗೆರೆ ಉತ್ತರಿಸಿದರು. ಪ್ರತಿಯೊಬ್ಬರು ತಪ್ಪದೇ ಮತ ಚಲಾಯಿಸಬೇಕು. ಅಗತ್ಯ ಬಂದಾಗ, ಕಾಲಲ್ಲಿರೋದನ್ನು ಜನರು ಕೈಗೆತ್ತಿಕೊಳ್ಳಬೇಕು ಎಂದು ಮಾತು ಮುಗಿಸಿದರು. ಇದು ಎಕ್ಕಡ ಕ್ರಾಂತಿಯ ಚಿತ್ರವಾ? ನೋಡೋಣ.

ಮುಹೂರ್ತ ಸಮಾರಂಭದಲ್ಲಿ ಅಂಬರೀಷ್, ದ್ವಾರಕೀಶ್, ಯೋಗರಾಜ ಭಟ್, ಸೂರಿ, ವಿ.ಮನೋಹರ್, ತುಳಸಿ ಶಿವಮಣಿ ಮತ್ತಿತರರು ಹಾಜರಿದ್ದರು.

ಮುಹೂರ್ತದ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada