»   » ಮೌನವಾದ ‘ಹಂಸಗೀತೆ’, ಚಿತ್ರ ದಿಗ್ಗಜನ ‘ಅವತಾರ’ ಸಮಾಪ್ತಿ

ಮೌನವಾದ ‘ಹಂಸಗೀತೆ’, ಚಿತ್ರ ದಿಗ್ಗಜನ ‘ಅವತಾರ’ ಸಮಾಪ್ತಿ

Posted By:
Subscribe to Filmibeat Kannada

ಜಿ.ವಿ.ಅಯ್ಯರ್‌ ಕನ್ನಡ ಚಿತ್ರಲೋಕದ ಹಿರಿಯ ಚೇತನ. ಮಹಾನ್‌ ಪ್ರತಿಭೆ. ಹಿರಿಯ ವಯಸ್ಸಿನಲ್ಲೂ ಕಷ್ಟಕಾರ್ಪಣ್ಯಗಳನ್ನು ಮೆಟ್ಟಿನಿಂತು ಕಲಾತ್ಮಕ ಚಿತ್ರಗಳನ್ನು ನಿರ್ಮಿಸಿದ ಧೀರ.

ನನ್ನ ಮತ್ತು ಅಯ್ಯರ್‌ ಅವರ ಒಡನಾಟ ಬಹಳ ಹಿಂದಿನದು. ವಂಶವೃಕ್ಷ ಚಿತ್ರದ ಮೂಲಕ ಕಲಾತ್ಮಕ ಚಿತ್ರಗಳನ್ನು ಯಶಸ್ವಿಯಾಗಿ ನಿರ್ಮಿಸಲು ಸಾಧ್ಯ ಎಂಬುದನ್ನು ತೋರಿಸಿ ಕೊಟ್ಟವರು. 1972ರಲ್ಲಿ ನಿರ್ಮಿಸಲಾದ ಸಂಕಲ್ಪ ಚಿತ್ರದಲ್ಲಿ ನನಗೆ ದೊರೆತಿದ್ದು ‘ಬಾಬಾ’ ಪಾತ್ರ.

ಅನಂತನಾಗ್‌ ಕೂಡ ಅದೇ ಚಿತ್ರದ ಮೂಲಕ ಕನ್ನಡದಲ್ಲಿ ಅಭಿನಯಕ್ಕೆ ಕಾಲಿಟ್ಟವರು. ಸಂಕಲ್ಪ ಚಿತ್ರಕ್ಕೂ ಮುನ್ನ ಅಯ್ಯರ್‌ ಕೆಲ ಚಿತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರೂ ಅವರಿಗೆ ಹೆಸರು ತಂದಿದ್ದು ಇದೇ. ಹೀಗಾಗಿ ಸಂಕಲ್ಪ ಅವರಿಗೆ ಎರಡನೇ ಜನ್ಮ ನೀಡಿದ ಚಿತ್ರ.

60ರ ಇಳಿ ವಯಸ್ಸಿನಲ್ಲಿ ಹಂಸಗೀತೆಯನ್ನು ನಿರ್ದೇಶಿಸುವ ಮೂಲಕ ತಮ್ಮ ಕಲಾತ್ಮಕ ಶಕ್ತಿಯನ್ನು ಚಿತ್ರರಂಗಕ್ಕೆ ತೋರಿಸಿಕೊಟ್ಟ ಮಹಾಗಟ್ಟಿಗ. ಕಲಾತ್ಮಕ ಚಿತ್ರಗಳೆಂದರೆ ಮೂಗು ಮುರಿಯುವ ಕಾಲದಲ್ಲಿ ಎಲ್ಲರೂ ‘ಭಲೇ’ ಎನ್ನುವ ರೀತಿಯಲ್ಲಿ ಚಿತ್ರ ನಿರ್ದೇಸಿಸಿದ ಅಯ್ಯರ್‌ 75ರ ನಂತರ ಹಿಂತಿರುಗಿ ನೋಡಲೇ ಇಲ್ಲ. ಹಂಸಗೀತೆ ಚಿತ್ರ ನಿರ್ದೇಶನದಲ್ಲಿ ಅವರು ತೋರಿದ ಪ್ರತಿಭೆ ಮತ್ತು ಕಲಾಚಾತುರ್ಯಕ್ಕೆ ಪ್ರಶಂಸೆ ಮತ್ತು ರಾಷ್ಟ್ರಪ್ರಶಸ್ತಿಯೂ ಲಭಿಸಿತು.

ಜೀವನದಲ್ಲಿ ಸಾಕಷ್ಟು ಅನುಭವ ಮತ್ತು ಕಹಿಯನ್ನು ಹೊಂದಿದ್ದ ಅಯ್ಯರ್‌ ಸಾಲ- ಸೋಲದಿಂದಲೂ ಬಳಲಿದ್ದರು. ಹಂಸಗೀತೆಯಂತಹ ಕಲಾತ್ಮಕ ಚಿತ್ರ ಯಶಸ್ವಿಯಾದ ನಂತರ ಗತ ನೋವು ಮತ್ತು ಬವಣೆ ದೂರವಾಗಿ ಎರಡನೇ ಜನ್ಮ ಎತ್ತುವಂತಾಯಿತು. ವಾಸ್ತವವಾಗಿ ಹೇಳಬೇಕೆಂದರೆ ಈ ಎರಡನೇ ಜನ್ಮವೇ (ದ್ವಿಜ) ಅವರನ್ನು ಚಿತ್ರಲೋಕದಲ್ಲಿ ಗಟ್ಟಿಯಾಗಿ ಉಳಿಸಿದ್ದು. ರಾಜ್ಯ- ರಾಷ್ಟ್ರ ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬಂದಾಗ ಅವರಲ್ಲಿ ಕಲಾತ್ಮಕ ಚಿತ್ರಗಳನ್ನು ನಿರ್ಮಿಸುವ ಬಗ್ಗೆ ವಿಶ್ವಾಸ ಮತ್ತು ನಂಬಿಕೆ ಮೂಡಿಸಿತು. ‘ಸಂಕಲ್ಪ’ ಚಿತ್ರದ ನಂತರದ ಅವರ 28 ವರ್ಷಗಳ ಸಾಧನೆ ಅಮೋಘ.

80ರ ದಶಕದ ಆರಂಭದಲ್ಲಿ ದಿಲ್ಲಿ ದೂರದರ್ಶನಕ್ಕೆ ಅವರು ನಿರ್ದೇಶಿಸಿದ ‘ಶ್ರೀ ಕೃಷ್ಣಾವತಾರ’ ಧಾರಾವಾಹಿಯಲ್ಲಿ ನನಗೆ ದೊರೆತಿದ್ದು ಕಂಸನ ಪಾತ್ರ. ವಿನೂತನ ರೀತಿಯಲ್ಲಿ ನಿರ್ಮಿಸಲಾದ ಈ ಧಾರಾವಾಹಿಯ ಕಂಸನ ಪಾತ್ರ ಅವಿಸ್ಮರಣೀಯ. ಅಯ್ಯರ್‌ ಅವರ ಕಲಾಚಾತುರ್ಯದಲ್ಲಿ ರೂಪುಗೊಂಡ ಕಂಸನ ಪಾತ್ರ ನನಗೆ ಮೆಚ್ಚುಗೆಯೂ ಹೌದು. ಸಾಮಾನ್ಯವಾಗಿ ಅಯ್ಯರ್‌ ಪಾದರಕ್ಷೆ ಧರಿಸುತ್ತಿರಲಿಲ್ಲ. ಇಂತಹ ಮನುಷ್ಯ ಇಳಿ ವಯಸ್ಸಿನಲ್ಲೂ ಹಿಮಾಲಯದ ಮಂಜುಗಡ್ಡೆಗಳ ನಡುವೆ ಬರಿಕಾಲಿನಲ್ಲಿ ನಡೆದಾಡಿ ‘ಆದಿಶಂಕರಾಚಾರ್ಯ’ ಚಿತ್ರ ನಿರ್ದೇಶಿಸಿದ್ದು ಸಾಮಾನ್ಯ ಸಂಗತಿಯೇ? ಅಬ್ಬಾ, ಅದೆಂತಹ ಗಟ್ಟಿ ಸಂಕಲ್ಪ? ತಾನು ಬಯಸಿದಂತೆ ಚಿತ್ರ ನಿರ್ದೇಶಿಸಬೇಕೆಂದು ಅಯ್ಯರ್‌ ತೀರ್ಮಾನಿಸಿದರೆ ಅದು ಹಾಗೆಯೇ ಆಗಬೇಕು. ಅವರ ಈ ಮನೋಸ್ಥೈರ್ಯ ಎಲ್ಲರನ್ನೂ ದಂಗುಪಡಿಸುತ್ತದೆ.

ಅಯ್ಯರ್‌ ಸಹರಾ ಮರುಭೂಮಿಗೆ ಕಾಲಿಟ್ಟರೂ ಅದು ನಂದನವನ ಆಗುತ್ತೆ. ಅಲ್ಲಿಯೇ ಅವರು ಒಂದು ಎಕರೆ ಜಮೀನಿನಲ್ಲಿ ಬೇಸಾಯ ಶುರು ಮಾಡಿ ಬಂಗಾರದಂತಹ ಬೆಳೆಯನ್ನೂ ತೆಗೆಯಬಲ್ಲರು. ನಾವೆಲ್ಲ ಆ ಶೂಟಿಂಗ್‌ ಸಮಯದಲ್ಲಿ ಅಯ್ಯರ್‌ ಅವರ ಬಗ್ಗೆ ಹೇಳುತ್ತಿದ್ದ ಹೆಮ್ಮೆಯ ಮಾತುಗಳಿವು.

ಅಯ್ಯರ್‌ ಚಿತ್ರಗಳಲ್ಲಿ ಕಲಾವಿದರಿಗೆ ದೊರೆಯುತ್ತಿದ್ದ ಸಂಭಾವನೆ ಹೆಚ್ಚೇನೂ ಆಗಿರಲಿಲ್ಲ. ಕಲಾವಿದನಿಗೆ ಅವರ ಚಿತ್ರಗಳಲ್ಲಿ ಎಷ್ಟು ದುಡ್ಡು ಸಿಗುತ್ತದೆ ಎಂಬುದಕ್ಕಿಂತ ಅವರ ಜತೆಯಲ್ಲಿ ಕಲಾವಿದರು ಕೆಲಸ ಮಾಡುವುದೇ ಒಂದು ಹೆಗ್ಗಳಿಕೆಯ ವಿಷಯ.

ಜಗದೋದ್ಧಾರಕ್ಕೆ ವಿಷ್ಣು ಭಗವಾನ್‌ ಎತ್ತಿದ್ದು ದಶಾವತಾರ. ಆದರೆ ಅಯ್ಯರ್‌ ಚಿತ್ರಲೋಕದಲ್ಲಿ ಎತ್ತಿದ್ದು ನೂರು ಅವತಾರ. ಪ್ರತಿಯಾಂದು ಅವತಾರದಲ್ಲಿಯೂ ಯಾವ ಹಿಂಜರಿಕೆ, ಹೆದರಿಕೆ ಮತ್ತು ಅಳುಕು ಇಲ್ಲ. ಸವಾಲುಗಳನ್ನೂ ದಿಟ್ಟವಾಗಿ ಸ್ವೀಕರಿಸಿ ಅಭೂತಪೂರ್ವ ಚಿತ್ರ ನೀಡಿದ ಛಲವಾದಿ.

ನನ್ನ ಪಾಲಿಗೆ ಅಯ್ಯರ್‌ ಒಬ್ಬ ಹಿರಿಯ. ಕೊನೆಯವರಿಗೂ ನನ್ನನ್ನು ಅವರು ಮಿತ್ರರಾಗಿಯೇ ನೋಡಿದವರು. ಇಳಿ ವಯಸ್ಸಿನಲ್ಲಿ ಚಿತ್ರಲೋಕದ ಸಾಹಸಗಳಿಗೆ ಕೈ ಹಾಕಿ ಈಗ ನೆನಪುಗಳನ್ನು ಉಳಿಸಿ ಅಗಲಿದ ಮಿತ್ರನಿಗೆ ಮನೋನಮಃ

(ಸ್ನೇಹಸೇತು- ವಿಜಯ ಕರ್ನಾಟಕ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada