»   » ವಿಧಾನಸೌಧದೆದುರು ಮಲ್ಲಿಕಾ ಶೆರಾವತ್‌ ಜಿಂಗಿಚಕ್ಕ!

ವಿಧಾನಸೌಧದೆದುರು ಮಲ್ಲಿಕಾ ಶೆರಾವತ್‌ ಜಿಂಗಿಚಕ್ಕ!

Posted By:
Subscribe to Filmibeat Kannada


ಬೆಂಗಳೂರು : ಬಾಲಿವುಡ್‌ನ ಮಾದಕ ನಟಿ, ಕಿಸ್ಸಿಂಗ್‌ ಕ್ವೀನ್‌ ಮಲ್ಲಿಕಾ ಶೆರಾವತ್‌, ವಿಧಾನಸೌಧದ ಮುಂದೆ ನೃತ್ಯ ಮಾಡಿ ನೆರೆದವರಲ್ಲಿ ರೋಮಾಂಚನ ಉಂಟುಮಾಡಿದರು.

ಕನ್ನಡ ಚಿತ್ರ ನಿರ್ದೇಶಕ ಪ್ರೇಮ್‌ ಮೊದಲ ಬಾರಿಗೆ ನಾಯಕರಾಗಿ ನಟಿಸುತ್ತಿರುವ ‘ಪ್ರೀತಿ ಏಕೆ ಭೂಮಿ ಮೇಲಿದೆ...?’ ಚಿತ್ರಕ್ಕೆ ಸಂಬಂಧಿಸಿದಂತೆ, ಮಲ್ಲಿಕಾ ಶೆರಾವತ್‌ ಹಾಡೊಂದಕ್ಕೆ ಹೆಜ್ಜೆಹಾಕಿದರು. ಹಾಡಿನ ಚಿತ್ರೀಕರಣದಲ್ಲಿ ಪ್ರೇಮ್‌ ಸೇರಿದಂತೆ ಅನೇಕ ನೃತ್ಯ ಕಲಾವಿದರು ಭಾಗವಹಿಸಿದರು.

ಬುಧವಾರವಷ್ಟೇ ಮಾಗಡಿ ರಸ್ತೆಯ ವೀರೇಶ್‌ ಚಿತ್ರಮಂದಿರದ ಸಮೀಪ ಇದೇ ಹಾಡಿನ ಚಿತ್ರೀಕರಣ ನಡೆದಿತ್ತು. ಗೌರಿಪಾಳ್ಯ, ಕಲಾಸಿಪಾಳ್ಳ ಸೇರಿದಂತೆ ಇನ್ನೂ ಹಲವಾರು ಕಡೆ ಈ ಹಾಡಿನ ಚಿತ್ರೀಕರಣ ನಡೆಯಲಿದೆ.

‘ಖ್ವಾಯಿಶ್‌’ ಎಂಬ ಹಿಂದಿ ಚಿತ್ರದಲ್ಲಿ, ನಾಯಕನಿಗೆ 17 ಬಾರಿ ದೀರ್ಘ ತುಟಿ ಚುಂಬನ ನೀಡಿ ಬಾಲಿವುಡ್‌ಗೆ ಬಿಸಿಯೇರಿಸಿ ಚಿತ್ರರಂಗ ಪ್ರವೇಶಿಸಿದ್ದ ಮಲ್ಲಿಕಾ, ಆನಂತರ ‘ಮರ್ಡರ್‌’ ಚಿತ್ರದಲ್ಲಿ ಮತ್ತಷ್ಟು ಗಾಢ ಚುಂಬನಗಳನ್ನು ನೀಡಿ ಪ್ರೇಕ್ಷಕರ ಚಳಿ ಓಡಿಸಿದ್ದು ಇತಿಹಾಸ(?).

ಅಂದಹಾಗೆ ಪ್ರೇಕ್ಷಕ ಪ್ರಭುಗಳು ‘ಪ್ರೀತಿ ಏಕೆ ಭೂಮಿ ಮೇಲಿದೆ...?’ ಚಿತ್ರದಲ್ಲಿ ಮಲ್ಲಿಕಾ ಮುತ್ತಿನ ಪ್ರಸಂಗ ನಿರೀಕ್ಷಿಸುವಂತಿಲ್ಲ. ಬೇಕಿದ್ದರೆ ಮಲ್ಲಿಕಾ ನೃತ್ಯವನ್ನು ಹಬ್ಬವಾಗಿಸಿಕೊಳ್ಳಬಹುದು. ಯಾಕೆಂದರೆ ಮಲ್ಲಿಕಾ ಕೇವಲ ಒಂದು ಹಾಡಿನಲ್ಲಿ ಮಾತ್ರ ಕಾಣಿಸಿಕೊಳ್ಳಲಿದ್ದಾರೆ.

(ದಟ್ಸ್‌ ಕನ್ನಡ ವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada