ಅಂತೂ ಪ್ರಿಯಾಮಣಿಗೆ ಅವನ ಕಾಟ ತಪ್ಪಿತು!
ಬೆಂಗಳೂರು ಬೆಡಗಿ ಪ್ರಿಯಾಮಣಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಪ್ರತಿ ದಿನಕ್ಕಿಂತ ಒಂದು ಗಂಟೆ ಹೆಚ್ಚಿಗೆ ಯೋಗ ಮಾಡಿ ಮನಸ್ಸಿನ ಕಿರಿಕಿರಿಗೆ ಪರಿಹಾರ ಕಂಡುಕೊಂಡಿದ್ದಾರೆ.
ಅಂಥದ್ದೇನೂ ಆಗಿತ್ತು ನಮ್ಮ ಪ್ರಿಯಾಗೆ? ಕಳೆದ ಎರಡು ಮೂರು ತಿಂಗಳುಗಳಿಂದ ಯಾರಲ್ಲೂ ಹೇಳಿಕೊಳ್ಳಲಾಗದಂಥ ಮಾನಸಿಕ ಹಿಂಸೆ ಪ್ರಿಯಾ ಅನುಭವಿಸಿದ್ದಾರೆ.
ಅನಾಮಧೇಯ ವ್ಯಕ್ತಿಯೊಬ್ಬ ಪದೇ ಪದೇ ಫೋನ್ ಮಾಡಿ ಕಿರುಕುಳ ನೀಡಿದ್ದಾನೆ. ಮತ್ತೆ ಮತ್ತೆ ಫೋನ್ ನಂಬರ್ ಬದಲಿಸಿದರೂ ಆತನ ಕೆಟ್ಟ ಚಾಳಿ ಮುಂದುವರೆದಿತ್ತು.
ಮೂರು ಬಾರಿ ನಂಬರ್ ಚೇಂಜ್ ಮಾಡಿದ್ದು ಪ್ರಿಯಾ ವೃತ್ತಿ ಜೀವನಕ್ಕೆ ಕೊಂಚ ಹೊಡೆತ ತಂದಿತ್ತು. ನಿರ್ಮಾಪಕರು ಈ ನಟಿ ಯಾಕೋ ಬೇಕಂತಲೇ ನಮ್ಮನ್ನು ಕಡೆಗಾಣಿಸುತ್ತಿದ್ದಾಳೆ, ಫೋನ್ ಕಾಲ್ ಎತ್ತುತ್ತಿಲ್ಲ ಎಂದು ಹೇಳಿಕೊಂಡು ತಿರುಗಾಡತೊಡಗಿದ್ದರು.
ಅನಾಮಿಕ ವ್ಯಕ್ತಿ ಪ್ರತಿ ದಿನ ತನ್ನ ಕೊಳಕು ಭಾಷೆಯಲ್ಲಿ ಮೆಸೇಜ್ ಕಳಿಸುತ್ತಿದ್ದ. ಸಮಯಕ್ಕಾಗೆಲ್ಲ ಫೋನ್ ಮಾಡಿ ಕೆಟ್ಟದಾಗಿ ಮಾತಾಡುತ್ತಿದ್ದ. ಮೊದಮೊದಲು ಉದಾಸೀನ ಮಾಡಿದ್ದ ಪ್ರಿಯಾ ಕೊನೆಗೆ ಬೇಸತ್ತು ಪೊಲೀಸರ ಮೊರೆ ಹೊಕ್ಕಿದ್ದರು.
ಅಂತೂ ಕಿರುಕುಳ ನೀಡುತ್ತಿದ್ದ ಈ ಅನಾಮಿಕ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ, ಆತನ ವಿವರಗಳು ತಿಳಿದುಬಂದಿಲ್ಲ. ಮೊಬೈಲ್ ಕರೆ ಬಂದರೆ ಬೆಚ್ಚುತ್ತಿದ್ದ ಪ್ರಿಯಾ ಸದ್ಯಕ್ಕೆ ನೆಮ್ಮದಿಯಿಂದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ.


Click it and Unblock the Notifications











