ಇದ್ದಕ್ಕಿದ್ದಂತೆ ಗೋಲ್ಡನ್ ಗರ್ಲ್ ರಮ್ಯಾ ಗೌರಮ್ಮನಾಗಿದ್ದೇಕೆ?
ಇಷ್ಟು ದಿನ ಗೋಲ್ಡನ್ ಗರ್ಲ್ ರಮ್ಯಾ ಗ್ಲಾಮರ್ ಪಾತ್ರಗಳಲ್ಲಿ ಮಿಂಚಿ ಗಮನಸೆಳೆಯುತ್ತಿದ್ದರು. ನವ ನವೀನ ಶೈಲಿಯ ವಸ್ತ್ರಗಳಿಂದ ಯುವ ಜನತೆಯ ಹೃದಯಕ್ಕೆ ಲಗ್ಗೆ ಹಾಕಿದ್ದೂ ಉಂಟು. ಈಗ ರಮ್ಯಾ ಇದ್ದಕ್ಕಿದ್ದಂತೆ ರೂಟು ಬದಲಾಯಿಸಿದ್ದಾರೆ. ಗರತಿ ಗೌರಮ್ಮನಾಗಿ ಬದಲಾಗಿದ್ದಾರೆ.
ಗ್ಲಾಮರ್ ಪಾತ್ರಗಳಿಂದ ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾಗಬೇಕು ಎಂದು ಹಲವು ತಾರೆಗಳ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿದೆ. ಆದರೆ ರಮ್ಯಾ ಮಾತ್ರ ಗ್ಲಾಮರ್ ಪಾತ್ರಗಳಿಗೆ ಗುಡ್ ಬೈ ಹೇಳಿರುವುದು ಅಚ್ಚರಿಗೆ ಕಾರಣವಾಗಿದೆ. ಇನ್ನೂ ನಿರ್ಮಾಣ ಹಂತದಲ್ಲಿರುವ 'ಸಿದ್ಲಿಂಗು' ಚಿತ್ರದಲ್ಲಿ ಯೋಗೀಶ್ ಜೊತೆ ರಮ್ಯಾ ಗೌರಮ್ಮನ ಪಾತ್ರದಲ್ಲಿ ಅಭಿನಯಿಸುತ್ತಿರುವುದೇ ಇದಕ್ಕೆ ನಿದರ್ಶನ.
ಮಾಸಲು ಬಣ್ಣದ ಸೀರೆ, ಕನ್ನಡಕ, ಸಾದಾಸೀದಾ ಹುಡುಗಿಯಾಗಿ ರಮ್ಯಾ ಬದಲಾಗಿರುವುದನ್ನು ನೋಡಿದರೆ ಅಯ್ಯೋ ರಮ್ಯಾ ಇಷ್ಟು ಬದಲಾದರೆ ಎಂಬ ಅನುಮಾನ ಬರುತ್ತದೆ. ರಮ್ಯಾ ಯಾಕೆ ಇಷ್ಟು ಬೇಗ ಬದಲಾದರು ಎಂಬ ಸಣ್ಣ ಅನುಮಾನ ಆಕೆಯ ಅಭಿಮಾನಿಗಳನ್ನು ಕಾಡುತ್ತಿದೆ.
'ಸಿದ್ಲಿಂಗು' ಚಿತ್ರದಲ್ಲಿ ರಮ್ಯಾ ಪಾತ್ರ ಏನು ಎತ್ತ ಎಂಬ ಬಗ್ಗೆ ಎಲ್ಲೂ ಸುಳಿವಿಲ್ಲ. ಚಿತ್ರದ ನಿರ್ಮಾಪಕರು ಈ ಬಗ್ಗೆ ಗುಟ್ಟುಬಿಟ್ಟುಕೊಡಲು ಸುತಾರಾಂ ಒಪ್ಪುತ್ತಿಲ್ಲ. ಇಷ್ಟು ದಿನ ಗ್ಲಾಮರ್ ಪಾತ್ರಗಳಲ್ಲಿ ಮಿಂಚುತ್ತಿದ್ದ ರಮ್ಯಾರನ್ನು ಗೌರಮ್ಮನ ಪಾತ್ರದಲ್ಲಿ ಪ್ರೇಕ್ಷಕರು ಎಷ್ಟರಮಟ್ಟಿಗೆ ಸ್ವೀಕರಿಸುತ್ತಾರೆ ಎಂಬ ಪ್ರಶ್ನೆ ಕಾಡುತ್ತಿದೆ. (ಒನ್‍ಇಂಡಿಯಾ ಕನ್ನಡ)


Click it and Unblock the Notifications











