»   » ಕನ್ನಡ ಬೆಳ್ಳಿ ಪರದೆಗೆ ರವಿಶಂಕರ್ ಗುರೂಜಿ!

ಕನ್ನಡ ಬೆಳ್ಳಿ ಪರದೆಗೆ ರವಿಶಂಕರ್ ಗುರೂಜಿ!

Subscribe to Filmibeat Kannada

'ಆರ್ಟ್ ಆಫ್ ಲಿವಿಂಗ್' ಪ್ರತಿಷ್ಠಾನದ ಮೂಲಕ ಬದುಕಿಗೆ ಕಲಾಸ್ಪರ್ಶ ಕೊಡುತ್ತಿರುವ ರವಿಶಂಕರ್ ಗುರೂಜಿ ಕನ್ನಡ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಚಿತ್ರ ಹೆಸರು '...,' ಎಂದು. ಇದೇನಿದು ಆವರಣ ಚಿನ್ಹೆಯಲ್ಲಿ ತೋರಿಸಿದ್ದೀರಲ್ಲ ಎಂದು ನಿಮ್ಮ ಮುಖದಲ್ಲಿ ಆಶ್ಚರ್ಯ ಚಿನ್ಹೆ ಮೂಡಿಸಿಕೊಳ್ಳಬೇಡಿ! ಚಿತ್ರದ ಹೆಸರು ಇರುವುದೇ ಹಾಗೆ!

ಚಿತ್ರದಲ್ಲಿ ಮುಖ್ಯಮಂತ್ರಿಗಳ ಸಹಾಯಕರಾಗಿ ಕೇವಲ ಒಂದೇ ಒಂದು ನಿಮಿಷ ರವಿಶಂಕರ್ ಗುರೂಜಿ ಕಾಣಿಸಿಕೊಳ್ಳಲಿದ್ದಾರೆ. ಮತ್ತೊಂದು ವಿಶೇಷವೆಂದರೆ, ಈ ಚಿತ್ರದಲ್ಲಿ ಕೇವಲ ಒಂದೇ ಒಂದು ಸಂಭಾಷಣೆ ಇದ್ದು ಗಿನ್ನಿಸ್ ದಾಖಲೆಗೆ ಸೇರುವ ಎಲ್ಲ ಸಾಧ್ಯತೆಗಳೂ ಇವೆ. ಇಷ್ಟಕ್ಕು ಒಂದೇ ಒಂದು ಸಂಭಾಷಣೆಯನ್ನು ಹೊಂದಿರುವ ಈ ಚಿತ್ರವನ್ನು 2.30 ಗಂಟೆಗಳ ಕಾಲ ಹೇಗೆ ತೋರಿಸುತ್ತಾರೆ ಎಂಬ ಪ್ರಶ್ನೆ ನಿಮ್ಮ ಊಹೆಗೆ ಬಿಟ್ಟಿದ್ದು.

ಸಿಎಂ ಅಸೋಸಿಯೇಟ್ಸ್ ಬ್ಯಾನರಿನಡಿ ರಮೇಶ್ ನಿರ್ಮಿಸುತ್ತಿರುವ ಈ ಚಿತ್ರವನ್ನು ಎಸ್ ಎಲ್ ಎನ್ ಸ್ವಾಮಿ ನಿರ್ದೇಶಿಸುತ್ತಿದ್ದಾರೆ. ಎಸ್ ಎಲ್ ಎನ್ ಸ್ವಾಮಿ ಬಳಸಿರುವ ತಂತ್ರಗಳು ಒಂದೆರಡಲ್ಲ ಬಿಡಿ. ಚಿತ್ರದ ನಾಯಕ ನಟ ರವಿಶಂಕರ್ ಗುರೂಜಿ ಕಾಲಿಗೆ ಬೀಳುವಾಗ ಈ ಒಂದೇ ಒಂದು ಸಂಭಾಷಣೆ ಬರುತ್ತದಂತೆ. ಉಳಿದಂತೆ ಚಿತ್ರದ ಶೇ. 99ರಷ್ಟು ಭಾಗ ನಿಶಬ್ದವಾಗಿರುತ್ತದೆ. ಈಗಾಗಲೇ 25 ದಿನಗಳ ಕಾಲ ಬೆಂಗಳೂರು, ಮೈಸೂರಿನ ಹಲವಾರು ಹಲವಾರು ಸುಂದರ ತಾಣಗಳಲ್ಲಿ ಚಿತ್ರೀಕರಣ ಮುಗಿದಿದೆ. ರವಿಶಂಕರ್ ಆಶ್ರಮದಲ್ಲೂ ಚಿತ್ರೀಕರಿಸಲಾಗಿದೆ.

ದಿವಂಗತ ಹಾಸ್ಯ ನಟ ನರಸಿಂಹ ರಾಜು ಅವರ ಮೊಮ್ಮಗ ಅವಿನಾಶ್ ಇದೇ ಮೊದಲ ಬಾರಿಗೆ '...,' ಚಿತ್ರದಲ್ಲಿ ನಟಿಸುತ್ತಿದ್ದಾರೆ. ವೃತ್ತಿಯಿಂದ ಶಿಲ್ಪಿಯಾದ ಅವರು ಈ ಚಿತ್ರದಲ್ಲಿ ವೈದ್ಯನ ಪಾತ್ರದಲ್ಲಿ ಕಾಣಿಸಲಿದ್ದಾರೆ. ಹಾಗೆಯೇ ಕನ್ನಡದ ಮತ್ತೊಬ್ಬ ಪ್ರಸಿದ್ಧ ನಟ ಡಿಕ್ಕಿ ಮಾಧವರಾವ್ ಅವರ ಮೊಮ್ಮಗಳು ಸಹ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದ ತಾರಾ ಬಳಗದಲ್ಲಿ ಅಂಬಿಗ, ಸಾರಂಗಿ, ತಾರಾ, ಪದ್ಮ ವಾಸಂತಿ, ಶ್ರೀನಾಥ್, ಮಾಸ್ಟರ್ ಹಿರಣ್ಣಯ್ಯ, ಉಷಾ ಭಂಡಾರಿ ಮುಂತಾದವರಿದ್ದಾರೆ.

ಕನ್ನಡದಲ್ಲಿ ಸ್ವಾಮೀಜಿಗಳು ನಟಿಸಿರುವ ಸಾಕಷ್ಟು ಚಿತ್ರಗಳು ಬಂದಿವೆ. ಉದಾಹರಣೆಗೆ 'ಪ್ರೀತಿ ಏಕೆ ಭೂಮಿ ಮೇಲಿದೆ' ಚಿತ್ರದಲ್ಲಿ ಬಾಲಗಂಗಾಧರನಾಥ ಸ್ವಾಮೀಜಿಗಳು ದರ್ಶನ ನೀಡಿದ್ದರು. ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮಿಗಳು 'ಜ್ಞಾನಜ್ಯೋತಿ ಶ್ರೀ ಸಿದ್ಧಗಂಗಾ' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ 'ಆರ್ಟ್ ಆಫ್ ಲಿವಿಂಗ್' ನ ರವಿಶಂಕರ್ ಗುರೂಜಿ ಡೈಲಾಗ್ ಕಟ್ ಮಾಡಲಿದ್ದಾರೆ.

(ದಟ್ಸ್ ಕನ್ನಡ ಸಿನಿವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada