»   » ಹರ್ಷ್ ರಾಮ್‌ರಿಂದ ಪರಿಸರ ಕಾಳಿಜಿಯ ಮಕ್ಕಳ ಚಿತ್ರ

ಹರ್ಷ್ ರಾಮ್‌ರಿಂದ ಪರಿಸರ ಕಾಳಿಜಿಯ ಮಕ್ಕಳ ಚಿತ್ರ

Subscribe to Filmibeat Kannada

ಅಮೆರಿಕದ ಸಿಯಾಟಲ್‌ನಲ್ಲಿರುವ ಸಹ್ಯಾದ್ರಿ ಕನ್ನಡ ಕೂಟದ ಸದಸ್ಯ ಹರ್ಷ ರಾಮ್ ಡಿ.ಆರ್. ಅವರು ಪರಿಸರ ಕಾಳಜಿಯ ಮಕ್ಕಳ ಚಿತ್ರವೊಂದನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರ ಖ್ಯಾತ ಸಾಹಿತಿ ನಾ ಡಿಸೋಜಾ ಅವರ 'ಬೆಟ್ಟದ ಪುರದ ದಿಟ್ಟರು' ಕಾದಂಬರಿಯನ್ನು ಆಧರಿಸಿದೆ. ಚಿತ್ರಕ್ಕೆ ಇನ್ನೂ ಹೆಸರನ್ನು ಇಟ್ಟಿಲ್ಲ. ಉದ್ಭವ ಮತ್ತು ಮಿಸ್ ಕ್ಯಾಲಿಫೋರ್ನಿಯಾ ಚಿತ್ರಗಳನ್ನು ನಿರ್ದೇಶಿಸಿದ್ದ ಖ್ಯಾತ ನಿರ್ದೇಶಕ ಕೋಡ್ಲು ರಾಮಕೃಷ್ಣ ಈ ಮಕ್ಕಳ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

ನೈಸರ್ಗಿಕ ಸಂಪತ್ತನ್ನು ಕಾಪಾಡಲು ದುಷ್ಟಶಕ್ತಿಗಳ ವಿರುದ್ಧ ಮಕ್ಕಳು ಹೋರಾಟ ಸಾರುವ ಕಥಾವಸ್ತುವುಳ್ಳ ಈ ಚಿತ್ರದಲ್ಲಿ ಪ್ರಮುಖ ಭೂಮಿಕೆಯಲ್ಲಿ ಮಕ್ಕಳೇ ಇದ್ದಾರೆಂದು ಬೇರೆಯಾಗಿ ಹೇಳಬೇಕಾಗಿಲ್ಲ. ಮಾಸ್ಟರ್ ಶಶಾಂಕ್, ಮಾಸ್ಟರ್ ಸಮುದ್ರ ಮೊದಲಾದ ಪುಟಾಣಿಗಳು ಆಯ್ಕೆಯಾಗಿದ್ದಾರೆ. ಮಕ್ಕಳನ್ನು ತಿದ್ದುವ, ಪ್ರಕೃತಿಯ ರಕ್ಷಣೆಗೆ ಮಕ್ಕಳನ್ನು ಹುರಿದುಂಬಿಸುವ ಪಾತ್ರದಲ್ಲಿ ನಿರ್ಮಾಪಕರಾದ ಹರ್ಷ್ ರಾಮ್ ಅವರೇ ಅಭಿನಯಿಸುತ್ತಿದ್ದಾರೆ.

ಇವರೊಂದಿಗೆ ಹಿರಿಯ ನಟ ಶ್ರೀನಿವಾಸ ಮೂರ್ತಿ, ಪದ್ಮಾ ವಾಸಂತಿ, ಬ್ಯಾಂಕ್ ಜನಾರ್ಧನ, ಕರಿಬಸವಯ್ಯ, ರಥಸಪ್ತಮಿ ಅರವಿಂದ್, ಜೋಸೈಮನ್, ಸ್ವಸ್ತಿಕ್ ಶಂಕರ್ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಇನ್ನೊಂದು ಪ್ರಮುಖ ಪಾತ್ರಕ್ಕೆ ಅನಂತ್‌ನಾಗ್ ಅಥವಾ ಗಿರೀಶ್ ಕಾರ್ನಾಡ್ ಆಯ್ಕೆಯಾಗುವ ಸಾಧ್ಯತೆಯಿದೆ ಎಂದು ನಿರ್ಮಾಪಕರಾದ ಹರ್ಷ್ ರಾಮ್ ದಟ್ಸ್‌ಕನ್ನಡಕ್ಕೆ ತಿಳಿಸಿದರು.

ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. ಆಗಸ್ಟ್ ಮಧ್ಯದ ವೇಳೆಗೆ ಚಿತ್ರೀಕರಣ ಮುಗಿಯುವ ಸಾಧ್ಯತೆಯಿದೆ. ಅಕ್ಟೋಬರ್ 2 ಗಾಂಧಿ ಜಯಂತಿಯಂದು ಚಿತ್ರವನ್ನು ನಾಡಿನಾದ್ಯಂತ ಬಿಡುಗಡೆ ಮಾಡಬೇಕೆಂದು ಹರ್ಷ ತೀರ್ಮಾನಿಸಿದ್ದಾರೆ. ಆಗ ಶಾಲೆಗೆ ದಸರಾ ರಜೆಯೂ ಇರುವುದರಿಂದ ಶಾಲಾಮಕ್ಕಳಿಗೆ ಚಿತ್ರ ನೋಡಲು ಅನುಕೂಲವಾಗುತ್ತದೆಂದು ಹರ್ಷ್ ತಿಳಿಸಿದರು.

ವಿ. ಮನೋಹರ್ ಅವರು ಸಾಹಿತ್ಯ ಮತ್ತು ಸಂಗೀತ ಒದಗಿಸಿದ್ದಾರೆ. ಜೆ.ಎಮ್. ಪ್ರಹ್ಲಾದ್ ಸಂಭಾಷಣೆ ಬರೆದಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada