ಸುದ್ದಿಯಲ್ಲೇ ಸಿನಿಮಾ ಮಾಡುತ್ತಿರುವ ದುನಿಯಾ ರಶ್ಮಿ
ದುನಿಯಾ ರಶ್ಮಿ ಈಗೆಲ್ಲಿದ್ದಾಳೆ? ಆಕೆಯನ್ನು ಕೇಳದಿದ್ದರೇ ಬೆಟರ್. ತಮಿಳು, ಮಲೆಯಾಳಂ ಹಾಗೂ ತೆಲುಗು ಚಿತ್ರರಂಗದಲ್ಲಿ ತಾನು ಬ್ಯುಸಿ ಎಂದು ಹೇಳಿಕೊಳ್ಳುತ್ತಿರುವ ರಶ್ಮಿ, ಅಭಿನಯಿಸುತ್ತಿರುವ ಒಂದಾದರೂ ಚಿತ್ರದ ಹೆಸರು ಹೇಳಿದರೆ ಕೇಳಿ. ಅಷ್ಟಕ್ಕೂ ಈಕೆಯನ್ನು ಈಗ ನೆನಪಿಸಿಕೊಳ್ಳುವ ಕಾರಣವೇನು ಗೊತ್ತೇ? ಸ್ವರಾಂಜಲಿ ಚಿತ್ರಕ್ಕೆ ಈಕೆ ಕೊಡುತ್ತಿರುವ ಸಖತ್ ಕಿರಿಕ್.
ಸ್ವರಾಂಜಲಿ ಚಿತ್ರದಲ್ಲಿ ನಟಿಸುತ್ತಿದ್ದ ಈ ರಶ್ಮಿ, ಇದ್ದಕಿದ್ದಂತೆ ಶೂಟಿಂಗ್ ಗೆ ಕೈಕೊಡಲು ಶುರುವಿಟ್ಟಿದ್ದಾಳೆ. ಮೂರೂ ಮುಕ್ಕಾಲು ಲಕ್ಷಕ್ಕೆ ಸಂಭಾವನೆ ನಿಗದಿಪಡಿಸಿಕೊಂಡಿದ್ದ ಈಕೆ, ಶೂಟಿಂಗ್ ಗೆ ಚಕ್ಕರ್ ಹಾಕಿದ್ದರಿಂದ ನಿರ್ದೇಶಕ ಎಂ ಎಸ್ ಶ್ರೀನಿವಾಸ್, ಇನ್ನೊಬ್ಬ ನಾಯಕಿ ಸ್ಪೂರ್ತಿಯ ಪಾತ್ರವನ್ನು ಬೆಳೆಸಿ ಆಕೆಗೆ ಹೆಚ್ಚು ಸ್ಕೋಪ್ ಕೊಟ್ಟು ಚಿತ್ರೀಕರಣ ಮುಂದುವರಿಸಿದ್ದಾರೆ.
ನಾಯಕಿ ರಶ್ಮಿಯದು ಈ ಕತೆಯಾದರೆ ನಾಯಕ ರಮಣ್ ದು ಇನ್ನೊಂದು ಕತೆ. "ತೆಲುಗಿನಲ್ಲಿ ಇಪ್ಪತೈದು ಲಕ್ಷ ತಗೋತೀನಿ, ಇಲ್ಲಿ ನಂಗೆ ಹನ್ನೆರಡು ಲಕ್ಷ ಕೊಡಿ" ಎಂದಿದ್ದಾನೆ. ರಾಜಕಾರಣಿಗಳ ವಶೀಲಿ ಮೂಲಕ ಬಂದಿದ್ದ ಈತ, ಆ ಮೂಲಕ ರು. 8 ಲಕ್ಷ ಜೇಬಿಗಿಳಿಸಿದ್ದಾನೆ. ರಮಣ್-ರಶ್ಮಿ ರಾದ್ಧಾಂತದಿಂದ ಸ್ವರಾಂಜಲಿಯಲ್ಲಿ ಅಪಸ್ವರ ಮೂಡಿದೆ. ಇನ್ನು ಚಿತ್ರೀಕರಣ ಮುಗಿಸಿ ಬರುವಷ್ಟರಲ್ಲಿ, ಸ್ವರಾಂಜಲಿ 'ಭಾಷ್ಪಾಂಜಲಿ'ಯಾದರೂ ಅಚ್ಚರಿಯಿಲ್ಲ. (ಒನ್ ಇಂಡಿಯಾ ಕನ್ನಡ)


Click it and Unblock the Notifications











