»   » ಹಳೆ ಚಿತ್ರ 'ಮಠ' ಸಂವಾದದಲ್ಲಿ ಕಂಡ ಹೊಸತನ

ಹಳೆ ಚಿತ್ರ 'ಮಠ' ಸಂವಾದದಲ್ಲಿ ಕಂಡ ಹೊಸತನ

By Staff
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಕನ್ನಡ ಸಾಹಿತ್ಯ.ಕಾಂನವರು ಜುಲೈ 20ರಂದು ನಟ ಜಗ್ಗೇಶ್ ಅವರ ನೂರನೇ ಚಿತ್ರ 'ಮಠ' ಪ್ರದರ್ಶನ ಮತ್ತು ಸಂವಾದ ಹಮ್ಮಿಕೊಂಡಿದ್ದರು. ಮೊದಲಿಗೆ ನನಗೆ ಈ ವಿಷಯ ತಿಳಿದಾಗ 'ಮಠ'ಕ್ಕೂ ಕನ್ನಡ ಸಾಹಿತ್ಯ.ಕಾಂಗೂ ಏನು ಸಂಬಂಧ? ಅವರು ಯಾಕೆ ಈ ಸಿನಿಮಾ ಪ್ರದರ್ಶನ ಮತ್ತು ಸಂವಾದ ಇಟ್ಟುಕೊಂಡಿದ್ದಾರೆ ಅನಿಸಿತು. ಸ್ವಭಾವತಃ ನಾನು ಒಬ್ಬ ಸಿನಿಮಾಪ್ರೇಮಿಯಾಗಿದ್ದ ಕಾರಣ 'ಮಠ' ಚಿತ್ರವನ್ನು ಈಗಾಗಲೇ ನೋಡಿ ಮೆಚ್ಚಿದ್ದರೂ ಮತ್ತೊಮ್ಮೆ ನೋಡೋಣವೆನಿಸಿ ನನ್ನ ಐದಾರು ಗೆಳೆಯರೊಂದಿಗೆ ಹೋದೆ. ಜೊತೆಗೆ ಚಿತ್ರ ಸಂವಾದದೆಡೆಗೊಂದು ಕುತೂಹಲವಿತ್ತು.

  * ಕೆ ಟಿ ಸತೀಶ್ ಗೌಡ

  ಮೊದಲಿಗೆ ಕನ್ನಡಸಾಹಿತ್ಯ.ಕಾಂನ ಅರೇಹಳ್ಳಿ ರವಿಯವರು ಚಿತ್ರತಂಡ ಮತ್ತು ನೆರೆದಿದ್ದ ಪ್ರೇಕ್ಷಕರನ್ನು ಸ್ವಾಗತಿಸಿದರು, ನಂತರ ಆರ್.ಎನ್.ಜಯಗೋಪಾಲ್ ಮತ್ತು ಎಂ.ಪಿ.ಶಂಕರ್ ಇವರ ಆತ್ಮಕ್ಕೆ ಆಗಮಿಸಿದ್ದ ಪೇಕ್ಷಕರಿಂದ 1 ನಿಮಿಷ ಮೌನಾಚರಣೆ ಮೂಲಕ ಗೌರವ ಸೂಚಿಸಲಾಯಿತು. ಕನ್ನಡಸಾಹಿತ್ಯ.ಕಾಂನ 10 ನಿಮಿಷದ ಕಿರುಚಿತ್ರ ಕೆ.ಎಸ್.ಸಿ ಯವರು 8 ವರ್ಷಗಳಿಂದ ಮಾಡಿದ ಸಾಧನೆಗಳ ಕಿರುಪರಿಚಯ ಮಾಡಿಕೊಟ್ಟ ನಂತರ 'ಮಠ' ಚಿತ್ರ ಪ್ರದರ್ಶನ ತುಂಬಿ ತುಳುಕುತ್ತಿದ್ದ ರೇಣುಕಾಂಬ ಪ್ರಿವ್ಯೂ ಥಿಯೇಟರ್‌ನಲ್ಲಿ ಆರಂಭವಾಯಿತು.

  'ಮಠ' ಚಿತ್ರದ ಬಗ್ಗೆ ನಾನು ವಿಮರ್ಶೆ ಮಾಡಲು ಹೊರಟಿಲ್ಲ. ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಚಾರವೇ ಆಗಿರುವುದರಿಂದ ಒಂದೆರಡು ಮಾತು ಹೇಳಲು ಇಷ್ಟ ಪಡುವೆ. ಈ ಚಿತ್ರದ ಪರಿಕಲ್ಪನೆ ತುಂಬಾ ಚೆನ್ನಾಗಿದ್ದರೂ, ನಮ್ಮ ಸಮಾಜದಲ್ಲಿ ಇಂಥಹ ಕೆಟ್ಟ ಮಠಗಳೂ ಇರಬಹುದು; ಹುಷಾರಾಗಿರಿ ಎಂದು ಸಮಾಜಕ್ಕೆ ನೇರವಾಗಿ ಮುಖಕ್ಕೆ ಹೊಡೆದಂತೆ ನಿರೂಪಿಸಿರುವ ನಿರ್ದೇಶನಕ ಗುರುಪ್ರಸಾದ್‍ರವರ ಧೈರ್ಯವನ್ನು ಮೆಚ್ಚುವಂಥದ್ದೆ. ಚಿತ್ರ ನೋಡಿದ ಸುಮಾರು 80% ಜನರ ಅಭಿಪ್ರಾಯ ಚಿತ್ರದಲ್ಲಿರುವ ಅನೇಕ ಸಂಭಾಷಣೆಗಳು ಮುಜುಗರ ತರುವಂತೆ ಇತ್ತು ಎಂದು ಅಭಿಪ್ರಾಯಪಟ್ಟಿದ್ದೂ ಕಂಡುಬಂತು(ಇದಕ್ಕೆ ನಿರ್ದೇಶಕರು ತುಂಟತನದ ಕಾರಣ ಕೊಟ್ಟು ಜಾರಿಕೊಂಡದ್ದು ಬೇರೆ ಮಾತು). ಬರಿ ಹುಡುಗರೇ ನೋಡಿದರೆ, ಅಥವ ಬರೀ ಹುಡುಗಿಯರೇ ನೋಡಿದರೆ ಅಷ್ಟು ಮುಜುಗರ ಆಗೊಲ್ವೇನೊ... ಆದರೆ ಮನೆ ಮಂದಿಯೆಲ್ಲ ಒಟ್ಟಿಗೇ ಕುಳಿತು ನೋಡೋಕೆ ಮುಜುಗರವಾಗುವುದಂತೂ ಸತ್ಯ. ಆ ಕೆಲವು ಸಂಭಾಷಣೆ ಇರದೆ ಇದ್ದಿದ್ದರೂ ಚಿತ್ರಕ್ಕೆ ಏನು ತೊಂದರೆಯಾಗುತ್ತಿರಲಿಲ್ಲ. ಇದರ ಬಗ್ಗೆ ಮುಂದೆ ಸಂವಾದದ ವಿವರಗಳಲ್ಲಿ ಹೇಳುವೆ. ಇದೊಂದು ದೂರನ್ನು ಬಿಟ್ಟರೆ 'ಮಠ' ಒಂದು ಒಳ್ಳೇ ಪ್ರಯತ್ನ.

  ಲಾಂಗು-ಮಚ್ಚು-ಹೂವು-ಪ್ರೀತಿ ಬರೀ ಇಂಥದ್ದೇ ಸಿದ್ಧಸೂತ್ರಗಳಿಗೆ ಅಂಟಿಕೊಳ್ಳದೆ ಸಮಾಜದಲ್ಲಿ ನಡೆಯುತ್ತಿರಬಹುದಾದ, ಅದೂ ಕೆಲವು ಮಠಗಳಲ್ಲಿ ನಡೆಯುತ್ತಿದೆಯೆನ್ನಲಾದ ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ ಗುರುಪ್ರಸಾದ್. ಚಿತ್ರಕಥೆ ಏಕತಾನತೆಯಲ್ಲಿ ಹೋದರೆ ಪ್ರೇಕ್ಷಕರಿಗೆ ಬೋರ್ ಹೊಡೆಯದಿರಲಿ ಅಂತ ಉಪಕಥೆಗಳನ್ನು ಸೇರಿಸಿರುವ ರೀತಿ ನಿಜಕ್ಕು ಖುಷಿ ಕೊಡುತ್ತದೆ. ಸಣ್ಣ ಸಣ್ಣ ಬಿಟ್‍ಗಳನ್ನು ಸರಿಯಾದ ಕಡೆ ಉಪಯೋಗಿಸಿ ಎಲ್ಲರು ಹೊಟ್ಟೆ ಹುಣ್ಣಾಗುವಂತೆ ನಗಿಸುವಂತೆ ಮಾಡಿರುವುದಂತೂ ಒಂದು ಪ್ಲಸ್ ಪಾಯಿಂಟ್. ಚಿತ್ರದಲ್ಲಿ ನಟಿಸಿರುವವರೆಲ್ಲ ತುಂಬಾ ಚೆನ್ನಾಗಿ ಅಭಿನಯಿಸಿರುವರೆಂದು ಹೇಳಲೇಬೇಕಾಗಿಲ್ಲ ಅಂದುಕೊಳ್ಳುವೆ. ಚಿತ್ರದ ನಂತರ ಪ್ರೇಕ್ಷಕರಿಗೆ ಬಿಸಿ ಬಿಸಿ ಮೆಣಸಿನಕಾಯಿ ಬಜ್ಜಿ, ಪಕೋಡ, ಕಾಫಿ ಟೀ ಕಾದಿತ್ತು.

  ಅರ್ಥಗರ್ಭಿತ ಸಂವಾದ

  ಸಂವಾದದಲ್ಲಿ ಚಿತ್ರದ ನಿರ್ದೇಶಕ ಗುರುಪ್ರಸಾದ್, ಸಹನಿರ್ದೇಶಕ ದೇವದತ್ತ(ಈಗ ಬಹುನಿರೀಕ್ಷಿತ 'ಸೈಕೋ' ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ), ಮಠ ಚಿತ್ರದಲ್ಲಿ ಕುಡುಕನ ಪಾತ್ರ ಮಾಡಿರುವ ತಬಲನಾಣಿ, ತಲೆಹರಟೆ ವಿಜ್ಞಾನಿ ಸುಧೀಂದ್ರ, ಭಿಕ್ಷುಕ ಪಾತ್ರದಾರಿ ಪ್ರಣವ ಮೂರ್ತಿ, ಟೆಂಟ್ ರಾಜಣ್ಣ ಪಾತ್ರದ ಬಿ ವಿ ರಮೇಶ್ ಇವರೆಲ್ಲ ಪಾಲ್ಗೊಂಡರು. ಸಂವಾದದ ಸಮನ್ವಯಕಾರರಾಗಿ ಎದ್ದೇಳು ಮಂಜುನಾಥ' ಚಿತ್ರದ ನಿರ್ಮಾಪಕರಲ್ಲೊಬ್ಬರೂ, ಪತ್ರಕರ್ತರೂ ಆಗಿರುವ ಸನತ್‌ಕುಮಾರ್(ಹಿರಿಯ ಪತ್ರಿಕೋದ್ಯಮಿ ಬಿವಿ ವೈಕುಂಠರಾಜು ರವರ ಪುತ್ರ) ಕಾರ್ಯಕ್ರಮ ನಡೆಸಿಕೊಟ್ಟರು. ನಟಿಯರಾದ ನಮಿತಾ ರಾವ್, ರೂಪಾ ಐಯ್ಯರ್ ಸಂವಾದದಲ್ಲಿ ಆಸಕ್ತಿಯಿಂದ ಪಾಲ್ಗೊಂಡರು.

  ಮೊಟ್ಟಮೊದಲ ಪ್ರಶ್ನೆ ನಾನು ಈ ಹಿಂದೆಯೇ ಹೇಳಿದಂತೆ, ಚಿತ್ರದಲ್ಲಿ ಪ್ರೇಕ್ಷಕರಿಗೆ ಮುಜುಗರ ತರುವಂತ ಸಂಭಾಷಣೆಯ ಅಗತ್ಯ ಇತ್ತೆ? ಇದೇ ಪ್ರಶ್ನೆಯನ್ನು ಅನೇಕರು ಅನೇಕ ರೀತಿಯಲ್ಲಿ ಮೈಲ್ ಮುಖಾಂತರವೂ ಪ್ರಶ್ನಿಸಿದ್ದರು. ಈ ಪ್ರಶ್ನೆಗೆ ಗುರುಪ್ರಸಾದ್, "ಇದರಲ್ಲಿ ಅಶ್ಲೀಲ ಸಂಭಾಷಣೆಯೇ ಇಲ್ಲ. ಇದ್ದಿದ್ದರೆ ಈ ಚಿತ್ರಕ್ಕೆ ವಯಸ್ಕರ ಚಿತ್ರ ಅಂತ ಎ' ಸರ್ಟಿಫಿಕೇಟ್ ಕೊಡಬೇಕಿತ್ತು. ಸೆನ್ಸಾರ್ ಮಂಡಳಿ ಅಧ್ಯಕ್ಷರಾದ ಚಂದ್ರಶೇಖರ್‌ರವರು ಈ ಚಿತ್ರವನ್ನು ಇದೇ ಚಿತ್ರಮಂದಿರದಲ್ಲಿ ವೀಕ್ಷಿಸಿ ಹೊಗಳಿದಂಥ ಚಿತ್ರ, ನಾನು ಈ ಚಿತ್ರವನ್ನು ಮಾಡಿದ್ದು ನಿರ್ಮಾಪಕರಿಗೆ ಮತ್ತು ಜಗ್ಗೇಶ್ ಅಭಿಮಾನಿಗಳಿಗೆ, ನಿರ್ಮಾಪಕ ಹಣ ಹಾಕಿದ ಮೇಲೆ ಅವನಿಗೆ ಲಾಭ ಕೊಡಿಸುವುದಕ್ಕಿಂತ ಕೊನೆಪಕ್ಷ ಅಸಲನ್ನಾದರು ಕೊಡಿಸುವುದು ಒಬ್ಬ ನಿರ್ದೇಶಕನ ಜವಾಬ್ದಾರಿ ಆಗಿರುತ್ತೆ. ಕೊನೆಪಕ್ಷ ಜಗ್ಗೇಶ್ ಅಭಿಮಾನಿಗಳಾದರೂ ಮೊದಲ 2 ವಾರ ನೋಡಿ ಖುಷಿಪಟ್ಟರೆ ನಂತರ ಸಿನೆಮ ಮುಂದಿನ ವಾರಗಳಲ್ಲಿ ಚಿತ್ರಮಂದಿರಗಳಲ್ಲಿ ಕಚ್ಚಿಕೊಳ್ಳಲು ಸುಲಭವಾಗುತ್ತೆ. ಅದಕ್ಕೋಸ್ಕರ ಅಂತಲೇ ಕೆಲವು ಸಂಭಾಷಣೆಗಳ ಅಗತ್ಯ ಇತ್ತು. ಇದೊಂದು ಕಮರ್ಷಿಯಲ್ ಚಿತ್ರ. ಹಣ ಮಾಡೋಕೆ ಸಿನೆಮಾ ಮಾಡಿರುವುದರಿಂದ ನಾವು ಇಂತಹ ರಾಜಿಗಳನ್ನು ಮಾಡಿಕೊಳ್ಳಲೇಬೇಕು. ನನಗೇನು ಇದರಲ್ಲಿ ಅಶ್ಲೀಲ ಅನಿಸಲಿಲ್ಲ. ನೀವು ಒಬ್ಬೊಬ್ಬರೇ ನೋಡುವಾಗ ಇಲ್ಲದೇ ಇರುವ ಮುಜುಗರ ಇಬ್ಬರು ನೋಡುವಾಗ ಬರುತ್ತದೆ. ಮುಜುಗರ ಇರುವುದು ನಿಮ್ಮಲ್ಲಾ? ಚಿತ್ರದಲ್ಲಾ? ನೀವು ಬೇಗ ದೊಡ್ಡವರಾಗದೆ ಇದ್ದರೆ ಅದು ನನ್ನ ತಪ್ಪಲ್ಲ. ಬೇಗ ದೊಡ್ಡವರಾಗಿ!'" ಎಂದು ತಮಾಷೆಯಾಗಿ ಹಾರಿಕೆ ಉತ್ತರ ಕೊಟ್ಟರು.(ಚಿತ್ರಕ್ಕೆ ಎ' ಸರ್ಟಿಫಿಕೇಟ್ ತೆಗೆದುಕೊಂಡು ಈ ಉತ್ತರ ಕೊಟ್ಟಿದ್ದರೆ ಅರ್ಥ ಇರುತ್ತಿತ್ತು)

  ನಂತರದ ಪ್ರಶ್ನೆ ಸ್ವಾಮಿ ಎಂಬುವವರದು, ಚಿತ್ರ ವಿಭಿನ್ನ ರೀತಿಯಲ್ಲಿ ಮೂಡಿಬಂದಿದೆ, ಚಿತ್ರದಲ್ಲಿ ಏನೂ ಕಥೆ ಇಲ್ಲದೆ ಹೇಗೆ ಸಿನಿಮಾ ಮಾಡಿದ್ರಿ? ಹಾಗೆ ಉಪಕಥೆ ಅಳವಡಿಸಿದ್ದು ತುಂಬಾ ಚೆನ್ನಾಗಿದೆ. ಉಪಕಥೆ ಅಳವಡಿಸುವ ಯೋಜನೆ ನಿಮಗೆ ಹೇಗೆ ಬಂತು? ನಿಮ್ಮಂತಹ ಪ್ರತಿಭಾವಂತ ನಿರ್ದೇಶಕನನ್ನು ನಮ್ಮ ಗಾಂಧಿನಗರ ಇನ್ನೂ ಯಾಕೆ ಗುರುತಿಸಿಲ್ಲ? ಎಂದು ಪ್ರಶ್ನೆಗಳ ಸರಮಾಲೆಯನ್ನೇ ಹರಿಸಿದರು.

  ಇದಕ್ಕೆ ಗುರುಪ್ರಸಾದ್ ಉತ್ತರಿಸುತ್ತಾ, "ಚಿತ್ರದಲ್ಲಿ ಕಥೆ ಇಲ್ಲ ಅಂತ ಯಾರು ಹೇಳಿದ್ದು? ನನ್ನಲ್ಲಿ ಒಂದು ಒಳ್ಳೇ ಕಲೆ ಇದೆ. ಏನು ಅಂದರೆ, ಯಾವುದೇ ಕಥೆಯನ್ನು ಜನರಿಗೆ ತುಂಬಾ ಚೆನ್ನಾಗಿ ಹೇಳೋದು. ಆದ್ದರಿಂದಲೇ ನಾನು ನಿರ್ದೇಶಕ ಆಗಿರುವುದು. ಇನ್ನು ಉಪಕಥೆ ಬಗ್ಗೆ ಹೇಳಬೇಕು ಅಂದರೆ ಮಠದಲ್ಲಿರುವ ಕಾವಿ ಬಣ್ಣ ನೀರಸ ಮೂಡಿಸುತ್ತೆ. ಮಠದ ಬಗ್ಗೇನೆ ಚಿತ್ರದಲ್ಲಿ ತೋರಿಸುತ್ತಿದ್ದರೆ ಒಂದು ಹಂತದಲ್ಲಿ ಪ್ರೇಕ್ಷಕರಿಗೆ ಬೇಜಾರಾಗುತ್ತಿತ್ತು. ಈಗಲು ನೀವು ಉಪಕಥೆಗಳನ್ನು ತೆಗೆದು ಹಾಕಿ ಸಿನೆಮಾ ನೋಡಿ, ಸಿನೆಮಾ ಇಷ್ಟ ಆಗೊಲ್ಲ. ಅದಕ್ಕೆ ಉಪಕಥೆಗಳ ಮೂಲಕ ಪ್ರೇಕ್ಷಕರನ್ನು 2-3 ನಿಮಿಷ ಆಚೆಕರೆದುಕೊಂಡು ಹೋಗಿ ಮತ್ತೆ ತಿರುಗಿ ಮುಖ್ಯಕಥೆಗೆ ಬರುತ್ತಿದ್ದೆ. ಇನ್ನು ನಿಮ್ಮ ಇನ್ನೊಂದು ಪ್ರಶ್ನೆ ನಿಮ್ಮನ್ನು ಗಾಂಧಿನಗರ ಇನ್ನು ಗುರುತಿಸಿಲ್ಲ ಯಾಕೆ ಅಂತ, ಈ ಮಾತನ್ನು ನಾನು ಒಪ್ಪುವುದಿಲ್ಲ. ಈಗಲೂ ನನಗೆ ಸುಮಾರು 7-8 ನಿರ್ಮಾಪಕರು ಚಿತ್ರ ಮಾಡಿಕೊಡಿ ಎಂದು ಮುಂದೆ ಬಂದಿದ್ದಾರೆ. ಆದರೆ ನಾನೇ ಒಪ್ಪುತ್ತಿಲ್ಲ. ಕಾರಣ ಆ ನಿರ್ಮಾಪಕರಿಗೆಲ್ಲ ಯಾವುದೋ ಒಂದು ಫಾರ್ಮ್ಯುಲ ಚಿತ್ರವೇ ಬೇಕು, ಲಾಂಗು ಮಚ್ಚು 4 ಫೈಟ್ 6 ಸಾಂಗ್ 2 ರೇಪ್ ಇವೆಲ್ಲ ಇರುವಂಥ ಸಿನೆಮಾ ಬೇಕು ಅನ್ನುತ್ತಾರೆ. ನಾನು ಅಂತಹ ಚಿತ್ರ ಮಾಡೋಕೆ ತಯಾರಿಲ್ಲ."

  "ಮೊನ್ನೆ ನಾನು ಎಂಜಿ ರಸ್ತೆಯಲ್ಲಿ ಹೋಗುತ್ತಿದ್ದಾಗ ಒಬ್ಬ ಚಿತ್ರ ನಿರ್ಮಾಪಕರು ಸಿಕ್ಕಿದರು. ಅವರಿಗೆ ನಾನು ಯಾರು ಅಂತ ಗೊತ್ತಾಗಲಿಲ್ಲ. ನಾನು ಅವರ ಬಳಿ ಹೋಗಿ ಸಾರ್ 30 ರೂಪಾಯಿ ಕೊಡಿ ಸಾರ್ ಅಂದೆ. ಅವರು ಯಾಕೆ ಅಂದರು. ನೀವು ಕೊಡಿ ಹೇಳುವೆ ಅಂದೆ. ಅವರು ಯಾಕೆ ಹೇಳು, ನಾನ್ಯಾಕೆ 30ರೂ ಕೊಡಲಿ ಆಗೊಲ್ಲ ಅಂದರು. ನಾನು ಹೇಳಿದೆ- ಮೊನ್ನೆ ನಿಮ್ಮ ಸಿನೆಮಾ ನೋಡಿದೆ, 6 ಕೋಟಿ ಖರ್ಚುಮಾಡಿ ತೆಗೆದಿದ್ರಿ, 5 ನಿಮಿಷ ಕುಳಿತುಕೊಳ್ಳೋಕೆ ಆಗಲಿಲ್ಲ, ನನ್ನ ಟಿಕಿಟ್ ಹಣ 30ರೂ ದಂಡ ಆಯ್ತು. ವಾಪಸ್ ಕೊಡಿ ಸಾರ್ ಅಂದೆ. ಅವರ ಮುಖ ಪೆಚ್ಚಾಯ್ತು. ಪ್ರತಿ ಪ್ರೇಕ್ಷಕನೂ ಹೀಗೆ ಮಾಡಿದರೆ ಒಳ್ಳೇ ಸಿನೆಮಾ ಬರುತ್ತೇನೊ? ಹಾಗೆ ಇನ್ನೊಬ್ಬ ನಿರ್ಮಾಪಕ ನೀನೇನು ಸಿನೆಮಾ ತೆಗಿತೀಯಾ ಅಂದಿದ್ದೋರು ಈದಿನ ಕಾಲ್ ಮಾಡಿ ನನಗೊಂದು ಚಿತ್ರ ಮಾಡಿಕೊಡು ಅಂತ ಕರಿತಾ ಇದಾರೆ. ಹಾಗೆ ಗಾಂಧಿನಗರದಲ್ಲಿ ನನ್ನ ಬಗ್ಗೆ ಇರುವ ಅಭಿಪ್ರಾಯವೇ ಬೇರೆ, ಬೇರೆ ನಿರ್ದೇಶಕರ ಬಗ್ಗೆ ಇರುವ ಅಭಿಪ್ರಾಯವೇ ಬೇರೆ. ನನ್ನ ಐಡೆಂಟಿಟಿ ಖಂಡಿತ ಗಾಂಧಿನಗರದಲ್ಲಿದೆ. ಅದಕ್ಕಿಂತ ಹೆಚ್ಚಾಗಿ ನನ್ನ ಸಿನೆಮಾ ನೋಡಿ ಸನತ್‍ರವರು ನನಗೆ ಎದ್ದೇಳು ಮಂಜುನಾಥ' ಚಿತ್ರ ನಿರ್ಮಿಸಲು ಮುಂದೆ ಬಂದರು. ನನ್ನ ಮುಂದಿನ ಚಿತ್ರ ಮನೆ ಮನೆ ಕಥೆ'ಯನ್ನು ಸಿದ್ಧಪಡಿಸಲು ಶುರು ಮಾಡಿರುವೆ. ಆದ್ದರಿಂದ ನನ್ನನ್ನು ಗಾಂಧಿನಗರ ಗುರುತಿಸಿಲ್ಲ ಎಂಬುದನ್ನು ನಾನು ಒಪ್ಪುವುದಿಲ್ಲ" ಎಂದರು.

  ನಂತರದ ಪ್ರಶ್ನೆ 'ಮಠ'ದ ಬಗ್ಗೆಯೇ ಚಿತ್ರ ಮಾಡಲು ಕಾರಣ ಏನು? ಅಂತ. ಈ ಚಿತ್ರ ಮಾಡಿದಾಗ ನಿಮಗೆ ಯಾವ ಮಠಗಳಿಂದಲೂ ಬೆದರಿಕೆ ಕರೆ ಬರಲಿಲ್ಲವೆ?

  "ಇತ್ತೀಚಿನ ದಿನಗಳಲ್ಲಿ ಮಠಗಳು ಮೊದಲಿನ ಹಾಗೆ ಇಲ್ಲ. ಸಮಾಜದಲ್ಲಿರುವ ಅಹಿತಕರ ಸಂಗತಿಗಳು ಮಠಗಳಲ್ಲೂ ನಡೆಯುತ್ತಿವೆ. ಇದು ನನ್ನ ಊಹೆ ಅಲ್ಲ. ನಾನು ಮಠಗಳ ಬಗ್ಗೆ ತುಂಬಾನೇ ರಿಸರ್ಚ್ ಮಾಡಿ ಅನೇಕ ದಾಖಲೆಗಳನ್ನು ಸಂಗ್ರಹಿಸಿ ಈ ಚಿತ್ರ ಮಾಡಿದ್ದು. ನಮ್ಮ ಜನರು ಯಾವುದೇ ಮಠದ ಬಗ್ಗೆ ಆಗಲಿ ಸ್ವಲ್ಪ ಹಿಂದೆ ಮುಂದೆ ಯೋಚಿಸಿ ಅದರ ಭಕ್ತರಾಗಲಿ ಎಂದು ತಿಳಿಸುವ ಸಲುವಾಗಿ ಈ ಚಿತ್ರ ಮಾಡಿರೋದು, ಎಲ್ಲಾ ಮಠಗಳು ಹೀಗೆಯೇ ಇವೆ ಅಂತ ನಾನು ಹೇಳಿಲ್ಲ-ಹೇಳಲ್ಲ. ಇನ್ನು ಬೆದರಿಕೆ ಕರೆಗಳು ಅಷ್ಟಾಗಿ ಬರಲಿಲ್ಲ. ಯಾವುದೋ ಒಂದು ಮಿಸ್ಡ್ ಕಾಲ್ ಪ್ರತಿ ದಿನ ಬರುತ್ತಿತ್ತು. ವಾಪಸ್ ಮಾಡಿದರೆ ಎತ್ತುತ್ತಾ ಇರಲಿಲ್ಲ. ಒಮ್ಮೆ ಬೇರೆ ನಂಬರಿಂದ ಮಾಡಿದಾಗ ತಿಳಿಯಿತು ಅದು ಮಂಗಳೂರಿನ ಬಳಿ ಇರುವ ಒಂದು ಮಠದ ಫೋನ್ ನಂಬರ್ ಅಂತ. ಅದು ಬಿಟ್ಟರೆ ಬೇರೆ ಯಾವ ಮಠದವರು ಮಾತಾಡಲಿಲ್ಲಾ ಅಕಸ್ಮಾತ್ ಮಾತಾಡಿದರೆ ಅವರ ಮಠದಲ್ಲೇ ನಡಿತಾ ಇರಬಹುದೇನೊ, ಅಂತ ಜನ ಅಂದುಕೊಂಡು ಬಿಟ್ಟರೆ ಆನ್ನೊ ಭಯವಿರಬಹುದು" ಎಂದರು ಗುರುಪ್ರಸಾದ್.

  ಮಠದಲ್ಲಿ ಅಶ್ಲೀಲ ಸಿಡಿ ನೋಡುತ್ತಾರೆ, ಅನೈತಿಕ ಚಟುವಟಿಗೆ ನಡೆಯುತ್ತದೆ, ಹೆಣ ಉರುಳುತ್ತದೆ ಎಂದೆಲ್ಲಾ ತೋರಿಸಿರುವುದು ಎಷ್ಟು ಸರಿ? ಇದು ಮಠಾಧೀಶರಿಗೆ ಅವಮಾನ ಮಾಡಿದ ಹಾಗಲ್ಲವೆ? ಎಂಬ ಪ್ರಶ್ನೆಗಳ ಬಾಣಗಳೇ ಗುರುಪ್ರಸಾದ್‌ರತ್ತ ತೂರಿಬಂದವು.

  "ನೋಡಿ ನಾನು ಇಲ್ಲದ್ದನ್ನು ಏನು ಚಿತ್ರಿಸಿಲ್ಲ. ನಾನು ಚಿತ್ರಿಸಿರುವುದಕ್ಕೆ ಅನೇಕ ಸಾಕ್ಷಿ-ಪುರಾವೆ ಖಂಡಿತ ಇದೆ. ಬೇಕಿದ್ದರೆ ನನ್ನ ಮನೆಗೆ ಬನ್ನಿ. ಎಲ್ಲಾ ದಾಖಲೆಗಳನ್ನು ತೋರಿಸುವೆ. ಈ ಚಿತ್ರದಲ್ಲಿ ಒಳ್ಳೆ ಮಠಗಳು ಇವೆ ಎಂದು ಸೂಕ್ಷ್ಮವಾಗಿಯೂ ತೋರಿಸಿದ್ದೇನೆ, ತಬಲಾ ನಾಣಿ ಮನೆ ಮುಂದೆ ಇಬ್ಬರು ಹುಡುಗರು ಇದ್ದಾರೆ. ಅವರು ಮಠದಲ್ಲೇ ಇದ್ದಾರೆ. ಅವರು ಬಂದು ಕೇಳಿದರು-ನಿಮಗೆ ಹೇಗೆ ಗೊತ್ತಾಯ್ತು ಮಠದಲ್ಲಿ ಸಿಡಿ ನೋಡುತ್ತಾರೆ ಅಂತ. ಒಂದು ಉದಾಹರಣೆಯೆಂದರೆ ನಾನು 'ಮಠ' ಚಿತ್ರದ ಚಿತ್ರಕತೆ ಮಾಡಿ ಮುಗಿಸಿ 3 ತಿಂಗಳಲ್ಲೇ ಕಂಚಿ ಮಠದಲ್ಲಿ ಹೆಣ ಬಿತ್ತು."

  ಮಠದಲ್ಲಿ ಶೂ ತೋರಿಸಿದ್ದು ಎಷ್ಟು ಸರಿ? ಎಂಬ ಪ್ರಶ್ನೆಗೆ ಗುರುಪ್ರಸಾದ್, ಮೇಲೆ ಹೇಳಿದಂತೆ ಏನೇನೋ ನಡಿಯುವಾಗ ಶೂ ತೋರಿಸೋದ್ರಲ್ಲಿ ಏನು ತಪ್ಪಿದೆ? ಎಂದರು.

  ಮಠ' ಅನ್ನೋದು ಸಂಸ್ಕೃತ ಶಬ್ದ. ಸಾವಿರಾರು ವರ್ಷಗಳಿಂದ ಗೌರವ ಗಳಿಸಿರುವಂತಹ ಪದವನ್ನು ಈ ಚಿತ್ರಕ್ಕೆ ಇಟ್ಟಿದ್ದು ಸರಿಯೆ?

  "ಈ ಶಬ್ದ ಯಾರ ಸ್ವತ್ತೂ ಅಲ್ಲ. ಚಿತ್ರ ಸಾಹಿತ್ಯದಲ್ಲಿ ಬಳಸಿರುವ ಎಲ್ಲವೂ, ಶೀರ್ಷಿಕೆಯೂ ಸೇರಿದಂತೆ-ಕನ್ನಡವೇ" ಎಂದರು.

  ಹೀಗೆ ಚರ್ಚೆ ನಡೆಯುತ್ತ ಗುರುಪ್ರಸಾದ್ ತಮ್ಮ ತಂಡವನ್ನು ಪರಿಚಯ ಮಾಡಿಕೊಡುತ್ತ ಒಬ್ಬೊಬ್ಬ ನಟರ ವಿಶೇಷತೆ ಬಗ್ಗೆ ತಿಳಿಸಿದರು. ಭಿಕ್ಷುಕನ ಪಾತ್ರದ ಪ್ರಣವಮೂರ್ತಿಯನ್ನು ಸ್ಕ್ರೀನ್ ಟೆಸ್ಟ್‌ಗೆ ಕರೆದರೆ ಆತ ಮನೆಯಿಂದಲೇ ಭಿಕ್ಷುಕನ ವೇಷ ಧರಿಸಿಕೊಂಡು ಗಾಂಧಿನಗರಕ್ಕೆ ಬರುವ ಹೊತ್ತಿಗೆ 35ರೂಗಳನ್ನು ಕಲೆಕ್ಟ್ ಮಾಡಿಕೊಂಡು ಬಂದಿದ್ದು, ತಬಲ ನಾಣಿ ಕುಡುಕನ ಪಾತ್ರ ಗಿಟ್ಟಿಸಲು ಬೀಡ ಅಂಗಡಿಗೆ ಹೋಗಿ ಕುಡುಕನ ಹಾಗೆ ನಾಟಕ ಮಾಡಿ ಬೀಡ ಅಂಗಡಿಯವನನ್ನು ಗೋಳು ಹುಯ್ದುಕೊಂಡ ಕತೆಯನ್ನು ಅಭಿನಯದ ಮೂಲಕ ತೋರಿಸಿ ಪ್ರೇಕ್ಷಕರನ್ನು ರಂಜಿಸಿದರು. 'ಮಠ' ಚಿತ್ರದ ಟೆಂಟ್ ರಾಜಣ್ಣ ಪಾತ್ರಧಾರಿ ಬಿ ವಿ ರಮೇಶ್ ನೆರೆದಿದ್ದವರ ಪ್ರತಿ ಮಾತಿನಲ್ಲೂ ದ್ವಂದ್ವಾರ್ಥ ಹುಡುಕಿ ಅವರನ್ನು ದಂಗು ಬಡಿಸುತ್ತಿದ್ದುದು ತಮಾಷೆಯಾಗಿತ್ತು. ಚಿತ್ರದಲ್ಲಿ ನಟಿಸಿರುವ ಶ್ರೀನಿವಾಸ ಮೂರ್ತಿ, ಗುರುಪ್ರಸಾದ್ ಸಹವರ್ತಿ ವೆಂಕಟೇಶ್ ಮುಂತಾದವರು ಕೂಡ ಸಂವಾದದಲ್ಲಿ ಭಾಗವಹಿಸಿದ್ದರು.

  ಸುದೀರ್ಷವಾದ ಮತ್ತು ಅರ್ಥಗರ್ಭಿತ ಚರ್ಚೆ ಮುಗಿಯುವುದು ಯಾರಿಯೂ ಬೇಕಿರಲಿಲ್ಲ. ಆದರೆ ಸಮಯ ಕೇಳಬೇಕಲ್ಲ. ಸಂವಾದದ ಸಮಯ ಮುಗಿದರೂ ಅನೇಕರು ನಿರ್ದೇಶಕರೊಡನೆ ಬಗೆಹರಿಯದ ಪ್ರಶ್ನೆಗಳನ್ನು ಬಿಡುತ್ತಿದ್ದರು. ಇಂಥದೇ ಚರ್ಚೆ ಇತರ ಚಿತ್ರಗಳಿಗೂ ನಡೆದರೆ ಇನ್ನೂ ಉತ್ತಮವಾದ ಕನ್ನಡ ಚಿತ್ರಗಳನ್ನು ತೆಗೆಯಲು ಸಹಕಾರಿಯಾಗಬಲ್ಲದು ಎಂಬ ಸಂಗತಿ ನನ್ನ ಮನದಾಳದಲ್ಲಿ ಕೊರೆಯುತ್ತಲೇ ಇದೆ.

  ಜಗ್ಗೇಶರ ಮಠ ಚಿತ್ರ ಹೊಸ ಸಂವಾದದ ಚಿತ್ರ ಸಂಪುಟ

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more