»   » ಕನ್ನಡದ ಕುವರಿ ಮೇಘನಾ ತಮಿಳಿನಲ್ಲಿ ಪಾದಾರ್ಪಣೆ

ಕನ್ನಡದ ಕುವರಿ ಮೇಘನಾ ತಮಿಳಿನಲ್ಲಿ ಪಾದಾರ್ಪಣೆ

Posted By:
Subscribe to Filmibeat Kannada

ನಟ ಸುಂದರ್ ರಾಜ್ ಹಾಗೂ ನಟಿ ಪ್ರಮೀಳಾ ಜೋಷಾಯ್ ಅವರ ಮುದ್ದಿನ ಕುವರಿ ಮೇಘನಾ ಕನ್ನಡ ಚಿತ್ರರಂಗದ ಕದ ತಟ್ಟುವ ಮುನ್ನವೇ, ತಮಿಳಿನ ಪ್ರಸಿದ್ಧ ಕವಿತಾಲಯ ಬ್ಯಾನರ್ ನ ಕೃಷ್ಣಲೀಲೈ ಚಿತ್ರದ ಮೂಲಕ ತಮಿಳರ ಪಾಲಾಗಿದ್ದಾಳೆ. ಮೇಘನಾ ಅವರನ್ನು ತಮ್ಮ ಚಿತ್ರದಲ್ಲಿ ನಟಿಸುವಂತೆ ಖ್ಯಾತ ನಿರ್ದೇಶಕ ಕೆ.ಬಾಲಚಂದರ್ ಕೇಳಿದಾಗ, ಕನ್ನಡದ ತಾರಾದಂಪತಿಗಳ ಆನಂದಕ್ಕೆ ಪಾರವೇ ಇಲ್ಲವಾಯಿತಂತೆ. ತಮ್ಮನ್ನು ಚಿತ್ರರಂಗಕ್ಕೆ ಪರಿಚಯಿಸಿದ ಸಿನಿಮಾ ಗುರು ಬಾಲಚಂದರ್ ಅವರ ಕೋರಿಕೆಯನ್ನು ಮನ್ನಿಸಿ, ಮಗಳನ್ನು ತಮಿಳು ಚಿತ್ರರಂಗದ ಮೂಲಕ ಸಿನಿ ಪ್ರಪಂಚಕ್ಕೆ ಪರಿಚಯಿಸಲು ಒಪ್ಪಿಗೆ ನೀಡಿದ್ದಾರೆ.

ತಪ್ಪುತಾಳಂಗಲ್ ಚಿತ್ರದ ಮೂಲಕ ನಾನು ಹಾಗೂ ನನ್ನ ಪತ್ನಿ ಪ್ರಮೀಳಾಗೆ ಚಿತ್ರರಂಗ ಪರಿಚಯ ಮಾಡಿಸಿದ ಕೆಬಿ ಸಾರ್ ಅವರ ಚಿತ್ರದಲ್ಲಿ ನಮ್ಮ ಮಗಳಿಗೆ ಅವಕಾಶ ಸಿಕ್ಕಿರುವುದು ನಿಜಕ್ಕೂ ಅದೃಷ್ಟ . ಮನೆಯಲ್ಲಿ ಎಂದೂ ಸಿನಿಮಾಗಳ ಬಗ್ಗೆ ಆಕೆ ಹೆಚ್ಚು ಚರ್ಚಿಸಿದ್ದಿಲ್ಲ. ನಾವೆಲ್ಲಾ ಅವಳ ತಾತಾನ ರೀತಿ ಮಿಲಿಟರಿಗೆ ಸೇರುತ್ತಾಳೆ ಎಂದು ಎನಿಸಿದ್ದೆವು. ಎನ್ ಸಿಸಿ ಕೆಡೆಟ್ ಆಗಿ ಸೈನ್ಯದ ಬಗ್ಗೆ ಆಸಕ್ತಿ ಹೊಂದಿದ್ದಳು ಎಂದು ಸುಂದರ್ ರಾಜ್ ಹೇಳುತ್ತಾರೆ.

ಈ ಬಗ್ಗೆ ಮೇಘನಾ ಅವರನ್ನು ಕೇಳಿದರೆ 'ಪಿಯೂ ಮುಗಿದ ನಂತರ ಭವಿಷ್ಯದ ಬಗ್ಗೆ ಚಿಂತಿಸುತ್ತಿದೆ. ತಾರೆ ಜಮೀನ್ ಪರ್ ಚಿತ್ರ ನೋಡಿದ ಮೇಲೆ. ನಟನೆಯ ಹುಚ್ಚು ಹತ್ತಿತು ಎನ್ನಬಹುದು. ಮನೆಯಲ್ಲಿ ಎಂದೂ ನನಗೆ ಕಟ್ಟುಪಾಡು ಮಾಡಲಿಲ್ಲ. ಅಪ್ಪ, ಅಮ್ಮ ಚಿತ್ರರಂಗದಲ್ಲಿ ಸಾಕಷ್ಟು ವರ್ಷಗಳಿಂದ ಇದ್ದರೂ ಮನೆಯಲ್ಲಿ ಚಿತ್ರರಂಗದ ಬಗ್ಗೆ ಚರ್ಚೆ ನಡೆಯುತ್ತಿದ್ದದ್ದು ಅಷ್ಟಕಷ್ಟೇ. ಆದರೆ ಕೃಷ್ಣಲೀಲೈ ಚಿತ್ರಕ್ಕೆ ಆಹ್ವಾನ ಬಂದಾಗ ಅಪ್ಪ, ಅಮ್ಮ ಇಬ್ಬರೂ ಪ್ರೋತ್ಸಾಹ ನೀಡಿದರು. ಕೆಬಿ ಸಾರ್ ಅವರ ಬ್ಯಾನರ್ ನಲ್ಲಿ ಮೊದಲ ಚಿತ್ರ ಮಾಡುತ್ತಿರುವುದಕ್ಕೆ ತುಂಬಾ ಖುಷಿಯಾಗಿದೆ 'ಎನ್ನುತ್ತಾರೆ ಉತ್ತಮ ಕಂಠಸಿರಿಯ ಮೇಘನಾ.

ಕರ್ನಾಟಕ ಸಿನಿಮಾ ಕಲಾವಿದರ ಸಂಘದ ಕಾರ್ಯದರ್ಶಿಯಾಗಿರುವ ತಮಿಳು ಮೂಲದ ಸುಂದರ್ ರಾಜ್ ಕನ್ನಡದಲ್ಲಿ ಸುಮಾರು ಚಿತ್ರಗಳಲ್ಲಿ ನಟಿಸಿದ್ದರೂ ತಮಿಳಿನಲ್ಲಿ ಸುಮಾರು 15 ಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಮೀಳಾ ಅವರು ಕೂಡ ಐದಾರು ತಮಿಳು ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಬಾಲಚಂದರ್ ಕವಿತಾಲಯ ಎಂಬ ಕಲಾದೇಗುಲ
ಸದ್ಯ ರಜನಿಕಾಂತ್ ಅಭಿನಯದ ಕುಸೇಲನ್ ಚಿತ್ರದಲ್ಲಿ ತೊಡಗಿಸಿಕೊಂಡಿರುವ ಬಾಲಚಂದರ್ ಅವರು, ನಂತರ ಕೃಷ್ಣಲೀಲೈ ಚಿತ್ರವನ್ನು ಕೈಗೆತ್ತಿಕೊಳ್ಳಲಿದ್ದಾರೆ. ಈ ಚಿತ್ರವನ್ನು ಸೆಲ್ವನ್ ನಿರ್ದೇಶಿಸುತ್ತಿದ್ದು. ಇತ್ತೀಚೆಗೆ ಎಲ್ ವಿ ಪ್ರಸಾದ್ ಸ್ಟುಡಿಯೋದಲ್ಲಿ ಸೆಟ್ಟೇರಿದೆ. ಶ್ರೀಕಾಂತ್ ದೇವಾ ಅವರ ಸಂಗೀತ, ಚಿತ್ರಕ್ಕೆ ಇದ್ದು, ಜೀವನ್ ಚಿತ್ರದ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಮೇಘನಾಗೆ ಮೊದಲ ಚಿತ್ರದಲ್ಲೇ ವಿವೇಕ್, ಕೋಟ ಶ್ರೀನಿವಾಸ ರಾವ್, ಕಲಾಭವನ ಮಣಿ ಮುಂತಾದ ಖ್ಯಾತ ನಟರ ಜತೆ ಅಭಿನಯಿಸುವ ಅವಕಾಶ ದೊರೆತಿದೆ.

ಬಾಲಚಂದರ್ ಅವರ ಚಿತ್ರ ಎಂದ ಮೇಲೆ ಸಮಾಜಕ್ಕೆ ಸಂದೇಶ ನೀಡಿಕೆ ಇದ್ದಿದ್ದೆ. ಈ ಚಿತ್ರ ರೋಮಾಂಚನಕಾರಿ ಪ್ರೇಮಮಯ ಚಿತ್ರ. ಭಗವಾನ್ ಶ್ರೀಕೃಷ್ಣನ ಲೀಲೆಗಳು ಕಲಿಯುಗದಲ್ಲಿ ಹೊಸ ಮಾದರಿಯಲ್ಲಿ ಕಾಣಿಸಿಕೊಳ್ಳಲಿದೆಯಂತೆ. ಐಎಸ್ ಅಧಿಕಾರಿಯಾಗುವ ಕನಸು ಹೊತ್ತ ವಿದ್ಯಾರ್ಥಿ ಪಾತ್ರದಲ್ಲಿ ಜೀವನ್ ನಟಿಸಲಿದ್ದಾರೆ.

ಕೊಂಕೊ ಕೊಸರೊ ತಪ್ಪದೇ ಓದಿ: ಬಾಲಚಂದರ್ ಅವರ ಗರಡಿಯಿಂದ ಬಂದವರು ಚಿತ್ರರಂಗದಲ್ಲಿ ವಿಫಲರಾಗಿದ್ದು ವಿರಳ. ರಜನಿಕಾಂತ್, ಕಮಲಹಾಸನ್, ಪ್ರಕಾಶ್ ರೈ, ಮಾಧವಿ, ಸರಿತಾ, ಶ್ರೀವಿದ್ಯಾ, ಶ್ರೀದೇವಿ, ಜಯಪ್ರದಾ, ಜಯಸುಧಾ, ವಿವೇಕ್, ರಮೇಶ್ ಅರವಿಂದ್ ಹೀಗೆ ಪಟ್ಟಿ ಬೆಳೆಯುತ್ತದೆ. ಮೇಘನಾಗೆ ಅವಕಾಶ ಸಿಕ್ಕಿದ್ದು ಒಳ್ಳೆಯದೇ ಆದರೆ, ತಮಿಳು ಚಿತ್ರರಂಗದಲ್ಲಿ ಒಮ್ಮೆ ಹೆಸರುವಾಸಿಯಾದರೆ ಕನ್ನಡದ ಕಡೆ ತಿರುಗಿ ನೋಡದಂತೆ ಆಗುವ ಸಾಧ್ಯತೆ ಇಲ್ಲದಿಲ್ಲ. ಮೇಘನಾ ಅವರ ಚಿತ್ರ ಯಶಸ್ವಿಯಾಗಲಿ. ಆದಷ್ಟು ಬೇಗ ಕನ್ನಡದಲ್ಲೂ ನಟಿಸಲಿ ಎಂಬುದು ನಮ್ಮ ಹಾರೈಕೆ.

ಒಂದೆಡೆ ಕನ್ನಡದ ಕುವರಿಯರು ಪರಭಾಷೆ ಕಡೆ ಮುಖ ತಿರುಗಿಸುತ್ತಾ ಇದ್ದಾರೆ. ಇನ್ನೊಂದೆಡೆ ನಮ್ಮವರು ಪರಭಾಷೆ ಚಿತ್ರಗಳನ್ನು ರಿಮೇಕ್ ಹೆಸರಲ್ಲಿ ಕನ್ನಡಿಗರಿಗೆ ನೀಡುತ್ತಿದ್ದಾರೆ. ಪೂರಕವಾಗಿ ಹೇಳುವುದಾದರೆ ಜೀವನ್ ಅಭಿನಯನದ ನಾನ್ಅವನ್ ಇಲ್ಲೈ ಚಿತ್ರ ಇನ್ನು ಕೆಲವು ವಾರಗಳಲ್ಲಿ ಕನ್ನಡ ಚಿತ್ರಮಂದಿರದಲ್ಲಿ ರಾರಾಜಿಸಲಿದೆ. ಬುದ್ಧಿವಂತ ನಟ, ನಿರ್ದೇಶಕ ಉಪ್ಪಿಯ ಬುದ್ಧಿವಂತ ಚಿತ್ರದ ಮೂಲಕವಾಗಿ ಕನ್ನಡದಲ್ಲಿ ಆ ಚಿತ್ರ ರಿಮೇಕಾಗಿದೆ. ಒಪ್ಪಿಸಿಕೊಳ್ಳಿ.

ನಿತ್ಯಾ ಎಂಬ ಮಂಗಳೂರು ಪೋರಿ ಸೆರೆ ಸಿಕ್ಕಳು

(ಮಾಹಿತಿ ಸಂಗ್ರಹ ಬರಹ: ಮಹೇಶ್ ಮಲ್ನಾಡ್)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada