twitter
    For Quick Alerts
    ALLOW NOTIFICATIONS  
    For Daily Alerts

    ಸದಭಿರುಚಿಯ, ಕಿರುಚಿತ್ರಗಳನ್ನು ನಿರ್ಮಿಸಿ: ಹಂಸಲೇಖ

    By * ಕೆ ಆರ್ ಸೋಮನಾಥ್, ಶಿವಮೊಗ್ಗ
    |

    ಮಧ್ಯಮ ಕಾಲದ ಚಿತ್ರಗಳನ್ನು ಕಡಿಮೆ ಅವಧಿಯಲ್ಲಿ ನಿರ್ಮಿಸಿ ಅದನ್ನು ಜನರಿಗೆ ತಲುಪಿಸಲು ಮುಂದಾಗ ಬೇಕೆಂದು ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಹೇಳಿದರು. ಸೋಮವಾರ ಇಲ್ಲಿನ ಕುವೆಂಪು ರಂಗಮಂದಿರದಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಮತ್ತು ಬೆಳ್ಳಿಮಂಡಲ ಇವರ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಅಂತರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

    ಕನ್ನಡ ಚಿತ್ರರಂಗದಲ್ಲಿ ಇಂದು ದೊಡ್ಡ ಪರಂಪರೆ ಸೃಷ್ಟಿಯಾಗಿದೆ. ಈ ಪರಂಪರೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ಚಿತ್ರರಂಗದ ಮೇಲಿದೆ. ಒಳ್ಳೆಯ ಚಿತ್ರಗಳನ್ನು ಎಲ್ಲರೂ ನೋಡುತ್ತಾರೆ. ಆದರೆ, ಅಂತಹ ಚಿತ್ರಗಳು ಕನ್ನಡದಲ್ಲಿ ನಿರ್ಮಾಣವಾಗದಿದ್ದ ಸಂದರ್ಭದಲ್ಲಿ ಬೇರೆ ಪರಭಾಷಾ ಚಿತ್ರಗಳ ವೀಕ್ಷಣೆಗೆ ಪ್ರೇಕ್ಷಕರು ಮುಂದಾಗುತ್ತಾರೆ. ಹೀಗಾಗಿ, ಮಧ್ಯಮ ಕಾಲದ ಸದಭಿರುಚಿಯ ಸಿನಿಮಾ ನಿರ್ಮಿಸಬೇಕು ಎಂದರು.

    ಸಾಹಿತ್ಯ ಹಾಗೂ ನಾಟಕಗಳನ್ನು ಕಡೆಗಣಿಸಿ ಒಂದು ಒಳ್ಳೆಯ ಸಿನಿಮಾವನ್ನು ಕಲ್ಪಿಸಿಕೊಳ್ಳುವುದು ತಪ್ಪು ಎಂದ ಅವರು, ಇಂದು ಒಳ್ಳೆಯ ಸಂಭಾಷಣೆಯನ್ನು ಒಳಗೊಂಡಂತಹ ಒಂದು ಗಂಟೆಯ ಕಿರುಚಿತ್ರ ತಯಾರಿಸಿ ಜನರಿಗೆ ತಲುಪಿಸಬೇಕು. ಇಂತಹ ಕಿರುಚಿತ್ರಗಳನ್ನು ಚಿತ್ರಮಂದಿರದಲ್ಲಿ ನೋಡಬೇಕು ಎಂದೇನಿಲ್ಲ. ಅದು ದುಬಾರಿ ಕೂಡಾ ಹೌದು. ಇದನ್ನು ಕಾಲೇಜುಗಳಲ್ಲಿ ಅಥವಾ ರಂಗಮಂದಿರಗಳಲ್ಲಿ ಪ್ರೇಕ್ಷಕರಿಗೆ ತೋರಿಸಬಹುದಾಗಿದೆ. ಇಂತಹ ಒಂದು ಕಿರುಚಿತ್ರಗಳನ್ನು ಹುಟ್ಟುಹಾಕಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ಭಾರತವನ್ನು ಬಡದೇಶವೆಂದು ನಮಗೆ ನಾವೇ ಬಿಂಬಿಸಿಕೊಳ್ಳುತ್ತೇವೆ. ಅಂತಹ ಸಿನಿಮಾಗಳು ಸಾಕಷ್ಟು ಬಂದಿವೆ. ಆದರೆ, ಭಾರತ ಅತ್ಯಂತ ಶ್ರೀಮಂತ ರಾಷ್ಟ್ರವಾಗಿದ್ದರೂ ಇಲ್ಲಿನ ಸಂಪತ್ತನ್ನು ಸರಿಯಾಗಿ ಬಳಸಿಕೊಳ್ಳಲು ಬರುತ್ತಿಲ್ಲ. ಆದ್ದರಿಂದ, ನಮಗೆ ನಾವೇ ನಮ್ಮ ದೇಶವನ್ನು ಬಡರಾಷ್ಟ್ರವೆಂದು ಬಿಂಬಿಸಿಕೊಳ್ಳುತ್ತೇವೆ. ಜೊತೆಗೆ, ಬಡರಾಷ್ಟ್ರವೆಂದು ಬಿಂಬಿಸುವ ಚಿತ್ರವನ್ನು ತೆಗೆಯುತ್ತೇವೆ. ಈ ರೀತಿಯ ಭಾವನೆ ನಮ್ಮಿಂದ ದೂರವಾಗಬೇಕು ಎಂದರು.

    ಭಾರತ ಬಹುಸಂಸ್ಕೃತಿಯ, ವಿವಿಧ ಕಲೆಯ, ವಿವಿಧ ಮುಖಗಳನ್ನೊಳಗೊಂಡ ದೇಶವಾಗಿದೆ. ಆದರೆ, ಇತರೆ ಮುಂದುವರೆದ ದೇಶಗಳಂತೆ ಇಲ್ಲಿನ ಚಲನಚಿತ್ರದಲ್ಲಿ ವಿಜ್ಞಾನ ಆಧಾರಿತ ಚಿತ್ರಗಳ ತಯಾರಿಕೆ ಪಾಶ್ಚಾತ್ಯ ರಾಷ್ಟ್ರಗಳಷ್ಟು ಗುರಿ ಸಾಧಿಸಲು ಆಗಿಲ್ಲ. ಮುಂದಿನ ದಿನಗಳಲ್ಲಿ ವಿಜ್ಞಾನ ಆಧಾರಿತ ಚಿತ್ರಗಳಿಗೂ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು. ಜೊತೆಗೆ, ಇಂದಿನ ತೀವ್ರ ಕಾಲದ ಹುಚ್ಚು ಸಿನಿಮಾಗಳಿಗಿಂತ ಮಧ್ಯಮ ಕಾಲದ ಚಿತ್ರಗಳನ್ನು ನಿರ್ಮಿಸಿದಲ್ಲಿ ಅಂತಹ ಚಿತ್ರಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಗೌರವ ತಂದುಕೊಡುತ್ತದೆ ಎಂದು ಹೇಳಿದರು.

    ಕಾರ್ಯಕ್ರಮದಲ್ಲಿ ಬೆಳ್ಳಿಮಂಡಲದ ಗೌರವಾಧ್ಯಕ್ಷ ಹಾಗೂ ಜಿಲ್ಲಾಧಿಕಾರಿ ಪೊನ್ನುರಾಜ್ ಮಾತನಾಡಿ, ಜಿಲ್ಲೆಯಲ್ಲಿ ಅಂತರಾಷ್ಟ್ರೀಯ ಮಟ್ಟದ ಚಲನಚಿತ್ರೋತ್ಸವ ನಡೆಯುತ್ತಿರುವುದು ನಿಜಕ್ಕೂ ಸಂತೋಷವನ್ನುಂಟುಮಾಡಿದೆ. ಈ ಚಲನಚಿತ್ರವನ್ನು ಏರ್ಪಡಿಸಿರುವ ಉದ್ದೇಶವೇನೆಂದರೆ, ಒಳ್ಳೆಯ ಚಿತ್ರಗಳು ಜನರಿಗೆ ತಲುಪಿಸಬೇಕು ಎಂಬುದೇ ಚಿತ್ರೋತ್ಸವದ ಮುಖ್ಯ ಉದ್ದೇಶವಾಗಿದೆ ಎಂದರು.

    ಇಂದು ಕಲಾತ್ಮಕ ಚಿತ್ರಗಳು ಹೆಚ್ಚಾಗಿ ತಯಾರಾಗುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರಲ್ಲದೇ, ಅಂತಹ ಚಿತ್ರಗಳನ್ನು ನೋಡುವವರ ಸಂಖ್ಯೆ ಕಡಿಮೆಯಾಗಿದೆ. ಜೊತೆಗೆ, ಚಿತ್ರಮಂದಿರವೂ ಸಿಗುತ್ತಿಲ್ಲ ಎಂದ ಅವರು, ಒಳ್ಳೆಯ ಸಿನಿಮಾ ಜನರಿಗೆ ತಲುಪಿಸುವುದು ನಮ್ಮ ಕರ್ತವ್ಯವಾಗಿದೆ. ಹೀಗಾಗಿ, ಚಲನಚಿತ್ರೋತ್ಸವದಲ್ಲೂ ಅನೇಕ ಒಳ್ಳೆಯ ಚಿತ್ರಗಳು ಪ್ರದರ್ಶನಗೊಳ್ಳುತ್ತಿರುವುದು ನಿಜಕ್ಕೂ ಸಂತೋಷವನ್ನುಂಟುಮಾಡಿದೆ ಎಂದು ಹೇಳಿದರು. ವೇದಿಕೆಯಲ್ಲಿ ಅಶೋಕ್‌ಪೈ, ನಗರಸಭಾಧ್ಯಕ್ಷ ಕೆ.ಎಸ್.ಗಂಗಾಧರಪ್ಪ, ಜಿ.ಪಂ.ಅಧ್ಯಕ್ಷ ಹೆಚ್.ಸಿ.ಬಸವರಾಜಪ್ಪ, ಹೊ.ನ.ಸತ್ಯ, ನಿರ್ಮಾಪಕ ಮಾರುತಿ ಉಪಸ್ಥಿತರಿದ್ದರು.

    English summary
    A four day international film festival opened at the Kuvempu Ranga Mandira in Shimoga on Monday. Film music director Hamsalekha, who formally inaugurated the festival. He suggested that make short and sweet films and reduce the films duration to one hour.
    Tuesday, November 23, 2010, 14:30
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X