ರಜನಿ ಗುಣಮುಖರಾಗಲು ಪಿ ವಾಸು ವಿಶೇಷ ಪೂಜೆ
ಖ್ಯಾತ ನಟ ಸೂಪರ್‌ಸ್ಟಾರ್ ರಜನಿಕಾಂತ್ ಶೀಘ್ರ ಗುಣಮುಖರಾಗಲೆಂದು ಮೈಸೂರಿನ ಶ್ರೀಚಾಮುಂಡೇಶ್ವರಿಗೆ ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಪಿ.ವಾಸು ವೀಶೇಷ ಪೂಜೆ ಸಲ್ಲಿಸಿದರು. ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸ ನಿರ್ಮಿಸಿದ 'ಆಪ್ತಮಿತ್ರ', 'ಆಪ್ತರಕ್ಷಕ' ಚಿತ್ರಗಳನ್ನು ಪಿ.ವಾಸು ನಿರ್ದೇಶಿಸಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ.
ವಾಸು ಅವರ ನೂತನ ಚಿತ್ರದ ಚಿತ್ರೀಕರಣ ಮೈಸೂರಿನಲ್ಲಿ ನಡೆಯುತ್ತಿದೆ. ಉಪೇಂದ್ರ ನಾಯಕನಾಗಿರುವ ಈ ಚಿತ್ರವನ್ನು ಕೃಷ್ಣಪ್ರಜ್ವಲ್ ನಿರ್ಮಿಸುತ್ತಿದ್ದಾರೆ. ಭಾನುವಾರ ಬೆಳಗ್ಗೆ ಚಾಮುಂಡಿ ಬೆಟ್ಟಕ್ಕೆ ತೆರಳಿದ ಪಿ.ವಾಸು ಅವರು ರಜನಿಕಾಂತ್ ಅವರು ಶೀಘ್ರ ಗುಣಮುಖರಾಗಿ ಚಿತ್ರೀಕರಣದಲ್ಲಿ ಪಾಲ್ಗೊಳ್ಳವಂತಾಗಬೇಕೆಂದು ಚಾಮುಂಡಿ ತಾಯಿಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ಉದಯರವಿ ಫಿಲಂಸ್ ಲಾಂಛನದಡಿಯಲ್ಲಿ ಕೃಷ್ಣಪ್ರಜ್ವಲ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. 'ಆಪ್ತರಕ್ಷಕ' ಚಿತ್ರದ ನಂತರ ಇವರು ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಗುರುಕಿರಣ್ ಸಂಗೀತ ನೀಡುತ್ತಿದ್ದಾರೆ. ಐದು ಹಾಡುಗಳು ಚಿತ್ರದಲ್ಲಿದೆ. ಈ ಪೈಕಿ ಎರಡು ಹಾಡುಗಳ ಚಿತ್ರೀಕರಣ ವಿದೇಶದಲ್ಲಿ ನಡೆಯಲಿದೆ ಎನ್ನುತ್ತಾರೆ ನಿರ್ಮಾಪಕರು. (ದಟ್ಸ್‌ಕನ್ನಡ ಸಿನಿವಾರ್ತೆ)


Click it and Unblock the Notifications











