ಮನೆಯಲ್ಲೇ ಕೂತು ಅಣ್ಣಾಗೆ ಜೈ ಎಂದ ರಜನಿಕಾಂತ್!
ಭ್ರಷ್ಟಾಚಾರವನ್ನು ಮಟ್ಟಹಾಕಲು ಜನಲೋಕಪಾಲ ವಿಧೇಯಕಕ್ಕೆ ಆಗ್ರಹಿಸುತ್ತಿರುವ ಗಾಂಧಿವಾದಿ ಅಣ್ಣಾ ಹಜಾರೆ ಅವರೆ ನನ್ನ ಹೀರೋ ಎಂದು ಸೂಪರ್ ಸ್ಟಾರ್ ರಜನಿಕಾಂತ್ ಸಖತ್ ಡೈಲಾಗ್ ಹೊಡೆದಿದ್ದಾರೆ. ಚೆನ್ನೈನ ತಮ್ಮ ಕಚೇರಿ ಮೂಲಕ ಅಣ್ಣಾಗೆ ಬೆಂಬಲ ವ್ಯಕ್ತಪಡಿಸಿ ಮಂಗಳವಾರ ತಮ್ಮ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.
ಭ್ರಷ್ಟಾಚಾರದ ವಿರುದ್ಧ ಭಾರತ ಚಳವಳಿಯನ್ನು ನಾನು ಮನಸಾರೆ ಬೆಂಬಲಿಸುತ್ತಿದ್ದೇನೆ. ಭ್ರಷ್ಟಾಚಾರದ ವಿರುದ್ಧ ಸಮರ ಸಾರಲು ನಮ್ಮೆಲ್ಲರಿಗೆ ಅಣ್ಣಾ ಹಜಾರೆ ಅವರಂಥಹ ದಕ್ಷ, ಸಮರ್ಥ ನಾಯಕ ಸಿಕ್ಕಿರುವುದು ಸಂತಸದ ಸಂಗತಿ ಎಂಬ ಹೇಳಿಕೆಗಳು ರಜನಿ ಅವರ ಸಂದೇಶದಲ್ಲಿ ಅಡಗಿವೆ.
ಈ ರಕ್ತರಹಿತ ಕ್ರಾಂತಿಯನ್ನು ಬೆಂಬಲಿಸುತ್ತಿರುವ ಪ್ರತಿಯೊಬ್ಬರನ್ನೂ ನಾನು ಅಭಿನಂದಿಸುತ್ತೇನೆ. ಈ ರೀತಿಯ ಶಾಂತಿಯುತ ಪ್ರತಿಭಟನೆ ಸತ್ಯಾಗ್ರಹದ ತವರೂರಾದ ಭಾರತದಲ್ಲಿ ಮಾತ್ರ ಸಾಧ್ಯ ಎಂದಿದ್ದಾರೆ ರಜನಿ. ತಮಿಳು ಚಿತ್ರೋದ್ಯಮ ಅಣ್ಣಾಗೆ ಬೆಂಬಲ ಸೂಚಿಸಿ ಪ್ರತಿಭಟಿಸಿದೆ. ಆದರೆ ರಜನಿ ಮಾತ್ರ ಮನೆಬಿಟ್ಟು ಹೊರಬರದೆ ಇರುವುದು ಅವರ ಅಪಾರ ಅಭಿಮಾನಿ ಬಳಗವನ್ನು ನಿರಾಸೆಗೊಳಿಸಿದೆ. (ಏಜೆನ್ಸೀಸ್)


Click it and Unblock the Notifications











