ಕನಸುಗಾರ ರವಿಚಂದ್ರನ್ ಈಗ ಹ್ಯಾಪಿ ಹಸ್ಪೆಂಡ್
ಕನಸುಗಾರ ರವಿಚಂದ್ರನ್ ಸಾಲು ಸಾಲು ಚಿತ್ರಗಳಿಗೆ ಸಹಿ ಹಾಕುವ ಮೂಲಕ ಇದ್ದಕ್ಕಿದ್ದಂತೆ ಬ್ಯುಸಿಯಾಗಿಬಿಟ್ಟಿದ್ದಾರೆ. ಮೊನ್ನೆ ಮೊನ್ನೆಯಷ್ಟೇ 'ಹೂ' ಅರಳಿಸಿ ಸಂಭ್ರಮಿಸಿದ ರವಿ ಬಳಿಕ 'ನಾರಿಯ ಸೀರೆ ಕದಿ'ಯಲು ಸಿದ್ಧರಾದರು. ಅದರ ಜೊತೆಗೆ 'ಮಲ್ಲಿಕಾರ್ಜುನ' ಅವತಾರ ಎತ್ತಿದರು. ಈಗ 'ಹ್ಯಾಪಿ ಹಸ್ಪೆಂಡ್' ಎಂಬ ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ.
'ಹ್ಯಾಪಿ ಹಸ್ಪೆಂಡ್' ಚಿತ್ರಕ್ಕೆ 'ಪಕ್ಕಾ ಪೋ...' ಎಂಬ ವಿಚಿತ್ರ ಟ್ಯಾಗ್ ಲೈನ್ ನೀಡಲಾಗಿದೆ. ಈ ಚಿತ್ರವನ್ನು 'ಯೋಗಿ' ಚಿತ್ರಕ್ಕೆ ಆಕ್ಷನ್, ಕಟ್ ಹೇಳಿದ್ದ ಉದಯಪ್ರಕಾಶ್ ನಿರ್ದೇಶಿಸಲಿದ್ದಾರೆ. ಕೊಬ್ಬರಿ ಮಂಜು ನಿರ್ಮಾಪಕರು. ತಮಿಳಿನ 'ಚಾರ್ಲಿ ಚಾಪ್ಲಿನ್' ಚಿತ್ರದ ರೀಮೇಕ್ ಇದಾಗಿದೆ.
ಅಂದಹಾಗೆ ಇದು ಬಹುತಾರಾಗಣದ ಚಿತ್ರ. ರವಿಯ ಜತೆಗೆ ರಮೇಶ್ ಅರವಿಂದ್ ಹಾಗೂ ವಿಜಯ ರಾಘವೇಂದ್ರ ಸಹ 'ಹ್ಯಾಪಿ ಹಸ್ಪೆಂಡ್'ಗಳಾಗಿ ಕಾಣಿಸಲಿದ್ದಾರೆ. ಚಿತ್ರದಲ್ಲಿ ನಾಲ್ಕು ಮಂದಿ ನಾಯಕಿಯರು. ರಾಗಿಣಿ, ಯಜ್ಞಾ ಶೆಟ್ಟಿ, ರಿಷಿಕಾ ಮತ್ತು ಮೋನಿಕಾ ಚಿತ್ರದ ನಾಯಕಿಯರು.
ರಾಗಿಣಿ ಅವರದು ಪಕ್ಕಾ ಗ್ಲಾಮರ್ ಪಾತ್ರ. ರವಿ ಮತ್ತು ರಮೇಶ್ ಇಬ್ಬರೂ ಒಟ್ಟಿಗೆ ಸೇರಿದ್ದಾರೆ ಎಂದರೆ ಮನರಂಜನೆ ಇಲ್ಲದಿರಲು ಸಾಧ್ಯವೆ? ಚಿತ್ರದ ತಾರಾಬಳಗದಲ್ಲಿ ರಂಗಾಯಣ ರಘು, ಮಂಡ್ಯ ರಮೇಶ್, ರಾಜು ತಾಳಿಕೋಟೆ ಕಾಣಿಸಲಿದ್ದಾರೆ. ಬೆಂಗಳೂರು ಸೇರಿದಂತೆ ದುಬೈ, ಹಾಂಕಾಂಗ್ ನಲ್ಲಿ ಹಾಡುಗಳ ಚಿತ್ರೀಕರಣ ನಡೆಯಲಿದೆ.
ಇದೇ ಮೊದಲ ಬಾರಿಗೆ ಅಲೆಕ್ಸ್ ಪಾಲ್ ಎಂಬುವವರು ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಕವಿರಾಜ್ ಅವರ ಸಾಹಿತ್ಯ, ಎಂ ಎಸ್ ರಮೇಶ್ ಅವರ ಸಂಭಾಷಣೆ ಹಾಗೂ ಸೀತಾರಾಮ್ ಛಾಯಾಗ್ರಹಣ 'ಹ್ಯಾಪಿ ಹಸ್ಪೆಂಡ್' ಚಿತ್ರಕ್ಕಿದೆ. ಸೋಮವಾರ (ಆಗಸ್ಟ್ 23) 'ಹ್ಯಾಪಿ ಹಸ್ಪೆಂಡ್'ಗೆ ಮುಹೂರ್ತ.


Click it and Unblock the Notifications











