twitter
    For Quick Alerts
    ALLOW NOTIFICATIONS  
    For Daily Alerts

    ಕನ್ನಡಿಗರ ಮನದಲ್ಲಿ ಮತ್ತೊಬ್ಬ ರಾಜಕುಮಾರನಿಲ್ಲ

    By Staff
    |

    ರಾಜಕುಮಾರ್ ಎಂಬ ಹೆಸರು ಕೇಳಿದರೆ ಮಾತ್ರವಲ್ಲ, ಮನ ಪಟಲದಲ್ಲಿ ಹಾದು ಹೋದರೆ ಸಾಕು ಅವರ ಯಾವುದೋ ಚಿತ್ರದ ಹಾಡು, ಮೊತ್ತಮೊದಲನೇ ಚಿತ್ರದಿಂದ ಕೊನೆಯ ಚಿತ್ರದವರೆಗೆ ಅಭಿನಯಿಸಿದ ಯಾವುದೋ ದೃಶ್ಯ ತಾನಾಗಿಯೇ ಹಾದು ಹೋಗುತ್ತದೆ. ರಾಜ್ ನಮ್ಮನ್ನಗಲಿದ್ದಾರೆ ಎಂಬ ಭಾವ ಯಾವಚಿತ್ರಪ್ರೇಮಿಯನ್ನೂ ಕಾಡುವುದಿಲ್ಲ. ಮಗುವಿನಂಥ ನಗುವಿನ ಮುಖಾಂತರ, ನಟನೆಯೇ ಅಲ್ಲವೆನ್ನಿಸುವಂಥ ಅಭಿನಯದ ಮುಖಾಂತರ, ಕಂಠಸಿರಿಯಿಂದ ಹೊರಹೊಮ್ಮಿದ ಭಾವಲಹರಿಯ ಮುಖಾಂತರ, ಸಜ್ಜನಿಕೆ, ಮುಗ್ಧತೆಯ ಮುಖಾಂತರ ಅವರಿನ್ನೂ ಜೀವಂತವಾಗಿದ್ದಾರೆ.

    ಏಪ್ರಿಲ್ 24ರಂದು ರಾಜ್ ಅವರ 80ನೇ ಜನ್ಮದಿನ. ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ಮುತ್ತುರಾಜು ಹುಟ್ಟಿದ್ದು 1928ರ ಏಪ್ರಿಲ್ 24ರಂದು. ಇಡೀ ಕರ್ನಾಟಕ ಮಾತ್ರವಲ್ಲ ವಿಶ್ವದಾದ್ಯಂತ ಕನ್ನಡದ ಕಣ್ಮಣಿಗಳಿಗೆ, ಅಭಿಮಾನಿ ದೇವರುಗಳಿಗೆ ಹುಟ್ಟುಹಬ್ಬ ಆಚರಿಸುವ ಸಂಭ್ರಮ. ಜನ್ಮದಿನದ ನೆಪದಲ್ಲಿ ಮತ್ತೆ ಮತ್ತೆ ಅವರ ಹಾಡುಗಳನ್ನು ಕೇಳುವ, ಅವರು ಅಭಿನಯಿಸಿದ ಕಪ್ಪುಬಿಳುಪು ಚಿತ್ರಗಳನ್ನು ನೋಡುವ, ಅವರ ಸರಳತೆಯನ್ನು ಮತ್ತೆ ಮತ್ತೆ ಮೆಲುಕು ಹಾಕುವ ಸಡಗರ. 1954ರಲ್ಲಿ ಬಿಡುಗಡೆಯಾದ ಕಪ್ಪುಬಿಳುಪು ಚಿತ್ರ 'ಸತ್ಯ ಹರಿಶ್ಚಂದ್ರ' ಪ್ರತಿ ಫ್ರೇಮುಗಳಲ್ಲಿ ಬಣ್ಣಗಳನ್ನು ತುಂಬಿಕೊಂಡು ಚಿತ್ರಪ್ರೇಮಿಗಳನ್ನು ರಂಜಿಸಲು ಸಿದ್ಧವಾಗಿದೆ. ಅವರ ಜನ್ಮದಿನದಂದೇ ರಾಜ್ಯಾದ್ಯಂತ ಬಿಡುಗಡೆಯಾಗುತ್ತಲಿದೆ.

    ಬೆಂಗಳೂರು ಸೇರಿದಂತೆ ಅನೇಕ ಕಡೆ ರಾಜ್ ನೆನಪಲ್ಲಿ ಅಭಿಮಾನಿಗಳು ಅಣ್ಣಾವ್ರು ಹಾಕಿಕೊಟ್ಟ ದಾರಿಯಲ್ಲೇ ಕಣ್ಣು ದಾನ ಮಾಡುವ ಶಿಬಿರಗಳನ್ನು ಹಮ್ಮಿಕೊಂಡಿದ್ದಾರೆ. ಕಣ್ಣು ದಾನಕ್ಕಿಂತ ಉತ್ತಮ ದಾನ ಮತ್ತಾವುದಿದೆ. ಅನೇಕ ಕಡೆ ಸಿಹಿ, ಹಣ್ಣುಹಂಪಲನ್ನು ಹಂಚುವ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿದೆ.

    ಈ ನಡುವೆ ಸರ್ಕಾರದಿಂದ ಅವಕೃಪೆಗೊಳಗಾಗಿರುವ ರಾಜ್ ಸಮಾಧಿ ಇರುವ ಸ್ಥಳದಲ್ಲಿ ರಾಜ್ ಸ್ಮಾರಕ ನೆನೆಗುದಿಗೆ ಬಿದ್ದಿದೆ. ಚುನಾವಣೆಯ ಗುಂಗಿನಲ್ಲಿರುವ ರಾಜಕೀಯ ಪಕ್ಷಗಳಿಗೆ ಸದ್ಯಕ್ಕೆ ಇತ್ತ ತಿರುಗಿ ನೋಡುವ ಇರಾದೆಯೂ ಇರಲಾರದು, ನಿರೀಕ್ಷಿಸುವ ಹಾಗೂ ಇಲ್ಲ. ಸರ್ಕಾರದ ಅವಗಣನೆಯಿಂದ ಬೇಸತ್ತಿರುವ ರಾಜ್ ಪುತ್ರರಾದ ಶಿವು, ರಾಘು ಮತ್ತು ಪುನೀತ್ ತಾವೇ ಸ್ವತಃ ಸ್ಮಾರಕ ರಚಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಇದನ್ನು ಘೋಷಿಸುವ ಮುಖಾಂತರ ಸರ್ಕಾರಕ್ಕೇ ಸೆಡ್ಡು ಹೊಡೆದಿದ್ದಾರೆ.

    ಈ ದಿನದ ಮತ್ತೊಂದು ವಿಶೇಷವೆಂದರೆ, ಪುನೀತ್ ಅಭಿನಯದ, ಪ್ರೇಮ್ ನಿರ್ದೇಶನದ 'ರಾಜ್' ಹೆಸರಿನ ಚಿತ್ರ ಸೆಟ್ಟೇರುತ್ತಿದೆ. ನ್ಯಾಷನಲ್ ಕಾಲೇಜು ಮೈದಾನದಲ್ಲಿ ಅದ್ಧೂರಿಯಾಗಿ ರಾಜ್ ಚಿತ್ರದ ಮುಹೂರ್ತ ನಡೆಯಲಿದೆ. ಇದೇ ದಿನ ಚಕ್ರವರ್ತಿ ನಿರ್ದೇಶನದ 'ಜನ್ಮ' ಎಂಬ ಹೆಸರಿನ ಚಿತ್ರ ಕೂಡ ಪ್ರಾರಂಭವಾಗುತ್ತಿದೆ.

    ಟಿವಿಗಳು ಮಾತ್ರವಲ್ಲ ರೇಡಿಯೋ ಚಾನಲ್‌ಗಳು ಕೂಡ ರಾಜ್ ಹುಟ್ಟುಹಬ್ಬದ ನೆಪದಲ್ಲಿ ಕನ್ನಡತನವನ್ನು ಕಾಣುತ್ತಿವೆ. ಸಕತ್ ಹಾಟ್ ನ್ಯೂಸ್ ಏನೆಂದರೆ, 98.3 ಕಂಪನಾಂಕದಲ್ಲಿ ಬಿತ್ತರವಾಗುತ್ತಿರುವ ರೇಡಿಯೋ ಮಿರ್ಚಿ ಎಫ್ಎಮ್ ಚಾನಲ್‌ನಲ್ಲಿ ಮೂರು ದಿನಗಳಿಂದ ರಾಜ್‌ದೇ ಗುಂಗು. ರಾಜ್ ಬಗ್ಗೆಯೇ ಮಾತು, ಹಾಡು ಎಲ್ಲಾ. ಇದೇ ಮುಂದುವರೆದರೆ ಇದಕ್ಕಿಂದ ಗೌರವ ಸೂಚಕ ಮತ್ತೊಂದಿರಲಿಕ್ಕಿಲ್ಲ.

    ಡಾ.ರಾಜ್ ಸೇವಾ ಪ್ರಶಸ್ತಿ : ಬುಧವಾರ ಸಂಜೆ 6ಕ್ಕೆ ವಿಜಯನಗರದ ಹಂಪಿನಗರ ಕ್ರೀಡಾಂಗಣದಲ್ಲಿ ಡಾ.ರಾಜ್ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ.ಬರಗೂರು ರಾಮಚಂದ್ರಪ್ಪ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ. ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಕೃಷ್ಣ ಅಧ್ಯಕ್ಷತೆ ವಹಿಸಲಿದ್ದಾರೆ. ಗಾಯಕ ಕುನಾಲ್ ಗಾಂಜಾವಾಲ ಮತ್ತು ಮೋಹನ್ ತಂಡದಿಂದ ಸಂಗೀತ ರಸಮಂಜರಿಯನ್ನು ಏರ್ಪಡಿಸಲಾಗಿದೆ.

    ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ನಟರಾದ ಶಿವರಾಜ್‌ಕುಮಾರ್, ಮುರಳಿ, ವಿಜಯರಾಘವೇಂದ್ರ, ಹಿರಿಯ ಪತ್ರಕರ್ತ ಸದಾಶಿವ ಶೆಣೈ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಮನು ಬಳಿಗಾರ್, ನಿರ್ಮಾಪಕರಾದ ಎಸ್.ಎ.ಚಿನ್ನೇಗೌಡ ಭಾಗವಹಿಸಲಿದ್ದಾರೆ.

    ***

    ಡಾ.ರಾಜ್‌ರ ಹುಟ್ಟುಹಬ್ಬದ ದಿನ ಏ.24ರಂದು ಮಧ್ಯಾಹ್ನ 3.30ಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದ ಡಾ.ರಾಜ್‌ರ ಚಿತ್ರ ಶ್ರೀಕೃಷ್ಣದೇವರಾಯ ಮೂರ್ತಿಯನ್ನು ಮುತ್ತಿನ ಪಲ್ಲಕ್ಕಿಯಲ್ಲಿ ವಿಜಯನಗರ ಗಾಂಧಿ ಮೈದಾನದಿಂದ ಕಂಠೀರವ ಸ್ಟುಡಿಯೋ ಬಳಿಯ ರಾಜ್ ಪುಣ್ಯಭೂಮಿವರೆಗೂ ಮೆರೆವಣಿಗೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

    ***

    ನವಚೈತನ್ಯ ಸ್ವಯಂ ಸೇವಾ ಸಂಸ್ಥೆಯು ಏ.24ರಂದು ಬೆಳಗ್ಗೆ 10ಕ್ಕೆ ನಗರದ ಅಂಜನಾ ಮಿನಿಹಾಲ್‌ನಲ್ಲಿ ಗಾಂಧಿ ವೃದ್ಧಾಶ್ರಮದ ಅಂಗವಿಕಲರಿಗೆ ಗಾಲಿಕುರ್ಚಿ ಹಾಗೂ ಅನ್ನಪೂರ್ಣ ಸೇವಾಶ್ರಮದ ಅನಾಥ ಮಕ್ಕಳಿಗೆ ಬಟ್ಟೆಗಳನ್ನು ವಿತರಿಸಲಿದೆ.

    (ದಟ್ಸ್‌ಕನ್ನಡ ಸಿನಿವಾರ್ತೆ)

    ರಾಜಕುಮಾರ್ ಅವರ ಅಪರೂಪದ ಚಿತ್ರಗಳ ಗ್ಯಾಲರಿ

    ಪೂರಕ ಓದಿಗೆ
    ರಾಜ್ ಹುಟ್ಟುಹಬ್ಬದಂದು ಥಿಯೇಟರುಗಳಲ್ಲಿ ಸತ್ಯ ಹರಿಶ್ಚಂದ್ರ
    ಸಿಡಿ ಮುಖಾಂತರಎಲ್ಲಾ ಶಾಲೆಗಳಲ್ಲಿ 'ಸತ್ಯಹರಿಶ್ಚಂದ್ರ

    Thursday, April 25, 2024, 1:12
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X