ಜೋಗಯ್ಯನಿಗೆ ಹೊಸ ಜೋಡಿ ಹುಡುಕಿದ ಪ್ರೇಮ್
'ಜೋಗಯ್ಯ'ನಿಗೆ ತಕ್ಕ ಜೋಡಿ ಹುಡುಕಲು ನಿರ್ದೇಶಕ ಪ್ರೇಮ್ ಹರಸಾಹಸ ಪಡುತ್ತಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ನೂರನೆ ಚಿತ್ರ ಎಂಬ ಕಾರಣಕ್ಕೋ ಏನೋ ಪ್ರೇಮ್ ಬಾಲಿವುಡ್ ಬೆಡಗಿಯನ್ನು ಕರೆತರಲು ಸಿದ್ಧತೆ ನಡೆಸಿದ್ದಾರೆ.
ಈ ಹಿಂದೆ ಕಂಗನಾ ರನಾವತ್, ಅಮೀಷಾ ಪಟೇಲ್, ಪ್ರಿಯಾಂಕಾ ಚೋಪ್ರಾ, ಪ್ರಚಿ ದೇಸಾಯಿ, ವಿದ್ಯಾ ಬಾಲನ್, ಸೆಲೀನಾ ಜೇಟ್ಲಿ, ತಮಿಳು ತಾರೆ ನಯನತಾರಾ...ಹೀಗೆ ಒಂದರ ಹಿಂದೆ ಒಂದು ಹೆಸರುಗಳು ಕೇಳಿ ಬಂದಿದ್ದವು. ಆದರೆ ಆದರೆ ಆ ಸುದ್ದಿಗಳೆಲ್ಲಾ ಠುಸ್ ಎಂದಿದ್ದವು.
ಚಿತ್ರಕ್ಕೆ ನಾಯಕಿಯ ಆಯ್ಕೆ ತಡವಾದ ಕಾರಣ 'ಜೋಗಯ್ಯ' ಚಿತ್ರೀಕರಣಕ್ಕೂ ಹೊಡೆತಬಿತ್ತು. ಸೆಪ್ಟೆಂಬರ್ 1 ರಿಂದ ಮೈಸೂರಿನಲ್ಲಿ 'ಜೋಗಯ್ಯ' ಚಿತ್ರೀಕರಣ ಶುರು ಮಾಡಲು ಪ್ರೇಮ್ ತೀರ್ಮಾನಿಸಿದ್ದಾರೆ. ಈ ಬಾರಿ ಚಿತ್ರೀಕರಣವನ್ನು ಯಾವುದೇ ಕಾರಣಕ್ಕೂ ಮುಂದೂಡಬಾರದು ಎಂದು ಶಪಥ ಮಾಡಿದಂತಿದೆ ಪ್ರೇಮ್.
ರೂಪದರ್ಶಿ ಮತ್ತು ನಟಿ ಸುಮಿತಾ ಕೌರ್ ಐತ್ವಾಲ್ ಅವರನ್ನು ಕಣಕ್ಕಿಳಿಸುತ್ತಿದ್ದಾರೆ ಪ್ರೇಮ್. ಚಿತ್ರಕಲೆ, ಓದುವುದು, ಬರೆಯುವುದು, ಛಾಯಾಗ್ರಹಣ ಈಕೆಯ ಹವ್ಯಾಸಗಳಂತೆ. ಈ ಹಿಂದೆ ಯಾವ ಚಿತ್ರಗಳಲ್ಲಿ ನಟಿಸಿದ್ದಾರೆ ಸೇರಿದಂತೆ ಉಳಿದವಿವರಗಳು ಆಕೆ ಇಲ್ಲಿಗೆ ಬಂದ ಮೇಲಷ್ಟೆ ತಿಳಿಯಬೇಕು.


Click it and Unblock the Notifications











