For Quick Alerts
  ALLOW NOTIFICATIONS  
  For Daily Alerts

  ಸಿನಿಮಾ ದಂಪತಿಗಳೊಂದಿಗೆ ವಿನಾಕಾರಣ ಸಂತೋಷಕೂಟ

  By ಎಸ್.ಕೆ.ಶಾಮ ಸುಂದರ
  |  ಮೂರು ತಲೆಮಾರಿನ ಪತ್ರಕರ್ತರೊಂದಿಗೆ ಜಯಮಾಲಾ ದಂಪತಿಗಳು

  ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ಕ್ಲಬ್ಬಿನ ಡೈಮಂಡ್ ಬಾಕ್ಸ್ ಸಭಾಂಗಣಕ್ಕೆ ಜ. 22ರ ಮಂಗಳವಾರ ಸಂಜೆ ಆಗಮಿಸಿದ ಪ್ರತಿಯೊಬ್ಬರಿಗೂ ಆ 'ಗಿರಿಕನ್ಯೆ' ಬ್ರಿಗೇಡು ರೋಡಿನಿಂದ ಆಯ್ದುತಂದ ತುಂಬು ಹಳದಿಯ ಹೂಗುಚ್ಛಗಳನ್ನು ಕೊಡುತ್ತಿದ್ದರು. ಪ್ರತಿಯೊಬ್ಬರನ್ನೂ ಆತ್ಮೀಯವಾಗಿ ಬರಮಾಡಿಕೊಂಡು ಉಭಯಕುಶಲೋಪರಿ ಮಾಡುತ್ತಿದ್ದರು. "ಈ ಪಾರ್ಟಿಗೆ ವಿಶೇಷ ಕಾರಣವಿಲ್ಲ. ಸುಮ್ಮಸುಮ್ಮನೆ ಒಂದು ಗೆಟ್ ಟುಗೆದರ್ರು ಅಷ್ಟೆ . ಪತ್ರಕರ್ತರನ್ನು ಒಟ್ಟಾಗಿ ಭೇಟಿಯಾಗಿ ಬಹಳ ದಿನಗಳಾಗಿತ್ತು, ಎಲ್ಲರ ಜತೆ ಸಹಭೋಜನ ಮಾಡುವ ಇಷ್ಟದಿಂದ ನಿಮ್ಮನ್ನೆಲ್ಲ ಇಲ್ಲಿಗೆ ಕರೆಯಿಸಿಕೊಂಡೆವು" ಎಂದು ಹೇಳುತ್ತಿದ್ದರು ಜಯಮಾಲ.

  ಅವರು ಹೇಳುತ್ತಿದ್ದದ್ದು ಶೇ. 97.8 ನಿಜವಾಗಿತ್ತು. ಅಲ್ಲಿ ಪತ್ರಕರ್ತರನ್ನು ಬಿಟ್ಟರೆ ಚಲನಚಿತ್ರೋದ್ಯಮದವರಾರೂ ಇರಲಿಲ್ಲ. ಕನ್ನಡಪ್ರಭ, ಪ್ರಜಾವಾಣಿ, ಉದಯವಾಣಿ, ಬೆಂಗಳೂರು ಮಿರರ್, ಲಂಕೇಶ್ ಪತ್ರಿಕೆ, ಇಂಡಿಯನ್ ಎಕ್ಸ್ ಪ್ರೆಸ್, ಡೆಕ್ಕನ್ ಹೆರಾಲ್ಡ್, ಕಸ್ತೂರಿ ಚಾನಲ್ಲು, ಸುವರ್ಣ ಚಾನಲ್ಲು , ಚಿತ್ರಲೋಕ ಡಾಟ್ ಕಾಂ, ಮಾಧ್ಯಮ ಅಕಾಡೆಮಿಯ ಅಧ್ಯಕ್ಷರು, ಸಂಯುಕ್ತ ಕರ್ನಾಟಕ, ಹಾಯ್ ಬೆಂಗಳೂರ್, ಮುಂತಾದ ನಗರದ ಬಹುತೇಕ ಮಾಧ್ಯಮ ವೇದಿಕೆಗಳ ಪ್ರತಿನಿಧಿಗಳು ಸುದ್ದಿಯ ವಾಸನೆ ಇಲ್ಲದಿದ್ದರೂ ಕೇವಲ ಜಯಮಾಲ ಅವರ ಸ್ನೇಹಕ್ಕಾಗಿ ಬಂದಿದ್ದರು. ಗೋಡೆಗಳ ಮೇಲೆ ತೂಗುಹಾಕಿರುವ ಕ್ರಿಕೆಟ್‌ನ ಐತಿಹಾಸಿಕ ಕ್ಷಣಗಳ ಕಪ್ಪು ಬಿಳುಪು ಚಿತ್ರಗಳನ್ನು ನೋಡುತ್ತ, ಬ್ರಾಡ್‌ಮನ್‌ನಿಂದ ಬ್ರಿಜೇಶ್ ಪಟೇಲ್ ತನಕ ಕೆಎಸ್‌ಸಿಎ ಕಂಡ ಆಟಗಾರರ ಅಪರೂಪದ ಫೋಟೋಗಳ ಮೇಲೆ ಕಣ್ಣಾಡಿಸುತ್ತಾ, ಜ್ಯೂಸು ಕುಡಿಯುವುದು ತಿಂಡಿ ತಿನ್ನುವುದು ಲೋಕಾಭಿರಾಮ ಹರಟೆ ಹೊಡೆಯುವುದು ಆ ಸಂಜೆಯ ಏಕಮೇವ ಉದ್ದೇಶವಾಗಿತ್ತು.

  ವಿನಾಕಾರಣ ಪಾರ್ಟಿ ಮಾಡುತ್ತಾರೆ ಎಂದರೆ ನಾನಂತೂ ನಂಬುವುದಿಲ್ಲ. ನಾಲಕ್ಕು ಜನರನ್ನು ಕಲೆಹಾಕಿ ಎರಡು ಗಂಟೆ ಸಂತೋಷದಿಂದ ಕಾಲಕಳೆಯುವ ಉತ್ಸಾಹದ ಹಿಂದೆ ಏನೋ ಒಂದು ಹಿತವಾದ ಉದ್ದೇಶವಾದರೂ ಇದ್ದೇ ಇರತ್ತೆ ಎಂದು ನಮ್ಮ ನಂಬಿಕೆ. ಅದು ನಮ್ಮ ವೃತ್ತಿಯ ಜಾಯಮಾನ. ಪರಂತು, ಜಯಮಾಲಾ ಮತ್ತು ಅವರ ಪತಿ ಸಿನೆಮಾಟೋಗ್ರಾಫರ್ ಎಚ್.ಎಂ. ರಾಮಚಂದ್ರ ಅತಿಥಿಗಳ ಊಟೋಪಚಾರದಲ್ಲಿ ತಲ್ಲೀನರಾಗಿದ್ದರೇ ವಿನಾ ಸಿನಿಮಾ, ಪ್ರೊಡಕ್ಷನ್ನು, ಕಾಲ್ ಶೀಟು, ಬಿಡುಗಡೆ, ವಿಮರ್ಶೆ, ಕ್ಯಾಮರಾ, ಪ್ರಶಸ್ತಿ, ಲಾಭ ನಷ್ಟ ಯಾವೊಂದು ವಿಚಾರವನ್ನು ಪ್ರಸ್ತಾಪಿಸಲೇ ಇಲ್ಲ.

  ಸಂಯುಕ್ತ ಕರ್ನಾಟಕದ ಪ್ರತಿನಿಧಿ ಹಿರಿಯ ಚನಲಚಿತ್ರ ಪತ್ರಕರ್ತ ಸಿ. ಸೀತಾರಾಂ ಮತ್ತು ನಾನು ಕುಳಿತಿದ್ದ ಟೇಬಲ್ಲಿಗೆ ಬಂದ ಜಯಮಾಲಾ ನೇರ ಮಾತಿಗಿಳಿದರು. ಕಾಡು ಹರಟೆಗಿಂತ ಊರ ಹರಟೆ ಮೇಲು! ಭಾರತರತ್ನ ಪ್ರಶಸ್ತಿ ಯಾರಿಗೆ ಕೊಡ್ತಾರೆ ಸಾರ್? ಎಂದು ನನಗೆ ದಿಢೀರ್ ಪ್ರಶ್ನೆ ಹಾಕಿದರು. ನನಗೆ ತಿಳಿದ ಮಟ್ಟಿಗೆ ಈ ಬಾರಿ ಯಾರಿಗೂ ಕೊಡಬಾರದು ಅಂತ ಹುನ್ನಾರ ನಡಿತಾಯಿದೆ ಜಯಮಾಲಾ ಅವ್ರೆ, ಇಷ್ಟರ ಮೇಲೆ ಏನಾಗುತ್ತೋ ಗೊತ್ತಿಲ್ಲ ಅಂತ ನಾನಂದೆ. "ನನ್ನನ್ನು ಕೇಳಿದರೆ ಭಾರತ ರತ್ನ ಪ್ರಶಸ್ತಿಗೆ ಯಾರೂ ಅರ್ಹರಲ್ಲ, ಯಾರಿಗೂ ಕೊಡಲೇಬಾರದು " ಎಂದು ಜಯಮಾಲಾ ಸಣ್ಣ ಮತಾಪು ಕಡ್ಡಿ ಗೀರಿ ಚರ್ಚೆಗೆ ನಾಂದಿ ಹಾಡಿದರು.

  ಈ ದೇಶದಲ್ಲಿ ಪ್ರಶಸ್ತಿಗಳು ದಂಡಿಯಾಗಿವೆ. ಯಾರಿಗೆ ಯಾವುದಾದರೂ ಕೊಟ್ಟುಕೊಳ್ಳಲಿ. ಆದರೆ, ಭಾರತ ರತ್ನ ಎಂಬ ವಿಶಾಲಾರ್ಥವಿರುವ ಒಂದು ಗೌರವ ಪೋಲಾಗುವುದು ನನಗಿಷ್ಟವಿಲ್ಲ. ಮಹಿಳೆಯರ ಕೌಟುಂಬಿಕ ಮತ್ತು ಸಾಮಾಜಿಕ ಕಷ್ಟ ಕಾರ್ಪಣ್ಯಗಳಿಗೆ ಭಾರತದಲ್ಲಿ ಯಾರೂ ಸ್ಪಂದಿಸಿಲ್ಲ. ಕಾನೂನುಗಳು ಬೇಕಾದಷ್ಟಿವೆಯಾದರೂ ಪ್ರತಿಯೊಂದು ಹಂತದಲ್ಲೂ ಹೆಣ್ಣನ್ನು ಗೋಳುಹುಯ್ದುಕೊಳ್ಳುವುದಕ್ಕೆ ನಮ್ಮ ಸಮಾಜ ಸದಾ ಹವಣಿಸುತ್ತಲೇ ಇರುತ್ತದೆ. ಮೂವತ್ತಮೂರು ಪರ್ಸೆಂಟ್ ಸಮಾಚಾರ ಬಿಡಿ, ಜನಸಂಖ್ಯೆಯ ಶೇಕಡಾ 50ರಷ್ಟಿರುವ ಮಹಿಳೆಯರಿಗೆ ಅನಾದಿಕಾಲದಿಂದಲೂ ಈ ದೇಶದಲ್ಲಿ ಅನ್ಯಾಯವಾಗುತ್ತಲೇ ಇದೆ. ಇಂಥ ಸಮಸ್ಯೆಗಳು ಬಗೆಹರಿಯದೆ ಮಹಿಳೆಯರು ಬಸವಳಿಯುತ್ತಿರುವಾಗ ಭಾರತರತ್ನ ಪ್ರಶಸ್ತಿ ಕೊಡುವುದಕ್ಕೂ, ಪಡೆಯುವುದಕ್ಕೂ ಏನರ್ಥ? ಎಂದು ಜಬರಿಸಿದರು ಜಯಮಾಲಾ.

  ಹೆಣ್ಣುಮಕ್ಕಳಿಗೆ ಆಗುತ್ತಿರುವ ಪರಮ ಅನ್ಯಾಯ ನಿವಾರಣೆ ಆಗುವ ತನಕ ಇಂಥ ಪ್ರಶಸ್ತಿಗಳಿಗೆ ಕವಡೆ ಕಿಮ್ಮತ್ತಿಲ್ಲ ಎಂದು ಅಧಿಕಾರವಾಣಿಯಿಂದ ನುಡಿದ ಅವರು ಪುರಾಣ ಇತಿಹಾಸಗಳ ಉದಾಹರಣೆಯನ್ನೂ ತೆರೆದಿಟ್ಟರು. ಭಾರತರತ್ನ ಪ್ರಶಸ್ತಿ ನಿಜವಾಗಿ ಸಲ್ಲಬೇಕಾಗಿರುವುದು ಧರ್ಮರಾಯನಿಗಾಗಲೀ, ಶ್ರೀರಾಮಚಂದ್ರನಿಗಾಗಲೀ ಅಲ್ಲ. ಬದಲಿಗೆ ದ್ರೌಪತಿಗೆ ಕೊಡಿ, ಸೀತೆಗೆ ಕೊಡಿ ಸಾರ್ ಎಂದು ಹೇಳುತ್ತಲೇ, ನಾನೇನು ಫೆಮಿನಿಸ್ಟ್ ಥರ ಮಾತಾಡುತ್ತಿಲ್ಲ ಸಾರ್ ಪ್ಲೀಸ್ ಎಂಬ ಸಮಜಾಯಿಷಿಯನ್ನೂ ಮುಂದಿಟ್ಟು ಆಗತಾನೆ ಸಭಾಂಗಣವನ್ನು ಪ್ರವೇಶಿಸಿದ ಇನ್ನೊಬ್ಬ ಅತಿಥಿಯನ್ನ ಸ್ವಾಗತಿಸಲು ಎದ್ದುಹೊರಟರು.

  ಆಮೇಲೆ ಪಾರ್ಟಿಯಲ್ಲಿ ಅವರೂ ಕಳೆದು ಹೋದರು. ನಾವೂ ಕಳೆದು ಹೋದ್ವಿ. ಪತ್ರಕರ್ತರ ಸಣ್ಣ ಗುಂಪು ಇನ್ನೊಂದು ಟೇಬಲ್ಲಿನಲ್ಲಿ ಕುಳಿತು ಕನ್ನಡ ಚಿತ್ರರಂಗದ ಸಮಕಾಲೀನ ವಿಚಾರಗಳ ಬಗ್ಗೆ ಹರಟೆಕೊಚ್ಚುವುದಕ್ಕೆ ಶುರುಹಚ್ಚಿಕೊಂಡೆವು. ಮಾತುಕತೆಗಳು ಅರ್ಧಮುಗಿದು, ಸಂತೋಷಕೂಟ ಸಂತಸದಿಂದ ಮುಗಿದ ನಂತರ ಸ್ಟೇಡಿಯಂನಿಂದ ಹೊರಬರುವ ಹೊತ್ತಿಗೆ ನನಗೆ ಎರಡು ಸಂಗತಿಗಳು ಗೋಚರವಾಯಿತು. ಜಯಮಾಲಾ ಅವರಿಗೆ ಬೆಂಗಳೂರು ವಿಶ್ವವಿದ್ಯಾಲಯ ಪಿಎಚ್ ಡಿ ನೀಡಿದ ಸುದ್ದಿಯನ್ನು ಯಾವತ್ತೋ ಓದಿದ್ದೆ. ಆದರೆ, ಪಿಎಚ್‌ಡಿ ಪದವಿಯನ್ನು ಅವರಿಗೆ ಮಾಜಿ ರಾಷ್ಟಪತಿ ಎಪಿಜೆ ಅಬ್ದುಲ್ ಕಲಾಂ ಅವರು ಪ್ರದಾನ ಮಾಡಿದ್ದು ನೆನಪಿರಲಿಲ್ಲ. ಕರ್ನಾಟಕದಲ್ಲಿ ಚಲನಚಿತ್ರ ಅಭಿನೇತ್ರಿಯೊಬ್ಬರು ಪಿಎಚ್‌ಡಿ ಪದವಿ ಪಡೆಯುತ್ತಿರುವುದು ಇದೇ ಮೊದಲು ಎಂದೂ, ಕನ್ನಡಿಗ ಸಿನೆಮಾಟೋಗ್ರಾಫರ್ (ರಾಮಚಂದ್ರ) ಒಬ್ಬರಿಗೆ ಹಾಲಿವುಡ್ನಲ್ಲಿ ಅವಕಾಶ ಸಿಗುತ್ತಿರುವುದು ಇದೇ ಮೊದಲೂ ಎಂತಲೂ ಆನಂತರ ಗೊತ್ತಾಗಿ ಬಂತು.

  ಪಿಎಚ್‌ಡಿ ಅಧ್ಯಯನಕ್ಕೆ ಜಯಮಾಲಾ 'ಕರ್ನಾಟಕ ರಾಜ್ಯದ ನಿರಾಶ್ರಿತ ಮಹಿಳೆಯರ ಪುನರ್ವಸತಿ ಆಡಳಿತ ವ್ಯವಸ್ಥೆ, ಒಂದು ಅಧ್ಯಯನ" ವಿಷಯ ಆಯ್ದುಕೊಂಡಿದ್ದರು. ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ ಪ್ರಬಂಧಕ್ಕೆ ಅವರಿಗೆ ಮಾರ್ಗದರ್ಶನ ನೀಡಿದವರು ಡಾ.ಎಂ.ಜಿ.ಕೃಷ್ಣನ್. ಜಯಂತಿ ಹೆಸರಲ್ಲಿ ಪ್ರಬಂಧ ಸಲ್ಲಿಸಿ ಡಾಕ್ಟರೇಟ್ ಪಡೆದಿರುವ ಜಯಮಾಲಾ, ಈಗ ರಾಣಿ ಅಬ್ಬಕ್ಕನ ಬಗ್ಗೆ ಅಧ್ಯಯನ ನಡೆಸುತ್ತಿದ್ದಾರೆ. ಜೊತೆಗೆ ರಾಣಿ ಅಬ್ಬಕ್ಕನ ಸಿನಿಮಾ ತಯಾರಿಸುವ ಹಂಬಲವೂ ಇದೆಯಂತೆ. ಅದೆಲ್ಲ ಸಿನಿಮಾ ಮಾತಾಯಿತು, ಸಾಮಾಜಿಕ ಕ್ಷೇತ್ರದಲ್ಲಿ ಜಯಮಾಲಾ ಅವರು ದೇವದಾಸಿ ಪದ್ದತಿ ನಿರ್ಮೂಲನೆಗೆ ಕಂಕಣಬದ್ಧರಾಗಿದ್ದಾರೆ. ಮೈಸೂರಿನ "ಶಕ್ತಿಧಾಮ" ಸಂಸ್ಥೆಯ ಕಾರ್ಯನಿರ್ವಾಹಕ ಟ್ರಸ್ಟಿಯಾಗಿ ನಿರ್ಭಾಗ್ಯ ಮತ್ತು ಪರಿತ್ಯಕ್ತ ಮಹಿಳೆಯರ ಪುನರ್ವಸತಿ ಯೋಜನೆಯಲ್ಲಿ ಸಕ್ರಿಯವಾಗಿ ಕೆಲಸಮಾಡುತ್ತಿದ್ದಾರೆ.

  ಮಂಗಳೂರು ಹೆಣ್ಣು ಮಗಳಾದ ಜಯಮಾಲಾ ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರೆ. ತುಳು, ಕನ್ನಡ, ತಮಿಳು, ತೆಲುಗು, ಹಾಗೂ ಹಿಂದಿ ಸೇರಿದಂತೆ ಒಟ್ಟು 75ಚಿತ್ರಗಳಲ್ಲಿ ಅವರು ಅಭಿನಯಿಸಿದ್ದಾರೆ. ಐದು ಚಿತ್ರಗಳನ್ನು ನಿರ್ಮಿಸಿದ್ದಾರೆ. 'ತಾಯಿ ಸಾಹೇಬ' ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿಯ ಮನ್ನಣೆಯೂ ಸಿಕ್ಕಿದೆ. ತಮ್ಮ 13ನೇ ವಯಸ್ಸಿನಲ್ಲಿ 'ಕಾಸ್ ದಾಯೆ ಕಂಡನೆ' ಎಂಬ ತುಳು ಚಿತ್ರದಲ್ಲಿ ಅಭಿನಯಿಸುವುದರೊಂದಿಗೆ ಅವರು ಚಲನಚಿತ್ರರಂಗ ಪ್ರವೇಶಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ತಾಯಿಸಾಹೇಬ ಚಿತ್ರ ನಿರ್ಮಾಣದ ಸಮಯದಲ್ಲೇ ಅವರು ಛಾಯಾಗ್ರಾಹಕ ರಾಮಚಂದ್ರ ಅವರನ್ನು ವರಿಸಿದ್ದು, ಹವ್ಯಕರ ಮನೆ ಸೊಸೆಯಾದದ್ದು.

  ಸಂತೋಷಕೂಟದ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X