»   » ಮೆಗಾಸ್ಟಾರ್‌ ಚಿರಂಜೀವಿ ರಾಜಕಾರಣಿ ಆಗ್ತಾರಾ?

ಮೆಗಾಸ್ಟಾರ್‌ ಚಿರಂಜೀವಿ ರಾಜಕಾರಣಿ ಆಗ್ತಾರಾ?

Posted By:
Subscribe to Filmibeat Kannada

*ಶಂಕರ ರೆಡ್ಡಿ , ಹೈದರಾಬಾದ್‌

‘ಮುಠಾಮೇಸ್ತ್ರಿ’ ಎಂಬ ತೆಲುಗು ಸಿನಿಮಾ ವರ್ಷಗಳ ಹಿಂದೆ ಅಬ್ಬರಿಸಿದ ದಿನಗಳಲ್ಲೇ ಮೆಗಾಸ್ಟಾರ್‌ ಚಿರಂಜೀವಿ ರಾಜಕೀಯಕ್ಕೆ ಬರ್ತಾರೆ ಅನ್ನುವ ಸುದ್ದಿ ಆಂಧ್ರಪ್ರದೇಶದಲ್ಲಿ ಹುಟ್ಟಿತ್ತು. ಆದರೆ ‘ರಾಜಕೀಯ ಹೊಲಸು ಕ್ಷೇತ್ರ. ಅದರ ಸಹವಾಸ ನನಗೆ ಬೇಡ’ ಅನ್ನುವ ಮೂಲಕ ಚಿರು ಆ ಸುದ್ದಿಗೆ ತಣ್ಣೀರೆರಚಿದ್ದರು.

ಆದರೀಗ ತಮಗೆ ರಾಜಕೀಯ ಬೇಡ ಎಂದು ಸಮರ್ಥಿಸಿಕೊಳ್ಳಲು ಚಿರಂಜೀವಿ ಹತ್ತಿರ ಪಾಯಿಂಟುಗಳೇ ಇಲ್ಲ. ಈಗ ಆಂಧ್ರಪ್ರದೇಶದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಹತ್ತಿರದಿಂದ ಬಲ್ಲವರು ಹೇಳುವ ಪ್ರಕಾರ, ರಾಜಕೀಯ ಪ್ರವೇಶಿಸಲು ಚಿರಂಜೀವಿ ವ್ಯವಸ್ಥಿತವಾಗಿ ಸಜ್ಜಾಗುತ್ತಿದ್ದಾರೆ. ತಮ್ಮ ಲೇಟೆಸ್ಟ್‌ ಸಿನಿಮಾ ‘ಇಂದ್ರ’ 175 ದಿನ ಯಶಸ್ವಿಯಾಗಿ ಓಡಿದ ಸಂತೋಷ ಹಂಚಿಕೊಳ್ಳಲು ಚಿರು ಅಭಿಮಾನಿಗಳು ಏರ್ಪಡಿಸಿದ ಸಮಾರಂಭ ಕೂಡ ಇದಕ್ಕೆ ಸಾಕ್ಷಿಯಾಯಿತು.

ವಿಜಯವಾಡದಲ್ಲಿ ನಡೆದ ಆ ಸಮಾರಂಭದಲ್ಲಿ ಹತ್ತಿರ ಹತ್ತಿರ 70 ಸಾವಿರ ಚಿರು ಅಭಿಮಾನಿಗಳಿದ್ದರು. ವೇದಿಕೆ ಮೇಲೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹಾಗೂ ಬಿಜೆಪಿ ಅಧ್ಯಕ್ಷ ವೆಂಕಯ್ಯನಾಯ್ಡು ಇದ್ದರು. ಚಿರಂಜೀವಿ ಕುರಿತಂತೆ ಅವರ ಹೊಗಳಿಕೆ ಮೂರನ್ನು ಆರು ಮಾಡಿ ಹೇಳಿದಂತಿತ್ತು. ಉದಾಹರಣೆಗೆ- ಸಮಾರಂಭದಲ್ಲಿ ಮಾತಾಡಿದ ಚಂದ್ರಬಾಬು ನಾಯ್ಡು , ‘ಇಲ್ಲಿ ಲಕ್ಷೋಪಲಕ್ಷ ಚಿರಂಜೀವಿ ಅಭಿಮಾನಿಗಳು ನೆರೆದಿರುವುದೇ ಅವರ ಜನಪ್ರಿಯತೆ ಹಾಗೂ ಕಲಾವಂತಿಕೆಗೆ ಸಾಕ್ಷಿ’ ಎಂದರು. ಆದರೆ ಅಲ್ಲಿ ಒಂದು ಲಕ್ಷ ಜನರೂ ಇರಲಿಲ್ಲ. ವೆಂಕಯ್ಯ ನಾಯ್ಡು ಹೊಗಳಿಕೆ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಯಿತು. ‘ಜೀವಮಾನದಲ್ಲಿ ನಾನು ನೋಡಿದ ಅತ್ಯುತ್ತಮ ಚಿತ್ರ ಇಂದ್ರ’ ಅಂತ ನಾಯ್ಡು ಹೇಳಿದಾಗ, ಯಾರೋ ಅಭಿಮಾನಿಗಳು ‘ಇದು ಬೊಗಳೆ’ ಅಂತ ಜೋರಾಗೇ ಹೇಳಿದರು.

ಚಿರಂಜೀವಿ ಕೂಡ ತಾವೇನು ಕಡಿಮೆ ಎಂಬಂತೆ- ‘ಚಂದ್ರಬಾಬು ನಾಯ್ಡು ಮುಖ್ಯಮಂತ್ರಿ ಅಲ್ಲ, ಪ್ರಧಾನಿ ಆಗಿರಬೇಕಿತ್ತು’ ಅಂದರು. ಆಗ ಚಪ್ಪಾಳೆ ನಡುವೆಯೇ ಕೇಳಿದ ಮಾತು- ‘ಹಾಗಾದರೆ ತೆರವಾಗುವ ಮುಖ್ಯಮಂತ್ರಿ ಜಾಗಕ್ಕೆ ನೀವು ಬರ್ತೀರಾ?!’

ಈಗ ಚಿರಂಜೀವಿ ತಮ್ಮ ಹೊಸ ಸಿನಿಮಾ ‘ರಮಣ’ದ ತಯಾರಿಯಲ್ಲಿದ್ದಾರೆ. ಮುರುಗದಾಸ್‌ ನಿರ್ದೇಶನದ ತಮಿಳಿನ ಯಶಸ್ವಿ ಚಿತ್ರದ ರೀಮೇಕ್‌ ಇದು. ರೀಮೇಕ್‌ ಆದರೂ ಕೆಲವು ರಾಜಕೀಯ ಪಂಚ್‌ಗಳನ್ನು ಚಿತ್ರದಲ್ಲಿ ತುಂಬಲು ಚಿರು ನಿಶ್ಚಯಿಸಿದ್ದು, ಈ ವಿಷಯವಾಗಿ ಸೂಪರ್‌ ಸ್ಟಾರ್‌ ರಜನಿಕಾಂತ್‌ ಜೊತೆ ಕೂಡ ಚರ್ಚಿಸಿದ್ದಾರೆ. ರಾಜಕೀಯ ಪಂಚ್‌ಗಳೇ ಚಿರು ರಾಜಕೀಯ ಎಂಟ್ರಿಯ ವರಸೆಯಾ ಅನ್ನುವುದು ಸದ್ಯಕ್ಕಿರುವ ಜಿಜ್ಞಾಸೆ.

ಇಷ್ಟೇ ಆಗಿದ್ದಿದ್ದರೆ ಚಿರಂಜೀವಿ ರಾಜಕೀಯ ಪ್ರವೇಶದ ವಿಷಯ ಈ ಪಾಟಿ ಗಂಭೀರವಾಗುತ್ತಿರಲಿಲ್ಲ. ಈಗ ವಾರಕ್ಕೆ ಎರಡು ಮೂರು ಬಾರಿಯಾದರೂ ಚಿರಂಜೀವಿ ಹಾಗೂ ಚಂದ್ರಬಾಬು ನಾಯ್ಡು ಫೋನಿನಲ್ಲಿ ಹರಟುತ್ತಾರಂತೆ. ವೆಂಕಯ್ಯ ನಾಯ್ಡು ಕೂಡ ಅಭಿಮಾನಿಯಾಗಿ ಚಿರು ಜೊತೆಗೆ ಗಂಟೆಗಟ್ಟಲೆ ಮಾತಾಡುತ್ತಿದ್ದಾರಂತೆ.

‘ರಮಣ’ ಚಿತ್ರದ ನಂತರ ಚಿರಂಜೀವಿ ರಾಜಕೀಯಕ್ಕೆ ರಾಜಕೀಯಕ್ಕೆ ಬರುವ ಸಾಧ್ಯತೆಗಳು ನಿಚ್ಚಳವಾಗಿವೆ ಎಂದು ಚಿರು ಆಪ್ತ ವಲಯಗಳು ಹೇಳುತ್ತಿವೆ. ಆದರೆ, ರಾಜಕೀಯ ಪ್ರವೇಶದ ವಿಷಯ ಎತ್ತಿದರೆ ಸಾಕು ಚಿರಂಜೀವಿ ಮಾತಿಗೆ ಸಿಗದೆ ತಪ್ಪಿಸಿಕೊಳ್ಳುತ್ತಾರೆ !

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada