»   » ಮಗು ನೋಡಿಕೊಳ್ಳುತ್ತಿದ್ದಾರೆ, ಮನೆ ವಾರ್ತೆ ನೋಡಿಕೊಳ್ಳುತ್ತಿದ್ದಾರೆ, ಆಮೇಲೆ...

ಮಗು ನೋಡಿಕೊಳ್ಳುತ್ತಿದ್ದಾರೆ, ಮನೆ ವಾರ್ತೆ ನೋಡಿಕೊಳ್ಳುತ್ತಿದ್ದಾರೆ, ಆಮೇಲೆ...

Subscribe to Filmibeat Kannada

*ಪಾವನಿ

ಮಾಲಾಶ್ರೀ ಟೀವಿಯಲ್ಲಿ ನಟಿಸುತ್ತಾರೆ ಅಂತ ಸುದ್ದಿಯಾಗಿತ್ತು . ಚಂದನದಲ್ಲಿ ಸುಧಾರಾಣಿ ಕಾಣಿಸಿಕೊಂಡಂತೆ ಈಟೀವಿಯಲ್ಲಿ ಮಾಲಾಶ್ರೀ ಕಾಣಿಸಿಕೊಳ್ಳುತ್ತಾರೆ. ಜನರ ಗಮನ ಸೆಳೆಯಲು ಸೋತಿರುವ ‘ಪರ್ವ’ ಧಾರಾವಾಹಿಗೆ ಮಾಲಾಶ್ರೀ ಅವರನ್ನು ಕರೆ ತರುವ ಮೂಲಕ ಧಾರಾವಾಹಿಯನ್ನು ಜನಪ್ರಿಯಗೊಳಿಸುವುದು ಈಟೀವಿ ಹಂಚಿಕೆ ಅನ್ನುವುದು ಸುದ್ದಿಯ ಸಾರ.

ಸದ್ಯಕ್ಕೆ ಮಾಲಾಶ್ರೀ ಟೀವಿಯಲ್ಲಿ ಕಾಣಿಸಿಕೊಳ್ಳುತ್ತಿಲ್ಲ . ಆಕೆ ಮತ್ತೆ ಘರ್ಜಿಸಲು ಸಿದ್ಧವಾಗುತ್ತಿದ್ದಾರೆ ; ಕಿರುತೆರೆಯಲ್ಲಲ್ಲ - ಹಿರಿತೆರೆಯಲ್ಲಿ !

ಪೊಲೀಸ್‌ ಜಗತ್ತಿನ ಏಕೈಕ ಸೂಪರ್‌ಸ್ಟಾರಿಣಿ ಕಿರಣ್‌ ಬೇಡಿ ಪಾತ್ರದಲ್ಲಿ ನಟಿಸಬೇಕೆನ್ನುವುದು ಮಾಲಾಶ್ರೀ ಕನಸು. ಕೋಟಿ ನಿರ್ಮಾಪಕ ರಾಮು ನಿರ್ಮಾಣದ ‘ಕಿರಣ್‌ ಬೇಡಿ’ ಆಗ ಸೆಟ್ಟೇರುತ್ತದೆ ಈಗ ಸೆಟ್ಟೇರುತ್ತದೆ ಎನ್ನುವ ಮಾತುಗಳು ತುಂಬಾ ದಿನಗಳಿಂದ ಕೇಳಿಬರುತ್ತಲೇ ಇವೆ. ಮಾಲಾಶ್ರೀ ದಪ್ಪವಾಗುತ್ತಲೇ ಇದ್ದಾರೆ .

‘ಕಿರಣ್‌ ಬೇಡಿ’ ಸಿನಿಮಾಗೆ ಕಾಲ ಕೂಡಿ ಬಂದಂತಿದೆ. ರಾಮು ಅವರು ಅಂದುಕೊಂಡಂತೆ ಎಲ್ಲವೂ ಸಾಗಿದರೆ- ಇನ್ನೊಂದು ಅಥವಾ ಎರಡು ತಿಂಗಳಲ್ಲಿ ಕಿರಣ್‌ ಬೇಡಿ ಸೆಟ್ಟೇರುವುದು ಖಚಿತ. ಕಿರಣ್‌ಬೇಡಿ ಇನ್ನೊಂದು ದುಬಾರಿ ಬಜೆಟ್ಟಿನ ಚಿತ್ರವಾಗಲಿದೆ.

ರಾಮು ನಿರ್ಮಾಣದ ಉಪೇಂದ್ರ ನಾಯಕರಾಗಿ ಅಭಿನಯಿಸಿರುವ ‘ಹಾಲಿವುಡ್‌’ ಚಿತ್ರ ಭಾರೀ ಯಶಸ್ಸನ್ನು ಕಾಣದಿದ್ದರೂ, ಕಾಸು ಗಳಿಕೆಯಲ್ಲಿ ಪರವಾಗಿಲ್ಲ ಅನ್ನಿಸಿಕೊಂಡಿರುವುದು ರಾಮುಗೆ ಸಮಾಧಾನ ತಂದಿದೆ. ಚಿತ್ರದ ಬಜೆಟ್‌ 7 ಕೋಟಿ ರುಪಾಯಿಯಲ್ಲಿ ಸಾಕಷ್ಟು ಹಣ ಯದ್ವಾತದ್ವಾ ಪೋಲಾಯಿತು ಅನ್ನುವ ಸತ್ಯ ರಾಮುಗೆ ಅರ್ಥವಾಗಿದೆ. ಹೊಸ ಚಿತ್ರಗಳಲ್ಲಿ ಹಳೆಯ ತಪ್ಪನ್ನು ತಿದ್ದಿಕೊಳ್ಳುವ ಜಾಣ ನಿರ್ಮಾಪಕ ಅವರು.

ಅಮ್ಮೋರಿಂದ ಮಾರಮ್ಮ

ದೇವಿ, ಭಕ್ತೆ ಹಾಗೂ ದುಷ್ಟಶಕ್ತಿಗಳ ಕಥೆಯ ‘ಅಮ್ಮೋರು’ ಅನ್ನುವ ಚಿತ್ರ ತೆಲುಗಿನಲ್ಲಿ ಬಾಕ್ಸಾಫೀಸ್‌ ಕೊಳ್ಳೆ ಹೊಡೆದಿತ್ತು . ಇಂಥದ್ದೇ ಒಂದು ಚಿತ್ರವನ್ನು ಕನ್ನಡದಲ್ಲಿ ನಿರ್ಮಿಸುವ ಯೋಜನೆಯೂ ರಾಮು ಅವರಲ್ಲಿ ಸುಳಿದಾಡುತ್ತಿದೆ. ತೆಲುಗಿನ ಅಮ್ಮೋರು, ಕನ್ನಡದಲ್ಲಿ ‘ಮಾರಮ್ಮ’ !

ತವರಿಗೆ ಬಾ ತಂಗಿ ಮೂಲಕ ಮತ್ತೆ ಶುಕ್ರದೆಶೆಗೆ ಸಂದಿರುವ ಸಾಯಿಪ್ರಕಾಶ್‌ ಅವರಿಂದ ‘ಮಾರಮ್ಮ’ ಚಿತ್ರವನ್ನು ನಿರ್ದೇಶಿಸುವ ಚಿಂತನೆ ರಾಮು ಅವರದು.

ಕಿರಣ್‌ಬೇಡಿ ಹಾಗೂ ಮಾರಮ್ಮ ಮಾತ್ರವಲ್ಲದೆ ಇನ್ನಷ್ಟು ಸಿನಿಮಾ ಯೋಜನೆಗಳು ರಾಮು ಅವರಲ್ಲಿವೆ. ಶಿವರಾಜ್‌ಕುಮಾರ್‌ ನಾಯಕರಾಗಿ ನಟಿಸುವ ನಂಜುಂಡಿ ಚಿತ್ರ ಸೆಟ್ಟೇರುವುದು ಬಾಕಿಯಿದೆ. ರವಿಚಂದ್ರನ್‌ ಅಭಿನಯದ ‘ಶಕುನಿ’ ಚಿತ್ರದ ಶೂಟಿಂಗ್‌ ಇನ್ನೂ ಮುಗಿದಿಲ್ಲ . ಕೊನೆಹಂತದ ಶೂಟಿಂಗ್‌ಗೋಸ್ಕರ ‘ಶಕುನಿ’ ರವೀನಾ ಟಂಡನ್‌ಗಾಗಿ ಕಾಯುತ್ತಿದೆ. ಮಸ್ತು ಮಸ್ತು ಹುಡುಗಿ ಯಾವಾಗ ಬರುವಳೋ ?

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada