»   » ಕನ್ನಡತಿ ಶುಭಾ ಪೂಂಜಾಗೆ ಡಿಮ್ಯಾಂಡಪ್ಪೊ... ಡಿಮ್ಯಾಂಡ್‌!

ಕನ್ನಡತಿ ಶುಭಾ ಪೂಂಜಾಗೆ ಡಿಮ್ಯಾಂಡಪ್ಪೊ... ಡಿಮ್ಯಾಂಡ್‌!

Posted By:
Subscribe to Filmibeat Kannada


ಕನ್ನಡದ ಹುಡುಗಿಯರು ಅಂದ್ರೆ ನಮಗೆ ಮೊದಲು ಶ್ರುತಿ, ಸುಧಾರಾಣಿ ನೆನಪಾಗುತ್ತಿದ್ದರು. ಈಗ ರಮ್ಯಾ, ರಕ್ಷಿತಾ(?) ನೆನಪಾಗುತ್ತಾರೆ. ಇದರ ಜೊತೆಗೆ ಪರಭಾಷಾ ಚಿತ್ರಗಳಲ್ಲಿ ಮಿಂಚಿದ ಕನ್ನಡತಿಯರೂ ಇದ್ದಾರೆ. ಅಂಥವರಲ್ಲಿ ಒಬ್ಬರು ಶುಭಾ ಪೂಂಜಾ.

ಮಂಗಳೂರು ಮೂಲದ ಕನ್ನಡದ ಹುಡುಗಿ ಶುಭಾ ಪೂಂಜಾ, ತಮಿಳು ಚಿತ್ರರಂಗದಲ್ಲೀಗ ಮಿಂಚುತ್ತಿದ್ದಾರೆ. ಶುಭಾ ಬೆಂಗಳೂರಿನ ಬಿಷಪ್‌ ಕಾಟನ್‌ ಶಾಲೆಯಲ್ಲಿ ಕಲಿತವರು. ‘ಮಿಸ್‌ ಚೆನ್ನೈ-2003’ ಕಿರೀಟವನ್ನೂ ಧರಿಸಿದ್ದ ಶುಭಾ, ಆಭರಣಗಳ ಜಾಹೀರಾತುಗಳಲ್ಲಿ ರೂಪದರ್ಶಿಯಾಗಿ ಕಾಣಿಸಿಕೊಂಡರು. ಆನಂತರ ಚಿತ್ರರಂಗಕ್ಕೆ ಪ್ರವೇಶ ಪಡೆದರು.

ಅವರು ಮೊಟ್ಟಮೊದಲು ಕಾಣಿಸಿಕೊಂಡಿದ್ದು ‘ಮಚಿ’ ಎಂಬ ತಮಿಳು ಚಿತ್ರದಲ್ಲಿ. ಶಿವಾಜಿ ಗಣೇಶನ್‌ ಅವರ ಮೊಮ್ಮಗ ದುಷ್ಯಂತ್‌ ಈ ಚಿತ್ರದ ನಾಯಕ. ಶುಭಾ ಚಿತ್ರದ ನಾಯಕಿ. ಇದೀಗ ರೋಹನ್‌ ಸಾಲಿಯಾನ್‌, ಷಣ್ಮುಗ ಹಾಗೂ ರಿಚರ್ಡ್‌ ಜೊತೆ ‘ತಿರುಡಿಯಾ ಇದಯತೈ’ ಎಂಬ ಚಿತ್ರದಲ್ಲಿ ಅಭಿನಯಿಸುತ್ತಿದ್ದಾಳೆ. ಮಧುಬನ್‌ ಪ್ರೊಡಕ್ಷನ್ಸ್‌ನ ಈ ಚಿತ್ರವನ್ನು ರೋಹನ್‌ ಸಾಲಿಯಾನ್‌ ತಾಯಿ ನಿರ್ಮಿಸುತ್ತಿದ್ದಾರೆ.

ಶುಭಾ ಇಷ್ಟೆಲ್ಲ ಆದ ಮೇಲೆ ‘ಜಾಕ್‌ಪಾಟ್‌’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದರು, ಬಂದಷ್ಟೇ ವೇಗವಾಗಿ ತಮಿಳಿಗೆ ವಾಪಸ್ಸಾದರು. ಧ್ಯಾನ್‌ ನಾಯಕನಾಗಿದ್ದ ಆ ಚಿತ್ರ, ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿದ್ದು ಎಲ್ಲರಿಗೂ ಗೊತ್ತಿದೆ.

‘ದಕ್ಷಿಣ ಭಾರತದಲ್ಲಿ ತಮಿಳು ಚಿತ್ರರಂಗ ಮಾತ್ರ ಹೊಸಬರಿಗೆ ಅವಕಾಶಗಳನ್ನು ನೀಡಿ ಸ್ವಾಗತಿಸುತ್ತದೆ. ತಮಿಳು ಚಿತ್ರಗಳು ಹೊಸ ಬಗೆಯಲ್ಲಿರುತ್ತವೆ ಹಾಗೂ ಆಸಕ್ತಿದಾಯಕವಾಗಿರುತ್ತವೆ. ಈಗ ನನ್ನ ಮೂಲ ಸ್ಥಳಕ್ಕೆ ಬಂದಿರುವುದು ತುಂಬಾ ಖುಷಿ ಉಂಟುಮಾಡಿದೆ. ನಮ್ಮ ನಾಡಿನಲ್ಲೇ ನಮ್ಮನ್ನು ಗುರುತಿಸುವುದಕ್ಕೆ ವಿಶಿಷ್ಟ ಅರ್ಥವಿದೆ’ ಎಂದು ಜಾಕ್‌ಪಾಟ್‌ ಚಿತ್ರದ ಸಂದರ್ಭದಲ್ಲಿ ಆಕೆ ಉಲಿದಿದ್ದರು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada