»   » ‘ಈ ಬಂಧನ’ದಲ್ಲಿ ವಿಷ್ಣು, ಜಯಪ್ರದಾ ಮತ್ತು ದರ್ಶನ್‌!

‘ಈ ಬಂಧನ’ದಲ್ಲಿ ವಿಷ್ಣು, ಜಯಪ್ರದಾ ಮತ್ತು ದರ್ಶನ್‌!

Posted By:
Subscribe to Filmibeat Kannada


ಅಂದು ಅಣ್ಣಾವ್ರ ಜೊತೆ ನಟಿಸಿದ್ದ ಜಯಪ್ರದಾ ಮೇಡಂ ಇಂದು ತಮ್ಮಾವ್ರ ಜೊತೆ ನಟಿಸಲು ರೆಡಿ. ಈ ಚಿತ್ರದಲ್ಲಿ ದರ್ಶನ್‌ ಬೇರೆ ಇದ್ದಾರೆ. ಎಲ್ಲವೂ ಸರಿ. ಆದರೆ?

ಹೆಸರಾಂತ ನಿರ್ದೇಶಕ ಸತ್ಯಜಿತ್‌ ರೇ ಅವರಿಂದ ‘ಭಾರತದ ಅತ್ಯಂತ ಸುಂದರ ನಟಿ’ ಎಂಬ ಪ್ರಶಂಸೆಗೆ ಪಾತ್ರರಾಗಿದ್ದ ಜಯಪ್ರದಾ ಮತ್ತೆ ಸ್ಯಾಂಡಲ್‌ವುಡ್‌ಗೆ ಮರಳಲಿದ್ದಾರೆ. ನಟ ವಿಷ್ಣುವರ್ಧನ್‌ರೊಂದಿಗೆ ‘ಈ ಬಂಧನ’ ಚಿತ್ರದಲ್ಲಿ ಅವರು ಅಭಿನಯಿಸಲಿದ್ದಾರೆ. ‘ಮದನ’ ಚಿತ್ರ ಕೈಕಚ್ಚಿದರೂ ಬೆಚ್ಚದೇ ಜೈಜಗದೀಶ್‌ ಮತ್ತು ವಿಜಯಲಕ್ಷ್ಮಿ ಈ ಚಿತ್ರವನ್ನು ನಿರ್ಮಾಣ ಮಾಡಲಿದ್ದಾರೆ.

ಮುಂಬೈ ಮೂಲದ ನಟ ಮತ್ತು ನಿರ್ದೇಶಕ ಸಚಿನ್‌ ಈ ಚಿತ್ರವನ್ನು ನಿರ್ದೇಶಿಸುವರು. ‘ಏಕದಂತ’ ನಂತರ ಅವರಿಗೆ ಇದು ಎರಡನೇ ಕನ್ನಡ ಚಿತ್ರ. ಈ ಚಿತ್ರದ ಬಗ್ಗೆ ಜಯಪ್ರದಾಗೂ ಅಕ್ಕರೆ ಇದೆ. ಎಲ್ಲವೂ ಸರಿ, ಆದರೆ ಶೂಟಿಂಗ್‌ಗೆ ದಿನಾಂಕಗಳ ಹೊಂದಾಣಿಕೆ ಕಷ್ಟವಾಗುತ್ತಿದೆ. ಆದರೂ ಹೇಗೋ ನಿಭಾಯಿಸುವ ವಿಶ್ವಾಸ ಜೈಗದೀಶ್‌ ಅವರದು.

ನಾಗತಿಹಳ್ಳಿ ಚಂದ್ರಶೇಖರ್‌ ನಿರ್ದೇಶನದ ‘ಮಾತಾಡ್‌ ಮಾತಾಡ್‌ ಮಲ್ಲಿಗೆ’ಯ ಶೂಟಿಂಗ್‌, ಸುನೀಲ್‌ ಕುಮಾರ್‌ ದೇಸಾಯಿ ನಿರ್ದೇಶನದ ‘ಕ್ಷಣ ಕ್ಷಣ’ ಚಿತ್ರದ ಡಬ್ಬಿಂಗ್‌ ಕಾರ್ಯ ಸೇರಿದಂತೆ ವಿಷ್ಣುವರ್ಧನ್‌ ಅಂತೂ ಸಕತ್ತು ಬಿಜಿ. ಇನ್ನೊಂದು ಕಡೆ ಜಯಪ್ರದಾಗೆ ಸಹಾ ಸಾಕಷ್ಟು ಕೆಲಸಗಳಿವೆ. ಈ ಮಧ್ಯೆ ಉತ್ತರ ಪ್ರದೇಶದ ಚುನಾವಣೆ ಬೇರೆ ಘೋಷಣೆಯಾಗಿದೆ. ಜಯಪ್ರದಾ ಪ್ರತಿನಿಧಿಸುವ ಸಮಾಜವಾದಿ ಪಕ್ಷಕ್ಕೆ ಉತ್ತರ ಪ್ರದೇಶದಲ್ಲಿ ಚುನಾವಣೆ ಪ್ರತಿಷ್ಠೆಯ ಪ್ರಶ್ನೆ. ಹೀಗಾಗಿ ಜಯಪ್ರದಾಗೆ ಸದ್ಯಕ್ಕೆ ಪುರಸೊತ್ತಿಲ್ಲ!

ಇನ್ನೂ ‘ಈ ಬಂಧನ’ ಚಿತ್ರದ ಪ್ರಮುಖ ಪಾತ್ರದಲ್ಲಿರುವ ದರ್ಶನ್‌ ಸಹಾ ಸದ್ಯಕ್ಕೆ ಬಿಜಿ. ಈ ಮೂವರಿಗೂ ಚಿತ್ರದ ಬಗ್ಗೆ ಅಕ್ಕರೆಯಿದೆ. ಆದರೆ ಕಾಲ್‌ಶೀಟ್‌ ನೀಡೋದಕ್ಕೆ ನಾನಾ ತಾಪತ್ರಯಗಳಿವೆ. ‘ಈ ಬಂಧನ’ ಸುಲಭವೇನಲ್ಲ ಅಲ್ವಾ? ಅದಲ್ಲದೇ, ವಿಷ್ಣು - ಜಯಪ್ರದಾ ನಟನೆಯ ‘ಹಿಮಪಾತ’ ಪ್ರಪಾತಕ್ಕೆ ಬಿದ್ದಿದ್ದು ಜನ ಇನ್ನೂ ಮರೆತಿಲ್ಲ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada