»   » ಕನ್ನಡಿಗರಲ್ಲಿ ಸಿನಿಮಾ ಕ್ರೇಜೇ ಇಲ್ಲ -ಯೋಗರಾಜ ಭಟ್‌

ಕನ್ನಡಿಗರಲ್ಲಿ ಸಿನಿಮಾ ಕ್ರೇಜೇ ಇಲ್ಲ -ಯೋಗರಾಜ ಭಟ್‌

Subscribe to Filmibeat Kannada


ಸ್ಯಾಂಡಲ್‌ವುಡ್‌ನಲ್ಲಿ ‘ಮುಂಗಾರು ಮಳೆ’ ಸುರಿಯುತ್ತಲೇ ಇದೆ. ಇದು ಪ್ರೇಕ್ಷರ ಮನಗೆದ್ದ ಹೊಸಬರ ಚಿತ್ರ. ದಾಖಲೆಗಳ ಸೃಷ್ಟಿಸಿದ ಚಿತ್ರ. ಮತ್ತೊಂದು ಸಂತಸದ ಸಂಗತಿಯೆಂದರೆ ಇದು ಅಸಲಿ ಸ್ವಮೇಕ್‌ ಚಿತ್ರ. ಇನ್ನೂ ಸಂತಸದ ಸಂಗತಿಯೆಂದರೆ, ‘ಮುಂಗಾರು ಮಳೆ’ ಹಿಂದಿ, ತಮಿಳು, ತೆಲುಗಿಗೆ ರೀಮೇಕ್‌ ಆಗುತ್ತಿದೆ. ಗರಿಷ್ಠ ಬೆಲೆಗೆ ರೀಮೇಕ್‌ ಹಕ್ಕುಗಳನ್ನು ಮಾರಲಾಗಿದೆ. ‘.. ಮಳೆ’ ಮೂಲಕ ಹಿತಾನುಭವ ನೀಡಿದ ನಿರ್ದೇಶಕ ಯೋಗರಾಜಭಟ್‌, ಇತ್ತೀಚೆಗೆ ದಟ್ಸ್‌ ಕನ್ನಡ ಕಚೇರಿಗೆ ಆಗಮಿಸಿದ್ದರು. ಅವರೊಂದಿಗೆ ನಡೆದ ಮಾತುಕತೆ ನಿಮ್ಮ ಮುಂದೆ...

ಮುಂಗಾರು ಮಳೆ ಗೆದ್ದಿದೆ. ಚಿತ್ರದ ಯಶಸ್ಸು ನಿಮಗೆ ಹೇಗನ್ನಿಸುತ್ತಿದೆ?

ನನ್ನ ಸಿನಿಮಾವನ್ನು ಪ್ರೇಕ್ಷಕರು ಒಪ್ಪಿಕೊಂಡಿದ್ದಾರೆ. ಸಂತೋಷ... ತುಂಬ ಸಂತೋಷ.. ಕನ್ನಡ ಚಿತ್ರೋದ್ಯಮ ಕಳೆದ 40ವರ್ಷಗಳಿಂದ ಈ ದಿನಕ್ಕಾಗಿ ಕಾಯ್ತಾಯಿತ್ತು. ಯಾವುದೇ ಗಟ್ಟಿ ಹಿನ್ನೆಲೆಯಿಲ್ಲದಿದ್ದರೂ ನಿಂತಿದ್ದೇನೆ. ಗೆದ್ದಿದ್ದೇನೆ. ಚಿತ್ರದ ಗೆಲುವು ಕನ್ನಡ ಪ್ರೇಕ್ಷಕರಿಗಿರುವ ಒಳ್ಳೆ ಅಭಿರುಚಿಯನ್ನು ಸಾಬೀತುಪಡಿಸಿದೆ.

‘ಮುಂಗಾರು ಮಳೆ’ ಹೇಗಾಯಿತು? ಈ ಕತೆ ನಿಮಗೆ ಹೇಗೆ ಹೊಳೆಯಿತು?

ಗೆಲ್ಲುವ ಹಂಬಲದಿಂದ..

ಈ ಚಿತ್ರವನ್ನು ಪುನೀತ್‌ಗಾಗಿ ಮಾಡುವ ಹಂಬಲ ನಿಮಗಿತ್ತಾ?

ಹೌದು. ನಾನು ಈ ಕತೆ ಹೇಳಿದಾಗ ಪಾರ್ವತಮ್ಮ ಒಪ್ಪಲಿಲ್ಲ. ಕಾರಣ; ನನ್ನ ಹಿಂದಿನ ಎರಡು ಸಿನಿಮಾ(ರಂಗ ಎಸ್‌ಎಸ್‌ಎಲ್‌ಸಿ, ಮಣಿ)ಗಳು ಸೋತಿದ್ದವು. ನನ್ನನ್ನು ಮತ್ತು ನನ್ನ ಕತೆಯನ್ನು ಅವರು ನಂಬುವಂತಿರಲಿಲ್ಲ. ಆಗ ನನ್ನ ಟೈಂ ಚೆನ್ನಾಗಿರಲಿಲ್ಲ. ಈಗ ನನ್ನ ಟೈಂ ಚೆನ್ನಾಗಿದೆ. ಪುನೀತ್‌ ಚಿತ್ರ ನಿರ್ದೇಶನ ಮಾಡಲು ಈಗ ಕರೆದಿದ್ದಾರೆ. ನೋಡೋಣ ಎಂದು ಹೇಳಿದ್ದೇನೆ.

‘ಮುಂಗಾರು ಮಳೆ’ ಯಶಸ್ಸಿಗೆ ಏನ್‌ ಕಾರಣ? ನೀವು ಹೇಳುವಂತೆ...

ಫ್ರೆಶ್‌ನೆಸ್‌. ನೈಜ ಭಾವನೆಗಳು, ಭಾವನಾತ್ಮಕತೆ ಎಲ್ಲವೂ ಪ್ರೇಕ್ಷಕರಿಗೆ ಇಷ್ಟವಾಗಿವೆ. 18ರಿಂದ 30ವರ್ಷದೊಳಗಿನವರನ್ನು ಚಿತ್ರ ಸೆಲೆದಿದೆ. ಕೆಲವರಿಗೆ 4-5ಸಲ ಸಿನಿಮಾ ನೋಡಿದರೂ ಸಮಾಧಾನವಿಲ್ಲ... ಮತ್ತೆಮತ್ತೆ ಚಿತ್ರಮಂದಿರಕ್ಕೆ ಬರುತ್ತಿದ್ದಾರೆ..

ಸಿನಿಮಾ ಅಂದ್ರೆ ಸುಲಭವಲ್ಲ. ಅದು ಕತೆ-ಕಾದಂಬರಿ ಬರೆದಂತಲ್ಲ. ಲೋಟ ತೊಳೆವವನಿಂದ ನಾಯಕನವರೆಗೆ 150-160ಮಂದಿ ಶ್ರದ್ಧೆಯಿಂದ ಕೆಲಸ ಮಾಡಿದ್ರೆ ಯಶಸ್ಸು ಒಲಿಯುತ್ತದೆ. ಎಲ್ಲರನ್ನೂ ನಾನು ಬಳಸಿಕೊಂಡೆ. ಚಿತ್ರದ ಕತೆ, ನಿರ್ದೇಶನದ ಬಗ್ಗೆ ಮಾತ್ರವಲ್ಲ, ಸಂಕಲನದ ಬಗ್ಗೆ ಸಹಾ ಸಾಕಷ್ಟು ಚರ್ಚೆಗಳಾಗಿವೆ. ಎಲ್ಲವೂ ಚೆನ್ನಾಗಿರಬೇಕು. ಇಲ್ಲದಿದ್ದರೆ ಪ್ರೇಕ್ಷಕ ಒಪ್ಪೋದಿಲ್ಲ.

ಗಣೇಶ್‌ ಮತ್ತು ಸಂಜನಾ ಬಗ್ಗೆ ಹೇಳಿ..

ಗಣೇಶ್‌ ಇಂದು ಮಾತ್ರವಲ್ಲ, ಹಿಂದೆಯೂ ಸ್ಟಾರ್‌ ಆಗಿಯೇ ಇದ್ದರು. ಆತ ನಿಜಕ್ಕೂ ಪ್ರತಿಭಾವಂತ. ಅವರ ಮುಂದೆ ಪ್ರಸ್ತುತ 20ಕ್ಕೂ ಅಧಿಕ ಚಿತ್ರಗಳಿವೆ. ಗಣೇಶ್‌ ಮತ್ತು ಸಂಜನಾ ಇಬ್ಬರೂ ಚೆನ್ನಾಗಿ ನಟಿಸಿದ್ದಾರೆ. ನನಗೆ ತೃಪ್ತಿಯಿದೆ.

ಹಳೇ ಯೋಗರಾಜ್‌ ಭಟ್‌ಗೂ, ಈಗಿನ ಯೋಗರಾಜ್‌ ಭಟ್‌ಗೂ ಏನ್‌ ವ್ಯತ್ಯಾಸ? ಚಿತ್ರೋದ್ಯಮ ನಿಮ್ಮನ್ನು ಹೇಗೆ ನಡೆಸಿಕೊಂಡಿದೆ?

ಗಾಂಧಿನಗರ ನನ್ನನ್ನು ಎಂದೂ ನೋಡಲಿಲ್ಲ. ಇಂದೂ ನೋಡ್ತಾಯಿಲ್ಲ. ನನಗೆ ಕೆಲಸ ಹುಡುವುದು ಆಗೋದಿಲ್ಲ. ಗಾಂಧಿನಗರ ಒಂದು ರೀತಿ ನನ್ನನ್ನು ಪ್ರತ್ಯೇಕವಾಗಿಟ್ಟಿದೆ...

ಮುಂದೇನು? ಈಗ ಏನ್‌ ಮಾಡ್ತಾಯಿದ್ದೀರಾ?

ಸಾಕಷ್ಟು ಅವಕಾಶಗಳು ಮತ್ತು ಆಹ್ವಾನಗಳು ನನ್ನ ಮುಂದಿವೆ. ರಾಕ್‌ಲೈನ್‌ ವೆಂಕಟೇಶ್‌, ಕೆಸಿಎನ್‌ ಚಂದ್ರು, ಸಂದೇಶ್‌ ನಾಗರಾಜ್‌ ಸೇರಿದಂತೆ ಅನೇಕರು ಕರೆಯುತ್ತಿದ್ದಾರೆ. ತೆಲುಗಿನ ವಿಜಯಶಾಂತಿ ಫಿಲಂಸ್‌ನಿಂದಲೂ ಆಹ್ವಾನ ಬಂದಿದೆ. ‘ಮುಂಗಾರು ಮಳೆ’ ನಿರ್ಮಾಪಕ ಕೃಷ್ಣಪ್ಪ ಅವರು ಮತ್ತೆ ನನ್ನನ್ನು ಕರೆದಿದ್ದಾರೆ. ನಾನು ಯಾವುದನ್ನೂ ಒಪ್ಪಿಕೊಂಡಿಲ್ಲ. ಸದ್ಯಕ್ಕೆ ಹೊಸ ಕತೆಯತ್ತ ಗಮನಹರಿಸಿದ್ದೇನೆ. ಅದು ರೊಮ್ಯಾನ್ಸ್‌ ಸ್ಟೋರಿ. ಯುವ ಸಮುದಾಯಕ್ಕೆ ಚಿತ್ರ ಇಷ್ಟವಾಗುತ್ತದೆ.

ಮತ್ತೆ ‘ಮುಂಗಾರು ಮಳೆ’ ಮಟ್ಟಕ್ಕೆ ಹೊಸ ಚಿತ್ರ ಮಾಡೋ ಬಗ್ಗೆ ಅನುಮಾನಗಳಿವೆ. ಎಷ್ಟೇ ಒಳ್ಳೆ ಸಿನಿಮಾ ಕೊಟ್ಟರೂ, ‘ಮುಂಗಾರು ಮಳೆ’ ಜೊತೆ ಪ್ರೇಕ್ಷರು ಹೋಲಿಕೆ ಮಾಡುತ್ತಾರೆ. ಅದು ಸಹಜ. ನಿರೀಕ್ಷೆ ಮತ್ತು ಪ್ರೀತಿಯೇ ಸದ್ಯಕ್ಕೆ ಭಾರವಾಗಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada