»   » ಕನ್ನಡಿಗರಲ್ಲಿ ಸಿನಿಮಾ ಕ್ರೇಜೇ ಇಲ್ಲ -ಯೋಗರಾಜ ಭಟ್‌

ಕನ್ನಡಿಗರಲ್ಲಿ ಸಿನಿಮಾ ಕ್ರೇಜೇ ಇಲ್ಲ -ಯೋಗರಾಜ ಭಟ್‌

Subscribe to Filmibeat Kannada


ಇತ್ತೀಚೆಗಿನ ಕನ್ನಡ ಸಿನಿಮಾಗಳು ಹೇಗಿವೆ?

ಹೊಸ ಪೀಳಿಗೆ ತಾಜಾತನ ಬಯಸುತ್ತಿದೆ. ಇದು ಆರೋಗ್ಯಕರ ಬೆಳವಣಿಗೆ. ನಟರಿಗಿಂತಲೂ ಚಿತ್ರದ ಕತೆ, ನಿರೂಪಣಾ ಶೈಲಿ ಇವೆಲ್ಲವುಗಳನ್ನು ಗುರ್ತಿಸುತ್ತಿದೆ. ಹೀಗಾಗಿಯೇ ‘ಮುಂಗಾರುಮಳೆ’, ‘ದುನಿಯಾ’ದಂತಹ ಚಿತ್ರಗಳು ಯಶಸ್ಸು ಕಂಡವು.

ಸಿನಿಮಾ ಮತ್ತು ಕನ್ನಡಿಗರ ಸಂಸ್ಕೃತಿ...

ಸಿನಿಮಾ ಕನ್ನಡಿಗರ ಸಂಸ್ಕೃತಿಯಾಗಿರಲಿಲ್ಲ. ಈಗಲೂ ಆಗಿಲ್ಲ. ತೆಲುಗು-ತಮಿಳರು ಸಿನಿಮಾಗಳನ್ನು ಪ್ರೀತಿಸುತ್ತಾರೆ. ಕೆಟ್ಟ ಸಿನಿಮಾವನ್ನು ಸಹಾ ಒಂದು ಸಲ ನೋಡುತ್ತಾರೆ. ತಮಿಳು ಮತ್ತು ತೆಲುಗರಿಗೆ ಹೋಲಿಸಿದರೆ ಇಲ್ಲಿನ ಜನರಲ್ಲಿ ಸಿನಿಮಾ ಕ್ರೇಜ್‌ ಇಲ್ಲ. ನಮ್ಮವರ ಮನಸ್ಥಿತಿ ಬದಲಾಗಬೇಕು. ಸಿನಿಮಾ ನೋಡೋದು ಪ್ಯಾಷನ್‌ ಆಗಬೇಕು.

ಹೊಸ ನಟರ ಪ್ರವಾಹದಲ್ಲಿ ಸ್ಟಾರ್‌ಗಳ ಗತಿ?

ಸಿನಿಮಾಗಳಲ್ಲಿ ಸ್ಟಾರ್‌ ವ್ಯಾಲ್ಯು ಸಹಾ ಕೆಲಸ ಮಾಡುತ್ತದೆ. ಚಿತ್ರದ ಆರಂಭಕ್ಕೆ ಇದರಿಂದ ಅನುಕೂಲ. ನಾಯಕನ ನಂಬಿ, ನಿರ್ಮಾಪಕ ಹಣ ಹೂಡಿಕೆ ಮಾಡುತ್ತಾನೆ. ಆದರೆ ಹೊಸ ಮುಖಗಳಿಂದ ಪ್ರೇಕ್ಷಕರಿಗೆ ಹೊಸತನ ಸಿಗುತ್ತದೆ. ಇದು ಒಳ್ಳೆ ಬೆಳವಣಿಗೆ. ಒಂದು ರೀತಿಯಲ್ಲಿ ಚಿತ್ರ ನಿರ್ಮಾಣವೇ ಶೇ.98ರಷ್ಟು ರಿಸ್ಕ್‌ ಎಂದರೆ ತಪ್ಪೇನಿಲ್ಲ. ಅದು ಒಂದು ರೀತಿ ಲಾಟರಿಯಿದ್ದಂತೆ...

ನಿರ್ಮಾಪಕರು ಮತ್ತು ಹೊಸ ಪ್ರತಿಭೆಗಳನ್ನು ಸಮೀಕರಿಸುವುದು ಹೇಗೆ?

ಈಗ ಎಲ್ಲಾ ಕಡೆಯಿಂದ ಹಣದ ಹೊಳೆ, ಗಾಂಧಿನಗರಕ್ಕೆ ಹರಿದು ಬರುತ್ತಿದೆ. ಅವಸರದಲ್ಲಿ ಚಿತ್ರ ಮಾಡೋದಕ್ಕೆ ಖ್ಯಾತ ನಾಯಕರ ಕಾಲ್‌ಶೀಟ್‌ ಸಿಕ್ಕೋದಿಲ್ಲ. ಹೀಗಾಗಿ ಹೊಸಬರತ್ತ ನೋಡುವುದು ಅನಿವಾರ್ಯ. ‘ಮುಂಗಾರು ಮಳೆ’ ಮತ್ತು ‘ದುನಿಯಾ’ದಂತೆ ಇನ್ನಷ್ಟು ಹೊಸರೀತಿಯ ಚಿತ್ರಗಳು ಹಿಟ್‌ ಆದರೆ, ನಿರ್ಮಾಪಕರು ಹೊಸಬರ ಚಿತ್ರಗಳಿಗೆ ಹೂಡಿಕೆ ಮಾಡ್ತಾರೆ.

ನೂರಾರು ಕಲಾವಿದರನ್ನು ಸೇರಿಸಿಕೊಂಡು ರವಿಚಂದ್ರನ್‌ ಮೆಗಾ ಸಿನಿಮಾ ಮಾಡ್ತಾರಂತೆ. ಈ ಬಗ್ಗೆ ನೀವೇನಂತೀರಾ?

ಈ ಬಗ್ಗೆ ಎರಡು ಸಭೆಗಳು ನಡೆದಿವೆ. ಒಂದು ಹೊಸ ಪ್ರಯತ್ನಕ್ಕೆ ರವಿಚಂದ್ರನ್‌ ಕೈಹಾಕಿದ್ದಾರೆ. ನನಗೂ ಸಾಕಷ್ಟು ಜವಾಬ್ದಾರಿ ನೀಡಿದ್ದಾರೆ. ನೋಡೋಣ.

ನಿಮ್ಮ ಅಭಿಮಾನಿಗಳಿಗೆ ಹೇಗೆ ಧನ್ಯವಾದ ಹೇಳುವಿರಿ..

ನಾನು ಯಾರ ಐ.ಕ್ಯೂ.ವನ್ನು ಕಡಿಮೆ ಅಂದಾಜು ಮಾಡುವುದಿಲ್ಲ. ಎಲ್ಲರನ್ನು ಗೌರವಿಸುತ್ತೇನೆ. ಒಳ್ಳೆ ಸಿನಿಮಾ ಒಪ್ಪುವ ಅಭಿಮಾನಿಗಳ ಮೌಲ್ಯಗಳನ್ನು ಗೌರವಿಸುತ್ತೇನೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada