»   » ರಂಗ ಬಂದೇಬಿಟ್ಟ ಸಾರ್‌... !

ರಂಗ ಬಂದೇಬಿಟ್ಟ ಸಾರ್‌... !

Posted By: Staff
Subscribe to Filmibeat Kannada

ನಿನ್ನಷ್ಟಕ್‌ ನೀನೆ ಗೀಟಾಕ್ಕೊಂಡು ಗೆದ್ದೆ ಅಂತ ನಿಗ್ರಾಡಿದ್ರೆ ಈ ರಂಗ ನಂಬಲ್ಲ . ಅಯ್ಯಾ ನಿನ್‌ ಸೈಡ್‌ ಬಿಡು..... ರಂಗ ಬರ್ತಾ ಅವ್ನೆ ...

*ಮದುವೆ ಆಗೋ ವುಡ್ಗಿ ರಂಭೆ, ಊರ್ವಸಿ ತರಾ ಇರ್ಬೇಕು ಅಂತ ನಾನ್‌ ಕೇಳ್ತಾ ಇಲ್ಲ ಪಾರು. ಮೊಕದ್‌ ಮೇಲ್‌ ಎಲ್ಲಾ ಪಾರ್ಟ್ಸ್‌ ಇದ್ರೆ ಸಾಕು.

*ಗುಂಡಿಗೇಲಿ ದಮ್ಮು ಇದ್ದೋನ್‌ಗೆ ಗೊತ್ತು ಸೋತು ಗೆಲ್ಲೋ ಮಜಾ...

*ನನ್‌ ಮಗ್ನೆ ಲವ್‌ ಮಾಡಿದ್ರೆ ನಿಯತ್ತಾಗಿರು. ಇಲ್ಲಾಂದ್ರೆ ಪ್ರಿತ್ಸೊಕ್ಕೆ ಬಾಡೀಲಿ ಯಾವ್‌ ಯಾವ ಪಾರ್ಟ್ಸ್‌ ಬೇಕೊ ಅದನ್ನೆಲ್ಲಾ ಕೊಯ್ದು ಹಣೆಗೆ ಅಂಟಿಸ್‌ಬಿಡ್ತೀನಿ

*ಇವೆಲ್ಲ ರಂಗನ ನುಡಿಮುತ್ತುಗಳು. ರಂಗ ಮಾತಾಡೋದೆ ಹೀಗೆ. ಎದ್ದುಬಂದು ಎದೆಗೆ ಒದ್ದ ಹಾಗೆ. ಮಾತು ನೇರಾತಿನೇರ. ಎದೆಯಲ್ಲಿ ಮಾತ್ರ ಪ್ರೀತಿಯ ತೇವ. ರಂಗ 'ಎಸ್‌ಎಸ್‌ಎಲ್‌ಸಿ"ಯಾದ್ರೂ, ಮನುಷ್ಯತ್ವದಲ್ಲಿ ಮಾತ್ರ ಡಬ್ಬಲ್‌ ಡಿಗ್ರಿ. ಈ ಪರಿಯ ರಂಗ ಬಂದೇ ಬಿಟ್ಟವ್ನೆ , ಅಭಿಮಾನಿಗಳೆಲ್ಲ ಭಾಳಾ ಖುಷಿಯಾಗವ್ರೆ.

ಹೌದು. ಸುದೀಪ್‌ ಅಭಿನಯದ 'ರಂಗ ಎಸ್‌ಎಸ್‌ಎಲ್‌ಸಿ" ಈಗ ಬೆಳ್ಳಿತೆರೆಯಲ್ಲಿ . ಏ.23ರಂದು ಬಿಡುಗಡೆಯಾದ ಈ ಚಿತ್ರ ಸುದೀಪ್‌ರ ಮಹತ್ವಾಕಾಂಕ್ಷೆಯ ಚಿತ್ರವೂ ಹೌದು. ಬಹು ನಿರೀಕ್ಷೆಯ ಸ್ವಾತಿಮುತ್ತು ಹೆಸರು ತಂದುಕೊಟ್ಟರೂ ಕಾಸು ಗಿಟ್ಟಲಿಲ್ಲ . ಆ ಕಾರಣದಿಂದಾಗಿ, ಅಭಿನಯದ ದೃಷ್ಟಿಯಿಂದ ಹೆಚ್ಚು ಅವಕಾಶವಿರುವ ಹಾಗೂ ಕಮರ್ಷಿಯಲ್‌ ಟಚಪ್ಪೂ ಸಮೃದ್ಧವಾಗಿರುವ 'ರಂಗ ಎಸ್‌ಎಸ್‌ಎಲ್‌ಸಿ" ಮೇಲೆ ಸುದೀಪ್‌ ಅಪಾರ ನಿರೀಕ್ಷೆಯಿಟ್ಟುಕೊಂಡಿದ್ದಾರೆ.

ನಿರ್ದೇಶಕ ಯೋಗರಾಜ್‌ ಭಟ್‌ ಕೂಡ ರಂಗನ ಯಶಸ್ಸಿಗಾಗಿ ಚಾತಕದಂತಿದ್ದಾರೆ. ಒಂದುರೀತಿಯಲ್ಲಿ ಭಟ್‌ ಹಾಗೂ ಸುದೀಪ್‌ ಒಂದೇ ದೋಣಿಯ ಪಯಣಿಗರು. ಸುದೀಪ್‌ನ ಸ್ವಾತಿಮುತ್ತಂತೆ, ಭಟ್‌ರ 'ಮಣಿ"ಯ ಯಶಸ್ಸು ಹೆಸರಿಗಷ್ಟೇ ಸೀಮಿತವಾಗಿತ್ತು . ಹಾಗಾಗಿ ಭಟ್‌ಗೆ ಕೂಡ ಕಮರ್ಷಿಯಲ್‌ ಯಶಸ್ಸು ಬೇಕಾಗಿದೆ.

ಗಾಂಧಿನಗರದಲ್ಲಿ ರಂಗನ ಬಗ್ಗೆ ಒಳ್ಳೆಯ ಮಾತಿದೆ. ಈಗಾಗಲೇ ಚಿತ್ರ ನೋಡಿದವರು ರಂಗ ಗೆಲ್ಲೋದು ಗ್ಯಾರಂಟಿ ಅಂದಿದ್ದಾರೆ.

ಚಿತ್ರದ ನಾಯಕಿ ಕನ್ನಡದಲ್ಲಿ ಗುಪ್ತಗಾಮಿನಿಯಂತಿದ್ದು , ತಮಿಳಲ್ಲಿ ಬಯಲಾದ ರಮ್ಯ. ಸಂದೀಪ್‌ ಚೌಟ ಸಂಗೀತ ನೀಡಿರುವ ಚಿತ್ರವನ್ನು ಎನ್‌.ಕುಮಾರ್‌ ನಿರ್ಮಿಸಿದ್ದಾರೆ. ಸೊಂಟದ ಹಾಡು ಬರೆದ ನಾಗೇಂದ್ರಪ್ರಸಾದ್‌ ರಂಗನಿಗೂ ಹಾಡು ಬರೆದಿದ್ದಾರೆ. ನಾಗೇಂದ್ರ ಪ್ರಸಾದ್‌ ಸಾಹಿತ್ಯಕ್ಕೆ ಸೊಂಟದಿಂದ ಬಡ್ತಿ ದೊರೆತಿದೆಯೋ, ಏನೋ ?

English summary
Sudeep's 'Ranga SSLC' Released

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada