»   » ಹ್ಯಾಪಿ ಬರ್ತು ಡೇ ನಮ್ಮ ರಾಜಣ್ಣನಿಗೆ...

ಹ್ಯಾಪಿ ಬರ್ತು ಡೇ ನಮ್ಮ ರಾಜಣ್ಣನಿಗೆ...

Posted By:
Subscribe to Filmibeat Kannada

‘ಆಕಸ್ಮಿಕ’ವಾಗಿ ಚಿತ್ರರಂಗಕ್ಕೆ ಬಂದು ‘ಬಂಗಾರದ ಮನುಷ್ಯ’ನಾದ, ಬಹದ್ದೂರ್‌ಗಂಡಾಗಿ ಗರ್ಜಿಸಿ ‘ ಸಂಪತ್ತಿಗೆ ಸವಾಲ್‌’ ಹಾಕಿದ, ‘ಮಯೂರ’ನಾಗಿ ಮೆರೆದು, ‘ಬಬ್ರುವಾಹನ’ನ ಸ್ವಾಭಿಮಾನ ಪರಿಚಯ ಮಾಡಿಸಿದ, ‘ಸನಾದಿ ಅಪ್ಪಣ್ಣ’ನ ಮಾಧುರ್ಯ,‘ ಕವಿರತ್ನ ಕಾಳಿದಾಸ’ನ ನವರಸ ಸಂಭ್ರಮ,‘ಶಂಕರ್‌ಗುರು’ವಿನ ಕಿಲಾಡಿತನ,‘ ಹೊಸ ಬೆಳಕು’ನ ಬೆರಗು ಎಲ್ಲವನ್ನೂ ತೋರಿಸಿಕೊಟ್ಟ; ಹಾಲು-ಜೇನಿನ ಗುಣದಿಂದಾಗಿ ‘ಕಸ್ತೂರಿ ನಿವಾಸ’ದಂಥ ಕನ್ನಡಿಗರ ಮನೆ-ಮನಗಳಲ್ಲಿ ‘ದೇವತಾ ಮನುಷ್ಯ’ನಾಗಿ ಉಳಿದಿರುವ; ನಾಲ್ಕುದಶಕದಿಂದಲೂ ಕನ್ನಡ ಚಿತ್ರರಂಗದ ಅನಭಿಷಕ್ತ ಸಾಮ್ರಾಟನಂತೆ ‘ರಾಜಕುಮಾರ’ನಾಗಿ ಮೆರೆಯುತ್ತಿರುವ ನಟಸಾರ್ವಭೌಮರಿಗೆ -ಐದೂವರೆ ಕೋಟಿ ಕನ್ನಡಿಗರ ಪರವಾಗಿ ನೂರು, ಸಾವಿರ ನೆನಪು. ಲಕ್ಷ, ಕೋಟಿ ನಮಸ್ಕಾರ.

ಎಲ್ಲರ ಪ್ರೀತಿಯ ರಾಜಣ್ಣ ಅವರೇ -ನಿಮ್ಮನ್ನು ನೆನಪು ಮಾಡಿಕೊಂಡಾಗಲೆಲ್ಲ ನನಗೆ, ನನ್ನಂಥ ಲಕ್ಷಾಂತರ ಮಂದಿಗೆ ಅನಿಸುವುದು ಇಷ್ಟೆ. ನಿಮಗೆ ಪತ್ರ ಬರೆಯಬೇಕು. ನೀವು ಕನಸಿಗೆ ಬಂದಾಗ ಕೂಡ ಕೈ ಮುಗಿಯಬೇಕು. ಆಕಸ್ಮಿಕವಾಗಿ ಕಂಡರೆ ಬೆರಗಾಗಬೇಕು. ಛಾನ್ಸು ಸಿಕ್ಕರೆ ನಿಮ್ಮ ಕೈ ಮುಟ್ಟಬೇಕು. ಆ ಖುಷಿಯಲ್ಲಿ ಮಗುವಿನಂತೆ ಕುಣಿದಾಡಬೇಕು..’ ಐದೂವರೆ ಕೋಟಿ ಕನ್ನಡಿಗರೆಂಬ ನದಿಗಳನ್ನು ಆವರಿಸಿಕೊಂಡ ಮಹಾಸಾಗರ ನೀವು. ಅಂಥ ನಿಮ್ಮ ಬಗ್ಗೆ ಬರೆಯುವುದೆಂದರೆ ಸೂರ್ಯನಿಗೆ ಕನ್ನಡಿ ಹಿಡಿದ ಹಾಗೆ. ಸಾಗರದ ಆಳ ಹುಡುಕಿದ ಹಾಗೆ, ಆಗಸಕ್ಕೆ ಏಣಿ ಹಾಕಿದ ಹಾಗೆ! ಇದೆಲ್ಲ ನಿಜವಾದರೂ 3 ದಿನಗಳ ನಂತರ ನಿಮ್ಮ ಕೈ ಜಗ್ಗಲಿರುವ ಹುಟ್ಟುಹಬ್ಬದ ನೆಪ ಮಾಡಿಕೊಂಡು ನಿಮ್ಮೊಂದಿಗೆ ಮಾತಾಡಬೇಕು ಅನಿಸಿದ್ದರಿಂದ ಅಕ್ಷರಗಳ ಈ ಮಲ್ಲಿಗೆಯ ಮಾಲೆಯನ್ನು ನಿಮ್ಮ ಮಡಿಲಲ್ಲಿ ಇಡುತ್ತಿದ್ದೇನೆ, ಒಪ್ಪಿಸಿಕೊಳ್ಳಿ.

*

ಅಣ್ಣಾವ್ರೆ, ನಿಮ್ಮ ಒರಿಜಿನಲ್‌ ಹೆಸರು ‘ಮುತ್ತುರಾಜ್‌’ ಅನ್ನೋದು ಎಲ್ರಿಗೂ ಮರೆತು ಹೋಗುವ ಹಾಗೆ, ನೀವಿವತ್ತು ‘ರಾಜ್‌ಕುಮಾರ್‌’ ಆಗಿ ಜನಪ್ರಿಯರಾಗಿದ್ದೀರಿ. ನಾಯಕನಟನೊಬ್ಬಇದ್ದರೆ ಹೇಗಿರಬೇಕು ಎಂಬುದಕ್ಕೆ ಸಾಕ್ಷಿಯಾಗಿದ್ದೀರಿ. ಕನ್ನಡ ನಾಡು ಹಿಂದೆ ಕಂಡಿರದ, ಮುಂದೆಂದೂ ಕಾಣಲು ಸಾಧ್ಯವಿಲ್ಲದ ಅದ್ಭುತ ಕಲಾವಿದ ಎಂಬ ಮಾತಿಗೆ ಅನ್ವರ್ಥವಾಗಿದ್ದೀರಿ. ನಿಮ್ಗೆ ಗೊತ್ತುಂಟಾ ಅಣ್ಣಾವ್ರೆ- 20 ವರ್ಷಗಳ ಹಿಂದೆ ಹಳ್ಳಿ ಹಳ್ಳಿಯ ಟೆಂಟುಗಳಿಗೆ ನಿಮ್ಮ ಸಿನಿಮಾ ಬಂದ್ರೆ ಊರಿಗೆ ಊರೇ ಸಂಭ್ರಮಿಸುತ್ತಿತ್ತು. ಚಿತ್ರಮಂದಿರದವರು ಒಂದು ಬಂಡಿಯ ಆಚೀಚೆ ನಿಮ್ಮ ವಿವಿಧ ಭಂಗಿಯ ಪೋಸ್ಟರ್‌ಗಳನ್ನು ಹಾಕಿರ್ತಾ ಇದ್ರು. ಅದನ್ನು ಕಂಡವರೇ ನಾವು ಮನೆಗೆ ಓಡೋಡಿ ಬಂದು ‘ರಾಜ್‌ ಸಿನಿಮಾ ಬಂದೈತೆ. ಒಂದು ಪೋಸ್ಟರಿನಲ್ಲಿ ಸಿಟ್ಟಿನಿಂದ ಎರಡೂ ಕೈಲಿ ಪಿಸ್ತೂಲು ಹಿಡಿದುಕೊಂಡು ಅಣ್ಣಾವ್ರು ನಿಂತಿದಾರೆ. ಮತ್ತೊಂದರಲ್ಲಿ ಎಡಗೈಯನ್ನು ಎಡತೊಡೆಯ ಮೇಲಿಟ್ಟುಕೊಂಡು ಬಲಗೈಯನ್ನು ಆಕಾಶಕ್ಕೆತ್ತಿ ಹಾಡುವ ಭಂಗಿಯಲ್ಲಿ ಅಣ್ಣಾವ್ರಿದಾರೆ’ ಎಂದು ಎಲ್ಲರಿಗೂ ಹೇಳುತ್ತಿದ್ವಿ. ಹಿಂದೇನೇ- ‘ಇವತ್ತಲ್ಲ ನಾಳೆ ನಾವೂ ರಾಜ್‌ಕುಮಾರ್‌ ಥರಾ ಆಗಬೇಕು’ ಅಂದ್ಕೊಂಡು ಕನಸು ಕಾಣ್ತಾ ಇದ್ವಿ.

ಅಣ್ಣಾವ್ರೆ, ಇತಿಹಾಸದ ಮಯೂರ, ಪುಲಿಕೇಶಿ, ಕೃಷ್ಣದೇವರಾಯ, ಪುರಾಣದ ಕಾಳಿದಾಸ, ಭಕ್ತ ಕುಂಬಾರ, ಬಬ್ರುವಾಹನ, ಅರ್ಜುನ, ತಿರುಪತಿಯ ಶ್ರೀನಿವಾಸ, ರಾವಣ, ಮಹಿಷಾಸುರ ಈ ಯಾರನ್ನೂ ನಾವು ಪ್ರತ್ಯಕ್ಷ ಕಂಡವರಲ್ಲ, ಆದರೆ ಈ ಎಲ್ಲ ಪಾತ್ರಗಳಲ್ಲೂ ನೀವು ಮೆರೆದ ಮೇಲೆ- ಕಾಳಿದಾಸನನ್ನು, ರಾವಣನನ್ನು, ಬಬ್ರುವಾಹನನನ್ನು, ಕೃಷ್ಣದೇವರಾಯನನ್ನು ಬೇರೊಂದು ರೀತಿಯಲ್ಲಿ ಕಲ್ಪಿಸಿಕೊಳ್ಳಲು ಕೂಡ ನಮ್ಮಿಂದ ಸಾಧ್ಯವಾಗುತ್ತಿಲ್ಲ. ಹೇಳಿ ಅಣ್ಣಾವ್ರೆ, ಕುಂಬಾರನಾಗಿ ಭಕ್ತಿಯ ಹೊಳೆಯಲ್ಲಿ ಎಲ್ಲರನ್ನೂ ಮೀಯಿಸಿದ ನೀವೇ, ಹಿರಣ್ಯ ಕಶ್ಯಪು, ಮಹಿಷಾಸುರನಾಗಿ ಅಬ್ಬರಿಸಿ ಎಲ್ಲರನ್ನೂ ಬೆಚ್ಚಿ ಬೀಳಿಸಿದಿರಲ್ಲ- ಈ ಮ್ಯಾಜಿಕ್ಕು ನಿಮ್ಮಿಂದ ಹೇಗೆ ಸಾಧ್ಯವಾಯ್ತು ? ನೀವು ಈ ಕಡೆ ಬಣ್ಣ ಹಚ್ಚಿಕೊಂಡ ತಕ್ಷಣ ಯಾರಿಗೂ ಕಾಣದ ಮಾಯೆಯಾಂದು ನಿಮ್ಮ ಬಳಿ ಬಂದು- ಹೀಗೆ ನಗಬೇಕು, ಹೀಗೇ ಅಬ್ಬರಿಸಬೇಕು, ಕಣ್ಣ ನೋಟದಲ್ಲೇ ಎಲ್ಲರನ್ನೂ ಅಳಿಸಬೇಕು ಎಂದು ಹೇಳಿಕೊಡ್ತಾ ? ಇಲ್ಲ ಅನ್ನುವುದಾದರೆ, ಸಾಕ್ಷಾತ್‌ ಕಾಳಿದಾಸ, ಅರ್ಜುನ, ಮಹಿಷಾಸುರರೇ ನಾಚುವಂತೆ ಅಭಿನಯಿಸಲು ನಿಮ್ಮಿಂದ ಹ್ಯಾಗೆ ಸಾಧ್ಯವಾಯ್ತು ಅಣ್ಣಾವ್ರೇ?

ಎಲ್ಲರ ಅಭಿಮಾನದ ರಾಜಣ್ಣಾ, ಶ್ರೇಷ್ಠ ನಟನೆಯಿಂದ ಕನ್ನಡ ಚಿತ್ರರಂಗದ ‘ಭಾಗ್ಯದ ಬಾಗಿಲು’ ತೆರೆದವರು ನೀವು. ಸಂಗೀತಗಾರನ ಪಾತ್ರ ಮಾಡ್ಬೇಕು ಅಂದ್ರೆ ಸಂಗೀತ ಕಲಿತಿರಬೇಕು,‘ಜೇಮ್ಸ್‌ ಬಾಂಡ್‌’ ಥರಾ ಮಿಂಚಬೇಕಾದ್ರೆ ಇಂಗ್ಲಿಷ್‌ ಅರಿತಿರಬೇಕು ಎಂಬ ‘ಮಿಥ್‌’ಗಳನ್ನೇ ಉಲ್ಟಾ ಮಾಡಿದವರು ನೀವು. ನಾಲ್ಕನೇ ಕ್ಲಾಸು ಮಾತ್ರ ಓದಿದ ನೀವು ಬಾಂಡ್‌ ಪಾತ್ರದಲ್ಲಿ ಮಿಂಚಿದಾಗ ಕನ್ನಡಿಗರು ಚಪ್ಪಾಳೆ ಹೊಡೆದ್ರು.‘ದಾರಿ ದಪ್ಪಿದ ಮಗ’ನಾಗಿ ‘ನಾರಿಯಾ ಸೀರೆ ಕದ್ದ/ನಾರಿಯ ಮನವ ಗೆದ್ದ’ ಅಂದಾಗ ತಮ್ಮ ಹರಯವನ್ನ ನೆನಪು ಮಾಡಿಕೊಂಡ್ರು.‘ಪ್ರೇಮದ ಕಾಣಿಕೆ’ ಅಂದಾಕ್ಷಣ ತಮ್ಮ ವಿಫಲಪ್ರೇಮ ನೆನೆದರೇ‘ತ್ರಿಮೂರ್ತಿ’ಯಲ್ಲಿ ‘ನಿಮ್ಮ ಜತೆಯಲ್ಲೇ ಮೂಗನ ಕಾಡಿದರೇನು/ಸವಿ ಮಾತನು ಆಡುವನೇನು/ಕೋಪಿಸಲು, ನಿಂದಿಸಲು/ಮೌನವ ಮೀರುವನೇನು?’ ಎಂದು ಹಾಡಿಯೇ ಬಿಟ್ಟರು. ಹೇಳಿ ಅಣ್ಣಾವ್ರೇ, ಒಂದೇ ಒಂದು ಹಾಡು/ಡೈಲಾಗ್‌ನಿಂದ ಸಮಸ್ತ ಕನ್ನಡಿಗರ ಮನಸ್ಸು ಗೆದ್ದಿರಲ್ಲ, ನಿಮ್ಗೆ ಮಂತ್ರ- ಗಿಂತ್ರ ಗೊತ್ತಾ ? ದೇಶ ಮತ್ತು ಭಾಷೆ, ಜಾತಿ ಹಾಗೂ ವಿದ್ಯೆಯ ಗಡಿ ಮಿರಿ ಬೆಳೆದವರು; ಆಂಧ್ರದ ಎನ್‌. ಟಿ. ಆರ್‌, ತಮಿಳಿನ ಎಂ.ಜಿ.ಆರ್‌ರಿಂದ ಗೌರವ ಪಡೆದವರನ್ನು ನೀವು.

‘ನಾನು ಅಣ್ಣಾವ್ರ ಅಭಿಮಾನಿ’ ಅಂತ ಕಮಲ್‌ ಹಾಸನ್‌ ಜಂಭದಿಂದ ಹೇಳ್ತಾರೆ. ರಾಜ್‌ನಂಗೆ ಅಣ್ಣ ಇದ್ದ ಹಾಗೆ ಅಂದು ಅಮಿತಾಬ್‌ ತಲೆ ಬಾಗ್ತಾರೆ. ರಾಜಣ್ಣನ ಪಕ್ಕ ಕೂರುವ ಭಾಗ್ಯ ಹೊರೆತದ್ದು ಪೂರ್ವಜನ್ಮದ ಪುಣ್ಯ ಅಂತ ಸೂಪರ್‌ಸ್ಟಾರ್‌ ರಜನಿ ಎದೆ ತಟ್ಟಿಕೊಂಡು ಹೇಳ್ತಾರೆ. ಇಷ್ಟಾದ್ರೂ ನೀವು ನೂರು ಮಂದೀನ ಕಂಡರೆ ಸಾಕು- ‘ಅಭಿಮಾನಿ ದೇವರುಗಳೇ’ಅಂದು ಕೈ ಮುಗೀತೀರಿ. ಅಲ್ಲ, ಹಣ, ಕೀರ್ತಿ, ಗೌರವ, ಪ್ರಶಸ್ತಿ ಬರ್ತಾ ಬರ್ತಾ ಎಂಥವರಿಗೂ ಜಂಭ ಬಂದೇ ಬರುತ್ತೆ. ಆದ್ರೆ ನೀವು ಅದನ್ನೆಲ್ಲ ಮೀರಿ ಸಂತನ ಹಾಗೆ ಉಳಿದು ಬಿಟ್ಟಿದೀರಲ್ಲ- ಈ ಮ್ಯಾಜಿಕ್ಕು ಹೇಗೆ ಸಾಧ್ಯ ಆಯ್ತು ಅಣ್ಣಾವ್ರೇ?

‘ರಾಜ್‌ಕುಮಾರ್‌ ಯಾವತ್ತಿದ್ರೂರಾಜ್‌ಕುಮಾರೇ’ ಇದು ಎಲ್ಲರ ಮಾತು, ಎಲ್ಲರ ವಾದ. ಹೀಗೆನ್ನುವ ಮಂದಿ ಗೋಕಾಕ್‌ಚಳವಳಿಯನ್ನ, ಅದರ ಅಪರೂಪದ ಯಶಸ್ಸನ್ನ, ರಾಜ್‌ ಎಂಬ ಎರಡಕ್ಷರಕ್ಕೆ ಸರಕಾರಗಳೇ ಹೆದರಿದ್ದನ್ನ; ಒಂದು ಸಂದರ್ಭದಲ್ಲಿ ಇಂದಿರಾಗಾಂಧಿಯಂಥ ಮಹಾನಾಯಕಿ ಕೂಡ ಬೆಚ್ಚಿದ್ದನ್ನ ವಿವರಿಸ್ತಾರೆ. ಹಿಂದೆಯೇ, ಅಣ್ಣಾವ್ರ ಒಂದೊಂದು ಸಿನಿಮಾದಲ್ಲೂ ಒಂದೊಂದು ಸಂದೇಶವಿದೆ. ಕನ್ನಡದ ಉಳಿವಿಗಾಗಿ ಅಣ್ಣಾವ್ರು ಮತ್ತೆ ಚಳವಳಿಗೆ ಮುಂದಾಗಬೇಕು. ಇಡೀ ನಾಡ ಜನರನ್ನು ಹೊಸದಿಕ್ಕಿಗೆ ನಡೆಸುವ ಶಕ್ತಿ ಇರೋದು ಅಣ್ಣಾವ್ರಿಗೆ ಮಾತ್ರ, ಆ ಕಾರಣಕ್ಕೇ ಅವರು ಗ್ರೇಟ್‌, ಗ್ರೇಟ್‌ ಮತ್ತು ಗ್ರೇಟ್‌ ಅನ್ನುತ್ತಾರೆ.

*

‘ಮಕ್ಳು’ ಅಂದ್ರೆ ರಾಜ್ಕುಮಾರ್‌ ಥರಾ ಇರ್ಬೇಕು ನೋಡಪ್ಪ... ನಮ್ಮ ತಾತ ಈ ಮಾತನ್ನ ಅಪ್ಪನಿಗೆ ಹೇಳಿದ್ದನಂತೆ. ಅಪ್ಪ ಅದನ್ನೇ ನಮಗೆ ಹೇಳಿದ. ಈಗ ಕಣ್ಮುಂದೆ ನಮ್ಮ ಮಕ್ಕಳಿದಾರಲ್ಲ- ನಾವೂ ಹೇಳ್ತಿದೀವಿ ‘ ನೀನು ರಾಜ್ಕುಮಾರ್‌ ಥರಾನೇ ಆಗಬೇಕು. ಹಾಗೇ ಬದುಕಬೇಕು...’ ಇಲ್ಲ , ನಿಮಗೆ ಹೋಲಿಕೆಯಿಲ್ಲ , ಬದಲಿ ಕೂಡ ಇಲ್ಲ. ಪರ್ಯಾಯವೂ ಇಲ್ಲ. ನೀವು ರಾಜಕೀಯದಿಂದ ದೂರ ಇದೀರ. ನಾವು ಖುಷಿಯಾಗಿದೀವಿ. ಮಂಡಿನೋವಿಗೆ ಈಡಾದಾಗ ಆತಂಕ ಪಟ್ಟಿದೀವಿ. ದೊಡ್ಡ ಗಂಡಾಂತರಕ್ಕೆ ಸಿಕ್ಕಿಕೊಂಡಾಗ ಪೂಜೆ ಮಾಡ್ಸಿದೀವಿ. ಹರಕೆ ಕಟ್ಟಿಕೊಂಡಿದೀವಿ. ನೀವು ಮಗುವಿನಂತೆ ನಕ್ಕಾಗ, ‘ ಅಭಿಮಾನಿ ದೇವರುಗಳೇ’ ಎಂದು ಕೈ ಮುಗಿದಾಗ-‘ಜೇನಿನ ಹೊಳೆಯ’ ಒಂದು ಹಾಡು; ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟುಬೇಕು’ ಎಂಬ ಇನ್ನೊಂದು ಹಾಡು ನೆನಪು ಮಾಡಿಕೊಂಡು ‘ ಇದೆಲ್ಲ ನಮ್ಮ ಅಣ್ಣಾವ್ರು’ ಅಂತ ಕುಣಿದಾಡ್ಕೊಂಡು ಹೇಳ್ತಿದೀವಿ...

ನಿಮ್ಮ ಅಭಿನಯವನ್ನ ಪದೇ ಪದೆ ಇಷ್ಟಪಡುತ್ತಾ, ನಿಮ್ಮ ಹಾಡು ಗುನುಗುತ್ತಾ , ವೀರಾವೇಶದ ಡೈಲಾಗ್‌ಗಳಿಗೆ ದನಿಯಾಗುತ್ತಾ ನಾವೆಲ್ಲ ಇರುವಾಗಲೇ ನೀವು ಅಭಿನಯದಿಂದ ದೂರ ಆಗ್ತಾ ಇದೀರ! ‘ಭಕ್ತ ಅಂಬರೀಷ್‌’ ನಾಗಿ ನೀವು ಬಂದೇ ಬರ್ತೀರ ಅಂತ ಸಮಸ್ತ ಕನ್ನಡಿಗರೂ ‘ಶಬರಿ’ಯಂತೆ ಕಾದಿದ್ದರೂ, ಮಂಡಿ ನೋವಿನ ನೆಪ

ಹೇಳ್ತಿದೀರ ! ಅಣ್ಣಾವ್ರೆ, ನೀವು ಅಭಿನಯ ನಿಲ್ಲಿಸಬೇಡಿ. ಮತ್ತೆ ಬಣ್ಣ ಹಚ್ಚಿ, ಎಲ್ಲರ ಮನೆಯ ನಗುವಾಗಿ, ಎಲ್ಲರ ಪ್ರೀತಿಯ ಮಗುವಾಗಿ... ಅಭಿಮಾನ ಇದ್ದ ಕಡೇಲಿ ಪ್ರೀತಿ ಇರುತ್ತೆ. ಪ್ರೀತಿಯ ಬೆನ್ನಲ್ಲೇ ಪ್ರಶ್ನೆ ಇರುತ್ತೆ. ಪ್ರಶ್ನೆಯ ಹಿಂದೆ ಅಗ್ರಹವಿರುತ್ತೆ. ಆಗ್ರಹದ ಜತೇಲಿ ಬೇಡಿಕೆ ಇರುತ್ತೆ. ಬೇಡಿಕೆಯ ಹಿಂದೆ ಮಮತೆಯಿರುತ್ತೆ. ಮಮತೆಯ ಮಡಿಲಲ್ಲಿ ಅದೇ ಹಳೆಯ ಅಭಿಮಾನವಿರುತ್ತೆ. ಈ ಅಭಿಮಾನದಿಂದಲೇ ನಿಮ್ಮನ್ನ ಪ್ರೀತಿಯಿಂದ ಕೇಳಿಕೊಳ್ತಾ ಇದೀನಿ, ಪ್ಲೀಸ್‌, ಆದಷ್ಟು ಬೇಗ ‘ಭಕ್ತ ಅಂಬರೀಷ’ ನಾಗಿ ಬನ್ನಿ.

ಈ ಪತ್ರದ ಓದ್ತ ಓದ್ತಾನೇ ನಿಮ್ಮ ಮನದ ನೋವು ಮಂಡಿನೋವು ಮಾಯವಾಗಲಿ. ಮುಂದಿನ ನೂರು ವರ್ಷದವರೆಗೂ ನಿಮಗೆ ದೀರ್ಘಾಯಸ್ಸು, ಸಂತೋಷ, ಸಂಭ್ರಮ ದಂಡಿಯಾಗಿ ಸಿಗಲಿ. ನಮ್ಮ ಮಕ್ಕಳು, ಮೊಮ್ಮಕ್ಕಳಿಗೆ ಕೂಡ ‘ರಾಜ್‌ ಕುಮಾರೇ’ ಆದರ್ಶವಾಗಲಿ.

ಅಡ್ವಾನ್ಸಾಗಿ ಐದೂವರೆ ಕೋಟಿ ಕನ್ನಡಿಗರ ಪರವಾಗಿ ಹೇಳ್ತಾ ಇದೀನಿ. ಹುಟ್ಟುಹಬ್ಬದ(ಏ.24) ಶುಭಾಶಯಗಳು.

ಅಭಿಮಾನ, ಅಕ್ಕರೆ, ಪ್ರೀತಿ, ಪ್ರೀತಿಯಿಂದ

-ಎ.ಆರ್‌.ಮಣಿಕಾಂತ್‌
(ಸ್ನೇಹಸೇತು : ವಿಜಯ ಕರ್ನಾಟಕ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada