twitter
    For Quick Alerts
    ALLOW NOTIFICATIONS  
    For Daily Alerts

    ಜಾನಪದ ಜೋಗಿಯೇ...ಮತ್ತೆ ಹಾಡು!

    By Staff
    |


    ಸಖತ್ತಾಗಿ ಹಾಡ್ತಿದ್ದ ನಮ್ಮ ತಿಮ್ರಾಜಣ್ಣ, ಯಾವಾಗ ಗ್ಲಾಮರ್‌ ಹುಚ್ಚಿಗೆ ಬಿದ್ರೋ ಆಗ ಜನರ ಚಪ್ಪಾಳೆಗಾಗಿ ಹಾಡೋಕೆ ಶುರು ಮಾಡಿದ್ರು. ಅವತ್ತೇ ಕಳೆದು ಹೋದ ತಿಮ್ಮಣ್ಣ, ಎಣ್ಣೆ ಹಾಕೋಕೆ ಶುರುಮಾಡಿದ್ರು. ಕಳೆದು ಹೋದ ತಿಮ್ರಾಜಣ್ಣನಿಗೆ, ಈವತ್ತೂ ಒಂದು ರಿಕ್ವೆಸ್ಟ್‌ ...ಈಗ ಹಳ್ಳೀ ಜನ ಜಾನಪದವನ್ನು ಮರೀತಾ ಇದಾರೆ. ಸಿಟಿಯ ಜನ ಅದನ್ನೇ ಧ್ಯಾನಿಸ್ತಾ ಇದಾರೆ. ಈ ಪರಿಸ್ಥಿತೀಲಿ ನೀನು ಇನ್ನಷ್ಟು ಹಾಡಿ, ವಿಚಿತ್ರ ಡ್ಯಾನ್ಸು ಮಾಡಿ ಜನರನ್ನ ಕಾಡಬೇಕು ಅಂತ ಕೇಳ್ಕೋತಿನಿ.

    ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ ಸುಳಿದಾಡಬೇಡ ಗೆಳತಿ ಚೆಲುವಾದ ನಿನ್ನ ಮಲ್ಲಿಗೆಯ ಮೈಯ ಸುಟ್ಟಾವು ಬೆಳ್ಳಿ ಕಿರಣ...

    ಈ ಸಾಲುಗಳನ್ನು ಓದುತ್ತಿದ್ದರೆ ಆಗುವ ಪರಿಣಾಮವೇ ಬೇರೆ. ಅಪ್ಪಗೆರೆ ತಿಮ್ಮರಾಜು ಅವರ ಸಿರಿಕಂಠದಲ್ಲಿ ಕೇಳುತ್ತಿದ್ದರೆ ಉಂಟಾಗುವ ಅನುಭೂತಿಯೇ ಬೇರೆ. ತಿಮ್ಮರಾಜು ಹಾಡಲೆಂದೇ ಈ ಪದ್ಯವನ್ನು ಸಿದ್ಧಲಿಂಗಯ್ಯ ಬರೆದರೇನೋ ಎಂಬಂಥ ಏಕೋಭಾವ ಹಾಡು ಮತ್ತು ಹಾಡಿದವರ ಮಧ್ಯೆಯಿದೆ ‘...ಚೆಲುವಾದ ನಿನ್ನ ಮಲ್ಲಿಗೆಯ ಮೈಯ...’ ಎನ್ನುವಾಗ ತಿಮ್ಮರಾಜು ದಿಢೀರನೆ ಹುಡುಗನಾಗುತ್ತಾರೆ. ಅವರ ದನಿ ಇಂಪಾಗುತ್ತದೆ. ಸ್ವರ ಪುಳಕಗೊಳ್ಳುತ್ತದೆ. ಆ ಸ್ವರ ರೋಮಾಂಚನ ಹಾಡಿಗಿರುವ ಅನೇಕ ಅರ್ಥಗಳನ್ನು ಒಮ್ಮೆಲೇ ಹೊಳೆಸುತ್ತದೆ. ಹಾಡು ಕೇಳುತ್ತಾ ಹೋದಂತೆಲ್ಲ ಆ ಬೆಳದಿಂಗಳಂಥ ಸುಂದರಿಯ ಕಲ್ಪನಾ ಚಿತ್ರ ಕಣ್ಮುಂದೆ ಬಂದು ನಿಲ್ಲುತ್ತದೆ. ಮೋಹಕ್ಕೆ ಕೆಡುವುತ್ತದೆ. ಇನ್ನೊಂದು ಕಡೆಯಲ್ಲಿ ಹಾಡು ಅಮರವಾಗುತ್ತದೆ. ತಿಮ್ಮರಾಜು ದನಿ ಮಧುರವಾಗುತ್ತದೆ. ಮಿದುವಾಗುತ್ತದೆ. ಮಗುವಿನಂತೆ ವಿನೀತವೂ ಆಗುತ್ತದೆ. ಆತ ಮೈಮರೆತು ಹಾಡುತ್ತಾರೆ:

    ಚೆಲ್ಲಿದರು ಮಲ್ಲೀಗೆಯಾ, ಬಾಣಾ ಸೂರೇರಿ ಮ್ಯಾಲೆ ಅಂದಾದ ಚೆಂದಾದ ಮಾಯ್ಕಾರ ಮಾದೇವ್ಗೆ ಚೆಲ್ಲಿದರು ಮಲ್ಲೀಗೆಯ...

    ಮುಂದೆ ಹಾಡೆಂಬೋ ಹಾಡೂ ಮಾಯೆಯಂತೆ. ಮಿಂಚಿನಂತೆ, ಮೋಹದಂತೆ ಕೇಳಿಸುತ್ತಾ ಹೋದಂತೆಲ್ಲ ಅರೆ, ಹಾಡಿನ ಮೋಹ ಮೊದಲೋ ಅಥವಾ ಅಪ್ಪಗೆರೆಯ ಇನಿದನಿ ಕೊಡುವ ಮೋದ ಮೊದಲೋ ಎಂಬ ಪ್ರಶ್ನೆ ಕೈ ಹಿಡಿಯುತ್ತದೆ. ಮೊನ್ನೆ ಕಲಾಕ್ಷೇತ್ರದಲ್ಲಿ ಆದದ್ದೂ ಹಾಗೆಯೇ. ಹಾಡು ಮತ್ತು ರಾಗ ಜಿದ್ದಿಗೆ ಬಿದ್ದಿದ್ದಾಗಲೇ ಕವಿ ಸಿದ್ಧಲಿಂಗಯ್ಯ ಹೇಳುತ್ತಾ ಹೋದರು.

    ನಾಡಿನ ಜಾನಪದ ಗಾಯಕರ ಪೈಕಿ ಇವತ್ತು ನಂಬರ್‌ ಒನ್‌ ಗಾಯಕ ಅಂದ್ರೆ ನಮ್ಮ ತಿಮ್ಮರಾಜು. ಆತ ಒಂದೊಂದು ಹಾಡನ್ನೂ, ಪದವನ್ನೂ, ಭಾವವನ್ನೂ ಅನುಭವಿಸಿ ಹಾಡ್ತಾನೆ. ಆತನ ವಿಶಿಷ್ಟ ಹಾವ-ಭಾವ, ದನಿಯ ಏರಿಳಿತದಲ್ಲಿನ ಮ್ಯಾಜಿಕ್ಕು ಎಲ್ಲರಿಗೂ ಇಷ್ಟವಾಗುತ್ತೆ, ‘ಅಳಬೇಡ ನನಕಂದ ನಾನು ಸಂತಿಗೋಗಿ ಬರ್ತೀನಿ/ ಸಂತಿಗೋಗಿ ಬರ್ತೀನಿ ನಾನು ಮೊಸರು ಮಾರಿ ಬರ್ತೀನಿ/ಮೊಸರು ಮಾರಿ ಬರ್ತೀನಿ ನಿಂಗೆ ಹಸಿರಿನಂಗಿ ತರ್ತೀನಿ’ ಅಂದಾಗ ನಮ್ಮ ಕಣ್ಮುಂದೆ ಬಾಲ್ಯ, ಆಗ ಜತೆಗಿದ್ದ ಅಜ್ಜಿ, ಅವಳ ಪ್ರೀತಿ, ಕರುಣೆ, ಇದನ್ನೆಲ್ಲ ಮೀರಿದ ಇನ್ನೂ ಏನೇನೋ ನೆನಪಾಗುತ್ತದೆ. ಕವಿತೆಗಳನ್ನು, ಜಾನಪದ ಹಾಡುಗಳನ್ನು ಕೈ ಹಿಡಿದು ನಡೆಸಿದ ಅಪ್ಪಗೆರೆಗೆ ಐವತ್ತಾಗಿದೆ ನಿಜ. ಆದರೆ ಅವರ ಇನಿದನಿ ಇನ್ನೂ ಇಪ್ಪತ್ತರ ಹರೆಯದಲ್ಲೇ ಅಡ್ಡಾಡುತ್ತಿದೆ...

    ಡಿಯರ್‌ ಡಿಯರ್‌ ತಿಮ್ರಾಜಣ್ಣ, ಹೌದು ಕಣಪ್ಪಾ, ನಿನ್ನನ್ನೇ ಕರೀತಿರೋದು. ನಿಂಗೇ ಪತ್ರ ಬರೀತಾ ಇರೋದೂ...

    *

    ...ನಮ್ಮಜ್ಜಿ ಕೂತಾಗ ನಿಂತಾಗಲೆಲ್ಲ ಜನಪದ ಗೀತೆ ಆಡ್ತಿದ್ಲು. ಅದೇ ವುಚ್‌ನಂಗೂ ಅಂಟ್ಕತ್ತು. ಎಸೆಲ್ಸಿ ಫೇಲಾದಾಗ ಜಾಸ್ತಿ ಹಾಡು ಕಲ್ತೆ. ಕಾಲೇಜ್‌ಗೆ ಬಂದ್ಮೇಲೆ ಸ್ಪರ್ಧೇಲಿ ಹಾಡ್ತಿದ್ದೆ. ಬಹುಮಾನಗಳು ಬರ್ತಾ ಇರ್ಲಿಲ್ಲ. ಆಗೆಲ್ಲ ಹೊಲ ಗದ್ದೆಗಳತ್ರ ಹೋಗಿ ಕೂಗ್ತಾ ಹಾಡುವೆ. ಆಮ್ಯಾಲೆ ಡಿಗ್ರಿ ಓದಕೆ ಅಂತ ಬೆಂಗ್ಳೂರ್ಗೆ ಬಂದ್ನಲ್ಲ ದೊಡ್‌ ದೊಡ್‌ ಮನುಷ್ಯರ ಕಣ್ಣಿಗ್‌ ಬಿದ್ದೆ. ಅವ್ರೆಲ್ಲ ಇದ್ಯಾರಪ್ಪ ಈ ಉಡ್ಗ ? ಕರ್ರಗೆ, ತೆಳ್ಳಗೆ, ಉದ್ದುದ್ಕೆ ಅವ್ನಲ್ಲಾ ?ಚೆಂದಾಗಿ ಹಾಡೋದ್‌ ಬ್ಯಾರೆ ಕಲ್ತವ್ನಲಾ ಅಂದ್ರು. ಬೆನ್ನು ತಟ್ಟಿದ್ರು. ಎಲ್ಲ ಆಶೀರ್ವಾದದಿಂದ ಏನಾಗೋಯ್ತು ಅಂದ್ರೆ- ಅಪ್ಗೆರೆ ತಿಮ್ರಾಜು ಅನ್ನೋ ನಾನು ಒಂದಷ್ಟು ಹೆಸರು ಮಾಡ್ದೆ. ಹಾಡೇಳ್ತ ಖುಷಿಪಟ್ಟೆ.

    ಹೌದಲ್ವ ತಿಮ್ರಾಜಣ್ಣಾ. ನೀನೇ - ನಿನ್ನ ಪರಿಚಯ ಹೇಳಿಕೊಳ್ಳುವುದು ಹೀಗೆ. ಆದ್ರೆ ನಮ್‌ ಜನ ಅದನ್ನೆಲ್ಲ ನೆನ್ಪೇ ಮಾಡ್ಕಳಲ್ಲ. ಅವ್ರ ಪ್ರಕಾರ- ತಿಮ್ರಾಜು ಅಂದ್ರೆ ಹಾಡು. ತಿಮ್ರಾಜು ಅಂದ್ರೆ ಡ್ಯಾನ್ಸು. ತಿಮ್ರಾಜು ಅಂದ್ರೆ ರಾಗ. ತಿಮ್ರಾಜು ಅಂದ್ರೆ ತಾಳ. ತಿಮ್ರಾಜುನೇ ಒಂದು ಜನಪದ ಗೀತೆ! ಹೌದು ಸಿವಾ, ನೀನು ಜಗತ್ತನ್ನೇ ಮರೆತವನಂತೆ ‘ಬಿದಿರು ನಾನ್ಯಾಗಿರಲ್ಲಾದವಳು/ಹುಟ್ಟುತ್ತಾ ಹುಲ್ಲಾದೆ, ಬೆಳೆಯುತ್ತಾ ಮರವಾದೆ/ ಪ್ರತಿಯಾಬ್ಬ ಸ್ತ್ರೀಯರಿಗೆ ತೂಗುವ ತೊಟ್ಟಿಲಾದೆ’ ಎಂದು ಹಾಡಿದಾಗ ಸಂತೋಷ-ಸಂಕಟ ಎರಡೂ ಒಟ್ಟೊಟ್ಟಿಗೇ ಆಗಿಬಿಡುತ್ತೆ. ಆದ್ರೆ- ನಿಂತ ನಿಂತಲ್ಲೇ ಕಣ್ಣು ಹೊಡೀತಾ, ಹುಬ್ಬು ಎಗರಿಸ್ತಾ, ಯಾವ್ದೋ ಕಡೆಗೆ ಕೈ ಮಾಡಿ ತೋರಿಸ್ತಾ- ‘ನಿಂಬೇಯ ಹಣ್ಣಂಗೆ ತುಂಬಿದ ಮೈನೋಳೆ/ ಗ್ಯಾನ ಬಿತ್ತಲೇ ನಿನ್ನ ಮ್ಯಾಲೆ/ ಮನಸು ಬಿತ್ತಲ್ಲೇ ನಿನ್ನ ಮ್ಯಾಲೆ’ ಎಂಬ ಒಂದು ಹಾಡು: ಎಲೆ ಕೆಂಚಿ ತಾರೆ ನಮ್‌ ಮನೇತನ್ಕ ಬಾರೆ/ ನೀ ಬಾರದೇ ಹೋದರೆ...ನಾನ್‌ ಕೆರೆ ಬಾವಿ ಪಾಲೇ...

    ಎಂಬ ಇನ್ನೊಂದು ಹಾಡು ಹಾಡ್ತೀಯಲ್ಲಪ್ಪಾ...ಆಗೆಲ್ಲ ನಮ್ಮ ಹರೆಯ, ಮಧುರ ಪ್ರೇಮ, ಹಳೆಯ ಗೆಳೆಯ...ಇನ್ನೂ ಏನೇನೇನೇನೋ ನೆನಪಾಗಿ ಮನಸೆಂಬೋ ಮನಸು ಎತ್ತಿನಗಾಡಿ ಹತ್ತಿ ಕೂತುಬಿಡುತ್ತೆ. ಬರೀ ಹಾಡಿಂದಾನೇ ಎಲ್ರನ್ನೂ ಹಿಂಗೆ ಕಾಡ್ತೀಯಲ್ಲಪ್ಪ... ಹೇಳು, ನಿಂಗೆ ಲೊಚಕ್‌ ಅಂತ ಮುತ್ತಿಡಬೇಕೋ ಬ್ಯಾಡ್ವೊ?

    ತಿಮ್ರಾಜಣ್ಣೋ, ನಿಜ ಕಣೋ. ಹತ್ತಿರದಿಂದ ಕಂಡವರಿಗೆ ನೀನು ಅಪಾರ ಜೀವನೋತ್ಸಾಹದ ಆಸಾಮಿ. ಮುಗ್ಧವಾಗಿ ಮಾತಾಡುವ, ಇಷ್ಟವಾದಾಗ ಸುಮ್‌ ಸುಮ್ನೇ ನಾಚಿಕೊಳ್ಳುವ, ಖುಷಿ ಹೆಚ್ಚಾದಾಗ ಅದ್ಭುತವಾಗಿ ಹಾಡಿ ರಂಗೇರಿಸುವ ವಿಚಿತ್ರ ಪ್ರತಿಭೆ ನಿನಗುಂಟು. ನೀನು ಹಾಡಿದರೆ ಸಾಕು- ಒಂದು ಜನಪದ ಗೀತೆ ತನ್ನ ಅರ್ಥವನ್ನು ಇಷ್ಟಿಷ್ಟೇ ಬಿಟ್ಟುಕೊಡುತ್ತಾ, ಅಮ್ಮಂತೆ, ಗೆಳತಿಯಂತೆ ಆಪ್ತವಾಗುತ್ತಾ ಹೋಗುತ್ತದೆ. ಬಾಲ್ಯವೆಂಬ ಜಾತ್ರೆಯಲ್ಲಿ ತಿರುಗಾಡಿಸಿ, ಮೆರೆದಾಡಿಸಿ, ಖುಷಿಕೊಡುತ್ತದೆ. ಅಪ್ಪಗೆರೆ ತಿಮ್ರಾಜು ಅಂದ್ರೆ ಸುಮ್ನೇ ಅಲ್ಲ. ಅವ್ನು ‘ಜಾನಪದದ ಜಾಕ್ಸನ್‌’ ಅನ್ನೋದು ಇದೇ ಕಾರಣಕ್ಕೆ! ಗೊತ್ತಾಯ್ತಾ ಸಿವಾ?

    *

    ಇದನ್ನೆಲ್ಲ ಹೇಳ್ಬೇಕಿದ್ದುದು ಮೊನ್ನೆ- ನಿನ್ನ ಬರ್ತ್‌ಡೇನಲ್ಲಿ ! ಆದ್ರೆ ನೀನವತ್ತು ಸಖತ್‌ ಬ್ಯುಸಿ ಇದ್ದೆ. ಫಳಫಳಫಳ ಮಿಂಚ್ತಾ ಇದ್ದೆ. ಪಸಂದಾಗಿ ಹಾಡ್ತಾ ಇದ್ದೆ. ಗರ್ರಂತ ಕೈಯಾಡ್ಸಿ ಮಜಾ ಕೊಡ್ತಿದ್ದೆ. ಯಾರ್ಯಾರದೋ ಅಭಿಮಾನಕ್ಕೆ ಕಣ್ಣೀರಾಗ್ತಿದ್ದೆ. ಚಪ್ಪಾಳೆ ದನಿಗೆ ಕಿವಿಯಾಗ್ತಿದ್ದೆ. ಮಾತಾಡ್ತ ಮಾತಾಡ್ತಾನೇ ಕವಿಯಾಗ್ತಿದ್ದೆ. ಆಗ ಹೇಳಬೇಕಿದ್ದ ಮಾತನ್ನೆಲ್ಲ ಹೇಳಿದ್ದಾಯ್ತು. ಒಂದಿಷ್ಟು ಪ್ರಶ್ನೇನೂ ಕೇಳಿಬಿಡ್ತೀನಿ. ಹೇಳು: ಆಪಾಟಿ ಹಾಡೇಳ್ತೀಯಲ್ಲ, ಅದ್ರಲ್ಲೂ ಪ್ರೀತಿ-ಪ್ರೇಮದ್ದು : ಗಂಡ-ಹೆಂಡ್ತಿ ಸರಸದ್ದು, ಹರೇದ ಬೆಡಗಿ ಕುರಿತದ್ದು... ಅದನ್ನ ಕೇಳ್ತ ಕೇಳ್ತಾನೇ ನಮ್ಗೆ ಪ್ರಾಯ ಗುದ್ಕಂಡು ಬರ್ತದೆ. ನೀನು- ಹಾಡೋನ ಕತೆ ಏನು?‘ಹಿಟ್ಟು ಮಾಡಿ ಸೊಪ್ಪು ಮಾಡಿ ಎಲೆ ನಾರಿ ಹಿಟ್ಟಿಕ್ಕದೆಲ್ಲಿ ಹೋದೆ’ ಅಂತೀಯಲ್ಲ- ಅದೇ ಥರಾ ಮನೇಲೂ ಆಂಟೀಗೆ ಕ್ಲಾಸ್‌ ತಗೋತೀಯಾ ?‘ನೀನೂ ಒಂದ್ಸಲ ಹಾಡೇಳ್ಬುಡೇ’ ಅಂತ ಕಣ್ಣು ಹೊಡ್ದು ಮಜಾ ತಗೋತೀಯಾ ?ಅಲಲಲೆ, ಆಗ್ಲೇ ನಾಚ್ಕೊತಾ ಇದೀಯಲ್ಲ... ಹಂಗಾದ್ರೆ...ಇದೆಲ್ಲ ನಿಜಾ ಅನ್ನು?

    ಏನ್‌ ಗೊತ್ತಾ ?15 ವರ್ಷದ ಹಿಂದೆ ನೀನು ಸಖತ್ತಾಗಿ ಹಾಡ್ತಿದ್ದೆ. ಆದ್ರೆ ಯಾವಾಗ ಗ್ಲಾಮರ್‌ ಹುಚ್ಚು ಹತ್ಕೊತ್ತೋ ನೀನು, ಜನರಿಗಾಗಿ ಹಾಡುವ ಬದಲು ಚಪ್ಪಾಳೆಗಾಗಿ ಹಾಡಲು ಶುರು ಮಾಡ್ದೆ. ಅವತ್ತೇ-ನಮ್‌ ತಿಮ್ಮಣ್ಣ ಕಳೆದೇ ಹೋದ. ಮುಂದೆ ಎಣ್ಣೆ ಹಾಕೋಕ್‌ ಶುರು ಮಾಡಿದ್ಯಲ್ಲ ಆಗ ಸಿಂಗರ್‌ ತಿಮ್ಮಣ್ಣ ಚಟ್‌ಪಕಾರ್‌ನೆ ಮಾಯ ಆಗಿಬಿಟ್ಟ. ಓಹೋ, ತಿಮ್ರಾಜು ಕಳೆದು ಹೋದ ಅಂತ ನಾವೆಲ್ಲ ಗಾಬ್ರಿಯಾಗಿದ್ದಾಗಲೇ ನೀನು ಭೂಪ ನಡೆದು ಬಂದಿದೀಯಾ! ನಾನೀಗ ಕಾಫೀ, ಟೀ, ಹಾಲು, ಆಲ್ಕೋ ಹಾಲು ಏನೂ ಮುಟ್ಟಿಲ್ಲ. ಆಗೇನಿದ್ರೂ ಜ್ಯೂಸ್ಯೂ, ಜ್ಯೂಸೂ ಅಂದಿದೀಯ!

    ತಿಮ್ರಾಜಣ್ಣಾ, ಈಗ ಹಳ್ಳೀ ಜನ ಜಾನಪದವನ್ನು ಮರೀತಾ ಇದಾರೆ. ಸಿಟಿಯ ಜನ ಅದನ್ನೇ ಧ್ಯಾನಿಸ್ತಾ ಇದಾರೆ. ಈ ಪರಿಸ್ಥಿತೀಲಿ ನೀನು ಇನ್ನಷ್ಟು ಹಾಡಬೇಕು. ಹಾಡಿ ಹಾಡಿ ಕಾಡಬೇಕು. ಹಾಡಿಂದ ನೀನು ಬೆಳೀಬೇಕು. ನಿನ್ನಿಂದ ಇನ್ನಷ್ಟು ಹಾಡು ಉಳೀಬೇಕು. ಇಷ್ಟೆಲ್ಲ ಹೇಳಿದ್ಮೇಲೂ ನೀನು ಹಾಡೋದು ಮರೆತೆ ಅಂದ್ರೆ ನನ್ಮೇಲಾಣೆ. ತಿಳ್ಕಂಡಿರು.

    ಐವತ್ತು ಮುಗೀತಲ್ಲ, ಮುಂದೆ ನೂರಾಗಲಿ. ಆಗಲೂ ನಿನ್ನ ಹಾಡು, ಹಹ್ಹಹ್ಹಾ ನಗು, ವಿಚಿತ್ರ ಡ್ಯಾನ್ಸು ನೋಡುವ ಖುಷಿ ನಮ್ಮದಾಗಲಿ, ಪತ್ರ ಓದಿ ಏನನ್ನಿಸ್ತು? ಜಾನಪದ ಜೋಗಿಯೇ... ಉತ್ರ ಬರಿ.

    (ಸ್ನೇಹ ಸೇತು ವಿಜಯ ಕರ್ನಾಟಕ )

    Post your views

    ಮುಖಪುಟ / ಸ್ಯಾಂಡಲ್‌ವುಡ್‌

    Friday, April 19, 2024, 7:53
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X