»   » ಗಾನಗಂಧರ್ವ -ಇನ್ನಷ್ಟು ಒಳನೋಟಗಳು

ಗಾನಗಂಧರ್ವ -ಇನ್ನಷ್ಟು ಒಳನೋಟಗಳು

Posted By: Staff
Subscribe to Filmibeat Kannada

ಡಾ.ರಾಜ್‌ಕುಮಾರ್‌ ಅವರ ಗಾಯನದ ಬಗ್ಗೆ ಹೊಸತೇನನ್ನೂ ಬರೆಯಬೇಕಿಲ್ಲವಾದರೂ ರಾಜ್‌ ಹಾಡುಗಳ ಕ್ಯಾಸೆಟ್‌ ವಿಮರ್ಶೆ ಓದಿದ ನಂತರ ಕೆಲ ಅನಿಸಿಕೆಗಳನ್ನು ಹಂಚಿಕೊಳ್ಳಬೇಕೆನಿಸಿತು. ಇದೋ ಇಲ್ಲಿ....

ಸಿನಿಮಾ ಪ್ರಪಂಚದ ಆರಂಭದ ದಿನಗಳಲ್ಲಿ ಹೆಚ್ಚಾಗಿ ನಾಟಕದ ಕಲಾವಿದರು ಚಿತ್ರಗಳಲ್ಲಿ ನಟಿಸುತ್ತ ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾದ ಹಾಡುಗಾರಿಕೆಯನ್ನೂ ತಮ್ಮ ಅಭಿನಯದ ಒಂದು ಮಜಲಾಗಿ ರಾಜ್‌ ಪ್ರದರ್ಶಿಸುತ್ತಿದ್ದರು.

ನಂತರದ ದಿನಗಳಲ್ಲಿ ನಾಟಕ-ಹಾಡುಗಾರಿಕೆಯ ಅನುಭವವಿಲ್ಲದ ನಟ-ನಟಿಯರು ತಮ್ಮ ಅಭಿನಯ ಸಾಮರ್ಥ್ಯದ ಪ್ರದರ್ಶನಕ್ಕೆ ಹಿನ್ನೆಲೆ ಹಾಡುಗಾರರ ನೆರವನ್ನು ಪಡೆಯುತ್ತ ಬಂದರು. ನಾಟಕರಂಗದ ಅನುಭವವಿದ್ದೂ ತಾವೇ ಹಾಡಬಲ್ಲವರಾದರೂ ರಾಜ್‌ ಓಹಿಲೇಶ್ವರ-ಮಹಿಷಾಸುರ ಮರ್ಧಿನಿಯಲ್ಲಿ ಹಾಡಿದ ಎರಡು ಹಾಡುಗಳನ್ನು ಬಿಟ್ಟರೆ ಉಳಿದಂತೆ ಹಿನ್ನೆಲೆಗಾಯಕರನ್ನೇ ತಮ್ಮ ಪರದೆಯ ಮೇಲಿನ ಶಾರೀರವಾಗಿರಿಸಿಕೊಂಡಿದ್ದರು. ಈ ಎರಡೂ ಹಾಡುಗಳ ಸಂಗೀತ ಸಂಯೋಜನೆ ರಾಜ್‌ ಅವರನ್ನು ಖಾಯಂ ಗಾಯಕರನ್ನಾಗಿಸಿದ ಜಿ.ಕೆ.ವೆಂಕಟೇಶ್‌ ಅವರದು ಎನ್ನುವುದೂ ಸ್ವಾರಸ್ಯಕರ ವಿಷಯವೇ.

ಮೊದಲ ಕೆಲ ವರ್ಷಗಳ ನಂತರ ಆ ಸ್ಥಾನವನ್ನು ತುಂಬಿದವರು ಪಿ.ಬಿ.ಶ್ರೀನಿವಾಸ್‌. ಸಾಹಿತ್ಯವು ಹಾಡಿನ ಮುಖ್ಯ ಅಂಗವಾಗಿದ್ದು ಭಾಷೆಯ ಬಗೆಗೆ ತಿಳುವಳಿಕೆ-ಆಸ್ಥೆಯಿದ್ದವರು ಸಾಹಿತ್ಯ ರಚಿಸುತ್ತಿದ್ದ ಆ ದಿನಗಳಲ್ಲಿ ಕನ್ನಡದ ಹಾಡುಗಳನ್ನು ಸ್ಪಷ್ಟ ಕನ್ನಡ ಉಚ್ಚಾರಣೆಯಾಂದಿಗೆ ಹಾಡಿದ ಮೊದಲಿಗ ಪಿ.ಬಿ.ಎಸ್‌. (ಆ ನಂತರದ ಹಿನ್ನೆಲೆಗಾಯಕರ ಪೈಕಿ ಎಸ್‌.ಪಿ.ಬಾಲು ಮಾತ್ರ ಈ ಸಾಧನೆ ಮಾಡಿದ್ದಾರೆ)

ಪಿ.ಬಿ.ಎಸ್‌.-ರಾಜ್‌ ಜೋಡಿ ಯಶಸ್ಸಿನ ಉತ್ತುಂಗದಲ್ಲಿದ್ದಾಗಲೇ ಬೇರೆಯಾದದ್ದು ವಿಪರ್ಯಾಸವಾದರೂ ಆ ಕೊರತೆಯನ್ನು ತಮ್ಮ ಗಾಯನದಿಂದ ತುಂಬಲು ರಾಜ್‌ ಸಾಕಷ್ಟು ಶ್ರಮ ಪಟ್ಟಿದ್ದು , ಅವರ ಹಾಡುಗಳನ್ನು ಆಲಿಸಿ ಅರ್ಥೈಸಿಕೊಂಡವರಿಗೆ ತಿಳಿಯದಿರದು.

ಯಾವ ರೀತಿಯ ಹಾಡೇ ಆಗಲಿ ತಮ್ಮ ಛಾಪನ್ನು ಮೂಡಿಸುವಲ್ಲಿ ರಾಜ್‌ ಪಟ್ಟ ಶ್ರಮ ಅನುಕರಣೀಯ. ರಾಗಾಧಾರಿತ ಹಾಡುಗಳಾಗಲಿ, ಪಾಶ್ಚಾತ್ಯವಾಗಲಿ (ಇಫ್‌ ಯು ಕಂ ಟುಡೆ, ಲವ್‌ ಮಿ ಆರ್‌ ಹೇಟ್‌ ಮಿ....), ಗಜಲ್‌ಗಳಾಗಲಿ (ಬಾಳೆ ಪ್ರೇಮಗೀತೆ, ಯಾವ ಕವಿಯು ಬರೆಯಲಾರ, ಗೆಳತಿ ಬಾರದು ಇಂಥಾ ಸಮಯ) ಭಾಷೆ-ಭಾವಗಳ ಸಮ್ಮೇಳನ ಕೇಳುಗನ ಮನಮುಟ್ಟುವಂತೆ ಮಾಡಿದ್ದು ರಾಜ್‌ ಗಾಯನದ ವಿಶೇಷ.

ಜೊತೆಗೇ ಚಿತ್ರರಂಗವು ಉದ್ಯಮದ ಸ್ವರೂಪ ಪಡೆದ ನಂತರ ಭಾರತೀಯ ಚಿತ್ರರಂಗದಲ್ಲಿ ನಾಯಕ-ಗಾಯಕರ ಪರಂಪರೆಯಲ್ಲಿ ಕಾಣಸಿಗುವ ಏಕೈಕ ಕಲಾವಿದ ರಾಜ್‌ ಎನ್ನುವುದು ಕನ್ನಡ ಚಿತ್ರರಸಿಕರು ಹೆಮ್ಮೆ ಪಡಬಹುದಾದ ವಿಷಯ. ಬರೆಯುತ್ತ ಹೋದರೆ ಪುಟಗಟ್ಟಲೆ ಆದೀತು....

ಇನ್ನೊಂದು ಸ್ವಾರಸ್ಯವೆಂದರೆ ಪಿ.ಬಿ.ಎಸ್‌.-ರಾಜ್‌ ಜೋಡಿಯಾಗಿ ಹಾಡಿರುವ ಎಲ್ಲ ಹಾಡುಗಳೂ ಖ್ಯಾತಿ ಗಳಿಸಿರುವುದು ಈ ಇಬ್ಬರೂ ಕಲಾವಿದರ ಸಾಧನೆಯ ಪ್ರತೀಕ.

ಉದಾಹರಣೆಗೆ...
ಬಭ್ರುವಾಹನ - ಯಾರು ತಿಳಿಯರು ನಿನ್ನ
ಶಂಕರ್‌-ಗುರು - ನಾ ಬೆಂಕಿಯಂತೆ
ಕೆರಳಿದಸಿಂಹ - ಅಮ್ಮಾ ನೀನು ನಮಗಾಗಿ
ಅದೇಕಣ್ಣು - ನಿನ್ನೀ ನಗುವೇ ಅರುಣೋದಯವು
... ಸೃಜನಶೀಲ ನಾಯಕ-ಗಾಯಕರ ಸಾಧನೆಯ ಪಟ್ಟಿ ಉದ್ದವಾಗುತ್ತದೆ.

English summary
No match for Rajkumar and P.B.Srinivas combination...responses a browser, Pradeep Bellave
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada