»   » ಗೀತಪ್ರಿಯ ಸಾರ್‌, ಹೇಗಿದ್ದೀರಿ?

ಗೀತಪ್ರಿಯ ಸಾರ್‌, ಹೇಗಿದ್ದೀರಿ?

Subscribe to Filmibeat Kannada
  • ಎ.ಆರ್‌.ಮಣಿಕಾಂತ್‌
ಅವರು ಸಂಭ್ರಮದಿಂದಲೇ ಮಾತಿಗೆ ಶುರುವಿಟ್ಟರು: ಹೌದೂರೀ, ಹೆಸರಿನಲ್ಲೇ ಗೀತೆಯನ್ನು ಇಟ್ಕೊಂಡಿರೋರು ಗೀತಪ್ರಿಯ. ಅವರಿಗೆ ಹಾಗಂತ ಹೆಸರು ಕಟ್ಟಿದ್ದು ಸಂಗೀತ ನಿರ್ದೇಶಕ ವಿಜಯಭಾಸ್ಕರ್‌. ‘ಮಣ್ಣಿನ ಮಗ’, ‘ಯಾವ ಜನ್ಮದ ಮೈತ್ರಿ’, ‘ಹೊಂಬಿಸಿಲು’, ‘ಬೆಸುಗೆ’ ಮುಂತಾದ ಸೂಪರ್‌ಹಿಟ್‌ ಚಿತ್ರಗಳನ್ನು ನಿರ್ದೇಶಿಸಿದ್ದು ಗೀತಪ್ರಿಯರ ಹೆಚ್ಚುಗಾರಿಕೆ. ಅವರು ಒಟ್ಟು 27ಚಿತ್ರಗಳನ್ನು ನಿರ್ದೇಶಿಸಿದ್ದಾರೆ.

ಅವರ ಎಲ್ಲ ಸಿನಿಮಾದಲ್ಲೂ ಬೊಂಬಾಟ್‌ ಕಥೆಯಿದೆ. ಮನ ತಟ್ಟುವ ಸಂಭಾಷಣೆಯಿದೆ. ಇಂಪಾದ ಹಾಡುಗಳಿವೆ. ಎಲ್ಲಕ್ಕಿಂತ ಮಿಗಿಲಾಗಿ ಅವರ ಪ್ರತಿ ಸಿನಿಮಾದಲ್ಲೂ ಒಂದು ಸಂದೇಶವಿದೆ.... ಹೀಗೆ ಹೇಳುತ್ತಿದ್ದ ಅವರು ಕ್ಷಣ ಮೌನವಾದರು. ನಂತರ ಹೇಳಿದರು: ಗೊತ್ತೇನ್ರೀ ನಿಮ್ಗೆ? ಜೂನ್‌15 ರಂದು ಗೀತಪ್ರಿಯರ ಹುಟ್ಟುಹಬ್ಬ. ಅವರಿಗೀಗ ಸ್ಟೀಟ್‌ ಸೆವೆಂಟಿಫೈವ್‌. ಬೆಂಗಳೂರಲ್ಲಿ, ಮಹಾಲಕ್ಷ್ಮಿಪುರಂನಲ್ಲೇ ಅವರು ಇದಾರಂತೆ. 23596369- ಇದು ಅವರ ಫೋನ್‌ ನಂಬರು. ಮನೆಯ ಅಡ್ರೆಸ್‌ ಕೂಡಾ ಇಲ್ಲಿದೆ. ಆದ್ರೆ ಮನೆ ಹುಡುಕೋಕೆ ಆಗ್ತಾ ಇಲ್ಲ. ಗೀತಪ್ರಿಯ ಈ ಬೆಂಗಳೂರಲ್ಲಿ ಮಿಸ್ಸಿಂಗ್‌ ಲಿಂಕ್‌ ಆಗಿಬಿಟ್ಟಿದಾರೆ... ಈ ಮಾತುಗಳಿಗೆ ಬ್ರೇಕ್‌ ಹಾಕುವಂತೆ ಎದುರು ಮನೆಯ ರೇಡಿಯೋದಿಂದ ಹಾಡೊಂದು ತೇಲಿ ತೇಲಿ ಬಂತು: ರಾಗದ ಜತೆಗೆ ತಾಳದ ಬೆಸುಗೆ/ರಾಗ ತಾಳಕೆ ಭಾವದ ಬೆಸುಗೆ/ ಭಾವದ ಜತೆಗೆ ಗೀತೆಯ ಬೆಸುಗೆ/ ಗೀತೆಯ ಜತೆ ಸಂಗೀತದ ಬೆಸುಗೆ/ಬೆಸುಗೆ, ಲಲಲ್ಲಲ, ಬೆಸುಗೆ, ಲಲಲ್ಲಲ/ಬೆಸುಗೆ/ಜೀವನವೆಲ್ಲ...’ ಹಾಡು ಮುಗಿದಾಕ್ಷಣ ಅವರು ಖುಷಿಯಿಂದ ಹೀಗೆಂದರು- ಕೇಳಿದಿರಲ್ಲ, ಇದೆಲ್ಲ ಗೀತಪ್ರಿಯ!

ಅವರ ಮಾತು, ಮಧುರ ಹಾಡು, ಅದರ ರಾಗ, ತಾಳ, ಪಲ್ಲವಿಯನ್ನೇ ಮತ್ತೆ ಮತ್ತೆ ಕೇಳಿದಾಗ ಹೀಗೆ ಬರೆಯಬೇಕಿನ್ನಿಸಿತು-ಗೀತೆಗಿಂತಲೂ ಹೆಚ್ಚು ಪ್ರಿಯವಾಗುವ ‘ಗೀತಪ್ರಿಯ’ ಅವರಿಗೆ....

***

ಸರ್‌, ನೇರಾ ನೇರ ಹೇಳಿಬಿಡ್ತೀನಿ, ಬೇಜಾರಾಗಬೇಡಿ. ನೋಡಿದ ತಕ್ಷಣ ನೀವು ಹೈಸ್ಕೂಲು ಮೇಷ್ಟ್ರ ಥರಾ; ಮುನಿಸಿಕೊಂಡ ಅಪ್ಪನ ಥರಾ ಕಾಣ್ತೀರಿ. ಇಂಥ ನೀವು ಒಂದಲ್ಲ, ಎರಡಲ್ಲ- ಬರಾಬರ್‌27 ಸಿನಿಮಾಗಳನ್ನ ನಿರ್ದೇಶಿಸಿದ್ರಿ ಅಂತ ತಿಳಿದಾಗ ಬೆರಗಾಗುತ್ತೆ. ಆಶ್ಚರ್ಯವಾಗುತ್ತೆ. ಅನುಮಾನ ಕಾಡುತ್ತೆ. ಯಾಕೆ ಅಂದ್ರೆ- ನಿರ್ಮಾಪಕರಿಗೆ ಸಲಾಂ ಹೊಡೀಬೇಕು. ಚಮಚಾಗಿರಿ ಮಾಡ್ಬೇಕು. ಹೀರೋಗಳ ಮರ್ಜಿ ಕಾಯ್ಬೇಕು, ಗಾಡ್‌ಫಾದರ್‌ಗಳನ್ನು ಇಟ್ಕೊಂಡಿರಬೇಕು ಎಂದೆಲ್ಲ ನಂಬಿಕೆಯಿದೆ. ಹೀಗಿರೋವಾಗ ಪ್ರತಿಭೆಯಿಂದ, ಬರೀ ಪ್ರತಿಭೆಯಿಂದ ಎಲ್ಲರೂ ಬೆರಗಾಗುವಂಥ; ಎಂಥವರೂ ಒಪ್ಪುವಂಥ ಸಿನಿಮಾಗಳನ್ನು ತಯಾರಿಸಿದಿರಲ್ಲ- ಗೀತಪ್ರಿಯಾಜೀ, ನಿಮಗೆ ಹ್ಯಾಟ್ಸಾಫ್‌!

ಹೌದಲ್ವ ಸಾರ್‌? ನಿಮ್ಮ ಒರಿಜಿನಲ್‌ ಹೆಸರು ಲಕ್ಷ್ಮಣರಾವ್‌ ಮೋಹಿತೆ. ಮನೆ ಮಾತು ಮರಾಠಿ. ನಿಮ್ಮದು ಮಿಲಿಟರಿ ಹಿನ್ನೆಲೆಯ ಕುಟುಂಬ. ತಂದೆ-ತಾತ ಇಬ್ಬರೂ ದೇಶಭಕ್ತರೇ. ನಿಮ್ಮ ತಂದೆಯವರಿದ್ದ ಮಿಲಿಟರಿ ಕ್ಯಾಂಪ್‌ನಲ್ಲೇ ಅಧಿಕಾರಿಯಾಗಿದ್ದವರು -ಕವಿವರ್ಯ ಪು.ತಿ.ನ! ನೀವು ಅವರಿಂದ ಪ್ರಭಾವಿತರಾದದ್ದು ನಿಜ. ಆದ್ರೆ ಪು.ತಿ.ನ ಕೃಷ್ಣನ ಮೇಲೆ ಪದ್ಯ ಬರೆದರೆ, ನೀವು ರಾಧೆಯ ನೆನಪಾದವರಂತೆ ‘ಸೂರ್ಯ ಬರದೆ ಕಮಲವೆಂದು ಅರಳದು/ ಚಂದ್ರನಿರದೆ ತಾರೆ ಎಂದು ನಲಿಯದು/ಒಲವು ಮೂಡದಿರಲು ಮನವು ಅರಳದು/ಮನವು ಅರಳದಿರಲು ಒಲವು ಕಾಣದು.... ಎಂದು ಬರೆದಿರಿ! ಹೇಳಿ, ಈ ಹಾಡು ಬರೆಯೋವಾಗ ನಿಮ್ಮ ಮನವ ಕಾಡಿದ್ದ ರೂಪಸಿ ಯಾರು? ಇಷ್ಟೆಲ್ಲ ಹಾಡು ಬರೆದಿದ್ದೀರಲ್ಲ, ನಿಮ್ಮ ‘ಪ್ರಿಯಗೀತ’ ಯಾವ್ದು?

ಸರ್‌, ನಿರ್ದೇಶಿಸಿದ ಮೊದಲ ಸಿನಿಮಾ-‘ಮಣ್ಣಿನ ಮಗ’ ಕ್ಕೆ ರಾಜ್ಯ ಪ್ರಶಸ್ತಿ -ರಾಷ್ಟ್ರಪ್ರಶಸ್ತಿ ಪಡೆದವರು ನೀವು. ನಿರ್ದೇಶನದ ಕೆಲಸ ಇಲ್ಲ ಅಂದಾಗ- ಎಂಥವರೂ ತಲೆದೂಗುವಂಥ ಹಾಡುಗಳನ್ನು ಬರೆದವರು ನೀವು. ನಿಮ್ಮ ಅಮರಾ ಮಧುರ ಸಿನಿಮಾ ಮತ್ತು ಹಾಡುಗಳತ್ತ ತಿರುಗಿ ನೋಡಿದಾಗ- ಪುಟ್ಟಣ್ಣ ಕಣಗಾಲ್‌ ನೆನಪಾಗುತ್ತಾರೆ! ಆ ಕ್ಷಣದಲ್ಲೇ ‘ಎಲ್ಲಾರ್ನ್‌ ಕಾಯೋ ದ್ಯಾವ್ರೇ ನೀನು ಎಲ್ಲಿ ಕುಂತಿದ್ದೀ? ಆಡುತಿರುವ ಮೋಡಗಳೆ, ಹಾರುತಿರುವ ಹಕ್ಕಿಗಳೆ/ಯಾರ ಕಡೆಯೂ ನಿಮಗಿಲ್ಲ ನಿಮ್ಮ ಭಾಗ್ಯ ನಮಗಿಲ್ಲ.. ನೀವೆಲ್ಲಿ ನಡೆದೆ ದೂರ ಎಲ್ಲೆಲ್ಲು ಲೋಕವೆ/ ಈ ಲೋಕವೆಲ್ಲ ಘೋರ ಎಲ್ಲೆಲ್ಲು ಶೋಕವೆ’,‘ನೀರ ಬಿಟ್ಟು ನೆಲದ ಮೇಲೆ, ಜೀವ ವೀಣೆ ನೀಡು ಮಿಡಿತದ ಸಂಗೀತ.....’ ಮುಂತಾದ ಸೂಪರ್‌ ಹಿಟ್‌ ಹಾಡು ಬರೆದ;‘ಬೆಳುವಲದ ಮಡಿಲಲ್ಲಿ’,‘ಬಾಳೊಂದು ಭಾವಗೀತೆ’,‘ಪುಟಾಣಿ ಏಜೆಂಟ್ಸ್‌1,2,3’ಯಂಥ ಸೂಪರ್‌ ಡ್ಯೂಪರ್‌ ಸಿನಿಮಾ ನಿರ್ದೇಶಿಸಿದ ಗೀತ ಪ್ರೀಯರೇ ಪುಟ್ಟಣ್ಣನಿಗಿಂತ ಒಂದು ಕೈ ಮೇಲಿದ್ದಾರಾ ಎಂಬ ಪ್ರಶ್ನೆಯೂ ಎದ್ದು ನಿಲ್ಲುತ್ತದೆ. ಬಿಡದೆ ಕಾಡುತ್ತದೆ.

ಗೀತ ಪ್ರಿಯಾಜೀ, ಇದು ಪುಟ್ಟಣ್ಣನವರ ತಪ್ಪಲ್ಲ, ನಿಮ್ಮ ಪ್ರತಿಭೆಯ ತಪ್ಪು!

ಸರ್‌, ಇವತ್ತು ಗಾಂಧಿನಗರದ ಮಂದಿ- ಗೀತಪ್ರಿಯಾ ಅವರಾ? ಬಿಡ್ರೀ, ಅವರು ಹಳ್ಳಿ ಸಿನಿಮಾ ಮಾಡೋಕೆ ಮಾತ್ರ ಲಾಯಕ್ಕು ಅವರು ಹಳೇ ಕಾಲದವರು ಎಂದು ಸುಮ್ಮನಾಗಬಹುದು. ಆದರೆ, ನಾಡಿನ ಸಮಸ್ತ ಚಿತ್ರ ಪ್ರೇಮಿಗಳೂ- ‘ಬೆಸುಗೆ,ಬೆಸುಗೆ’ ಹಾಡಲ್ಲಿ ‘ಬೆಸುಗೆ’ಅನ್ನೋ ಪದ ಎಷ್ಟು ಬಾರಿ ಬರ್ತದೆ?ನೋಡಿಬಂದ ಮಗು-ಕಿರುಬೆರಳು ಮೇಲೆತ್ತಿ ಒಂದೇ ಒಂದು ಚೋಟಾ ಕ್ವಶ್ಚನ್‌ ಅಂದು ನಗುತ್ತದೆ. ಆ ಸಂತೋಷದ ಹಿಂದೆ, ನಿಮ್ಮ ನೆನಪಿರುತ್ತದೆ! ಸಾಕಲ್ಲವೇ?

***

ಹೌದು, ನಿಮ್ಮಂಥವರು ತೆಲುಗಿನಲ್ಲೋ/ತಮಿಳಿನಲ್ಲೋ ಇದ್ದಿದ್ರೆ ದೊಡ್ಡ ಮಟ್ಟಕ್ಕೆ ಬೆಳೀಬಹುದಿತ್ತು. ದೊಡ್ಡ ಹೆಸರಾಗಬಹುದಿತ್ತು. ಆದರೆ ಇಲ್ಲಿ ಏನಾಗಿದೆ ನೋಡಿ- ನೀವು ರಾಷ್ಟ್ರಪ್ರಶಸ್ತಿ ಪಡೆದಿದ್ದರೂ ನಿಮಗೊಂದು ಸೈಟು ಕೊಡಬೇಕು. ಅನ್ನೋ ಸೌಜನ್ಯ ಸರಕಾರಕ್ಕಿಲ್ಲ. ನಿಮ್ಮಿಂದ ಒಂದು ಸಿನಿಮಾ ಮಾಡಿಸ್ಬೇಕು. ಅನ್ನೋ ಆಸೆ-ನಿಮ್ಮಿಂದಲೇ ಸ್ಟಾರ್‌ ಆದವರಿಗೆ ಇಲ್ಲ! ಹೌದಲ್ವ ಸಾರ್‌? ನಿಮ್ಮಲ್ಲಿ ಈಗಲೂ ಅದ್ಭುತ ಪ್ರತಿಭೆಯಿದೆ. ಕೆಲಸ ಮಾಡಲು ಕಸುವಿದೆ. ಶ್ರದ್ಧೆಯಿದೆ. ಉತ್ಸಾಹವಿದೆ. ಎಪ್ಪತ್ತೆೈದು ವರ್ಷ ಕೈ ಜಗ್ಗುತ್ತಿದ್ದರೂ- ಇಲ್ಲ, ಇಲ್ಲ ನಂಗಿನ್ನೂ ಇಪ್ಪತ್ತೆೈದು ಅಷ್ಟೆ ಅಂದು ನಗ್ತಾ ಇದೀರ ನೀವು. ನಿಮ್ಮಂಥವರ ಜತೆ ಉಳಿದಿರೋದು ನಮ್ಮ ಬದುಕಿನ ಭಾಗ್ಯ. ಈ ಮಾತನ್ನು ತುಂಬ ಪ್ರೀತಿಯಿಂದ ಹೇಳುತ್ತಲೇ ಕೋಟಿ ಕನ್ನಡಿಗರ ಪರವಾಗಿ ಪ್ರಾರ್ಥಿಸ್ತಾ ಇದೀನಿ....

ಬರ್ತ್‌ಡೇ ಖುಷಿ ನಿಮ್ಮ ಜತೆಗಿರುವಾಗಲೇ- ನಿಮ್ಮ ನಿರ್ಮಾಪಕರಿಗೆ ನಿಮ್ಮ ನೆನಪಾಗಲಿ. ನಿಮಗೆ ಒಂದು, ಇನ್ನೊಂದು, ಮತ್ತೊಂದು ಸಿನಿಮಾ ನಿರ್ದೇಶಿಸುವ ಛಾನ್ಸು ಸಿಗಲಿ. ನಿಮಗೆ ಸೈಟು ಕೊಡುವ ಸದ್ಬುದ್ಧಿ ಸರಕಾರಕ್ಕೆ ಬೇಗನೆ ಬರಲಿ. ತುಂಬ ಒಳ್ಳೆಯದೆಲ್ಲ ಕೈ ಹಿಡಿಯಲಿ. ಆ ಖುಷಿಯಲ್ಲೇ ನೀವು ನೂರಲ್ಲ, ನೂರಿಪ್ಪತ್ತನೇ ಹುಟ್ಟುಹಬ್ಬ ಆಚರಿಸುವಂತಾಗಲಿ, ಆ ಸಂದರ್ಭದಲ್ಲಿ ನಾಲ್ಕು ಮಾತು ಬರೆವ ಸೌಭಾಗ್ಯ ನನ್ನದಾಗಲಿ.

ಐದು ಕೋಟಿ ಕನ್ನಡಿಗರ ಪರವಾಗಿ ಹೇಳ್ತಾ ಇದೀನಿ. ತಡವಾದ ಹ್ಯಾಪಿ ಬರ್ತ್‌ಡೇ ಟು ಯೂ....

(ಸ್ನೇಹ ಸೇತು : ವಿಜಯಕರ್ನಾಟಕ)

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada