»   » ‘ಹೆಜ್ಜೆ ಹಕ್ಕಿಗೆ ಬಲ್ಲಾಳರಿಗೆ 1 ಲಕ್ಷ ಕೊಟ್ಟಿದೀನಿ’

‘ಹೆಜ್ಜೆ ಹಕ್ಕಿಗೆ ಬಲ್ಲಾಳರಿಗೆ 1 ಲಕ್ಷ ಕೊಟ್ಟಿದೀನಿ’

Subscribe to Filmibeat Kannada

*ದಟ್ಸ್‌ಕನ್ನಡ ಬ್ಯೂರೋ

‘ವ್ಯಾಸರಾಯ ಬಲ್ಲಾಳರ ‘ಹೆಜ್ಜೆ’ ಹಕ್ಕಿಗೆ 1 ಲಕ್ಷ ರುಪಾಯಿ ಕೊಟ್ಟಿದ್ದೀನಿ. ಅವರಿಂದ ಐದು ವರ್ಷ ಟೈಂ ಕೂಡ ಪಡಕೊಂಡಿದೀನಿ. ಅದು ರಾಷ್ಟ್ರೀಯ ಮಟ್ಟದ ಮಹತ್ವಾಕಾಂಕ್ಷೆಯ ಯೋಜನೆ. ಅದು ಯಾವತ್ತಿದ್ದರೂ ನನ್ನದೇ ಸಿನಿಮಾ.’

ಹೆಜ್ಜೆ ಕಾದಂಬರಿಯ ಪ್ರಾಜೆಕ್ಟಿನ ಕಥೆ ಏನಾಯ್ತು ಅಂತ ಪತ್ರಕರ್ತರೊಬ್ಬರು ಕಿಚಾಯಿಸಿದ್ದಕ್ಕೆ ದೇವೇಗೌಡ ಪುತ್ರ ಎಚ್‌.ಡಿ.ಕುಮಾರ ಸ್ವಾಮಿ ಹಾರಿಕೆಯ ದನಿಯಲ್ಲಿ ಉತ್ತರ ಕೊಟ್ಟಿದ್ದು ಹೀಗೆ.

ಹಕ್ಕುಗಳ ಸರದಾರ ಟಿ.ಎಸ್‌.ನಾಗಾಭರಣ ಬಲ್ಲಾಳರ ಬಳಿಗೆ ಲಗುಬಗೆಯಲ್ಲಿ ಓಡಿಹೋಗಿ, ‘ಹೆಜ್ಜೆ’ ಹಕ್ಕನ್ನು ಪಡೆದಿದ್ದು, ಅವರ ನಂತರ ಎಚ್‌.ಡಿ.ಕುಮಾರ ಸ್ವಾಮಿ ಅದೇ ಕಾದಂಬರಿ ಹಕ್ಕನ್ನು ಬಯಸಿದ್ದು, ನಾಗಾಭರಣರಿಗೆ ಹಕ್ಕು ಕೊಟ್ಟಿದ್ದಾಗಿದೆ ಎಂದು ಬಲ್ಲಾಳರು ಹೇಳಿದ್ದು, ನಾಗಾಭರಣರ ಕೈಲೇ ಚಿತ್ರ ಮಾಡಿಸೋಣವಂತೆ ಅಂತ ಕುಮಾರ ಸ್ವಾಮಿ ನಕ್ಕುಬಿಟ್ಟು ಹಕ್ಕು ಹಂಚಿಕೊಂಡಿದ್ದು - ಇವಿಷ್ಟೂ ಫ್ಲ್ಯಾಷ್‌ಬ್ಯಾಕ್‌. ಆಮೇಲೆ ನಾಗಾಭರಣರನ್ನು ಈ ವಿಚಾರ ಕೇಳಿದಾಗ, ಅವರು ರಾಜಕೀಯದಲ್ಲಿ ಬ್ಯುಸಿಯಾಗಿದ್ದಾರೆ ಅಂದರು. ಬಲ್ಲಾಳರು ನನಗೆ ಏನಾಗುತ್ತಿದೆಯೋ ಗೊತ್ತೇ ಇಲ್ಲ ಅಂದರು. ಅಂತೂ ಇಂತೂ ಕುಮಾರ ಸ್ವಾಮಿ ‘ಹೆಜ್ಜೆ’ ಕಾದಂಬರಿಯ ಹೆಸರನ್ನು ಇನ್ನೂ ಮರೆತಿಲ್ಲ.

ಅವತ್ತು ಕುಮಾರ ಸ್ವಾಮಿ ಪತ್ರಕರ್ತರನ್ನು ಕರೆದಿದ್ದುದು ಸಂತೋಷ ಕೂಟಕ್ಕೆ. 3 ಕೋಟಿ ರುಪಾಯಿ ಬಂಡವಾಳ ಹಾಕಿ ತೆಗೆದಿರುವ ‘ಚಂದ್ರ ಚಕೋರಿ’ ಸಿನಿಮಾ ಪೂರ್ತಿಯಾದ ಸಂತೋಷ ಹಂಚಿಕೊಳ್ಳಲಿಕ್ಕಾಗಿ ನಡೆದ ಆ ಪಾರ್ಟಿಯಲ್ಲಿ ನಿರ್ದೇಶಕ ಎಸ್‌.ನಾರಾಯಣ್‌ ಅವರನ್ನು ಕುಮಾರಸ್ವಾಮಿ ಮುಕ್ತ ಕಂಠದಿಂದ ಹೊಗಳಿದರು. ಕನ್ನಡ ಚಿತ್ರರಂಗದ ಅಮೂಲ್ಯ ರತ್ನ ಎಂಬ ಬಿರುದನ್ನೂ ಕೊಟ್ಟರು. ತೆಲುಗು ನಿರ್ಮಾಪಕರಿಗೆ ಇಷ್ಟವಾಗುತ್ತಿರುವ ನಾರಾಯಣ್‌ ಒಂದು ತಮಿಳು ಚಿತ್ರಕ್ಕೂ ಸಹಿ ಹಾಕಿದ್ದಾರೆ. ನಮ್ಮ ನಿರ್ಮಾಪಕರು ಅವರು ಪರ್ಮನೆಂಟಾಗಿ ಚೆನ್ನೈಗೆ ಹೋಗದಂತೆ ನೋಡಿಕೊಳ್ಳಬೇಕು. ಅವರನ್ನು ನಂಬಿ, ನಿರ್ದೇಶನ ಮಾಡುವ ಜವಾಬ್ದಾರಿಯನ್ನು ಹೆಚ್ಚಾಗಿ ವಹಿಸಬೇಕು ಎಂದು ಕುಮಾರಸ್ವಾಮಿ ಥೇಟ್‌ ರಾಜಕಾರಣಿ ದಾಟಿಯಲ್ಲಿ ಅಪ್ಪಣೆ ಕೊಡಿಸಿದರು.

ಚಂದ್ರ ಚಕೋರಿ ವೈನಾಗಿದೆಯಂತೆ : ಚೆನ್ನೈನ ಎವಿಎಂ ಸ್ಟುಡಿಯೋದಲ್ಲಿ ಡಿಟಿಎಸ್‌ ಮಿಕ್ಸಿಂಗ್‌ ನಡೆಯುತ್ತಿರಬೇಕಾದರೆ ವಿಜಯಕಾಂತ್‌ ಎತ್ತಿನ ಗಾಡಿಯ ಫೈಟಿಂಗ್‌ ಸೀನೊಂದನ್ನು ನೋಡಿ, ಸಖತ್ತಾಗಿದೆ ಅಂದರು. ತಮಿಳಿನ ಮಿಕ್ರಮನ್‌ ಚಿತ್ರದ ನಿರ್ದೇಶಕ ಕೂಡ ಚಿತ್ರ ಚೆನ್ನಾಗಿದೆ ಅಂದರು ಎಂದು ಕುಮಾರ ಸ್ವಾಮಿ ಫೀಡ್‌ಬ್ಯಾಕ್‌ ಕುರಿತು ಹೇಳಿದರು.

ನಿರ್ಮಾಪಕರು, ತಂತ್ರಜ್ಞರು, ಕಲಾವಿದರ ನಡುವೆ ಹೊಂದಾಣಿಕೆ ಸರಿಯಾಗಿಲ್ಲ. ನಾಲ್ಕು ಗೋಡೆಗಳ ಮಧ್ಯೆ ಗುಟ್ಟಾಗಿ ನಡೆಯಬೇಕಾದ ಮಾತುಕತೆ ಬಯಲಿಗೆ ಬರುತ್ತಿರುವುದು ಸರಿಯಲ್ಲ ಎಂದು ಯಾರ ಹೆಸರನ್ನೂ ಹೇಳದೆ ಕುಮಾರಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದರು.

ಇಲೆಕ್ಷನ್‌ ಹತ್ತಿರವಾಗುತ್ತಿರುವ ಈ ಹೊತ್ತಲ್ಲೂ ಚಿತ್ರದ ಹಾಡುಗಳಿಗಾಗೇ ಕುಮಾರ ಸ್ವಾಮಿ 45 ಲಕ್ಷ ರುಪಾಯಿ ಖರ್ಚು ಮಾಡಿದ್ದಾರೆ. ಅಂದಹಾಗೆ, ಚಂದ್ರ ಚಕೋರಿಯನ್ನು ಒಮ್ಮೆಗೇ ಕನ್ನಡ ಹಾಗೂ ತೆಲುಗು- ಎರಡೂ ಭಾಷೆಗಳಲ್ಲಿ ಚಿತ್ರಿಸಲಾಗಿದೆ.

ಆಗಸ್ಟ್‌ 15ನೇ ತಾರೀಕು ಕನ್ನಡ ಚಿತ್ರ ಬಿಡುಗಡೆ ಮಾಡುವುದು ಕುಮಾರ ಸ್ವಾಮಿ ಹಟ.

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...