»   » ಬಾಲಿವುಡ್‌ನಲ್ಲಿ ವಿಜಯ್‌ಮಲ್ಯ ರೇಸು

ಬಾಲಿವುಡ್‌ನಲ್ಲಿ ವಿಜಯ್‌ಮಲ್ಯ ರೇಸು

Subscribe to Filmibeat Kannada

*ರಾಜು ಮಹತಿ

ಜೀವರಾಜ್‌ ಆಳ್ವಾ ನಂತರ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರ ನೀಲಿ ಕಣ್ಣಿನ ಹುಡುಗನಾರು ? ಇನ್ನಾರು- ವಿಜಯ ಮಲ್ಯ! ಎನ್ನುತ್ತಿವೆ ರಾಜ್ಯ ರಾಜಕಾರಣದ ಮೊಗಸಾಲೆಯ ಮೈಕುಗಳು.

ಹೌದು. ಮಲ್ಯ ಅಂದರೆ ಹೆಗಡೆಗೆ ಅಚ್ಚುಮೆಚ್ಚು . ಮಲ್ಯ ಅವರ ಯುವಶಕ್ತಿ ಘೋಷಣೆಯೂ ಹೆಗಡೆಗೆ ಇಷ್ಟ . ಆ ಕಾರಣದಿಂದಲೇ ‘ಮಲ್ಯ ಅವರನ್ನು ಹಾಗೂ ಅವರ ರಾಜಕಾರಣದ ದಾಳಗಳನ್ನು ಹಗುರವಾಗಿ ಪರಿಗಣಿಸಬೇಡಿ. ಮಲ್ಯ ಒಳ್ಳೆಯ ಸಂಘಟಕ. ಒಳ್ಳೆಯ ರಾಜಕಾರಣಿ. ಆತನನ್ನು ಜೊತೆಯಾಗಿ ಕರೆದುಕೊಂಡು ಸಾಗಿ’ ಎಂದು ಹೆಗಡೆ ತಮ್ಮ ಬೆಂಬಲಿಗರಿಗೆ ತಾಕೀತು ಮಾಡುತ್ತಾರೆ. ಮಲ್ಯ ಬಗೆಗಿನ ಪ್ರೀತಿಯಿಂದಲೇ ಸ್ವಜನರ ಕೆಂಗಣ್ಣಿಗೂ ಗುರಿಯಾಗುತ್ತಾರೆ. ಜನತಾದಳದ ರಾಜಗುರು ಹೆಗಡೆಯ ಮೇಲೆ ಅದೇನು ಮೋಡಿ ಮಾಡಿದರು ಮಲ್ಯ?

ಮಲ್ಯ ಅವರ ವರ್ಚಸ್ಸೇ ಅಂಥಾದ್ದು ; ಎಂಥವರನ್ನು ಸೆಳೆಯುವಂಥದ್ದು . ಮಲ್ಯ ಅವರ ದುಡ್ಡು , ಅವರ ನಡವಳಿಕೆ, ಅವರ ವ್ಯಾಪಾರ, ರಾಜಕಾರಣದ ಲಿಂಕುಗಳು, ಅವರ ಮೋಜುವಾನಿಗಳು- ಪ್ರತಿಯಾಂದೂ ಅಬ್ಬಬ್ಬಾ ಎನ್ನುವಂಥದ್ದು . ಇದೀಗ ಹದಿನಾರಾಣೆ ರಾಜಕಾರಣಿಯಾಗಿರುವ ಮಲ್ಯ, ಒಂದಾನೊಂದು ಕಾಲದಲ್ಲಿ ಹೆಗಡೆಗೆ ನೀರು ಕುಡಿಸಿದ್ದ ಸುಬ್ರಮಣ್ಯ ಸ್ವಾಮಿ ಜೊತೆ ಸೇರಿಕೊಂಡು ಜನತಾ ಪಕ್ಷಕ್ಕೆ ಪುನರ್‌ ಜೀವ ನೀಡಲು ರಾಜ್ಯ ಸುತ್ತುತ್ತಿದ್ದಾರೆ. ರೈತರ-ಹಳ್ಳಿಗರ ಸಮಸ್ಯೆಗಳ ಕುರಿತು ಮಲ್ಯ ಕಾಳಜಿ ತೋರುತ್ತಿದ್ದಾರೆ. ಉತ್ತರ ಕರ್ನಾಟಕದ ಅಭಿವೃದ್ಧಿ ಯೋಜನೆಗಳಿಗೆ ತಮ್ಮ ಕಿಸೆಯಿಂದ ಕಾಸು ತೆಗೆದುಕೊಡುತ್ತಾರೆ. ಪ್ರತಿಯಾಂದೂ ಸುದ್ದಿಯಾಗುತ್ತದೆ. ಅದೇ ವೇಳೆಯಲ್ಲಿ ಕೇರಳದಲ್ಲಿನ ತಮ್ಮ ವಾಣಿಜ್ಯ ನಡೆಗಳನ್ನೂ ಮಲ್ಯ ಯಶಸ್ವಿಯಾಗಿ ನಡೆಸುತ್ತಾರೆ. ಮಲ್ಯ ದಶಾವತಾರಿ.

ಲಿಕ್ಕರ್‌ ಆಯಿತು. ಕುದುರೆ ಜೂಜಾಯಿತು. ಹೈಟೆಕ್‌ ವೈದ್ಯಕೀಯ ಉದ್ಯಮವೂ ಆಯಿತು. ರಾಜಕಾರಣದ ನಂಟನ್ನೂ ಬೆಳೆಸಿದ್ದಾಯಿತು- ಮುಂದ್ಯಾವುದು ಮಲ್ಯ ಅವರ ಅವತಾರ ?ಮಲ್ಯ ಈಗ ಬಾಲಿವುಡ್‌ನಲ್ಲಿ !
ವಿಜಯ ಮಲ್ಯ ಚಿತ್ರ ನಿರ್ಮಾಪಕ !!

ಹೌದು. ಪ್ರಕಾಶ್‌ ಖುಬ್‌ಚಂದನಿ ಮತ್ತು ಸುನೀಲ್‌ ಶೆಟ್ಟಿ ಜೊತೆ ಕೈ ಜೋಡಿಸಿರುವ ಮಲ್ಯ ‘ರಕ್ತ್‌’ ಎನ್ನುವ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ‘ರಕ್ತ್‌’ ಚಿತ್ರದಲ್ಲಿ ನಟಿಸಲು ಸಂಜಯ್‌ ದತ್‌ ಹಾಗೂ ಬಿಪಾಷಾ ಬಸು ಈಗಾಗಲೇ ಒಪ್ಪಿಕೊಂಡಿದ್ದಾರೆ. ಒಪ್ಪಂದ ಪತ್ರಗಳ ಮೇಲೆ ರುಜು ಬಿದ್ದಿದೆ. ಚಮಕ್‌ ಚಮಕ್‌ ನಂಬರ್‌ ಹಾಡಿಗೆ ಹಿಂದಿ ಚಿತ್ರೋದ್ಯಮದ ಲೇಟೆಸ್ಟ್‌ ಫಿಗರ್ರು ಯಾನ ಗುಪ್ತಾ ಹೆಜ್ಜೆ ಹಾಕಲಿದ್ದಾರೆ.

‘ವಾಸ್ತವ್‌’ ಚಿತ್ರದ ನಿರ್ದೇಶಕ ಮಹೇಶ್‌ ಮಂಜ್ರೇಕರ್‌ ‘ರಕ್ತ್‌’ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಬಜೆಟ್ಟು 8 ಕೋಟಿ ರೂಪಾಯಿ. ಇದಿಷ್ಟೂ ಸಿನಿಮಾ ಕುರಿತ ಸುದ್ದಿ. ಅದಿರಲಿ, ತುರಿಸಿಕೊಳ್ಳಲಿಕ್ಕೂ ಪುರುಸೊತ್ತಿಲ್ಲದ ಮಲ್ಯ ಯಾಕೆ ಚಿತ್ರೋದ್ಯಮಕ್ಕೆ ತಲೆ ಹಾಕಿದರು ?ಮಲ್ಯ ಹೇಳುತ್ತಾರೆ - ಈ ಸಿನೆ ಕಾರ್ಖಾನೆಯಲ್ಲಿ ನನಗೆ ಸಾಕಷ್ಟು ಮಂದಿ ಗೊತ್ತು. ಅವರು ಚಿತ್ರ ತೆಗೆಯುವಂತೆ ಹೇಳಿದ್ದುಂಟು. ನಿಜ ಹೇಳುವುದಾದರೆ ಪಮೇಲಾ ರುಕ್ಸ್‌ ನ ‘ಡಾನ್ಸ್‌ ಲೈಕ್‌ ಎ ಮ್ಯಾನ್‌’ ಚಿತ್ರವನ್ನು ಪರೋಕ್ಷವಾಗಿ ನಾನೇ ನಿರ್ಮಿಸಿದ್ದೆ. ಸದ್ಯದಲ್ಲೇ ಅದು ಬಿಡುಗಡೆಯಾಗಲಿದೆ. ‘ರಕ್ತ್‌ ’ಚಿತ್ರದ ಸ್ಕಿೃಪ್ಟ್‌ ಓದಿದೆ. ತುಂಬಾ ಚೆನ್ನಾಗಿದೆ. ರಾಮ್‌ಗೋಪಾಲ್‌ ವರ್ಮಾನ ‘ಭೂತ್‌’ ಸಿನಿಮಾ ತುಂಬಾ ಕುತೂಹಲಕಾರಿಯಾಗಿದೆಯಂತೆ. ಈ ಚಿತ್ರವೂ ಹಾಗೇ ಆಗಬಹುದು.

ರೇಸ್‌ ಕುದುರೆಗಳ ಬಗ್ಗೆ ಒಳನೋಟಗಳನ್ನುಳ್ಳ ಮಲ್ಯ ‘ರಕ್ತ್‌’ ಚಿತ್ರದ ಕಲಾವಿದರನ್ನು ಸ್ವತಃ ತಾವೇ ಆರಿಸಿದ್ದಾರೆ. ಸ್ಕಿೃಪ್ಟ್‌ ನೋಡಿದರೆ ಸಂಜಯ್‌ದತ್‌ನಂತಹ ಆ್ಯಕ್ಷನ್‌ ಹೀರೋನೇ ಬೇಕನಿಸುತ್ತೆ. ಸೆನ್ಸೇಷನ್‌ ಹುಡುಗಿ ಬಿಪಾಷಾನೇ ಹೀರೋಯಿನ್‌ ಪಟ್ಟಕ್ಕೆ ಲಾಯಕ್ಕು.... ಹೀಗೆ ಸಾಗುತ್ತೆ ಮಲ್ಯ ಲಾಜಿಕ್ಕು.

‘ರಕ್ತ್‌’ ಚಿತ್ರಕ್ಕಾಗಿ ವರ್ಜಿನ್‌ ಮ್ಯೂಸಿಕ್‌ನ ಹಾಟ್‌ ಹಾಟ್‌ ಗಾಯಕ ಗರ್ಲ್‌ಮೆಲ್ಸಿ ಯವರನ್ನು ಮಲ್ಯ ಹಿಡಿದಿದ್ದಾರೆ. ಡ್ಯೂಯೆಟ್‌ ಹಾಡು ಮೆಲ್ಸೀ- ಸುನಿಧೀ ಚೌಹಾನ್‌ ಕಂಠದಿಂದ ಮೂಡಿ ಬರಲಿದೆ. ಪಾಕಿಸ್ತಾನೀ ಬ್ಯಾಂಡ್‌ - ಜುನೂನ್‌ ಮತ್ತು ರಿಕಿ ಮಾರ್ಟಿನ್‌ ಬಳಿ ಕೂಡ ಮಾತುಕತೆಗಳು ನಡೆಯುತ್ತಿವೆ.

ಅಕ್ಟೋಬರ್‌ನಲ್ಲಿ ‘ರಕ್ತ್‌’ ಶೂಟಿಂಗ್‌ ಶುರು. ದಕ್ಷಿಣ ಆಫ್ರಿಕಾದಲ್ಲಿ ಮಲ್ಯರ ಸಾಕಷ್ಟು ಆಸ್ತಿಯಿದ್ದು , ಅಲ್ಲೆಲ್ಲಾ ‘ರಕ್ತ್‌’ ಚಿತ್ರದ ನಡೆಯುವ ಸಾಧ್ಯತೆಯಿದೆ. 2004 ನೇ ಇಸವಿಯ ಆರಂಭದಲ್ಲಿ ಸಿನೆಮಾ ಬಿಡುಗಡೆಯಾಗಬಹುದು.

ಸುಮ್ಮನೆ ಹೋಲಿಸಿ ನೋಡಿ : ಮಲ್ಯ ಅವರ ವ್ಯಾಪಾರ- ರಾಜಕಾರಣ-ಸಿನಿಮಾ ಇವುಗಳ ನಡುವೆ ವ್ಯತ್ಯಾಸವೇನಾದರೂ ಕಾಣುತ್ತದಾ ? ಉಹುಂ. ಎಲ್ಲಾ ನಡೆಗಳೂ ಒಂದೇ ರೀತಿಯಲ್ಲಿ ; ಪಕ್ಕಾ ವೃತ್ತಿಪರ ಜೂಜುಗಾರನೊಬ್ಬ ಉರುಳಿಸಿದ ದಾಳಗಳಂತೆ.

ಕೊನೆಯದಾಗಿ-
ಗೋವಾದಲ್ಲಿ ಭರ್ಜರಿ ಅಂತರರಾಷ್ಟ್ರೀಯ ಚಿತ್ರೋತ್ಸವ ನಡೆಸುವ ಕನಸೊಂದು ಮಲ್ಯ ಕಣ್ಣುಗಳಲ್ಲಿ ಸುಳಿದಾಡುತ್ತಿದೆ!

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada