»   » ಅಣ್ಣ ಮೃತ್ಯು ಗೆದ್ದ ಕಥೆ ಗೊತ್ತಾ ?

ಅಣ್ಣ ಮೃತ್ಯು ಗೆದ್ದ ಕಥೆ ಗೊತ್ತಾ ?

Posted By: Staff
Subscribe to Filmibeat Kannada

ಮೊನ್ನೆ ಜುಲೈ 17ರ ಬೆಳಗ್ಗೆ ಆರಕ್ಕೇ ಎದ್ದೆ . ತಕ್ಷಣ ನೆನಪಾದದ್ದು ಡಾ.ರಾಜಕುಮಾರ್‌. ಇವತ್ತು ಭೀಮನ ಅಮಾವಾಸ್ಯೆ ಅಲ್ಲವೇ ? ಇವತ್ತಿಗೆ ರಾಜಕುಮಾರ್‌ ಕಿಡ್ನಾಪ್‌ ಆಗಿ ಸರಿಯಾಗಿ ನಾಲ್ಕು ವರ್ಷಗಳ ಹಿಂದಿನ ಭೀಮನ ಅಮಾವಾಸ್ಯೆಯ ರಾತ್ರಿ ಅವರು ಗಾಜನೂರಿನ ಮನೆಯಲ್ಲಿ ಊಟ ಮಾಡಿಕೊಂಡು ವೀಳ್ಯ ಮೆಲ್ಲುತ್ತ ಕುಳಿತಿದ್ದಾಗ ಅವರನ್ನು ವೀರಪ್ಪನ್‌ ಬಂದು ಎಳೆದೊಯ್ದಿದ್ದ . ಅವತ್ತು ರಾತ್ರಿ ಬೆಂಗಳೂರಿಗೆ ಬೆಂಗಳೂರೇ ತೊಯ್ದು ಮುಳುಗಿ ಹೋಗುವಂತಹ ಧೋಧೋ ಮಳೆ. ಈ ಹೆಣ್ಣು ಮಗಳು ಪಾರ್ವತಮ್ಮ ಗಾಜನೂರಿನಿಂದ ಇಡೀ ರಾತ್ರಿ ಪ್ರಯಾಣಿಸಿ ಬೆಂಗಳೂರಿಗೆ ಬಂದಿದ್ದರು.

ಜುಲೈ 17, 2004, ಮತ್ತದೇ ಭೀಮನ ಅಮಾವಾಸ್ಯೆಯ ಹಗಲು. ಬೆಳಗ್ಗೆ ಒಂಬತ್ತು ಗಂಟೆಗೆ ಆಫೀಸಿಗೆ ಬಂದ ನಿವೇದಿತಾ ನೆನಪಿಸಿದ್ದಳು : 'ರವೀ, ಇವತ್ತು ಸೆಕೆಂಡ್‌ ಎ.ಸಿ.ಎಂ.ಎಂ. ನ್ಯಾಯಾಲಯದಲ್ಲಿ ಕೇಸಿದೆ. ನಿಮ್ಮ ವಿರುದ್ಧ ಪಾರ್ವತಮ್ಮ ರಾಜ್‌ಕುಮಾರ್‌ ಹಾಕಿರೋ ಕೇಸು. ನೀವು ಅಟೆಂಡ್‌ ಆಗಬೇಕು. ಪಾರ್ವತಮ್ಮನವರೂ ಕೋರ್ಟಿಗೆ ಬರುತ್ತಿದ್ದಾರಂತೆ. ದಿವಾಕರ್‌ ವಕೀಲರು ಹೇಳಿದರು' ಅಂದಳು.

ಮತ್ತೂ ಒಂದು ಕಾಕತಾಳೀಯವೆಂದರೆ, ಅದೇ ಜುಲೈ 17ರ ಭೀಮನ ಅಮಾವಾಸ್ಯೆಯಂದು, ಅದೇ ಕೋರ್ಟ್‌ ಕಾಂಪ್ಲೆಕ್ಸ್‌ನಲ್ಲಿರುವ ಎಯ್ತ್‌ (8ನೇ) ಎ.ಸಿ.ಎಂ.ಎಂ. ನ್ಯಾಯಾಲಯದಲ್ಲಿ ನಾನು ಇನ್ನೊಂದು ಕೇಸಿಗೆ ಹಾಜರಾಗಬೇಕಿತ್ತು . ಆ ಕೇಸು ಹಾಕಿರುವಾಕೆ ಇನ್ನೊಬ್ಬ ಹೆಣ್ಣುಮಗಳು : ಹೆಸರು ತೇಜಸ್ವಿನಿ ಶ್ರೀರಮೇಶ್‌. ಇಬ್ಬರು ಮುತ್ತೆೈದೆಯರೂ ಭೀಮನ ಅಮಾವಾಸ್ಯೆಯಂದು ಮಾಡಬೇಕಾದ ಗಂಡನ ಪೂಜೆಯ ಸಡಗರದ ಮಧ್ಯೆಯೇ ಎದ್ದು ಕೋರ್ಟಿಗೆ ಬಂದು ನಿಲ್ಲುತ್ತಾರೆ : ಇನ್ನೊಂದು ಕಟಕಟೆಯಲ್ಲಿ . ನಾನು ಹೋಗದಿದ್ದರೆ ಹೇಗೆ ಅಂದುಕೊಂಡು ಬೇಗ ಬೇಗ ಸಿದ್ಧನಾಗಿ ಕೋರ್ಟು ತಲುಪಿಕೊಂಡೆ. ಮೊದಲನೇ ಕೇಸು 8ನೇ ಕೋರ್ಟಿನಲ್ಲಿತ್ತು, ತೇಜಸ್ವಿನಿಯದು. ಆಕೆ ಬಂದಿರಲಿಲ್ಲ . ಆದರೆ ಆದಕ್ಕೆ ಹಾಜರಾಗಿ ನಾನು 2ನೇ ಕೋರ್ಟಿಗೆ ಹೋಗುವ ಹೊತ್ತಿಗೆ ಪಾರ್ವತಮ್ಮ ರಾಜಕುಮಾರ್‌ ಆಗಲೇ ಬಂದು ನ್ಯಾಯಾಲಯದ ಮುಂದೆ ಹಾಜರಾಗಿ ಹೊರಟು ಹೋಗಿದ್ದರು. ಭೇಟಿಯಾದರೂ ಆಗಬಹುದಿತ್ತಲ್ಲವಾ ಅಂದುಕೊಂಡು, ನನ್ನಷ್ಟಕ್ಕೆ ನಾನು ಕೇಸಿಗೆ ಹಾಜರಾಗಿ ಹಿಂತಿರುಗಿದೆ. ಹಾಗೆ ಹಿಂತಿರುಗಿದ ಹತ್ತನೇ ನಿಮಿಷದ ಹೊತ್ತಿಗೆ ಇಬ್ಬರು ಮುತ್ತೆೈದೆಯರೂ ನನ್ನ ನೆನಪಿನಿಂದ ಮರೆಯಾಗಿದ್ದರು.

ಆದರೆ ಭೀಮನ ಅಮಾವಾಸ್ಯೆಯ ಹಗಲು ಮುಂದುವರೆದು, ಮುಗಿದು ಇಳಿಸಂಜೆ ಮೈಚೆಲ್ಲಿಕೊಂಡಿತ್ತು . ಸದಾಶಿವನಗರದ ಬಂಗಲೆಯ ಅಂಗಳದಲ್ಲಿ ಈಗೀಗಷ್ಟೆ ಮೊಳಕಾಲ ಆಪರೇಷನ್ನಿನಿಂದ ಚೇತರಿಸಿಕೊಂಡಿರುವ ಎಪ್ಪತ್ತೆಂಟರ ಹಿರಿಯ ಜೀವ ರಾಜ್‌ಕುಮಾರ್‌, ಅಲ್ಲೇ ಚಿಕ್ಕದೊಂದು ವಾಕ್‌ ಮಾಡುವ ಪ್ರಯತ್ನ ಮಾಡುತ್ತಿದ್ದರು. ಅವರ ಜಾಯಮಾನವೇ ಅಂಥದ್ದು . ಎಪ್ಪತ್ತೆಂಟರ ವಯಸ್ಸಿನಲ್ಲೂ ಕಟ್ಟುಮಸ್ತಾದ ದೇಹ ಇಟ್ಟುಕೊಂಡಿದ್ದಾರೆ. 'ಸುಮ್ಮನಿರಿ' ಅಂದರೂ ಇರುವ ಜೀವವಲ್ಲ . ಹಾಗೆ ವಾಕ್‌ ಮಾಡುತ್ತಿದ್ದ ಅವರಿಗೆ ಮೊದಲು ಕಾಣಿಸಿಕೊಂಡಿದ್ದು ಸಣ್ಣ ಎದೆ ನೋವು. ಆದರೆ ರಾಜ್‌ ಗಾಬರಿಯಾದದ್ದು ಅದಕ್ಕಲ್ಲ . ಅವರಿಗೆ ಇದ್ದಕ್ಕಿದ್ದಂತೆ ವಿಪರೀತವಾಗಿ ಬೆವೆಯಲಾರಂಭಿಸಿದೆ. ತಕ್ಷಣ ಇನ್ನೇನೋ ಅಪಾಯವಾಗಲಿದೆ ಎಂಬುದನ್ನು ರಾಜ್‌ ಸೆನ್ಸ್‌ ಮಾಡಿದ್ದಾರೆ.

ದೊಡ್ಡಮಟ್ಟದ ಅಕ್ಷರಸ್ಥರಲ್ಲದಿದ್ದರೂ, ರಾಜಕುಮಾರ್‌ ತಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಪ್ರತಿ ವಿವರವನ್ನೂ ಕರಾರುವಾಕ್ಕಾಗಿ ತಿಳಿದುಕೊಂಡಿರುವ ಹಿರಿಯ. ತಮಗೆ ಸಲೀಸಾಗಿ ಹಿಡಿತಕ್ಕೆ ಬರದಂತಹ ಬ್ಲಡ್‌ ಪ್ರೆಶರ್‌ ಇದೆ ಎಂಬುದು ರಾಜಕುಮಾರ್‌ಗೆ ಗೊತ್ತು . ಸಣ್ಣ ಎದೆನೋವು, ವಿಪರೀತ ಬೆವೆತ ಕಾಣಿಸಿಕೊಳ್ಳುತ್ತಿದ್ದಂತೆಯೇ ಇದು ಹೃದಯಕ್ಕೆ ಸಂಬಂಧಿದ್ದೇ ಅನಾಹುತ ಎಂಬುದನ್ನು ಕಂಡುಕೊಂಡಿದ್ದಾರೆ. ತಕ್ಷಣ ಅಂಗಾತ ಮಲಗಿ ತಮ್ಮ ಫ್ಯಾಮಿಲಿ ಡಾಕ್ಟರನ್ನ ಕರೆಸಿಕೊಂಡಿದ್ದಾರೆ. ಬಂದ ವೈದ್ಯರು ಇ.ಸಿ.ಜಿ. ಮಾಡುತ್ತಿದ್ದಂತೆಯೇ ರಾಜಕುಮಾರ್‌ ಅವರಿಗೆ ತೀವ್ರವಾದ ಹೃದಯಾಘಾತ ಆಗಿದೆಯೆಂದು ಗೊತ್ತಾಗಿ ಹೋಗಿದೆ. ಕೂಡಲೇ ಅವರನ್ನು ಶಿಫ್ಟ್‌ ಮಾಡಿದ್ದು ಬೆಂಗಳೂರಿನ ಪ್ರಸಿದ್ಧ ಹೃದ್ರೋಗ ಚಿಕಿತ್ಸಾಲಯವಾದ ವೊಕ್ಹಾರ್ಟ್‌ ಆಸ್ಪತ್ರೆಗೆ. ಸಾಮಾನ್ಯವಾಗಿ ತಮ್ಮ ಇತರ ಚಿಕ್ಕಪುಟ್ಟ ಅನಾರೋಗ್ಯಗಳಿಗೆ ರಾಜಕುಮಾರ್‌ ಹೋಗುವುದು ಮಲ್ಯ ಆಸ್ಪತ್ರೆಗಾದರೂ, ಹೃದ್ರೋಗಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಯಾವುದೇ ಪ್ರಜ್ಞಾವಂತ ಮನುಷ್ಯ ಹೋದಂತೆಯೇ ಅವರೂ ವೊಕ್ಹಾರ್ಟ್‌ಗೆ ಹೋಗಿದ್ದಾರೆ. ಜೀವ ಉಳಿದದ್ದೇ ಅದರಿಂದ !

ಇಷ್ಟಕ್ಕೂ ಡಾ.ರಾಜ್‌ಗೆ ಆಗಿರುವುದೇನು ಅಂತ ವಿವರಿಸುವ ಪ್ರಯತ್ನ ಮಾಡುತ್ತೇನೆ ಕೇಳಿ. ಎಲ್ಲರ ಹೃದಯಕ್ಕೂ ಮೂರು ಮುಖ್ಯ ರಕ್ತನಾಳಗಳಿರುತ್ತವೆ ಎಂಬುದು ಗೊತ್ತಿರುವ ಸಂಗತಿ. ಅವುಗಳನ್ನು ಕರೋನರಿ ರಕ್ತನಾಳಗಳು ಅನ್ನುತ್ತಾರೆ. ಈ ಪೈಕಿ ಒಂದನ್ನು (ಅತಿ ಮುಖ್ಯವಾದ ರಕ್ತನಾಳವನ್ನು) ಎಲ್‌.ಎ.ಡಿ. ಅನ್ನುತ್ತಾರೆ. ಲೆಫ್ಟ್‌ ಆ್ಯಂಟೀರಿಯರ್‌ ಡಿಸೆಂಡಿಂಗ್‌ ಆರ್ಟರಿ ಅಂತ. ಮೂರು ರಕ್ತನಾಳಗಳ ಪೈಕಿ ಅತಿ ಮುಖ್ಯವಾದ ರಕ್ತನಾಳ, ಕೆಲವೊಮ್ಮೆ ಇಳಿವಯಸ್ಸಿನಿಂದಾಗಿ ಹಾಗೂ ಇತರೆ ಕಾರಣಗಳಿಗಾಗಿ ಮುಚ್ಚಿಹೋಗತೊಡಗುತ್ತದೆ. ಬ್ಲಾಕ್‌ ಆಗುತ್ತದೆ. ರಾಜಕುಮಾರ್‌ಗೆ ಆಗಿರುವುದೇ ಅದು. ಈ ಮುಚ್ಚಿ ಹೋಗುವಿಕೆ ಕೂಡ ಏಕಾಏಕಿ ಆಗಿಬಿಡುವಂತಹದ್ದಲ್ಲ . ಅದರಲ್ಲಿ ಬ್ಲಾಕ್‌ ಕಾಣಿಸಿಕೊಂಡು (ನೀರಿನ ಪೈಪಿನಲ್ಲಿ ಕೊಳೆ ಕಟ್ಟಿಕೊಂಡಂತೆ) ಹೃದಯಕ್ಕೆ ರಕ್ತದ ಸರಬರಾಜು ಕೊಂಚ ಕೊಂಚವೇ ಕಡಿಮೆಯಾಗಿ ಕಡೆಗೆ ಒಂದು ಕ್ರಿಟಿಕಲ್‌ ಲೆವೆಲ್‌ನಲ್ಲಿ ಇದ್ದಕ್ಕಿದ್ದ ಹಾಗಿ ರಕ್ತ ಹರಿಯುವುದು ನಿಂತುಬಿಡುತ್ತದೆ.

ಅದನ್ನೇ ಹಾರ್ಟ್‌ ಅಟ್ಯಾಕ್‌ ಅನ್ನೋದು ! ರಾಜಕುಮಾರ್‌ ಅವರಿಗೆ ಆಗಿದ್ದೂ ಅದೇ. ವೈದ್ಯಕೀಯ ಭಾಷೆಯಲ್ಲಿ ಮಯೋಕಾರ್ಡಿಯಲ್‌ ಇನ್‌ಫರಾಕ್ಷನ್‌ ಅನ್ನುತ್ತಾರೆ. ಎಲ್‌.ಎ.ಇ. ಎಂಬ ರಕ್ತನಾಳ ಅದರ ಹೃದಯದ ಯಾವ ಭಾಗಕ್ಕೆ ಕಳೆದ 78 ವರ್ಷಗಳಿಂದ ಎಡೆಬಿಡದೆ ರಕ್ತ ಹರಿಸುತ್ತಿತ್ತೋ ಆ ನಾಳ ಸಂಪೂರ್ಣವಾಗಿ ಮುಚ್ಚಿಹೋದದ್ದರಿಂದ, ಹೃದಯದ ಅಷ್ಟೂ ಭಾಗದ ಮಾಂಸಖಂಡ ಜೀವ ಕಳೆದುಕೊಂಡು ಬಿಡುತ್ತದೆ.

ಹಾಗೆ ವಿಪರೀತದ ತೊಂದರೆಯ ಸ್ಥಿತಿಯಲ್ಲಿ , ಅದೇ ದುರದೃಷ್ಟಕರ ಭೀಮನ ಅಮಾವಾಸ್ಯೆಯ ರಾತ್ರಿಯಂದು ರಾಜಕುಮಾರರನ್ನು ವೊಕ್ಹಾರ್ಟ್‌ ಆಸ್ಪತ್ರೆಗೆ ತಂದಾಗ ಅವರನ್ನು ಅಟೆಂಡ್‌ ಮಾಡಲು ಬೆಂಗಳೂರಿನಲ್ಲಷ್ಟೇ ಅಲ್ಲ : ಭಾರತದಲ್ಲೇ ಅತಿದೊಡ್ಡ, ಅತಿ ಬುದ್ಧಿವಂತ, ಚಾಣಾಕ್ಷ ವೈದ್ಯರೆಂದು ಹೆಸರು ಮಾಡಿರುವ ವೈದ್ಯರುಗಳ ಒಂದು ತಂಡವೇ ಅಲ್ಲಿತ್ತು . ಮೊದಲನೆಯದಾಗಿ ಡಾ.ರಂಗನಾಥ ನಾಯಕ್‌ ಇದ್ದರು. ಇನ್ನೊಬ್ಬ ಕಾರ್ಡಿಯಾಲಜಿಸ್ಟ್‌ ಡಾ.ಸುಭಾಷ್‌ಚಂದ್ರ ಅವರನ್ನು ವೊಕ್ಹಾರ್ಟ್‌ಗೆ ಕರೆಸಿಕೊಳ್ಳಲಾಗಿತ್ತು . ಬೆಂಗಳೂರು ಕಂಡ ಅತ್ಯುತ್ತಮ, ನಿಪುಣ ಹಾರ್ಟ್‌ ಸರ್ಜನ್‌ ಡಾ.ವಿವೇಕ್‌ ಜವಳಿ ಇದ್ದರು. ಎಂದಿನಂತೆ ರಾಜಕುಮಾರ್‌ ಅವರ ಕುಟುಂಬದ ವೈದ್ಯ, ಪರ್ಸನಲ್‌ ಫಿಜಿಷಿಯನ್‌ ಡಾ.ರಮಣರಾವ್‌ ಇದ್ದರು. ಒಂದೇಮಾತಿನಲ್ಲಿ ಹೇಳಬೇಕೆಂದರೆ 'ಡಾಕ್ಟರಲ್ಲದ ಮಹಾ ಡಾಕ್ಟರ್‌' ರಾಜಕುಮಾರ್‌ ಅವರ ಜೀವ ಉಳಿಸಲು ದೇಶದಲ್ಲಿಯೇ ಹೆಸರಾಂತ ಡಾಕ್ಟರುಗಳದೊಂದು ತಂಡ ಅಲ್ಲಿ , ಆ ಹೊತ್ತಿನಲ್ಲಿ , ಅಣಿಯಾಗಿ ನಿಂತಿತ್ತು .

ಡಾ.ರಾಜ್‌ ಅವರನ್ನು ಆಸ್ಪತ್ರೆಯಲ್ಲಿ ಒಯ್ದು ಮಲಗಿಸಿದ ತಕ್ಷಣ ಅವರ ಲೆಫ್ಟ್‌ ಆ್ಯಂಟೀರಿಯರ್‌ ಡಿಸೆಂಡಿಂಗ್‌ ಆರ್ಟರಿಯಲ್ಲಿ ತುಂಬ ಚಿಂತಾಜನಕವಾದ, ಆತಂಕಕಾರಿಯಾದ, ಕಾಂಪ್ಲೆಕ್ಸ್‌ ಆದ ಒಂದು ಬ್ಲಾಕ್‌ ಇದೆ ಎಂಬುದನ್ನು ಪತ್ತೆ ಹಚ್ಚಲಾಯಿತು. ಆನಂತರ, ಎರಡು ಮೂರು ದಿನಗಳಲ್ಲಿ ಅವರ ಸ್ಥಿತಿಗತಿ ಕೊಂಚ ಸುಧಾರಿಸಿಕೊಳ್ಳಲಿಕ್ಕೆ ಬೇಕಾದ ಎಲ್ಲ ಔಷಧಿಗಳನ್ನು ಕೊಟ್ಟು , ಜುಲೈ 21 ಬೆಳಗ್ಗೆ 6 ಗಂಟೆಗೆ ರಾಜಕುಮಾರ್‌ ಅವರಿಗೆ 'ಆ್ಯಂಜಿಯೋಪ್ಲಾಸ್ಟಿ' ಚಿಕಿತ್ಸೆ ನೀಡಲಾಯಿತು. ಇದು ಮತ್ತೇನಲ್ಲ : ಮುಚ್ಚಿಕೊಂಡ ತೂಬಿನಂತಹ ರಕ್ತನಾಳದಿಂದ ಅಲ್ಲಿರುವ ಆ ಬ್ಲಾಕ್‌ ತೆಗೆಯುವ ಕ್ರಿಯೆ. ಚಿಕ್ಕದೊಂದು ಬಲೂನನ್ನು ಹೃದಯದೊಳಕ್ಕೆ ಹಾಯಿಸಿ ಅದರ ಮೂಲಕ ನಾಳದೊಳಗಿನ ಕಟ್ಟಿಕೊಂಡ ಕಳೆ ಛಿದ್ರಗೊಳಿಸುವ ಕುಸುರಿ ಕೆಲಸ. ಅದನ್ನು ಕಾರ್ಡಿಯಾಲಜಿಸ್ಟ್‌ ಡಾ.ರಂಗನಾಥ ನಾಯಕ್‌ ಮಾಡಿದರು.

ಸಾಮಾನ್ಯವಾಗಿ ಆ್ಯಂಜಿಯೋಪ್ಲಾಸ್ಟಿ ಮಾಡುವಾಗ ವೈದ್ಯರು ಇನ್ನಿಲ್ಲದ ಎಚ್ಚರಿಕೆಗಳನ್ನೆಲ್ಲ ತೆಗೆದುಕೊಳ್ಳುತ್ತಾರೆ. ಕೆಲವುಬಾರಿ ಹೃದ್ರೋಗಿಗಳು ನಾಳದೊಳಕ್ಕೆ ಬಲೂನ್‌ ಹೊಕ್ಕ ತಕ್ಷಣ ತೀವ್ರವಾದ ಹೃದಯಾಘಾತಕ್ಕೆ ಒಳಗಾಗಿ, ಜೀವಕ್ಕೆ ಅಪಾಯವಾಗಿ ಬಿಡುತ್ತದೆ. ಅಂಥ ವಿಷಮ ಸ್ಥಿತಿ ಬಂದರೆ, ಆ ಕ್ಷಣದಲ್ಲಿ ತೆರೆದ ಹೃದಯದ ಚಿಕಿತ್ಸೆ ಮಾಡಲು ಅತ್ಯಂತ ನಿಪುಣ ಸರ್ಜನ್‌ ಡಾ.ಜವಳಿ ಅವರನ್ನು ರಾಜ್‌ ಪಕ್ಕದಲ್ಲೇ ನಿಲ್ಲಿಸಿಕೊಳ್ಳಲಾಗಿತ್ತು . ಬೆಂಗಳೂರಿನಲ್ಲಿ ಮೊಟ್ಟ ಮೊದಲ ಬಾರಿಗೆ, ಹೃದಯದ ಬಡಿತ ನಿಲ್ಲಿಸದೆ ಅದನ್ನು ಹಾಗೆ ಚಾಲೂ ಇಟ್ಟು beating heart surgery ಮಾಡಿದ ಮಹಾನ್‌ ಮೇಧಾವಿ ಡಾ.ವಿವೇಕ್‌ ಜವಳಿ. ಸೊಗಸಾದ ಮಾತುಗಾರ ಮತ್ತು ಸೊಗಸಾದ ವ್ಯಕ್ತಿತ್ವವುಳ್ಳ ವೈದ್ಯರು. ಆದರೆ ಡಾ.ರಂಗನಾಥ ನಾಯಕ್‌ ಇದ್ದಾರಲ್ಲ ? ಅವರ ಮಾತೇ ಮುತ್ತು . ತುಂಬ ಕಡಿಮೆ ಮಾತಿನ, ಭೇಟಿಯಾದ ಹೊಸತರಲ್ಲಿ ಕೊಂಚ ಡಿಸಪಾಯಿಂಟಿಂಗ್‌ ಅಂತ ಕೂಡ ಅನ್ನಿಸುವಂತಹ ಕಾರ್ಡಿಯಾಜಲಿಸ್ಟ್‌ . ಆದರೆ ನಿಮಗೆ ಗೊತ್ತಿರಲಿ, ಡಾ.ರಂಗನಾಥ ನಾಯಕ್‌ ಭಾರತ ದೇಶ ಕಂಡ ಬಹುದೊಡ್ಡ ಮೇಧಾವಿ ಕಾರ್ಡಿಯಾಜಲಿಸ್ಟ್‌ . ಅವರಷ್ಟೇ ದೊಡ್ಡ ಖ್ಯಾತಿಯ ಡಾ.ಸುಭಾಷ್‌ಚಂದ್ರ ಕೂಡ ಅಣ್ಣಾವ್ರು ಮಲಗಿದ್ದ ಟೇಬಲ್ಲಿನ ಪಕ್ಕದಲ್ಲೇ ನಿಂತಿದ್ದರು.

ಇಷ್ಟು ಜನ ನಿಪುಣರ ಕೈಯಲ್ಲಿ ಸಿಕ್ಕ ಎಪ್ಪತ್ತೆಂಟು ವರ್ಷದ ಗೊಂಬೆ ಡಾ.ರಾಜಕುಮಾರ್‌. ಆ ಕ್ಷಣದ ಮಟ್ಟಿಗೆ ಅವರು ಮೃತ್ಯುವಿನೆದುರಿಗೆ ನಿಂತ ನಿಸ್ಸಹಾಯಕ ಕೂಸು. ಆದರೆ ನೋಡಿ, ಯಾವ ಎಪ್ಪತ್ತೆಂಟು ವರ್ಷದ ಹಿರಿಯನೂ maintain ಮಾಡಲಿಕ್ಕೆ ಸಾಧ್ಯವಾಗದಂತಹ ದೇವ ಅವರದು. ಇವತ್ತಿಗೂ ಚೆಕ್ಕು ಚೆದುರದ ಅಚ್ಚುಕಟ್ಟು ವಿಗ್ರಹ ಅವರದು. ಎಲ್ಲಕ್ಕಿಂತ ಹೆಚ್ಚಾಗಿ, ದೊಡ್ಡ ವಿಲ್‌ ಪವರ್‌ ಉಳ್ಳ ಮನಸ್ಸು . ವಯಸ್ಸಿನಿಂದಾಗಿ ಬಂದಿರುವ ರಕ್ತದ ಒತ್ತಡ ಬಿಟ್ಟರೆ ಬೇರೆ ಯಾವ ಆತಂಕಕಾರಿ ಖಾಯಿಲೆಗಳೂ ಅವರಿಗಿಲ್ಲ . ಅಂಥ ರಾಜ್‌ ಹೃದಯದ ಪ್ರಮುಖ ರಕ್ತನಾಳದಿಂದ ಕಟ್ಟಿಕೊಂಡ ಕೊಳೆ ತೆಗೆದು ಅಲ್ಲಿಗೊಂದು stent ಹಾಕಲಾಯಿತು. ಅಗಲಗೊಂಡ ರಕ್ತನಾಳ ಮತ್ತೆ ಕುಸಿದುಹೋಗದಿರಲಿ ಅಂತ ಹಾಕುವ ಪುಟಾಣಿ ಸಾಧನವನ್ನು ಸ್ಟೆಂಟ್‌ ಅನ್ನುತ್ತಾರೆ. ರಾಜ್‌ ಹೃದಯದ ನಾಳ ಅದೆಂಥ ಕಡೆ ಬ್ಲಾಕ್‌ ಆಗಿತ್ತೆಂದರೆ, ಆ ನಿಪುಣ ವೈದ್ಯರಿಗೂ ಸ್ಟೆಂಟ್‌ ಹಾಕುವುದು ಕಷ್ಟವೇ ಆಗಿತ್ತು . ಆದರೂ ರಾಜ್‌ಗೆ ಮಾಡಿದ ಆ್ಯಂಜಿಯೋಪ್ಲಾಸ್ಟಿ ಚಿಕಿತ್ಸೆ ಪೂರ್ತಿ ಫಲಕಾರಿಯಾಗಿದೆ. ಅವರು ಇನ್ನೇನು ಸದಾಶಿವನಗರ ಬಂಗಲೆಗೆ ಹಿಂದಿರುಗುತ್ತಾರೆ. ಇನ್ನೊಂದು ಸುದೀರ್ಘ ಇನಿಂಗ್ಸ್‌ಗೆ ಆ ಹಿರಿಯ ಜೀವ ಅಣಿಯಾಗುತ್ತದೆ. ಸದ್ಯಕ್ಕೆ ಅವರನ್ನಿನ್ನು ತೊಂದರೆಗೆ ಈಡು ಮಾಡಲಾರದು ಅವರ ಹೃದಯ. ಆ ಜೀವ ನೂರ್ಕಾಲ ಬಾಳಲಿ. ಅದು ನಮ್ಮ ನಿಮ್ಮೆಲ್ಲರ ಹಾರೈಕೆ.

ಹೀಗೊಂದು ಆ್ಯಂಜಿಯೋಪ್ಲಾಸ್ಟಿ ಮಾಡಿ ರಾಜಕುಮಾರ್‌ರನ್ನು ಬದುಕಿಸಿರುವ ವೈದ್ಯರು, ಅಣ್ಣಾವ್ರಿಗೆ ತೆರೆದ ಹೃದಯದ ಶಸ್ತ್ರಚಿಕಿತ್ಸೆ , ಅಂದರೆ ವೈದ್ಯಕೀಯ ಭಾಷೆಯಲ್ಲಿ ಕರೋನರಿ ಆರ್ಟೆರಿ ಬೈಪಾಸ್‌ ಗ್ರ್ಯಾಫ್ಟ್‌ ಮಾಡಿದ್ದಿದ್ದರೆ ಒಳ್ಳೆಯದಿತ್ತೇನೋ ಎಂಬ ಅಭಿಪ್ರಾಯ ಕೂಡ ಅಲ್ಲಲ್ಲಿ ಕೇಳಿಬರುತ್ತಿದೆ. ಈಗ ಹಾಕಿರುವ ಸ್ಟೆಂಟ್‌ ಮುಂದೆ ಯಾವತ್ತಾದರೂ ತೊಂದರೆ ಕೊಟ್ಟೀತೇನೋ ಎಂಬ ಆತಂಕ ಕೆಲವರಿಗಿದೆ. ಆದರೆ ತೆರದ ಹೃದಯದ ಶಸ್ತ್ರಚಿಕಿತ್ಸೆ ಮಾಡಿಸಲಿಕ್ಕೆ ಕುಟುಂಬದ ಸದಸ್ಯರ ನಿರ್ಧಾರ, ಒಪ್ಪಿಗೆ ಅತ್ಯಗತ್ಯ. ಅದು ದೊರಕಿದೆಯೋ ಇಲ್ಲವೋ ಗೊತ್ತಿಲ್ಲ . ಇಷ್ಟಕ್ಕೂ ಆ್ಯಂಜಿಯೋಪ್ಲಾಸ್ಟಿ ಚಿಕಿತ್ಸೆ ಸಾಕು ಅಂತ ನಿರ್ಧರಿಸಿರುವವರು ಭಾರತ ಕಂಡ ಅತ್ಯುತ್ತಮ ವೈದ್ಯರು ತಾನೆ ? ಅವರ ನಿರ್ಧಾರದ ಬಗ್ಗೆ ನಾವೇಕೆ ಆತಂಕವಿಟ್ಟುಕೊಳ್ಳೋಣ? ನಮಗೆ ಡಾ.ರಾಜಕುಮಾರ್‌ ಆರೋಗ್ಯವಂತರಾಗಿ, ನಮ್ಮೊಂದಿಗೆ ಇವತ್ತಿನಿಂದ ಇನ್ನೂ ನೂರು ವರ್ಷ ಬದುಕುವಂತಾದರೆ ಸಾಕು. ನಮ್ಮದು ಆರೋಗ್ಯವಂಥ ಸ್ವಾರ್ಥ !

(ಸ್ನೇಹಸೇತು : ಹಾಯ್‌ ಬೆಂಗಳೂರ್‌!)

English summary
Dr Rajkumar underwent successful heart surgery on 21st Aug, 2004. Ravi Belegere brings an exclusive story about what exactly was wrong with Rajs heart and how an expert team of doctors lined up to save Rajkumar, the heart throb of millions

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada