»   » ತಾರಾ ಮೇಡಂಗೊಂದು ಪತ್ರ

ತಾರಾ ಮೇಡಂಗೊಂದು ಪತ್ರ

Subscribe to Filmibeat Kannada
  • ಎ.ಆರ್‌.ಮಣಿಕಾಂತ್‌
‘ಶ್ರೇಷ್ಠ ನಟಿ ಪ್ರಶಸ್ತಿ ದೊರಕಿರುವುದರಿಂದ ನನಗೆ ತುಂಬಾ ತುಂಬಾ ಖುಷಿಯಾಗಿದೆ. ಇದು ನನಗೆ ಚಿತ್ರರಂಗ ನೀಡಿರುವ ಮದುವೆಯ ಉಡುಗೊರೆ. ನನ್ನನ್ನು ಬೆಳೆಸಿದ ನಿರ್ಮಾಪಕರಿಗೆ, ನಿರ್ದೇಶಕರಿಗೆ ಮತ್ತು ಕನ್ನಡಿಗರಿಗೆ ಈ ಪ್ರಶಸ್ತಿಯನ್ನು ಅರ್ಪಿಸುತ್ತಿದ್ದೇನೆ. ಈ ಪ್ರಶಸ್ತಿ ನನ್ನದಲ್ಲ, ಸಮಸ್ತ ಕನ್ನಡಿಗರದ್ದು...’

‘ಹಸೀನಾ’ ಚಿತ್ರಕ್ಕೆ ನಾನು ಖಂಡಿತಾ ಪ್ರಶಸ್ತಿ ನಿರೀಕ್ಷಿಸಿದ್ದೆ. ಆದರೆ ಕೊಂಕಣಾ ಸೇನ್‌ ಮತ್ತು ಐಶ್ವರ್ಯರೈ ಕೂಡ ಸ್ಪರ್ಧೆಯಲ್ಲಿ ಇದ್ದುದರಿಂದ ನನಗೆ ಅತ್ಯುತ್ತಮ ನಟಿ ಪ್ರಶಸ್ತಿ ಸಿಗುತ್ತದೆ ಎಂಬ ಸಣ್ಣ ನಿರೀಕ್ಷೆಯೂ ಇರಲಿಲ್ಲ. ಇಂಥ ಪ್ರಶಸ್ತಿಯನ್ನು ಕನ್ನಡಕ್ಕೆ ತಂದುಕೊಡುವ ಅದೃಷ್ಟ ನನ್ನದಾಗಿರುವುದಕ್ಕೆ ಹೆಮ್ಮೆಯಾಗುತ್ತಿದೆ...

ರಾಷ್ಟ್ರಪ್ರಶಸ್ತಿಯ ಕಿರೀಟ ಮಡಿಲಿಗೆ ಬಿದ್ದ ನಂತರವೂ ಒಂದಿಷ್ಟು ಬೀಗದೆ, ಭಾವಪೂರ್ಣ ಮಾತುಗಳಿಂದ ಕನ್ನಡಿಗರಿಗೆ ಇನ್ನಷ್ಟು ಹತ್ತಿರಾದ ತಾರಾ ಮೇಡಂಗೆ ಭೋಪರಾಕ್‌, ಭೋಪರಾಕ್‌.

ನಿಮ್ಜೊತೆ ಸುಳ್ಯಾಕೆ ತಾರಕ್ಕಾ? ಹೀಗೆ, ನಿಮಗೊಂದು ಅಭಿನಂದನಾ ಪತ್ರ ಬರೀಬೇಕಾಗುತ್ತೆ ಅಂತ ಯೋಚಿಸಿಯೇ ಇರಲಿಲ್ಲ. ಯಾಕೆ ಗೊತ್ತಾ? ಮೊನ್ನೆ ಮೊನ್ನೆ ತನಕ ಅದೆಷ್ಟೋ ಜನ ತಮ್ಮಷ್ಟಕ್ಕೆ ತಾವೇ ತಾರಾ, ಪ್ರಶಸ್ತಿ ಪಡೀ ‘ತಾರಾ’? ಅಂತ ಕೇಳಿಕೊಳ್ತಾ ಇದ್ರು. ನಮ್‌ ತಾರಾ ಅಲ್ವ? ಪ್ರಶಸ್ತಿ ಪಡೀಲಿ’ ಅನ್ನೋ ಆಸೆ ಎಲ್ರಿಗೂ ಇತ್ತು. ಅದರ ಜತೇಲೇ ತಾರಾಗೆ ಪ್ರಶಸ್ತಿ ನಿಜವಾಗ್ಲೂ ಸಿಗುತ್ತಾ ಅನ್ನೋ ಅನುಮಾನವೂ ಕಾಡ್ತಾ ಇತ್ತು. ಈಗ ನೋಡಿದ್ರೆ-ನೀವು ಪ್ರಶಸ್ತಿ ತಗೊಂಡಿದೀರ. ಕನ್ನಡಕ್ಕೆ, ಕನ್ನಡ ಚಿತ್ರರಂಗಕ್ಕೆ ಸ್ಪೆಶಲ್‌ ಮರ್ಯಾದೆ ತಂದುಕೊಟ್ಟಿದ್ದೀರ.‘ತಾರಾ ಆಂಟೀ/ತಾರಾ ಮಿಸ್‌/ತಾರಕ್ಕಾ/ತಾರಾ...ಓ, ತಾರಾ’ ಎಂದು ಕೂಗ್ತಾ ಇರೋರಿಗೆ ‘ಥ್ಯಾಂಕ್ಯೂ, ನಾನು ನಿಮಗೆಲ್ಲ ಋಣಿ’ ಅಂದು ಮುದ್‌ಮುದ್ದಾಗಿ ನಕ್ಕು ಭಾಳಾ ಚೆಂದ ಕಾಣಿಸ್ತಿದೀರ. ನಿಮ್ಮ ಖುಷಿ ದುಪ್ಪಟ್ಟಾಗಲಿ ಅನ್ನೋ ಬಯಕೆಯಿಂದ ಈ ಮಧುರ್‌ ಮಧುರ ಪತ್ರ...

***

ತಾರಾ ಮೇಡಂ, ಪ್ಲೀಸ್‌, ಬೇಜಾರು ಮಾಡ್ಕೋಬೇಡಿ. ಈ ಸಡಗರದ ಮಧ್ಯೆಯೇ ಸ್ವಲ್ಪ ಹೊತ್ತು ಫ್ಲ್ಯಾಶ್‌ಬ್ಯಾಕ್‌ಗೆ ಹೋಗಿಬರೋಣ, ಬನ್ನಿ :‘ಹೌದಲ್ವ’ ?ಚಿತ್ರರಂಗಕ್ಕೆ ಬಂದಾಗ ನಿಮ್ಗೆ ಬರೀ ಹದಿಮೂರು ವರ್ಷ. ನಿಮ್ಮ ಒರಿಜಿನಲ್‌ ಹೆಸ್ರು ಅನುರಾಧ! ಇವತ್ತು ಅಚ್ಚ ಕನ್ನಡದ ನಟಿ ಎಂದೇ ಹೆಸರಾದ ನೀವು ಬಣ್ಣ ಹಚ್ಚಿದ್ದು-ತಮಿಳಿನ ‘ಇಂಗೆ ಒರು ಗಂಗೈ’ ಸಿನಿಮಾಕ್ಕೆ! ಆರಂಗೇಟ್ರಂ ತಮಿಳಲ್ಲೇ ಆದ್ರೂ ನಿಮ್ಗೆ ಚಿಕ್ಕ ಮತ್ತು ಚೊಕ್ಕ ಛಾನ್ಸುಕೊಟ್ಟವರು :‘ತಾರಾ’ ಎಂಬ ಹೊಸ ಹೆಸರು ಇಟ್ಟವರು‘ಬಂಗಾರದ ಮನುಷ್ಯ’ ದ ಸಿದ್ಧಲಿಂಗಯ್ಯ. ಇನ್ನೂ ಒಂದು ಸ್ವಾರಸ್ಯ ಅಂದ್ರೆ-ನಟಿ ಆಗಬೇಕು ಅಂತ ನಿಮ್ಗೆ ಆಸೇನೇ ಇರಲಿಲ್ಲ ! ನೀವು ಬಣ್ಣ ಹಚ್ಚಿದ್ದು, ನಿಮ್ಮ ದೊಡ್ಡಮ್ಮನ ಬಲವಂತಕ್ಕೆ! ಇದೆಲ್ಲ ನಿಜ ಮತ್ತು ಇದಿಷ್ಟೂ ನಿಜ. ಒಪ್ತೀರಲ್ವ?

ಹೌದಲ್ವ? ‘ಇಂಗೆ ಒರು ಗಂಗೈ’ ಸಿನಿಮಾದ ನಂತರ ನೀವು ಸೀದಾ ಕನ್ನಡಕ್ಕೆ ಬಂದ್ರಿ. ಮೊದಲು‘ಉಯ್ಯಾಲೆ’ಯಲ್ಲಿ, ಆಮೇಲೆ ‘ತುಳಸೀದಳ’ದಲ್ಲಿ ಪಾತ್ರ ಮಾಡಿದ್ರಿ. ಮೊದಲಿನಿಂದಲೂ ಅಷ್ಟೆ, ಚೂರು ಕಪ್ಪಗೆ, ಇಷ್ಟು ಬೆಳ್ಳಗೆ, ಒಂದೊಂದ್ಸಲ ತೆಳ್ಳಗೆ ಮತ್ತು ತುಂಬಾ ಸಲ ದುಂಡು ದುಂಡಗೆ ಕಂಡವರು ನೀವು. ನಿಮ್ಮಲ್ಲಿ ರೂಪಿಗಿಂತ ಪ್ರತಿಭೆಯೇ ಒಂದು ಕೈ ಜಾಸ್ತಿ ಇತ್ತು. ಅದೇ ಕಾರಣಕ್ಕೆ ಇವತ್ತಲ್ಲ ನಾಳೆ, ನಾನು ಹೀರೋಹಿನ್‌ ಆಗೇ ಆಗ್ತೀನಿ ಅಂತ ನಂಬಿದ್ರಿ ನೀವು.

ಅದೊಮ್ಮೆ ‘ಕರ್ಣನ್‌ ಸಂಪತ್ತು’ ಸಿನಿಮಾದಲ್ಲಿ ಅಂಬರೀಷ್‌ಗೆ, ‘ಡಾಕ್ಟರ್‌ ಕೃಷ್ಣ’ದಲ್ಲಿ ವಿಷ್ಣುವರ್ಧನ್‌ಗೆ ನಾಯಕಿಯಾದಾಗ ದೊಡ್ಡ ಸಂಭ್ರಮದಿಂದ ‘ಗಿಲ್‌ ಗಿಲ್‌ ಗಿಲಿ ಗಿಲಕ್ಕ, ಕಾಲು ಗೆಜ್ಜೆ ಝುಣಕ್ಕ, ಕೈ ಬಳೆ ಠಣಕ್ಕ....’ ಅಂತ ಹಾಡಿ, ಕುಣಿದಾಡಿದ್ರಿ....ವಿಪರ್ಯಾಸ ನೋಡಿ, ಆಗ ನಿಮ್ಗೆ ಲಕ್‌ ಇತ್ತು .(ಈಗ್ಲೂ ಇದೆ!) ಅದೇ ಟೈಮಲ್ಲಿ ‘ಬ್ಯಾಡ್‌ಲಕ್‌’ ಕೂಡಾ ಕೈಹಿಡೀತು. ಅವತ್ತಿಂದಲೇ-ನಾಯಕಿಯರ ಪಾತ್ರಗಳು ನಿಮ್ಮ ಕೈ ತಪ್ಪಿ ಹೋದವು. ‘ಗುರಿ’ ಸಿನಿಮಾದಲ್ಲಿ ಅಣ್ಣಾವ್ರ ತಂಗಿ ಪಾತ್ರ ಮಾಡಿದ್ದೇ ನೆಪ, ಅವತ್ತಿಂದ ತಂಗಿ ಪಾತ್ರಗಳೇ ಕಾಯಂ ಆಗಿ ಆಗಿ ಆಗೀೕೕ... ‘ಅಯ್ಯೋ ಬಿಡಪ್ಪ ಈ ತಾರಾ ಏನಿದ್ರೂ ತಂಗಿ ಪಾತ್ರಕ್ಕೇ ಲಾಯಕ್ಕು. ಯಾವ ಸಿನಿಮಾಕ್ಕೆ ಹೋದ್ರೂತಂಗಿಯಾಗಿ ತಾರಾ ಇದ್ದೇ ಇರ್ತಾಳೆ. ಹಾಗೆ ಬರ್ತಾಳೆ. ಹೀಗೆ ಒಂದೆರಡು ಮಾತಾಡಿ, ಒಂದು ಹಾಡಲ್ಲಿ ಲಂಗ-ದಾವಣಿ ಹಾಕ್ಕೊಂಡು ಡ್ಯಾನ್ಸ್‌ ಮಾಡಿ, ಇಂಟರ್‌ವಲ್‌ ಮುಗೀತಿದ್ದಂಗೇ ಖಳನಾಯಕರ ಕಣ್ಣಿಗೆ ಬಿದ್ದು ಕತೆ ಆಗಿ ಹೋಗ್ತಾಳೆ...’ ಅನ್ನೋ ಮಾತು ಚಾಲ್ತಿಗೆ ಬಂತು. ಹೌದಲ್ವ ತಾರಕ್ಕಾ? ಹಿರಿಯ ಪತ್ರಕರ್ತರೊಬ್ಬರು ‘ತಾರಾವತಾರ ಮುಗೀತ್‌ ಅಂತ ಬರೆದಿದ್ದು ಆಗಲೇ ಅಲ್ವ?’

ಸ್ಸಾರಿ. ಹಳೇದೆಲ್ಲ ನೆನಪು ಮಾಡಿಬಿಟ್ಟೆ. ಆ ಮೇಲೆನಾಯ್ತು ಅಂತ ಕೂಡ ಹೇಳಿಬಿಡ್ತೀನಿ. ತಂಗಿ ಪಾತ್ರವೇ ಕಾಯಂ ಆದಾಗ, ನೀವು ಅಂಜಲಿಲ್ಲ. ಅಳುಕಲಿಲ್ಲ. ಮುಂದೆ ಪರಭಾಷಾ ನಟಿಯರು ಗೇಣಗಲದ ಬಟ್ಟೆ ಹಾಕ್ಕೊಂಡ ಕುರಿಮಂದೆಯ ಥರಾ ಗಾಂಧಿನಗರಕ್ಕೆ ಬಂದಾಗ ಕೂಡ ನೀವು ಬೆಚ್ಚಲಿಲ್ಲ. ಬೆದರಲಿಲ್ಲ. ಬದಲಿಗೆ ಪರ ಭಾಷೆಯವರಿಗೆ ದೇಹವೇ ಆಸ್ತಿ. ಅಭಿನಯ ನಾಸ್ತಿ. ಅವರಿಗಿಂತ ನಾವು ಯಾವುದರಲ್ಲಿ ಕಡಿಮೆ ಆಗಿದ್ದೀವಿ? ನಾವು ತೆಳ್ಳಗಿಲ್ವ? ಬೆಳ್ಳಗಿಲ್ವ? ಸ್ವಿಮ್‌ ಸೂಟ್‌ ಹಾಕಲ್ವ? ಕಡಿಮೆ ದುಡ್ಡಿಗೆ ಒಪ್ಪಲ್ವ? ಅಭಿನಯದಲ್ಲಿ ಮಾಗಿಲ್ವ? ಯಾವುದ್ರಲ್ಲಿ ಕಡಿಮೆ ಇದ್ದೀವ್ರೀ ನಾವೂ? ಎಂದೆಲ್ಲ ನಿರ್ಮಾಪಕರಿಗೆ ಒಂದ್ಸಲ ರೋಪು, ಇನ್ನೊಂದ್ಸಲ ಛಾಲೆಂಜು ಹಾಕ್ತಾ ನಿಂತು ಬಿಟ್ರಿ. ದುರಂತ ಅಂದ್ರೆ-ನಾವು ಕನ್ನಡಿಗರು, ನಿಮ್ಮ ಮಾತನ್ನು ಕೇಳಿ ಚಪ್ಪಾಳೆ ಹೊಡೆದು, ಸಿಳ್ಳೆ ಹಾಕಿ ಸಂಭ್ರಮಿಸಿ ಮರೆತೇಬಿಟ್ವಿ. ಅದೇ ಕಾಲಕ್ಕೆ ದಿ ಗ್ರೇಟ್‌ ಕಮಲ ಹಾಸನ್‌ ತನ್ನ ಸಿನಿಮಾದಲ್ಲಿ ಒಂದು ಬೊಂಬಾಟ್‌ ರೋಲ್‌ ಕೊಟ್ಟು ತಾರಾ ಅಂದ್ರೆ ಏನು ಅನ್ನೋದನ್ನ ದೇಶದ ಎಲ್ಲರಿಗೂ ತೋರಿಸಿಕೊಟ್ಟ!

***

ತಾರಾ ಮೇಡಂ, ಪ್ರಶಸ್ತಿ ಪಡೆದ ನಿಮ್ಮನ್ನ ಅಭಿನಂದಿಸಬೇಕು ಅಂದುಕೊಂಡಾಗ!-ಇದೆಲ್ಲ ನೆನಪಾಗಿ ಬಿಡ್ತು. ಒಂದು ಕಾಲದಲ್ಲಿ, ಬಹುಪಾಲು ಸಿನಿಮಾಗಳಲ್ಲಿ ‘ಹೀಗೆ ಬಂದು ಹಾಗೆ ಹೋಗಿಬಿಡುತ್ತಿದ್ದ’ ತಾರಾ ಇವತ್ತು ಐಶ್ವರ್ಯ ರೈಗೇ ಸೈಡು ಹೊಡೆದು ಪ್ರಶಸ್ತಿ ಪಡೆದ ಕ್ಷಣವಿದೆಯಲ್ಲ- ಅದು ಗ್ರೇಟ್‌. ನಮ್‌ ತಾರಾಗೆ ಪ್ರಶಸ್ತಿ, ಅದೂ ಏನು? ರಾಷ್ಟ್ರಪ್ರಶಸ್ತಿ ಬಂತು ಅಂದ್ಕೊಂಡ ತಕ್ಷಣ ‘ಅಮೃತವರ್ಷಿಣಿ’ಯ ಲಾಯರ್‌ ಆಗಿ, ‘ಕಾನೂರಿನ ಹೆಗ್ಗಡತಿ’ಯಾಗಿ,‘ಮುನ್ನುಡಿ’ಯ ಮುಸ್ಲಿಂ ಹುಡುಗಿಯಾಗಿ, ‘ನಿನಗಾಗಿ’ಯ ಕಾಮಿಡಿ ರೋಲ್‌ ಆಗಿ ನೀವು ಕಣ್ತುಂಬ್ತೀರ. ವಿಪರೀತ ಇಷ್ಟವಾಗ್ತೀರ. ಒಂದು ಕ್ಷಣ ನಮ್ಮನ್ನ ನಾವೇ ಮರೆತು‘ಕನ್ನಡದ ತಾರಾ, ಹಿಂದಿಯ ಶಬಾನಾ ಅಜ್ಮಿಗೆ ಸಮ ಕಣ್ರೀ’, ಎಂದು ಚೀರುವ ಹಾಗೆ ಮಾಡಿಬಿಡ್ತೀರ.

ತುಂಬ ಅಭಿಮಾನದಿಂದ ಹೇಳ್ತಿದೀನಿ. ಮುಂದೆ, ಇನ್ನೂ ಒಂದೆರಡು ರಾಷ್ಟ್ರಪ್ರಶಸ್ತಿ ನಿಮ್ಮ ಮುಡಿಗೇರಲಿ.

ನಾಯಕಿಯಾಗಲಿಲ್ಲ ಅನ್ನೋ ಕೊರಗನ್ನ ಪ್ರಶಸ್ತಿಗಳ ಮಾಲೆ ಹೊಡೆದು ಉರುಳಿಸಲಿ. ಕೈಯಲ್ಲಿ ‘ಪ್ರಶಸಿ’್ತ, ಕಿವಿಯಲ್ಲಿ ‘ವೇಣುಗಾನ’ ಸದಾ ನಿಮ್ಮ ಜತೆಗೇ ಇರಲಿ. ನೀವು ಪ್ರಶಸ್ತಿ ಪಡೆದಿರಿ ಅನ್ನೋ ಖುಷಿಗೆ ‘ವೇಣು ಸಾಹೇಬರು’ ದಿಢೀರನೆ ನಡೆದು ಬಂದು ನಿಮ್ಮ ಕೈಗೆ ಮುತ್ತಿಟ್ಟು ನಲಿಯಲಿ. ಎಂದೆಂದೆಂದೂ ಸುಖ ಸಂತೋಷದಲ್ಲೇ ನಿಮ್ಮ ಬದುಕು ಜೋಕಾಲಿಯಾಡಲಿ. ಇದು ಎಲ್ಲ ಕನ್ನಡಿಗರ ಹರಕೆ, ಹಾರೈಕೆ.

(ಸ್ನೇಹ ಸೇತು : ವಿಜಯ ಕರ್ನಾಟಕ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada