»   » ವಾಂಟೆಡ್, ಕನ್ನಡ ಸಿನೆಮಾಗಳ ಮೈಕ್ರೋಸೈಟ್

ವಾಂಟೆಡ್, ಕನ್ನಡ ಸಿನೆಮಾಗಳ ಮೈಕ್ರೋಸೈಟ್

By: ಪ್ರಸಾದ ನಾಯಿಕ
Subscribe to Filmibeat Kannada

ನಿರ್ಮಾಪಕರು ನಾಯಕ ನಟರ ಹಮ್ಮಿಗೆ ಬಿದ್ದು ಚಿತ್ರ ಲಾಂಚ್ ಮಾಡುವಾಗ ಕೋಟ್ಯಾಂತರ ರುಪಾಯಿ ಸುರಿಯುತ್ತಾರೆ. ಪ್ರಚಾರಕ್ಕೆ ಬಂದು ನಿಂತಾಗ ತಮ್ಮ ಚಿತ್ರದ ಬಗ್ಗೆ ಎರಡು ಮಾತಾಡಬೇಕೆಂದರೆ ಎರಡು ಮಾತುಗಳೂ ಇರುವುದಿಲ್ಲ.

ಒಂದು ಚಿತ್ರ ಮಾಡಿ ಪ್ರೇಕ್ಷಕ ದೇವರ ಮೇಲೆ ಭಾರ ಹಾಕಿ ಆಗಿದ್ದಾಗಲಿ ಅಂತ ಸುಮ್ಮನೆ ಕೂಡುವ ನಟರು ಬೇಕಾದಷ್ಟಿದ್ದಾರೆ. ಥಿಯೇಟರಿನ ಜಾಗದಲ್ಲಿ ಡಿವಿಡಿ, ಟೀವಿ ಬಂದು ಕೂತಿರುವ ಕಾಲದಲ್ಲಿ ಪ್ರಚಾರ ಮಾಡಿ ಇದು ನಮ್ಮ ಚಿತ್ರ, ಇಷ್ಟು ದುಡಿಮೆ ಹಾಕಿದ್ದೇವೆ, ಇಂಥಿಂಥವರು ನಮ್ಮ ಬೆನ್ನ ಹಿಂದೆ ಹಿಂದ್ದಾರೆ, ಇದು ಸಮಾಜದ ಬಗ್ಗೆ ನಮಗಿರುವ ಕಾಳಜಿ ಅಂತ ಟಾಂಟಾಂ ಹೊಡೆದಾಗಲೇ ಜನ ಚಿತ್ರಮಂದಿರಕ್ಕೆ ಬಂದು ನೋಡುವ ಜಮಾನಾ.

ಅಂಥದ್ದರಲ್ಲಿ ಎಷ್ಟು ಜನರಿಗೆ ಈ ಕುರಿತು ಕಾಳಜಿ ಇದೆ ಎಂದು ತಿರುಗಿ ನೋಡಿದಾಗ ಸಿಕ್ಕುವುದು ಬೆರಳೆಣಿಕೆಯ ಜನ ಮಾತ್ರ. ಕೆಲ ನಿರ್ಮಾಪಕರು ನಾಯಕ ನಟರ ಹಮ್ಮಿಗೆ ಬಿದ್ದು ಚಿತ್ರ ಲಾಂಚ್ ಮಾಡುವಾಗ ಕೋಟ್ಯಾಂತರ ರುಪಾಯಿ ಸುರಿಯುತ್ತಾರೆ. ಪ್ರಚಾರಕ್ಕೆ ಬಂದು ನಿಂತಾಗ ತಮ್ಮ ಚಿತ್ರದ ಬಗ್ಗೆ ಎರಡು ಮಾತಾಡಬೇಕೆಂದರೆ ಎರಡು ಮಾತುಗಳೂ ಇರುವುದಿಲ್ಲ.

ಚಿತ್ರಲೋಕ.ಕಾಂನ ಕೆ.ಎಂ.ವೀರೇಶ್ ಕನ್ನಡ ಚಿತ್ರರಂಗ ನಡೆದುಬಂದ ದಾರಿಯನ್ನು ಅಮೂಲಾಗ್ರವಾಗಿ ಛಾಯಾಚಿತ್ರದಲ್ಲಿ ಹಿಡಿದಿಟ್ಟಿರುವ ಕೆಲಸ ಮಾತ್ರ ಸ್ತುತ್ಯರ್ಹ. ಕನ್ನಡ ಚಿತ್ರರಂಗಕ್ಕೆ ಹೋಗಲಿ ತಾವೇ ಮಾಡಿದ ಚಿತ್ರಗಳು, ತಾವು ನಡೆದು ಬಂದ ಹಾದಿ, ಭವಿಷ್ಯದ ಚಿಂತನೆ ಕುರಿತು ಯಾರಾದರೂ ಕೆಲಸ ಮಾಡಿದ್ದಾರೆಂದು ನೋಡಿದರೆ ಅವರು ದುರ್ಬೀನಿಗೂ ಸಿಕ್ಕುವುದಿಲ್ಲ.

ಕೆಲ ನಟ, ನಟಿ, ನಿರ್ದೇಶಕರು ತಮ್ಮ ಕುರಿತಾಗಿ, ತಮ್ಮ ಚಿತ್ರಗಳ ಕುರಿತಾಗಿ ನಿರ್ಮಿಸಿರುವ ಅಂತರ್ಜಾಲ ತಾಣಗಳಲ್ಲಿ ಕೆಲವು ಏದುರಿಸಿರು ಬಿಡುತ್ತಿವೆ, ಕೆಲವು ಮಕಾಡೆ ಮಲಗಿವೆ. ತಮ್ಮ ಮೆಚ್ಚಿನ ನಟನ ಮೇಲಿಟ್ಟಿರುವ ಪ್ರೀತಿಯ ಸಂಕೇತವಾಗಿ ಅಭಿಮಾನಿಗಳು ರಚಿಸಿರುವ ತಾಣಗಳು ಮಾತ್ರ ಸ್ವಲ್ಪ ಉಸಿರಾಡುತ್ತಿವೆ.

ದೇಶಕೋಶ ಸುತ್ತಿಬಂದಿರುವ ನಾಗತಿಹಳ್ಳಿ ಚಂದ್ರಶೇಖರ್ ಅವರ ಅಂತರ್ಜಾಲ ತಾಣವೇ ಗಾಳಿಯಿದ್ದಾಗ ಮಾತ್ರ ಹಾರಾಡಿ ಬೆಂಕಿಯ ಸಂಗ ಬಿದ್ದ ಪತಂಗದಂತೆ ಉರಿದುಬಿದ್ದಿದೆ.

ಈಗ, ಭಾರತದಲ್ಲಿ ಮಾತ್ರವಲ್ಲ ಅಮೆರಿಕಾ, ಸಿಂಗಪುರ, ಆಸ್ಟ್ರೇಲಿಯಾ, ನ್ಯೂಜಿಲಂಡ್, ಯುನೈಟೆಡ್ ಕಿಂಗಡಮ್, ಯುಎಇ ಮುಂತಾದೆಡೆಗಳಲ್ಲಿ ಬಿಡುಗಡೆಯಾಗುತ್ತಿರುವ ನಾಗತಿಯ ಮಾತಾಡ್ ಮಾತಾಡು ಮಲ್ಲಿಗೆ ಚಿತ್ರ ಅಂತರ್ಜಾಲ ತಾಣದಲ್ಲಿ ಸುವಾಸನೆ ಬೀರುತ್ತಿದೆ. ವೆಬ್‌ಸೈಟ್ ಮುಖಾಂತರ ವಿಶ್ವದೆಲ್ಲೆಡೆ ಘಮಲು ಪಸರಿಸಲು ವಿದ್ಯುಕ್ತವಾಗಿದೆ.

ನಾಗತಿಹಳ್ಳಿ ಮಾಡುವ ಕೆಲಸಗಳು ಕೂಡ ಅತ್ಯಂತ ವ್ಯವಸ್ಥಿತ. ಚಿತ್ರ ತಯಾರಿಕೆ, ಪ್ರಚಾರ, ಚಿತ್ರ ಬಿಡುಗಡೆ ಎಲ್ಲವೂ ನಿಗದಿತ. ಕೊನೆಗೆ ಯಶಸ್ಸು ಕೂಡ. ಹಾಗೆಯೇ ಅಂತರ್ಜಾಲ ತಾಣ ಕೂಡ ಬಹಳ ದಿನ ಸುವಾಸನೆ ಬೀರುತ್ತದಾ ಕಾದು ನೋಡಬೇಕು.

ಮಲ್ಲಿಗೆಯಲ್ಲಿ ರೈತನ ಪಾತ್ರದಲ್ಲಿ ಮಾಡುತ್ತಿರುವ ವಿಷ್ಣುವರ್ಧನ್ ಅವರ ಬಣ್ಣದ ಬದುಕನ್ನು ಕಟ್ಟಿಡುವ ಅಂತರ್ಜಾಲ ತಾಣವನ್ನು ಮೈಸೂರಿನ ಪ್ರಶಾಂತ್ ಎಂಬುವವರು ಮಾಡಿದ್ದಾರೆ. ವಿಷ್ಣು ನಟಿಸಿರುವ 195 ಚಿತ್ರಗಳ ಪಟ್ಟಿಯಿದ್ದರೂ ಈಗ ನಟಿಸುತ್ತಿರುವ ಮಾತಾಡ್ ಮಾತಾಡು ಮಲ್ಲಿಗೆ ಚಿತ್ರದ ಘಮಲು ಈ ತಾಣದಲ್ಲಿ ಪಸರಿಸಿಲ್ಲ.

ತಾಣಗಳಲ್ಲಿ ಉಪತಾಣವಾಗಿ ರಚಿತವಾಗಿರುವ ವೆಬ್‌ಸೈಟ್‌ಗಳಿಗೆ ಲೆಕ್ಕವೇ ಇಲ್ಲ. ಹವಾ ಇದ್ದಾಗ ಹಾರಾಡುವ ಅವು ಕಾಲಸರಿದಂತೆ ನೇಪಥ್ಯಕ್ಕೆ ಸರಿದುಬಿಡುತ್ತವೆ. ಶಾರ್ಟ್ ಲೀವ್ಡ್.

ಹಲೋ ನಾನಿಲ್ಲಿದ್ದೀನಿ ಅಂತ ನಗುತ್ತಿರುವಅರವಿಂದ್ ರಮೇಶ್ ಕುರಿತ ಅಂತರ್ಜಾಲ ತಾಣ ಅವರ ಚಿತ್ರಬದುಕಿನಂತೆಯೇ ವೈವಿಧ್ಯತೆಗಳನ್ನು ಹೊತ್ತು ಇನ್ನೂ ನಗುತ್ತಿದೆ. ಆದರೂ ಅದು ಅಪ್‌ಡೇಟ್ ಆಗಿ ಸುಮಾರು ದಿನಗಳೇ ಸಂದಿವೆ.

ಪ್ರಸ್ತುತ ಚಾಲ್ತಿಯಲ್ಲಿರುವ ನಂಬರ್ ಒನ್ ನಟಿ ರಮ್ಯ ಕುರಿತ ವೆಬ್‌ಸೈಟ್ ಎಲ್ಲಿದೆ ಎಂದು ಅಭಿಮಾನಿಗಳು ಹುಡುಕಿಕೊಡಬೇಕು.

ಅದೇ ಹಿಂದಿ, ತೆಲುಗು, ತಮಿಳು ಚಿತ್ರರಂಗ ನೋಡಿದರೆ ಚಿತ್ರಗಳ ಸಂಖ್ಯೆ ನೂರು ದಾಟಿರಲಿ ಚಿತ್ರರಂಗಕ್ಕೆ ಕಾಲಿಡುವಾಗಲೇ ವೆಬ್‌ಸೈಟ್ ಮುಖಾಂತರವೇ ತಮ್ಮ ಕುರಿತು ಪ್ರಚಾರಕ್ಕೆ ನಿಲ್ಲುತ್ತಾರೆ. ಹಿಂದಿ ಚಿತ್ರರಂಗದ ಬಾದ್‌ಷಾ ಶಾಹರುಖ್ ಖಾನ್ ತನ್ನ ಅಶೋಕ ಚಿತ್ರವನ್ನು ಪುಸ್ತಕ ರೂಪದಲ್ಲಿಯೂ ಹಿಡಿದಿಟ್ಟಿದ್ದ. ಆ ಚಿತ್ರ ತೋಪಾಯಿತೆನ್ನುವುದು ಬೇರೆ ಮಾತು. ಆದರೆ ತಾವು ಮಾಡುವ ಕೆಲಸದ ಮೇಲೆ ಶ್ರದ್ಧೆ, ವಿಶ್ವಾಸವಿದ್ದಾಗ ಮಾತ್ರ ಇಂಥ ಕೆಲಸ ಮಾಡಲು ಸಾಧ್ಯ. ಅಂಥ ವಿಶ್ವಾಸವನ್ನು ನಮ್ಮ ಕನ್ನಡದ ನಟ, ನಟಿ, ನಿರ್ದೇಶಕ, ನಿರ್ಮಾಪಕ, ತಂತ್ರಜ್ಞರೂ ತೋರಲಿ ಎನ್ನುವುದು ಎಲ್ಲರ ಆಶಾವಾದ.

ಅಮಿತಾಭ್, ಶಾಹರುಖ್, ಐಶ್ವರ್ಯ, ಪ್ರೀತಿ ಜಿಂಟಾ ಹೋಗಲಿ ಇತ್ತೀಚೆಗಷ್ಟೇ ಮುಂಬೈ ಸರಣಿ ಸ್ಫೋಟಕ್ಕೆ ಸಂಬಂಧಿಸಿದಂತೆ ಜೈಲು ಸೇರಿ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದಿರುವ ಸಂಜು ಬಾಬಾನ ತಾಯಿ ನರ್ಗಿಸ್ ಬಗ್ಗೆಯೂ ಸಾಕಷ್ಟು ಮಾಹಿತಿ ಸಿಗುತ್ತದೆ ವೆಬ್‌ಸೈಟ್‌ನಲ್ಲಿ. ಹಿಂದಿ ಚಿತ್ರರಂಗದ ಅಮ್ಮ ಅಂತ ಕೀವರ್ಡ್ ನೀಡಿದರೆ ನಿರುಪಾರಾಯ್ ಕುರಿತ ಮಾಹಿತಿ ಧಿಗ್ಗನೆದ್ದು ಬರುತ್ತದೆ. ಅದೇ ನಮ್ಮ ಕನ್ನಡ ಚಿತ್ರರಂಗದ ಅಮ್ಮ ಅಂತ ಅಂತರ್ಜಾಲ ತಾಣದಲ್ಲಿ ಹುಡುಕಾಡಿದರೆ ಪಂಢರಿಬಾಯಿ ಅಮ್ಮ ಎದ್ದುಬರುತ್ತಾಳಾ? ಊಹುಂ!

ಕನ್ನಡ ಚಿತ್ರರಂಗವನ್ನು ಶ್ರೀಮಂತಗೊಳಿಸಿದ ಅಮ್ಮ, ನಾಯಕ, ನಾಯಕ, ಪೋಷಕ ನಟ, ಪೋಷಕ ನಟಿ, ಹಾಸ್ಯ ಕಲಾವಿದ, ಕ್ಯಾಮೆರಾಮನ್, ಸಂಕಲನಕಾರ, ಸಂಗೀತಗಾರ, ಲೈಟ್ ಬಾಯ್ ಅವರ ಜೀವನ, ನಡೆಸಿದ ಕಸರತ್ತು, ನಗು ಅಳು, ಏಳು ಬೀಳು ಕುರಿತ ಪುಟ್ಟ ಪುಟ್ಟ ಮಾಹಿತಿಗಳು ವಿಶ್ವದ ಎಲ್ಲರಿಗೂ ಸಿಗುವಂತಾಗಲಿ.

ವರಮಹಾಲಕ್ಷ್ಮಿ ಹಬ್ಬದ ಮುನ್ನಾದಿನ ಬಿಡುಗಡೆಯಾಗುತ್ತಿರುವ ಮಾತಾಡ್ ಮಾತಾಡು ಮಲ್ಲಿಗೆ ಬಗ್ಗೆ ನಾಗತಿಹಳ್ಳಿ ಚಂದ್ರಶೇಖರ್ ವೆಬ್‌ತಾಣದಲ್ಲಿ ಹೇಳಿದ್ದಾರೆ. ವರಮಹಾಲಕ್ಷ್ಮಿ ಹಬ್ಬದಂದೇ ಬಿಡುಗಡೆಯಾಗುತ್ತಿರುವ ಇನ್ನೊಂದು ಚಿತ್ರ ಶಿವರಾಜ್‌ಕುಮಾರ್ ಅವರ ಗಂಡನ ಮನೆ ಚಿತ್ರದ ವೆಬ್‌ಸೈಟ್ ಲಭ್ಯವಿದೆಯೇ? ಇದ್ದರೆ ನಮಗೆ ತಿಳಿಸಿ.

English summary
How many directors, actors in Kannada film industry have showcased themselves, their films?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada