»   » ನೂರೊಂದು ನೆನಪು ಮಾತಾಗಿ ವಿಷ್ಣುಗೊಂದು ಪತ್ರ...

ನೂರೊಂದು ನೆನಪು ಮಾತಾಗಿ ವಿಷ್ಣುಗೊಂದು ಪತ್ರ...

Posted By: Super
Subscribe to Filmibeat Kannada

ನಾನು ಚಿತ್ರರಂಗಕ್ಕೆ ಬಂದದ್ದು ಒಂದೇ ಒಂದು ಚಿತ್ರದಲ್ಲಿ ನಟಿಸಬೇಕೆಂಬ ಆಸೆಯಿಂದ. ಯಾಕೆ ಅಂದ್ರೆ ಚಿತ್ರರಂಗ ಅನ್ನೋದು ಹೇಗಿರ್ತದೆ ಅಂತ ನೋಡುವ ಕುತೂಹಲ ನನಗಿತ್ತು. ಆದರೆ ಈಗ ಒಂದಲ್ಲ, ಎರಡಲ್ಲ, ಮೂವತ್ತು ವರ್ಷವೇ ಮುಗಿದಿದೆ. ನಂಗಿಲ್ಲಿ ನೆಲೆ ಸಿಕ್ಕಿದೆ. ಯೋಗ್ಯತೆ ಮೀರಿ ಹೊಗಳಿಕೆ ದಕ್ಕಿದೆ. ಅದೆಲ್ಲ ನೆನಪಾದರೆ ಮುಜುಗರ ಆಗುತ್ತೆ...

ನಾನು ಯೋಗಿಯಲ್ಲ. ಮಹಾನ್‌ ತ್ಯಾಗಿಯಲ್ಲ. ಉಳಿದೆಲ್ಲರ ಹಾಗೇನೇ ನಂಗೂ ಆಸೂಯೆ ಇದೆ. ಈರ್ಷ್ಯೆ ಇದೆ. ಅಸಹನೆ ಇದೆ. ಕೋಪ ಇದೆ. ಇದೆಲ್ಲ ಒಳಗಿರುವ ಕಾಯಿಲೆ. ಇದಕ್ಕೆ ನಾವು ಮದ್ದು ಕಂಡ್ಕೋಬೇಕು. ನಿಮ್ಮಲ್ಲಿ ಸುಳ್ಳೇಕೆ? ನನ್ನೊಳಗೆ ಕೂಡಾ ಕತ್ತಲಿದೆ. ನಂಗೆ ಆ ಕತ್ತಲೆ ಕಂಡರೆ ಭಯವೂ ಇದೆ!
ದೇವರು ನನ್ನೆದುರು ಪ್ರತ್ಯಕ್ಷ ಆದ್ರೆ-ಮನುಷ್ಯರ ಯಾಕೆ ಸೃಷ್ಟಿ ಮಾಡಿದೆ ಅಂತ ಕೇಳ್ತೀನಿ. ಮನುಷ್ಯರಿಗೆ ಯಾಕಾದ್ರೂ ಮಾತು ಕೊಟ್ಟೆ ಅಂತ ಕೇಳ್ತೀನಿ. ಮಾತು ಬಾರದಿದ್ದರೆ ನಾವು ಖುಷಿಯಾಗಿ ಇರ್ತಿದ್ವಿ ಅಂತ ಹೇಳ್ತೀನಿ. ಈ ಜಗತ್ತನ್ನ ಯಾಕಪ್ಪಾ ಸೃಷ್ಟಿ ಮಾಡ್ದೆ ಅಂತ ಕೇಳ್ತೀನಿ....
ಪ್ರಶಸ್ತಿ ಬರ್ತದಲ್ಲ- ಅಂಥ ಸಂದರ್ಭದಲ್ಲೆಲ್ಲ ನನ್ನಲ್ಲೇ ಅಪರಾಧಿ ಪ್ರಜ್ಞೆ ಕಾಡುತ್ತೆ. ದ್ವಂದ್ವ ಕಾಡುತ್ತೆ. ಇದಕ್ಕೆಲ್ಲ ನಾನು ಯೋಗ್ಯನಾ ಅನ್ನುವ ಪ್ರಶ್ನೆ ಕಾಡುತ್ತೆ. ಕನ್ನಡಿಗರು ನಂಗೆ ಪ್ರೀತಿ , ಹಾರೈಕೆ, ಅಭಿಮಾನ-ಎಲ್ಲವನ್ನೂ ಮೊಗೆಮೊಗೆದು ಕೊಟ್ಟಿದ್ದಾರೆ. ಅವರ ಋಣವನ್ನು ಈ ಜನ್ಮದಲ್ಲಲ್ಲ -ಇನ್ನು ಏಳೇಳು ಜನ್ಮದಲ್ಲೂ ತೀರಿಸಲು ಸಾಧ್ಯವಿಲ್ಲ...
32 ವರ್ಷಗಳ ಚಿತ್ರ ಬದುಕಿನಲ್ಲಿ ನಾನು ಎದುರಿಸಿದೆ ಸಮಸ್ಯೆಗಳು ನೂರಾರು. ಹೃದಯ ಹಿಂಡುವಂಥ ಸಂಕಟ ಕೈಹಿಡಿದಾಗಲೆಲ್ಲ- ಇದನ್ನು ಅನುಭವಿಸುವ ಯೋಗ ನನಗಿದೆ. ಇದನ್ನು ಯಾರೂ ತಪ್ಪಿಸೋಕೆ ಸಾಧ್ಯವಿಲ್ಲ ಅಂತ ಅಂದ್ಕೊಂಡಿದೀನಿ. ಸಂಕಟ ಬಂದಾಗ ಕುಗ್ಗಿಲ್ಲ. ಸಂತೋಷವಾದಾಗೆ ಹಿಗ್ಗಿಲ್ಲ. ಬದುಕು ನನಗೆ ಪಾಠ ಕಲಿಸಿದೆ. ನನ್ನನ್ನು ಬೆಳೆಸಿದೆ. ನಂಗೆ ಖುಷಿ ಕೊಟ್ಟಿದೆ...

- ಮುತ್ತುಗಳಲ್ಲಿ ಪೋಣಿಸಿ ಇಡಬಹುದಾದ ಇಂಥವೇ ಮಾತುಗಳಿಂದ ಕನ್ನಡಚಿತ್ರ ಪ್ರಿಯರ ಮನಗೆದ್ದ ಸಾಹಸಸಿಂಹ ವಿಷ್ಣುವರ್ಧನ್‌ರವರಿಗೆ ನೂರೊಂದು ನೆನಪು ಎದೆಯಾಳದಿಂದ...

*

ಸರ್‌, ನಾನು ಹೇಳೋದೇನಿದೆ? ಕನ್ನಡಿಗರ ಅಭಿಮಾನದ ನಟ ನೀವು. ಎಲ್ಲರಿಗೂ ತಿಳಿದಿರುವುದನ್ನೇ ಒಂದಿಷ್ಟು ಡಿಫರೆಂಟ್‌ ಆಗಿ ಹೇಳೋದಾದರೆ- ಸಂಪತ್‌ಕುಮಾರ್‌ ನಿಮ್ಮ ನಿಜವಾದ ಹೆಸರು. ನೀವು ನ್ಯಾಷನಲ್‌ ಕಾಲೇಜಿನಲ್ಲಿ, ಎಚ್ಚೆನ್‌ ಅವರ ಶಿಷ್ಯ ಆಗಿದ್ದವರು. 1972ರಲ್ಲಿ ಮೊದಲಿಗೆ ವಂಶವೃಕ್ಷದಲ್ಲಿ , ಆಮೇಲೆ ಪುಟ್ಟಣ್ಣ ಕಣಗಾಲರ ನಾಗರಹಾವು ಸಿನಿಮಾದ ಹೀರೋ ಆದವರು. ಹಾಗೆ ಹೀರೋ ಆದಾಗಲೇ ವಿಷ್ಣುವರ್ಧನ್‌ ಎಂದು ಬದಲಾದವರು. ಹೌದ್‌ ತಾನೆ? ಆಮೇಲೆ ಅದೇ ಹೆಸರು. ನಾಗರಹಾವು ಚಿತ್ರದಲ್ಲಿ ರಾಮಾಚಾರಿ ಆಗಿಬಿಡ್ತು. ಚಟಚಟ, ಪಟಪಟ ಸಿಡಿಯುವ ರಾಮಾಚಾರಿ ನೀವು. 'ಆ ರಾಮನು ಬಿಟ್ಟ ಬಾಣದ ಗುರಿಯು ಎಂದೂ ತಪ್ಪಿಲ್ಲ. ಈ ರಾಮಾಚಾರಿಯ ಕೆಣಕೋ ಗಂಡು ಇನ್ನೂ ಹುಟ್ಟಿಲ್ಲ. ಆ ಭೀಮನ ಬಲದವನು, ಚಾಣಕ್ಯನ ಛಲದವನು, ಈ ದುರ್ಗದ ಹುಲಿ ಇವನೂ...' ಅಂತ ಹಾಡಿದ್ರಿ. ಆಮೇಲೇ...

ಆಮೇಲೆ ಏನಾಯ್ತು ಅನ್ನೋದು ಎಲ್ಲಿಗೂ ಗೊತ್ತಿದೆ. ಅದನ್ನೇ ಸಿನಿಮಾ ಭಾಷೇಲಿ ಹೇಳೋದಾದ್ರೆ- ಹೌದ್‌ ಹೌದು. ವಿಷ್ಣುಗೆ ಈಗ ಏನೇನೆಲ್ಲಾ ದಕ್ಕಿದೆ. ಅದೆಲ್ಲಾ ಬಯಸದೇ ಬಂದ ಭಾಗ್ಯ. ಪಿಕ್‌ನಿಕ್‌ ನೆಪದಲ್ಲಿ ವಿಷ್ಣು ರೌಂಡು ಹೊಡೆದ ಜಾಗ ನಾಗರಹೊಳೆ. ರೂಪು ಅನ್ನೋದು; ಸೌಜನ್ಯ ಅನ್ನೋದು ಅವರಿಗೆ ದೇವರು ಕೊಟ್ಟ ವರ. ಯಾವತ್ತೂ ಅಷ್ಟೇ-ವಿಷ್ಣುವರ್ಧನ್‌ ಊರಿಗೆ ಉಪಕಾರಿ. ಸಿಟ್ಟು ಬಂದಾಗ ಅವರು ರಾಮ ಪರಶುರಾಮ ಆಗೋದೂ ಉಂಟು. ಅದೇ ಸಿಟ್ಟಲ್ಲಿ ಸಾಹಸ ಸಿಂಹನಾಗಿ ಅಬ್ಬರಿಸುವುದು ಉಂಟು. ರುದ್ರನಾಗನಂತೆ ಕೆರಳುವುದುಂಟು. ಬದುಕಲ್ಲಿ ಖುಷಿಯೆ ಜತೆಯಾದಾಗ ಅವರು ಬಿಳಿಗಿರಿಬನದಲ್ಲಿ , ಗಂಧರ್ವಗಿರಿಯಲ್ಲಿ ಅಲೆದದ್ದುಂಟು. ಅದೇ ಖುಷಿಯಲ್ಲಿ ಬಂಗಾರದ ಗುಡಿಗೂ ಹೋಗಿದ್ದುಂಟು. ಇದೇ ವಿಷ್ಣುವರ್ಧನ್‌ ಮುಂದೆ ಅಭಿಮಾನಿಗಳ ಹೃದಯ ಬಂಧನ ಕ್ಕೆ ಈಡಾದರು. ಅಭಿಮಾನಿಗಳಿಗಾಗಿ ಸುಪ್ರಭಾತ ಹಾಡಿದರು. ಆಮೇಲೆ ದ್ವಾರಕೀಶ್‌ ಜತೆಯಿದ್ದಾಗ ಕಳ್ಳ-ಕುಳ್ಳ ಆದರು. ಶ್ರೀನಾಥ್‌ ಜತೆಯಾದಾಗ ಕಿಲಾಡಿ ಜೋಡಿ ಆದರು. ಅಂಬರೀಷ್‌ಗೆ ಆಪ್ತಮಿತ್ರ ಆದರು. ಮುಂದೆ ಮುತ್ತಿನಹಾರಕ್ಕೆ ಬದುಕನ್ನೇ ಮುಡಿಪಾಗಿಟ್ಟು, ಹೃದಯವಂತ ಅನ್ನಿಸಿಕೊಂಡರು. ಇದನ್ನೆಲ್ಲ ಕಂಡ ಜನ ಸಾಹುಕಾರರು, ಯಜಮಾನರು ಎಂದೆಲ್ಲ ಕರೆದರೆ, ಇಲ್ಲಇಲ್ಲ ಅವೆಲ್ಲ ದೊಡ್ಡ ಮಾತುಗಳು. ಒಂದೇ ಮಾತಲ್ಲಿ ಹೇಳುವುದಾದರೆ ನಾನು ಎಲ್ಲರಿಗೂ ಆಪ್ತಮಿತ್ರ ಅಷ್ಟೆ ಎಂದು ಕೈಮುಗಿದರು. ಅಳುವ ಮಕ್ಕಳನ್ನೂ ಲಾಲಿ ಹಾಡಿ ಸಂತೈಸುವ ವಿಷ್ಣು ಸಾಹೇಬರೇ- ಹೀಗೆಲ್ಲ ಕರೆದದ್ದಕ್ಕೆ ನಿಮ್ಗೆ ಬೇಸರ/ಮುಜುಗರ ಇಲ್ಲ ತಾನೇ?

*

ಸರ್‌, ಎಲ್ಲ ಅಭಿಮಾನಿಗಳದ್ದೂ ಆಗಬಹುದಾದ ಒಂದಷ್ಟು ಪ್ರಶ್ನೆಗಳಿವೆ; ಹೇಳಿ-ಬಂಧನದ ಭಗ್ನ ಪ್ರೇಮಿಯ ಪಾತ್ರದಲ್ಲಿ , ಸುಪ್ರಭಾತದ ಉಗ್ಗು ಮಾತುಗಾರನ ಇನ್ನೊಂದು ಪಾತ್ರದಲ್ಲಿ , ಮಗಳ ಪ್ರೀತಿಗಾಗಿ ಹಂಬಲಿಸುವ ಲಾಲಿ ಯ ಅಪ್ಪನಾಗಿ, ಮುತ್ತಿನ ಹಾರ ಹಾಕಿದ ವೀರಯೋಧನಾಗಿ, ದೇಶಪ್ರೇಮವೇ ಜೀವನ ಎನ್ನುವ ವೀರಪ್ಪನಾಯ್ಕನಾಗಿ ...ವಾಹ್‌ ವಾಹ್‌ ಅನ್ನುವಂತೆ ಅಭಿನಯಿಸಿದಿರಲ್ಲ . ಅದು ಹೇಗೆ ಸಾಧ್ಯವಾಯ್ತು? ಲಾಲಿಯಲ್ಲಿ ಮುನಿದು ಹೋದ ಮಗಳನ್ನು ಹುಡುಕುತ್ತ ಹೋಗಿ ಅತ್ತೇ ಬಿಡ್ತೀರಲ್ಲ- ಆ ದೃಶ್ಯವನ್ನು ಹ್ಯಾಗೆ ಕಲ್ಪಿಸಿಕೊಂಡಿರಿ ಸಾರ್‌? ತುತ್ತು ಅನ್ನ ತಿನ್ನೋಕೆ/ಬೊಗಸೆ ನೀರು ಕುಡಿಯೋಕೆ, ಕಂಡಿದ್ದು ಕಂಡಂಗೆ ಹೇಳಿದ್ರೆ ನೀವೆಲ್ಲ... ನಗುವುದೇ ಸ್ವರ್ಗ/ಅಳುವುದೇ ನರಕ... ಅಂದವರು ಮುಂದೆ ಹಾಡೋದನ್ನೇ ನಿಲ್ಲಿಸಿದ್ರಲ್ಲ . ಯಾಕೆ ಸಾರ್‌?

ಹೌದಲ್ವ? ನಾಳೆ ಸಾಹುಕಾರನಾಗಿ ಎಲ್ಲರ ಮುಂದೆ ಪ್ರತ್ಯಕ್ಷ ಆಗ್ತಾಯಿದೀರ ನೀವು. ಎಲ್ಲ ಪ್ರಶ್ನೆಗಳಿಗೂ ಕಾಲವೇ ಉತ್ತರ ಹೇಳುತ್ತೆ , ಅನ್ನಬೇಡಿ. ಬದಲಿಗೆ ಮೂಡ್‌ ಇದ್ರೆ-ಪ್ಲೀಸ್‌, ಸಾಹುಕಾರನ ಗೆಟ್ಟಪ್ಪಿನಲ್ಲಿ ನಿಂತೇ -ಕಾಲವನ್ನು ತಡೆಯೋರು ಯಾರು ಇಲ್ಲ ಹಾಡು ಹೇಳಿ. ನಿಮ್ಗೆ ಮುಂದೆ ಕೂಡ ಶುಭವಾಗಲಿ. ಜಯವಾಗಲಿ. ಪ್ರಶಸ್ತಿ ಸಿಗಲಿ. ಬೊಂಬಾಟ್‌ ಅನ್ನುವಂಥ ಪಾತ್ರ ಸಿಗಲಿ. ಅಂಥ ಪಾತ್ರಗಳನ್ನು ಕಂಡು ಹಬ್ಬ ಆಚರಿಸುವ ಖುಷಿ-ಅದು ಮಾತ್ರ ನಮ್ಮದಾಗಲಿ. ಮರೆತಿದ್ದೆ, ಭಾರತಿ ಮೇಡಂಗೆ ಮರೆಯದೆ ನಮಸ್ಕಾರ ತಿಳಿಸಿ.

ಪ್ರೀತಿ ಮತ್ತು ಪ್ರೀತಿಯಿಂದ....

- ಎ.ಆರ್‌.ಮಣಿಕಾಂತ್‌
armanikanth@yahoo.co.in

English summary
An open letter to Vishnuvardhan

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada