»   » ಮೋನಿಕಾ ಬೇಡಿ ಎಂದಿಗೂ ಕಿರಿಕ್ಕು ಮಾಡಿದವಳೇ ಅಲ್ಲ

ಮೋನಿಕಾ ಬೇಡಿ ಎಂದಿಗೂ ಕಿರಿಕ್ಕು ಮಾಡಿದವಳೇ ಅಲ್ಲ

Posted By: Staff
Subscribe to Filmibeat Kannada

ಎಕ್ಸ್‌ಪೋಸ್‌ ಮಾಡದೆ ಬಾಲಿವುಡ್‌ನಲ್ಲಿ ದೊಡ್ಡ ನಟಿ ಆಗೋದಕ್ಕೆ ಸಾಧ್ಯವೇ ಇಲ್ಲ !
ಹಾಗಂತ ಹೇಳಿಕೊಂಡೇ ಮಿಥುನ್‌ ಚಕ್ರವರ್ತಿ ಎಂಬ ಫ್ಲಾಪ್‌ ನಟನೊಟ್ಟಿಗೆ ಚುಮ್ಮಕ ಚುಮ್ಮ ಹುಡುಗಿಯಾಗಿ ಕುಣಿದ ಚೆಲುವೆ ಮೋನಿಕಾ ಬೇಡಿ. ನಾಯಕ ಯಾರಾದರೂ ಸೈ, ತನ್ನ ಪಾತ್ರ ಮಾತ್ರ ರೊಮ್ಯಾಂಟಿಕ್‌ ಆಗಿರಬೇಕು ಎಂಬುದೊಂದೇ ಈಕೆಯ ಷರತ್ತು. ಸಿನಿಮಾ ಸೆಟ್‌ಗಳಲ್ಲಿ ಯಾರಿಗೂ ತ್ರಾಸು ಕೊಟ್ಟ ಉದಾಹರಣೆ ಇಲ್ಲ. ಆದರೆ, ಮೊನ್ನೆ ಭೂಗತ ಪಾತಕಿ ಅಬು ಸಲೇಂ ಬಂಧಿತನಾಗಿ, ಈಕೆ ಅವನ ಪ್ರೇಯಸಿ ಅಂತಾ ಗೊತ್ತಾದಾಗ ಖುದ್ದು ಜಗ್ಗೇಶ್‌ ದಂಗು !

1993ರ ಮುಂಬಯಿ ಸರಣಿ ಬಾಂಬ್‌ ಸ್ಫೋಟದಲ್ಲಿ ಭಾಗಿಯಾಗಿದ್ದಾನೆ ಎನ್ನಲಾಗಿರುವ ಅಬು ಸಲೇಂದು ಮೊದಲ ನೋಟಕ್ಕೇ ಅಂದಾಜು ಮಾಡಲಾಗದ ವ್ಯಕ್ತಿತ್ವ. ಹಾಗೆಯೇ ಮೋನಿಕಾಳದ್ದು ಕೂಡ. 'ನನ್ನಾಸೆಯ ಹೂವೆ" ಮತ್ತು 'ದ್ರೋಣ" ಎಂಬ ಜಗ್ಗೇಶ್‌ ನಾಯಕತ್ವದ ಎರಡು ಕನ್ನಡ ಚಿತ್ರಗಳಲ್ಲಿ ಈಕೆ ಬಿಂದಾಸ್‌ ನಾಯಕಿಯಾಗಿ ನಟಿಸಿದ್ದಾಳೆ. ಕೆ.ಎ.ಎಸ್‌. ಅಧಿಕಾರಿ ಚೆನ್ನಗಂಗಪ್ಪ ನನ್ನಾಸೆಯ ಹೂವೆ ಚಿತ್ರದ ನಿರ್ಮಾಪಕ.

ಚಿತ್ರೀಕರಣದ ವೇಳೆಯಾಗಲೀ ಆ ನಂತರವಾಗಲೀ ಯಾವುದೇ ಕಿರಿಕ್ಕು ಮಾಡದ ಮೋನಿಕಾ, ಅಬು ಸಲೇಂ ಪ್ರೇಯಸಿ ಅನ್ನೋದು ಪೂರ್ತಿ ಗುಟ್ಟಾಗಿತ್ತು. ಸಿನಿಮಾಗೆ ದುಡ್ಡು ಹಾಕಲೂ ಸದಾ ಸಿದ್ಧವಿರುತ್ತಿದ್ದ ಈಕೆ ಕುಬೇರನ ಮೊಮ್ಮಗಳು ಅಂತ ತಿಳಿದವರೇ ಹೆಚ್ಚು. ಆದರೆ ವಾಸ್ತವದಲ್ಲಿ ಅದೆಲ್ಲಾ ಅಬು ಸಲೇಂ ದುಡ್ಡು. ಕನ್ನಡ, ಹಿಂದಿ, ತೆಲುಗು, ಮಲೆಯಾಳಂ, ಬಂಗಾಳಿ ಭಾಷೆಗಳ ಸುಮಾರು 15 ಚಿತ್ರಗಳಲ್ಲಿ ನಟಿಸಿರುವ ಮೋನಿಕಾ ತಣ್ಣಗೇ ವರ್ತಿಸುತ್ತಿದ್ದ ಹುಡುಗಿ.

ಡಿ.ರಾಮನಾಯ್ಡು ಗಮನವನ್ನೂ ಸೆಳೆದ ಈಕೆ ನಟಿಸಿದ 'ಸುಭಾಷ್‌" ಎಂಬ ತೆಲುಗು ಚಿತ್ರ ಗಲ್ಲಾ ಪೆಟ್ಟಿಗೆಯಲ್ಲಿ ಗೆದ್ದಿತು. ಹಿಂದಿಯಲ್ಲಂತೂ ಧರ್ಮೇಂದ್ರ ನಟಿಸಿರುವ ಚಿತ್ರದಿಂದ ಹಿಡಿದು ಸಲ್ಮಾನ್‌ ಅಭಿನಯದ 'ಜಾನಂ ಸಮ್‌ಝಾ ಕರೋ" ಚಿತ್ರದವರೆಗೆ ಕುಣಿದ ಅನುಭವ ಈಕೆಯದು. ಮೋನಿಕಾ ನಟಿಸಿರುವ ಚಿತ್ರಗಳಿಗೆ ಅಬು ಸಲೇಂ ಹಣ ಹರಿದು ಬಂದಿದೆ ಎಂಬ ವಿಷಯವೂ ಹೊರಬಿದ್ದಿದೆ.

ಈಕೆಯನ್ನು ಹಾಕಿಕೊಂಡು ಸಿನಿಮಾ ಮಾಡಿದ ನಿರ್ಮಾಪಕರು ತಮಗೆಲ್ಲಿ ಪೊಲೀಸರು ವಕ್ಕರಿಸುವರೋ ಎಂಬ ಆತಂಕದಲ್ಲಿ ಮೋನಿಕಾಗೆ ಹಿಡಿಶಾಪ ಹಾಕುತ್ತಿದ್ದಾರೆ ! ಅಂದಹಾಗೆ, ಬಿ.ಆರ್‌.ಛೋಪ್ರಾ ಬ್ಯಾನರ್‌ನಲ್ಲಿ ಚೆಂದದೊಂದು ರೊಮ್ಯಾಂಟಿಕ್‌ಪಾತ್ರ ಮಾಡಬೇಕು ಅನ್ನೋದು ಮೋನಿಕಾಳ ಈ ಹೊತ್ತಿನ ಕನಸೂ ಹೌದು !

English summary
Abu Salems lover Monica Bedi is Sandalwood heroine too !

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada