»   » ಶಿವಣ್ಣನದು ಏನು ಮೋಡಿಯೋ? ಏನು ಮರ್ಮವೋ?

ಶಿವಣ್ಣನದು ಏನು ಮೋಡಿಯೋ? ಏನು ಮರ್ಮವೋ?

Subscribe to Filmibeat Kannada

ಸೋಲಿನ ಮೇಲೆ ಸೋಲು.. ಆದರೂ ಶಿವರಾಜ್ ಕುಮಾರ್ ಡಿಮ್ಯಾಂಡ್ ಒಂದಿಷ್ಟು ಸಹಾ ಕುಗ್ಗಿಲ್ಲ. ನಿರ್ಮಾಪಕರ ಡಾರ್ಲಿಂಗ್ ಎಂದೇ ಕರೆಯಲ್ಪಡುವ ಶಿವಣ್ಣ 2007ರಲ್ಲಿ ಸಕತ್ತು ಬಿಜಿ. ಅಷ್ಟು ಮಾತ್ರವಲ್ಲ 2008ಮತ್ತು 2009ರಲ್ಲೂ ಬಿಜಿಯೋ ಬಿಜಿ. ಕೈತುಂಬ ಚಿತ್ರಗಳು ಅವರಲ್ಲಿವೆ. ಅವರ ಕಾಲ್ ಶೀಟ್ ಗಾಗಿ ನಿರ್ಮಾಪಕರು ಕಾಯುತ್ತಿದ್ದಾರೆ. ಇದು ಏನು ಮೋಡಿಯೋ? ಏನು ಮರ್ಮವೋ?

ಸತ್ಯ ಇನ್ ಲವ್ ಮತ್ತು ಉಪ್ಪಿ ಜೊತೆಗಿನ 'ಲವಕುಶ'ಚಿತ್ರಗಳು ತೆರೆಗೆ ಬರಲು ಸಿದ್ಧಗೊಂಡಿವೆ. ಇತ್ತ ರವಿ ಶ್ರೀವತ್ಸ ನಿರ್ದೇಶನ 'ಮಾದೇಶ'ಚಿತ್ರೀಕರಣ ಭರದಿಂದ ಸಾಗಿದೆ. ಶಿವಣ್ಣನ ಡಿಪರೆಂಟ್ ಗೆಟಪ್ ಮತ್ತು ಇನ್ಯಾವುದೋ ಕಾರಣಕ್ಕೆ ಚಿತ್ರದ ಬಗ್ಗೆ ಪ್ರೇಕ್ಷಕ ಕುತೂಹಲ ಹೆಚ್ಚುತ್ತಿದೆ. ಈ ಚಿತ್ರದಲ್ಲಿ ರವಿ ಬೆಳಗೆರೆ ಬೇರೆ ಇದ್ದಾರೆ. ಮತ್ತೊಂದು ಕಡೆ 'ಬಂಧು ಬಳಗ'ಚಿತ್ರೀಕರಣವೂ ನಡೆದಿದೆ.

ಇನ್ನು ಓಂ ಪ್ರಕಾಶ್ ರಾವ್ ನಿರ್ದೇಶನದ 'ಏಕೆ 97', ಸಾಯಿಪ್ರಕಾಶ್ ನಿರ್ದೇಶನದ 'ಮುತ್ತುರಾಜ್'ಚಿತ್ರಗಳು ಶಿವುಗಾಗಿ ಕಾಯುತ್ತಿವೆ. ರಾವಣ, ಅಪರಂಜಿ, ಹವಾಲ್ದಾರ್ ತಹಶೀಲ್ದಾರ್ ಮತ್ತಿತರ ಚಿತ್ರಗಳು ಮುಂದಿನವರ್ಷ ಸೆಟ್ಟೇರಲಿವೆ.

ಇಷ್ಟಕ್ಕೂ ಶಿವಣ್ಣ ಅಂದ್ರೆ ನಿರ್ಮಾಪಕರಿಗೆ ಯಾಕಿಷ್ಟ ಅನ್ನೋದು ಸಹಜ ಕುತೂಹಲದ ಪ್ರಶ್ನೆ. ಶಿವಣ್ಣ ಹೇಳಿದ ಸಮಯಕ್ಕೆ ಶೂಟಿಂಗ್ ಗೆ ಬರ್ತಾರೆ, ಎಂದೂ ಕಿರಿಕ್ ಮಾಡೋದಿಲ್ಲ, ಕೊಟ್ಟಷ್ಟು ಇಸ್ಕೊಂಡು ಸರಿ ಅನ್ನುತ್ತಾರೆ. ಈ ಗುಣಗಳು ಯಾವ ನಿರ್ಮಾಪಕರಿಗೆ ಇಷ್ಟ ಆಗೋದಿಲ್ಲ ಹೇಳಿ. ಅಲ್ಲದೇ ಆಗಾಗ ಶಿವಣ್ಣನ ಚಿತ್ರಗಳು ಭರ್ಜರಿ ಯಶಸ್ಸು ಕಾಣುವುದೂ ಉಂಟು. ಆ ಆಸೆ ಎಲ್ಲಾ ನಿರ್ಮಾಪಕರದು.

ಮೊನ್ನೆಮೊನ್ನೆಯ ಹುಡುಗರಾದ ಪುನೀತ್ ಮತ್ತು ಗಣೇಶ್ ಕೋಟಿ ಕೋಟಿ ಎನ್ನುತ್ತಿದ್ದರು, ಶಿವಣ್ಣ ಮಾತ್ರ ಲಕ್ಷಗಳಲ್ಲೇ ಸಮಾಧಾನ ಕಾಣುತ್ತಿದ್ದಾರೆ. ಸಾಧ್ಯವಿರುವ ಎಲ್ಲಾ ವೈವಿಧ್ಯಮಯ ಪಾತ್ರಗಳಲ್ಲೂ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ನಲವತ್ತು ಪ್ಲಸ್ ವರ್ಷಗಳಾದರೂ, ಶಿವಣ್ಣ ಈಗಲೂ ಪಡ್ಡೆ ಹುಡುಗನಂತೆ ಬಳುಕುತ್ತಾರೆ. ಅವರ ಸಿನಿಮಾ ಉತ್ಸಾಹ ಹೀಗೆಯೇ ಇರಲಿ. ಜೋಗಿಯಂಥ ಬ್ರೇಕ್ ಮತ್ತೆ ಸಿಗಲಿ.

(ದಟ್ಸ್ ಕನ್ನಡ ಸಿನಿವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada